ಚನ್ನರಾಯಪಟ್ಟಣ: ಜೂಟ್ಟನಹಳ್ಳಿ ಪಂಚಾಯತಿ, ಚನ್ನೇನಹಳ್ಳಿ ಗ್ರಾಮದ ಮಾಜಿ ಸದಸ್ಯರಾದ ಪುಟ್ಟೇಗೌಡರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಅವರು ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿ ಇಬ್ಬರ ಬಾಳಿಗೆ ಬೆಳಕಾಗುವ ಮಾದರಿಯಾಗಿ ಮರೆಯಾಗಿದ್ದಾರೆ.

ಪುಟ್ಟೇಗೌಡರು ಸದಾ ಜನಾನುರಾಗಿ ಜನಸೇವೆಯೇ ಜನಾರ್ದನ ಸೇವೆ ಎಂದು ನಂಬಿದ್ದವರು, ರೈತನ ಮಗನಾಗಿ ಹುಟ್ಟಿ ಭೂತಾಯಿಯ ಸೇವೆ ಮಾಡುತ್ತ ಸದಾ ಜನಸೇವೆ, ಸಮಾಜ ಸೇವೆಯಲ್ಲಿ ನಿರತರಾಗಿದ್ದರು ಜವರಾಯನ ಕರೆಯಿಂದ ಇಹಲೋಕ ತ್ಯಜಿಸಿದ್ದಾರೆ.
ಭಾನುವಾರ ಬಾರದ ಲೋಕಕ್ಕೆ ತೆರಳಿದ ಪುಟ್ಟೇಗೌಡರು ಕಿಮ್ಸ್ ಆಸ್ಪತ್ರೆಯಲ್ಲಿ ತಮ್ಮ ನೇತ್ರಗಳನ್ನು ದಾನ ಮಾಡಿದ್ದಾರೆ, ಸದಾ ಸೇವಾ ಮನೋಭಾವ ಹೊಂದಿದ್ದ ಗ್ರಾಮದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದ ಪುಟ್ಟೇಗೌಡರ ಅಕಾಲಿಕ ನಿಧನಕ್ಕೆ ಇಡೀ ಗ್ರಾಮವೇ ಕಂಬನಿ ಮಿಡಿದಿದೆ.
ಗ್ರಾಮವಷ್ಟೇ ಅಲ್ಲ ತಾಲೂಕಿನ ಸುತ್ತಮುತ್ತಲ ಹಳ್ಳಿಯ ಸಾವಿರಾರು ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಗೌಡರದೇನೂ ಸಾಯುವಂತಹ ವಯಸ್ಸೇನಾಗಿರಲಿಲ್ಲ ಕೇವಲ 64 ವರ್ಷ.ಅದರೆ ಕ್ರೂರ ವಿಧಿ ಅಪಘಾತದ ಮೂಲಕ ಅವರನ್ನು ಕರೆದೊಯ್ದಿದೆ ಎಂದು ಊರಿನ ಜನ ಮರುಗುತ್ತಿದ್ದಾರೆ.
ಮೂಲ ಸೌಲಭ್ಯಗಳೇ ಇಲ್ಲದ ಈ ಕು ಗ್ರಮಕ್ಕೆ ವಿವಿಧ ರೀತಿಯಲ್ಲಿ ಸೇವೆ ಮಾಡಿ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದರು, ಅತ್ಯಗತ್ಯ ಮೂಲ ಸೌಕರ್ಯಗಳಾದ ರಸ್ತೆ, ನೀರು, ಚರಂಡಿ, ವಿದ್ಯುತ್, ಅಂಗನವಾಡಿ ಶಾಲೆ ವಿಧವಾ ವೇತನ ವೃದ್ಧಾಪ್ಯ ವೇತನ ಅಂಗವಿಕಲ ವೇತನ ಪಂಚಾಯಿತಿಯಿಂದ ದೊರೆಯುವ ಅನೇಕ ಸೌಕರ್ಯಗಳು, ಸರ್ಕಾರಿ ಇತರ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳು ಹೀಗೆ ಹತ್ತು ಹಲವಾರು ಕೆಲಸ ಕಾರ್ಯಗಳನ್ನು ಮಾಡಿ ಉತ್ತಮ ಹೆಸರು ಪಡೆದಿದ್ದರು.
ಗ್ರಾಮದಲ್ಲಿ ಯಾರಿಗೆ ಏನೇ ತೊಂದರೆ ಆದರೂ ರಾತ್ರಿ ಎಷ್ಟೇ ಹೊತ್ತಾಗಿದ್ದರೂ ಹಿಂದು ಮುಂದು ನೋಡದೆ ಸ್ಪಂದಿಸುತ್ತಿದ್ದರು.ಅಷ್ಟೇ ಏಕೆ ಅನೇಕ ಬಾರಿ ಮಧ್ಯರಾತ್ರಿಯಲ್ಲೂ ಗ್ರಾಮದ ಹಲವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಉದಾಹರಣೆಗಳೂ ಸಾಕಷ್ಟಿವೆ.
ಇಷ್ಟೇ ಅಲ್ಲದೆ ಗ್ರಾಮದಲ್ಲಿ ಯಾವುದಾದರೂ ಕುಟುಂಬಗಳ ನಡುವೆ ಮನಸ್ತಾಪವಾದರೆ ಅವರಿಗೆ ತಿದ್ದಿ ಬುದ್ದಿ ಹೇಳಿ ಸರಿದಾರಿಗೆ ತಂದಿದ್ದಾರೆ.
ದುರ್ವಿಧಿಯ ಅಟ್ಟಹಾಸಕ್ಕೆ ಅಪಘಾತದಿಂದ ಸಾವನ್ನಪ್ಪಿದ ಗ್ರಾಮ ಪಂಚಾಯತಿಯ ಮಾಜಿ ಸದಸ್ಯರಾದ ಪುಟ್ಟೇಗೌಡರು ಈಗ ತಮ್ಮ ಎರಡು ನಯನಗಳನ್ನು ದಾನ ಮಾಡಿ ಅಂದರ ಬಾಳಿಗೆ ಬೆಳಕಾಗಿರುವುದು ನಿಜಕ್ಕೂ ಶ್ಲಾಘನೀಯ.
ಈ ಮೂಲಕ ಅವರು ಎಲ್ಲರನ್ನೂ ನೋಡುತ್ತಿದ್ದಾರೆ,ಎಲ್ಲರಿಗೂ ಮಾದರಿಯಾಗಿರುವ ಪುಟ್ಟೇಗೌಡರನ್ನು ಕಳೆದುಕೊಂಡ ಊರವರು ಈ ಸಾವು ನ್ಯಾಯವೇ ಎಂದು ದುಃಖಿಸುತ್ತಿದ್ದಾರೆ.