ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಜಾತ್ರೆ: ಮೂಲ‌ ಸೌಕರ್ಯ ಕಲ್ಪಿಸಲು ಮಂಜುನಾಥ್ ಆದೇಶ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳವಾಗಿರುವ ಚಿಕ್ಕಲ್ಲೂರಿನಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಿದ್ದರೂ ಭಕ್ತರು ಅದನ್ನು ಲೆಕ್ಕಿಸದೆ ಪೂಜಾ ಕೈಂಕರ್ಯಗಳಲ್ಲಿ ತೊಡಗಿಸಿ ಕೊಳ್ಳುತ್ತಿದ್ದಾರೆ,ಮುಂದಿನ ವರ್ಷ ಅಭಿವೃದ್ಧಿ ಕಾರ್ಯಗಳು ಆಗಲೇಬೇಕು ಎಂದು ಹನೂರು ಶಾಸಕ ಎಂ.ಆರ್.ಮಂಜುನಾಥ್ ಸೂಚಿಸಿದರು.

ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಶ್ರೀ ಕ್ಷೇತ್ರದ ಶಾಶ್ವತ ಅಭಿವೃದ್ಧಿಗೆ ಕ್ರಿಯಾ ಯೋಜನೆ ತಯಾರುಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಶಾಸಕರು ಆದೇಶಿಸಿದರು.

ತಾಲ್ಲೂಕಿನ ಸುಪ್ರಸಿದ್ಧ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ 2026 ರ ಜ. 3 ರಿಂದ 7 ರ ವರೆಗೆ ನಡೆಯಲಿದ್ದು, ಸೌಹಾರ್ದತೆಯ ಪ್ರತೀಕವಾಗಿರುವ ಈ ಪವಾಡ ಪುರುಷನ ಜಾತ್ರೆಗೆ ಲಕ್ಷಾಂತರ ಭಕ್ತರು ಭಾಗವಹಿಸುವುದರಿಂದ ಅಗತ್ಯ ಸಿದ್ದತೆ ಕೈಗೊಳ್ಳಲು ಚಾಮರಾಜನಗರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಶಾಸಕರು ಚಿಕ್ಕಲ್ಲೂರು ಜಾತ್ರೆ ತನ್ನದೆ ಆದ ಪರಂಪರೆ ಹೊಂದಿದೆ ಎಂದು ತಿಳಿಸಿದರು.

ಇಲ್ಲಿಗೆ ಬರುವ ಲಕ್ಷಾಂತರ ಭಕ್ತರಿಗೆ 5 ದಿನಗಳ ಕಾಲ ಯಾವುದೆ ಮೂಲ ಸೌಲಭ್ಯಗಳಿಗೆ ಕೊರತೆಯಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲು ವಿವಿಧ ಇಲಾಖೆಗಳ ಅಧಿಕಾರಿಗಳು ತ್ವರಿತವಾಗಿ ಮುಂದಾಗಬೇಕು, ಭಕ್ತಾದಿಗಳಿಗೆ ಸರಬರಾಜು ಮಾಡುವ ಉಪಾಹಾರ, ನೀರಿನ ಶುದ್ಧತೆ ಪರೀಕ್ಷಿಸಬೇಕು ಎಂದು ಸೂಚಿಸಿದರು.
ತಾತ್ಕಾಲಿಕವಾಗಿ ಹೋಟೆಲ್‌ಗಳನ್ನು ತೆರೆಯುವವರಿಗೆ ಶುಚಿತ್ವ ಕಾಪಾಡಿಕೊಳ್ಳುವಂತೆ ಸೂಚಿಸಬೇಕು. ಪರಿಕರಗಳು, ಕುಡಿಯುವ ನೀರು, ಶುದ್ಧತೆಯಿಂದ ಇರುವಂತೆ ತಿಳಿಸಬೇಕು. ಆರೋಗ್ಯಕ್ಕೆ ಪೂರಕವಾದ ಕ್ರಮವಹಿಸುವಂತೆ ಪರವಾನಗಿ ನೀಡುವ ಹಂತದಲ್ಲಿಯೇ ಕಟ್ಟು ನಿಟ್ಟಾಗಿ ಹೇಳಬೇಕು, ಸ್ನಾನ ಮತ್ತು ಶೌಚಕ್ಕೆ ಕಡ್ಡಾಯವಾಗಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕರು ಹೇಳಿದರು.

ಚಿಕ್ಕಲ್ಲೂರು ಅಭಿವೃದ್ಧಿ ಪಡಿಸಿ ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿ ಎಂಬ ಕೂಗು ಹಲವಾರು ವರ್ಷಗಳಿಂದಲೂ ಇದೆ. ಇದನ್ನು ಹೋಗಲಾಡಿಸಲು ಶ್ರೀ ಕ್ಷೇತ್ರದ ಶಾಶ್ವತ ಅಭಿವೃದ್ಧಿಗೆ ಕ್ರಿಯಾ ಯೋಜನೆ ತಯಾರು ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಮಂಜುನಾಥ್, ಪಾಳ್ಯ ಗ್ರಾಮದಿಂದ ಚಿಕ್ಕಲ್ಲೂರಿನವರೆಗೂ ನಾಲ್ಕು ಪಥದ ರಸ್ತೆ ಮಾಡಬೇಕೆಂಬುದು ನನ್ನ ಚಿಂತನೆಯಾಗಿದೆ. ಕ್ಷೇತ್ರವನ್ನು ಸಂಪರ್ಕಿಸುವ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಕೆಲವೆಡೆ ಡಾಂಬರೀಕರಣ ಆಗುತ್ತಿದೆ. ಇನ್ನೂ 6 ಕಿ.ಮೀ. ರಸ್ತೆ ಆಗಲಿದೆ. ಆದರೂ ಜಾತ್ರಾ ಸಂದರ್ಭದಲ್ಲಿ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ರಸ್ತೆ ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಮಲೈಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರ ಇದ್ದರೂ ಸಾಲೂರು ಮಠದ ಸ್ವಾಮೀಜಿಗಳು ಶ್ರೀ ಮಠದ ಆಚಾರ ವಿಚಾರಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದು ಅವರ ಪೂಜಾ ಕೈಂಕರ್ಯಗಳು ಎಂದಿನಂತೆ ನಿರಂತರವಾಗಿ ಮುಂದುವರೆಯುತ್ತಿವೆ. ಮಲೈಮಹದೇಶ್ವರ ಬೆಟ್ಟದಲ್ಲಿ ಯಾವುದೇ ಸಮಸ್ಯೆ ಇಲ್ಲಾ. ಹಾಗಾಗಿ ಚಿಕ್ಕಲ್ಲೂರಿನಲ್ಲಿ ಪ್ರಾಧಿಕಾರ ರಚನೆಗೆ ಸಾರ್ವಜನಿಕರ ಸಹಕಾರ ಅತ್ಯಮುಖ್ಯವಾಗಿದೆ. ಮಠದವರು ಎರಡು ಕಡೆಯವರು ಕುಳಿತು ಒಂದು ಒಳ್ಳೆಯ ತೀರ್ಮಾನವನ್ನು ಭಕ್ತರಿಗಾಗಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಮಠದ ಪರಂಪರೆ ಮತ್ತು ಆಚಾರ ವಿಚಾರಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪ್ರಾಧಿಕಾರ ರಚನೆಯಾದರೆ ಲಕ್ಷಾಂತರ ಭಕ್ತರಿಗೆ ಶಾಶ್ವತ ಅಭಿವೃದ್ಧಿ ಕಾರ್ಯಗಳು ಮಾಡಲು ಸಾಧ್ಯವಾಗುತ್ತದೆ ಎಂದು ಎಂ.ಆರ್.ಮಂಜುನಾಥ್ ತಿಳಿಸಿದರು.

ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮಾತನಾಡಿ ಜನವರಿ 3 ರಿಂದ 7 ರವರೆಗೂ ನಡೆಯಲಿರುವ ಚಿಕ್ಕಲ್ಲೂರು ಜಾತ್ರೆಗೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ 20 ದಿನಗಳ ಮುನ್ನವೇ ಅಧಿಕಾರಿಗಳ ಸಭೆ ಕರೆಯಲಾಗಿದ್ದು ಜಾತ್ರಾ ಸಂದರ್ಭದಲ್ಲಿ ವಿದ್ಯುತ್ ಸೇವೆ ನಿರಂತರವಾಗಿರ ಬೇಕು. ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು ವೈದ್ಯರು ಸಿಬ್ಬಂದಿ ಯನ್ನು ನಿಯೋಜಿಸಬೇಕು, ಭಕ್ತಾದಿಗಳ ಸಂಖ್ಯೆಗೆ ಅನುಗುಣವಾಗಿ ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚು ಬಸ್‌ಗಳ ನಿಯೋಜನೆ ಮಾಡಬೇಕು, ಭಕ್ತರ ಸುರಕ್ಷತೆ, ಮತ್ತು ಭದ್ರತೆ, ಅಹಿತಕರ ಘಟನೆಗಳನ್ನು ತಡೆಗಟ್ಟಲು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ಬಾರಿ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ಪ್ರಾಣಿಗಳನ್ನು ತಡೆದರೆ ಸ್ಥಳೀಯ ಯುವಕರ ತಂಡ ಕಟ್ಟಿಕೊಂಡು ಪೊಲೀಸರ ಕಾರ್ಯಚರಣೆಯ ವಿರುದ್ಧ ನಾವು ಕಾರ್ಯಚರಣೆ ಮಾಡಬೇಕಾಗುತ್ತದೆ ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಹೇಳುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕವಿತಾ ಅವರು ನಾವು ನ್ಯಾಯಾಲಯದ ಆದೇಶದಂತೆ ಪಾಲನೆ ಮಾಡುತ್ತಿದ್ದೇವೆ ಕಳೆದ ವರ್ಷ ಚೆಕ್ ಪೋಸ್ಟನಲ್ಲಿ ಕುರಿ ಕೋಳಿಗಳನ್ನು ತಪಾಸಣೆ ಮಾಡಿಲ್ಲಾ, ನೀವೇ ಈ ವರ್ಷ ಜಾತ್ರೆಯನ್ನು ಅಚ್ಚುಕಟ್ಟಾಗಿ ಮಾಡಿದ್ದೀರಿ ಎಂದು ಹೇಳಿದ್ದೀರಿ, ಈ ಸಭೆಯಲ್ಲಿ ಪೊಲೀಸರ ವಿರುದ್ಧ ಮಾತನಾಡುವುದು ಸರಿಯಲ್ಲ, ನಮ್ಮ ಕರ್ತವ್ಯವನ್ನು ನಾವು ಸರಿಯಾಗಿ ಮಾಡುತ್ತಿದ್ದೇವೆ. ನಮ್ಮ ಕರ್ತವ್ಯಕ್ಕೆ ಯಾರೇ ಅಡ್ಡಿ ಬಂದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಖಾರವಾಗಿಯೇ ಹೇಳಿದರು.

ಜಿ.ಪಂ. ಸಿಇಒ ಮೋನಾರೋತ್, ತಹಸೀಲ್ದಾರ್ ಗಳಾದ ಬಸವರಾಜು, ಚೈತ್ರ ತೆಳ್ಳನೂರು, ಗ್ರಾಂ.ಪಂ ಪಿಡಿಒ ಶೋಭರಾಣಿ, ಪಾಳ್ಯ ನಾಡಕಚೇರಿ ಉಪತಹಸೀಲ್ದಾರ್ ವಿಜಯಕುಮಾರ್, ರಾಜಸ್ವ ನಿರೀಕ್ಷಕ ರಂಗಸ್ವಾಮಿ, ಚಿಕ್ಕಲ್ಲೂರು ಮಠದ ಭರತ್ ರಾಜೇ ಅರಸ್ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.