ಮೈಸೂರು: ಚಾಮುಂಡಿ ಬೆಟ್ಟದಲ್ಲಿ ವಾಹನ ನಿಲುಗಡೆ ಸಮಸ್ಯೆ ತಡೆಗಟ್ಟಲು ಜಿಲ್ಲಾಡಳಿತ ಖಾಸಗಿ ವಾಹನಗಳಿಗೆ ನಿರ್ಬಂಧದ ಬಗ್ಗೆ ಚಿಂತನೆ ನಡೆಸಿರುವುದು ಅವೈಜ್ಞಾನಿಕ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.
ಈಗಾಗಲೇ ಚಾಮುಂಡಿ ಬೆಟ್ಟದಲ್ಲಿ ವಾಹನಗಳ ನಿಲುಗಡೆಗಾಗಿ ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ಪಾರ್ಕಿಂಗ್ ಲಾಟ್ ನಿರ್ಮಿಸಲಾಗಿದೆ,ಈಗ ಜಿಲ್ಲಾಡಳಿತ ಖಾಸಗಿ ವಾಹನಗಳಿಗೆ ನಿರ್ಬಂಧದ ಚಿಂತನೆ ಎಷ್ಟರ ಮಟ್ಟಿಗೆ ಸರಿ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಸ್ಥಳೀಯ ವ್ಯಾಪಾರಿಗಳ ಮೇಲೂ ಈ ಚಿಂತನೆಯಿಂದ ಹೊಡೆತ ಬೀಳುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಜಿಲ್ಲಾಡಳಿತ ಮೊದಲು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಮತ್ತು ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಿ 24/7 ತುರ್ತು ಚಿಕಿತ್ಸಾ ವಾಹನದ ವ್ಯವಸ್ಥೆ ಕಲ್ಪಿಸಲಿ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.
ನಂದಿ ರಸ್ತೆ ಕುಸಿದುಬಿದ್ದು ವರ್ಷಗಳೇ ಕಳೆದರೂ ಇದುವರೆಗೂ ದುರಸ್ತಿ ಕಾರ್ಯ ಆರಂಭವಾಗಿಲ್ಲ ಮೊದಲು ರಸ್ತೆ ದುರಸ್ತಿ ಕಾರ್ಯ ಆರಂಭಿಸಲಿ ಎಂದು ಆಗ್ರಹಿಸಿದ್ದಾರೆ.
ಚಾಮುಂಡಿ ಬೆಟ್ಟದ ನಿವಾಸಿಗಳಿಗೆ ಮತ್ತು ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಒಂದು ವೇಳೆ ಆರೋಗ್ಯದಲ್ಲಿ ಏರು ಪೇರು ಉಂಟಾದಲ್ಲಿ ಚಿಕಿತ್ಸೆ ನೀಡಲು ಸುಸಜ್ಜಿತ ಆಸ್ಪತ್ರೆ ಇಲ್ಲ ಈಗಿರುವ ಆಸ್ಪತ್ರೆಯಲ್ಲಿ ಸುಸಜ್ಜಿತ ವಾದ ವ್ಯವಸ್ಥೆ ಇಲ್ಲ ಎಂದು ಅವರು ಆರೋಪಿಸಿದ್ದಾರೆ
ಜಿಲ್ಲಾಡಳಿತ ಖಾಸಗಿ ವಾಹನಗಳಿಗೆ ನಿರ್ಬಂಧದ ಬಗ್ಗೆ ಚಿಂತನೆಯನ್ನು ಮರುಪರಿಶೀಲನೆ ಮಾಡಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಕೋರಿದ್ದಾರೆ.