ಮೈಸೂರು: ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪಂಚಾಮೃತ ಮತ್ತು ಏಕವಾರ ಅಭಿಷೇಕ ಸೇವೆಯನ್ನು ಹಿಂದಿನಂತೆ ಮುಂದುವರಿಸಲು ಮಾಜಿ ಸಚಿವ ಸಾ.ರಾ. ಮಹೇಶ್ ಮನವಿ ಮಾಡಿದ್ದಾರೆ.
ಸಾ.ರಾ.ಮಹೇಶ್ ಅವರು ಜಿಲ್ಲಾಧಿಕಾರಿಗಳಿಗೆ ಕೋರಿರುವ ಮನವಿ ಪತ್ರವನ್ನು ಜೆಡಿಎಸ್ ಪದಾಧಿಕಾರಿಗಳು ಅಪಾರ ಜಿಲ್ಲಾಧಿಕಾರಿ ಡಾ. ಶಿವರಾಜ್ ಅವರಿಗೆ ಸಲ್ಲಿಸಿದರು.
ಮೈಸೂರಿನ ಅಧಿದೇವತೆ ಶ್ರೀ ತಾಯಿ. ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜಾ ಸೇವೆಗಳ ಪೈಕಿ ಪಂಚಾಮೃತ ಅಭಿಷೇಕ 220 ರೂ ಮತ್ತು ಏಕವಾರ ಅಭಿಷೇಕ 300 ರೂ ಗಳ ಸೇವೆಯನ್ನು ಅನಧಿಕೃತವಾಗಿ ರದ್ದು ಮಾಡಲಾಗಿದೆ ಎಂದು ಭಕ್ತಾದಿಗಳಿಗೆ ತಿಳಿಸುವುದರಿಂದ ಭಕ್ತಾದಿಗಳು ಅನಿವಾರ್ಯವಾಗಿ ಏಕವಾರ ಅಭಿಷೇಕ 550 ರೂ ಗಳ ಸೇವೆ ಮಾಡುವ ಪರಿಸ್ಥಿತಿ ಉಂಟಾಗಿತ್ತು.
ಇದರಿಂದಾಗಿ ಭಕ್ತರಿಗೆ ಸೇವೆ ಮಾಡಲು ತೊಂದರೆ ಆಗಿರುವುದಾಗಿ ಸಾ.ರಾ.ಮಹೇಶ್ ಮನವರಿಕೆ ಮಾಡಿಕೊಟ್ಟಿದ್ದಾರೆ.
ಕೂಡಲೇ ರದ್ದು ಮಾಡಿರುವ ಸೇವೆಗಳನ್ನು ಮುಂದುವರಿಸಿ ಭಕ್ತಾದಿಗಳಿಗೆ ಶ್ರೀ ತಾಯಿ ಚಾಮುಂಡೇಶ್ವರಿ ಸೇವೆಗೆ ಅನುವು ಮಾಡಿಕೊಡಬೇಕೆಂದು ಸಾ.ರಾ. ಮಹೇಶ್ ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿ ಪತ್ರದಲ್ಲಿ ಕೋರಿದ್ದಾರೆ.

ಸಾ.ರಾ.ಅವರ ಈ ಮನವಿ ಪತ್ರವನ್ನು ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ನಗರ ಹಿರಿಯ ಉಪಾಧ್ಯಕ್ಷರಾದ ಫಾಲ್ಕನ್ ಬೋರೇಗೌಡ, ಮೈಸೂರು ನಗರ ಎಸ್ ಟಿ ಅಧ್ಯಕ್ಷರಾದ ಮದುವನ ಚಂದ್ರು, ನಿಕಟ ಪೂರ್ವ ಮಹಾ ಪ್ರಧಾನ ಕಾರ್ಯದರ್ಶಿ ಪಿ.ಎಸ್. ರಾಜಶೇಖರ ಮೂರ್ತಿ ಅವರುಗಳು ಅಪರ ಜಿಲ್ಲಾಧಿಕಾರಿ ಡಾ.ಶಿವರಾಜು ಅವರಿಗೆ ಸಲ್ಲಿಸಿದರು.