ಈ ಬಾರಿ ನೆಮ್ಮದಿಯಿಂದ ತಾಯಿ ದರ್ಶನ ಪಡೆದ ಭಕ್ತವೃಂದ

Spread the love

ಮೈಸೂರು: ಕಳೆದವಾರ ನೆಮ್ಮದಿಯಿಂದ ತಾಯಿ ಚಾಮುಂಡಿ ದರ್ಶನ ಪಡೆಯಲಾಗದೆ ಹತಾಶೆಯಿಂದ ಕಣ್ಣೀರು ಹಾಕಿದ್ದ ಭಕ್ತವೃಂದ ಈ ವಾರ ನೆಮ್ಮದಿಯಂದ ಭಕ್ತಿ ಸಮರ್ಪಿಸಿದ್ದಾರೆ.

ಮೊದಲ ಆಷಾಢ ಶುಕ್ರವಾರ ಬೆಟ್ಟದಲ್ಲಿ ಬಹಳ ಸಮಸ್ಯೆ ಆಗಿತ್ತು. ನಾವೆಲ್ಲ ಮಧ್ಯರಾತ್ರಿ ಯಿಂದ ತಾಯಿಯ ದರ್ಶನಕ್ಕೆ ನಿಂತಿದ್ದೀವಿ, ವಿಐಪಿ,ವಿವಿಐಪಿ,ಅವರ ಕಡೆಯವರು ಅಂತಾ ನೇರವಾಗಿ ಬಿಡ್ತಾ ಇದೀರಾ
ಮೆಟ್ಟಿಲು ಹತ್ತಿ ಬಂದ ಭಕ್ತರಿಗೆ ಅಮ್ಮನ ದರ್ಶನ ಮಾಡಿಕೊಡಲು ಆಗಿಲ್ಲ ಎಂದು ಬಹಳಷ್ಟು ಮಹಿಳೆಯರು ಹಿಡಿಶಾಪ ಹಾಕಿದ್ದರು.

ನೂಕು ನುಗ್ಗಲು,ಸರಿಯಾದ ವ್ಯವಸ್ಥೆ ಇಲ್ಲ ಎಂದು ಬೆಟ್ಟ ಹತ್ತಿ ಬಂದ ಮಹಿಳೆಯರು ತಾಯಿಯ ದರ್ಶನ ಪಡೆಯಲಾಗದೆ ಕಣ್ಣೀರು ಹಾಕಿದ್ದರು.

ಕಳೆದ ವಾರದ ಅವ್ಯವಸ್ಥೆ, ಮಹಿಳೆಯರ ಆಕ್ರೋಶದ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಸಮಾಧಾನವಾಗಿ ನಿಧಾನವಾಗಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ.

ಚಾಮುಂಡಿ ಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದ ಪ್ರಯುಕ್ತ ಮಾವಿನ ಕಾಯಿಗಳಿಂದ ದೇವಸ್ಥಾನ ಸುತ್ತಾ ಅಲಂಕಾರ ಮಾಡಲಾಗಿದ್ದು ವಿಶೇಷವಾಗಿ ಕಾಣುತ್ತಿದೆ.

ಮುಂಜಾನೆಯೇ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷಿತ್ ಅವರ ನೇತೃತ್ವದಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪಂಚಾಮೃತ ಅಭಿಷೇಕ, ಅರ್ಚನೆ.ಮಹಾಮಂಗಳಾರತಿ ಮಾಡಲಾಗಿತ್ತು.

ದೇವಸ್ಥಾನದ ಗರ್ಭ ಗುಡಿಯಲ್ಲಿ
ವಿವಿಧ ಪುಷ್ಟಗಳ ಮಧ್ಯೆ ಶ್ರೀ ಚಾಮುಂಡೇಶ್ವರಿ ತಾಯಿ ಕಂಗೊಳಿಸುತ್ತಿದ್ದಾಳೆ.

ಆಶಾಢ ಶುಕ್ರವಾರ ದಂದು ನಮ್ಮ ರಾಜ್ಯವಷ್ಟೇ ಅಲ್ಲದೆ ದೇಶ,ವಿದೇಶ ಗಳಿಂದಲೂ ಕೋಟಿ ಕೋಟಿ ಭಕ್ತರು ಆಗಮಿಸುತ್ತಾರೆ.

ನೂಕು,ನುಗ್ಗಲು ಆಗಬಾರದೆಂಬ ಕಾರಣಕ್ಕೆ ಬೆಟ್ಟಕ್ಕೆ ಖಾಸಗೀ ವಾಹನಗಳನ್ನು ನಿಷೇಧಿಸಲಾಗಿದೆ.ಮೈಸೂರಿನ ಲಲಿತ ಮಹಲ್ ಮೈದಾನದಿಂದ ಭಕ್ತರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.

ಈ ಭಾರಿ ಭಕ್ತರ ಅನುಕೂಲಕ್ಕಾಗಿ 300 ರೂ ಹಾಗೂ 2 ಸಾವಿರ ರೂ ಟಿಕೇಟ್ ನೀಡುವ ಮೂಲಕ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ದರ್ಶನ ವ್ಯವಸ್ಥೆಯಲ್ಲಿ ಹೋದರೇ ಕೇವಲ 10 ನಿಮಿಷದಲ್ಲೇ ಚಾಮುಂಡೇಶ್ವರಿ ತಾಯಿ ದರ್ಶನ ಪಡೆಯಬಹುದಾಗಿದೆ.ಕಳೆದ ವಾರ ನೂಕು ನುಗ್ಗಲಿನಲ್ಲಿ ತಾಯಿ ದರ್ಶನ ಪಡೆದಿದ್ದ ಭಕ್ತರು ಈ ಭಾರಿ ಸರಾಗವಾಗಿ ತಾಯಿಯನ್ನ ಕಣ್ತುಂಬಿಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ವಾರ ಪ್ರಸಾದದ ವ್ಯವಸ್ಥೆ ಇಲ್ಲದೇ ಭಕ್ತರು ಬೇಸರ ವ್ಯಕ್ತಪಡಿಸಿದ್ದರು, ಈ ವಾರ ಪ್ರಸಾದ ವ್ಯವಸ್ಥೆ ಕೂಡಾ ಮಾಡಲಾಗಿದ್ದು ಭಕ್ತರು ಖುಷಿಯಾದರು.

ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ.ಟಿ ಹರೀಶ್ ಗೌಡ,ನಟ ಡಾಲಿ ಧನಂಜಯ್,ನಟ ದರ್ಶನ್ ಸೇರಿದಂತೆ ನಟ ನಟಿಯರು ಕಲಾವಿದರು ಕುಟುಂಬ ಸಮೇತ ಬಂದು ತಾಯಿ ದರ್ಶನ ಪಡೆದರು.

ಮೆಟ್ಟಿಲು ಹತ್ತಿ ಬಂದವರಿಗೆ ಪ್ರತ್ಯೇಕ ಧ್ವಾರ,2 ಸಾವಿರ ನೀಡಿದವರಿಗೆ ನೇರ ದರ್ಶನ ವ್ಯವಸ್ಥೆ,300 ರೂ ಟಿಕೇಟ್ ಪಡೆದವರಿಗೂ ಸುಲಭ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಮೆಟ್ಟಿಲು ಹತ್ತಿ ಬರುವ ಭಕ್ತರು ಬೆ.5 ರಿಂದ ಸಂಜೆ 6ವರಗೆ ಬರಬಹುದಾಗಿದೆ ಎಂದು ಸೂಚನಾ ಫಲಕ ಹಾಕಿದ್ದು,ಸಂಜೆ ನಂತರ ಬೆಟ್ಟ ಹತ್ತುವಂತಿಲ್ಲ.

ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಪೋಲಿಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.

ಜಿಲ್ಲಾಡಳಿತ, ದೇವಸ್ಥಾನ ಆಡಳಿತ ಮಂಡಳಿ ಈ‌ ಬಾರಿ ಎಲ್ಲ ಲೋಪ ಸರಿಪಡಿಸಿ ಭಕ್ತರಿಗೆ ದರ್ಶನಕ್ಕೆ ಸುಸಜ್ಜಿತ ವ್ಯವಸ್ಥೆ ಮಾಡಿಕೊಟ್ಟಿರುವುದು ಸ್ತುತ್ಯಾರ್ಹ.