ಯಾದಗಿರಿ:ಭೀಮಾನದಿ ಪಾಲಾದ ಇಬ್ಬರು ಯುವಕರ ಕುಟುಂಬಕ್ಕೆ ಸರಕಾರದಿಂದ ಸಿಗುವ ಪರಿಹಾರ ಕಲ್ಪಿಸಲಾಗುವುದು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭರವಸೆ ನೀಡಿದರು.
ಭೀಮಾನದಿಯಲ್ಲಿ ಶುಕ್ರವಾರ ಪರಶುರಾಮ ನಾಟೇಕರ್ ಹಾಗೂ ಸಿದ್ದಪ್ಪ ನೀರು ಪಾಲಾದ ಘಟನೆ ಹಿನ್ನಲೆಯಲ್ಲಿ ಇಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಮಾಚನೂರು ಗ್ರಾಮದ ಭೀಮಾನದಿ ತೀರಕ್ಕೆ ಆಗಮಿಸಿ ಘಟನೆ ನಡೆದ ಸ್ಥಳ ಪರಿಶೀಲನೆ ಮಾಡಿದರು.
ಜತೆಗೆ ಅಗ್ನಿಶಾಮಕ ದಳ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡದಿಂದ ಶವ ಶೋಧ ಕಾರ್ಯಾಚರಣೆ ಬಗ್ಗೆ ಅಗತ್ಯ ಮಾಹಿತಿಯನ್ನು ಪಡೆದರು.
ಈ ವೇಳೆ ತಹಶಿಲ್ದಾರ್ ಮಂಗಳಾ ಹಾಗೂ ಸಿಪಿಐ ಸುನೀಲ್ ಮೂಲಿಮನಿ ಅವರು ಘಟನೆ ನಡೆದ ಬಗ್ಗೆ ಮಾಹಿತಿ ನೀಡಿದರು.
ಸುಮಾರು 29 ಗಂಟೆ ಕಳೆದರು ಯುವಕರ ಮೃತ ದೇಹಗಳು ಪತ್ತೆಯಾಗಿಲ್ಲ.ಈ ಸಂದರ್ಭದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅಗ್ನಿಶಾಮಕ ದಳ ಹಾಗೂ ಎಸ್ ಡಿಆರ್ ಎಫ್ ತಂಡದೊಂದಿಗೆ ಬೋಟ್ ನಲ್ಲಿ ಭೀಮಾನದಿಯಲ್ಲಿ ಕಿಲೋಮೀಟರ್ ವರೆಗೂ ತೆರಳಿ ಶವ ಶೋಧ ಕಾರ್ಯ ಮಾಡಿದರು.
ಶವ ಶೋಧ ಕಾರ್ಯಾಚರಣೆ ವೇಳೆ ಶಾಸಕರಿಗೆ ನದಿಯೊಳಗೆ ಮೊಸಳೆಗಳು ಕಾಣಿಸಿಕೊಂಡವು.ಸುಮಾರು 20 ಕ್ಕೂ ಹೆಚ್ಚು ಮೊಸಳೆಗಳು ನದಿ ಹಾಗೂ ನದಿ ತೀರದಲ್ಲಿ ಇರುವದು ಕಾಣಿಸಿದವು,ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ ಎಂದು ತಂಡಕ್ಕೆ ಶಾಸಕರು ಸಲಹೆ ನೀಡಿದರು.
ಮೊಮ್ಮಗ ಪರಶುರಾಮ ಸಾವಿನ ಅಘಾತದಿಂದ ಅಜ್ಜ ಸಿದ್ದಪ್ಪ ಖಿನ್ನತೆಗೆ ಒಳಗಾಗಿದ್ದು, ಮೊಮ್ಮಗನ ನೆನಪಿನಲ್ಲಿಯೇ ಕೊರಗುತ್ತಾ ರೋಧಿಸುತ್ತಿದ್ದಾರೆ.
ಈ ವೇಳೆ ಅಜ್ಜನಿಗೆ ಶಾಸಕ ತುನ್ನೂರು ಸಾಂತ್ವನ ಹೇಳಿ ಧೈರ್ಯ ತುಂಬಿದರು,ಆಗ ಶಾಸಕ ತುನ್ನೂರು ಅವರಿಗೆ ನಮಸ್ಕರಿಸಿ ಅಜ್ಜ ಕಣ್ಣೀರು ಹಾಕಿ ಕೈ ಮುಗಿದರು.
ಧೈರ್ಯದಿಂದ ಇರು ಅಳಬೇಡ.ಸರಕಾರ ನಿಮ್ಮ ಜೊತೆ ಇರುತ್ತದೆ, ಶವ ಸಿಗುವರಗೆ ಇಲ್ಲಿಯೇ ಅಧಿಕಾರಿಗಳು ಶವ ಶೋಧ ಮಾಡಿ ಪತ್ತೆ ಹಚ್ಚುತ್ತಾರೆ ಎಂದು ಧೈರ್ಯ ತುಂಬಿ ಶಾಸಕರೂ ಬಾವುಕರಾದರು.
ಭೀಮಾನದಿಯಲ್ಲಿ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ. ಯಾವುದೇ ಕುಟುಂಬದಲ್ಲಿ ಇಂತಹ ಘಟನೆ ಆಗಬಾರದಿತ್ತು.ಮೃತ ಕುಟುಂಬ ಸದಸ್ಯರಿಗೆ ಭಗವಂತ ಧೈರ್ಯ ಕೊಡಲಿ,ಮೃತ ಯುವಕರ ಆತ್ಮಕ್ಕೆ ಭಗವಂತ ಶಾಂತಿ ಸಿಗಲಿ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಪ್ರಾರ್ಥಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ
ರಮೇಶ್ ಕೋಲಾರ,ತಹಶಿಲ್ದಾರ್ ಮಂಗಳಾ ಎಮ್., ಡಿವೈಎಸ್ಪಿ ಅರುಣಕುಮಾರ್ ಪಿ.ಕೊಳ್ಳುರು, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್,ತಾಪಂ ಇಒ ಮಲ್ಲಿಕಾರ್ಜುನ ಸಂಗ್ವಾರ ಸಿಪಿಐ ಸುನೀಲ್ ಮೂಲಿಮನಿ,ಪಿಎಸ್ ಐ ಮಹೆಬೂಬ್ ಅಲಿ,ಎಸ್ ಡಿಆರ್ ಎಫ್ ಆರ್ ಪಿಐ ಅಮರೀಶ್ ಚವ್ಣಾಣ,ಅಗ್ನಿಶಾಮಕ ದಳ ಅಧಿಕಾರಿ ಮನೋಹರ್ ರಾಠೋಡ ಮತ್ತಿತರರು ಹಾಜರಿದ್ದರು.