ಮೈಸೂರು: ಮೈಸೂರಿನ ಪುರಾಣ ಪ್ರಸಿದ್ಧ
ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಬೇಕೆಂದು ಆಗ್ರಹಿಸಿ ಹಿಂದೂ ಪುಣ್ಯಕ್ಷೇತ್ರಗಳ ಸಂರಕ್ಷಣಾ ಸಮಿತಿ ವತಿಯಿಂದ ಅಂಚೆ ಕಾರ್ಡ್ ಚಳವಳಿ ಹಮ್ಮಿಕೊಳ್ಳಲಾಯಿತು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಅಂಚೆ ಕಾರ್ಡ್ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ನಂತರ ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿಯವರಿಗೆ ಅಂಚೆಕಾರ್ಡ್ ಕಳುಹಿಸಿ ಶೀಘ್ರವಾಗಿ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಒತ್ತಾಯಿಸಲಾಯಿತು.
ಈಗಾಗಲೇ ದೇಶದ ಹಾಗೂ ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಯಲ್ಲಿದೆ, ಪ್ರವಾಸಿ ಸ್ಥಳ ಹಾಗೂ ಧಾರ್ಮಿಕ ಸ್ಥಳಗಳಿಗೆ ವ್ಯತ್ಯಾಸವಿದೆ.
ಈಗ ಹಾಸನಾಂಬೆ ದೇಗುಲ ಪ್ರವೇಶಕ್ಕೂ ವಸ್ತ್ರ ಸಂಹಿತೆ ಜಾರಿಯಾಗಿದೆ, ಆದರೆ ವಿಶ್ವವಿಖ್ಯಾತ ಚಾಮುಂಡಿ ಬೆಟ್ಟದ ದೇವಸ್ಥಾನದಲ್ಲಿ ಜಾರಿಯಾಗಿಲ್ಲ ಎಂದು ಒತ್ತಾಯಿಸಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಅಂಚೆ ಕಾರ್ಡುಗಳನ್ನು ಕಳುಹಿಸಲಾಯಿತು.
ಇದೇ ವೇಳೆ ಅರಮನೆ ಆವರಣದಲ್ಲಿರುವ ಮುಜರಾಯಿ ಇಲಾಖೆಯ ಕಚೇರಿಗೂ ಸಹ ಮನವಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಹಿಂದೂ ಪುಣ್ಯಕ್ಷೇತ್ರಗಳ ಸಂರಕ್ಷಣಾ ಸಮಿತಿಯ ಸಂಚಾಲಕರಾದ ಮೈಕಾ ಪ್ರೇಮ್ ಕುಮಾರ್, ಸಹ ಸಂಚಾಲಕರುಗಳಾದ ಸಂಜಯ್ ಮತ್ತು ರಾಕೇಶ್ ಭಟ್, ಮುಖಂಡರಾದ ಶಿವು ಪಟೇಲ್, ಜೀವನ್ ಕುಮಾರ್, ಸಚಿನ್ ನಾಯಕ್, ಪ್ರಜ್ವಲ್ ಮತ್ತಿತರರು ಭಾಗವಹಿಸಿದ್ದರು.