ಮೈಸೂರು: ಚಾಮುಂಡೇಶ್ವರಿ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯಾದರೆ ಧರ್ಮಸ್ಥಳ ಚಲೋ ಮಾದರಿಯಲ್ಲಿ ಚಾಮುಂಡೇಶ್ವರಿ ಚಲೋ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರಕ್ಕೆ ಚಾಮುಂಡೇಶ್ವರಿ ತಾಯಿ ಒಳ್ಳೆಯ ಬುದ್ಧಿಯನ್ನು ನೀಡಲಿ. ಹಿಂದೂಗಳ ಶ್ರದ್ಧಾಕೇಂದ್ರವನ್ನು ಟಾರ್ಗೆಟ್ ಮಾಡುವ ಮನಸ್ಥಿತಿಯನ್ನು ನಿವಾರಿಸಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.
ಹಿಂದೂಗಳ ಧಾರ್ಮಿಕ ಕೇಂದ್ರ ಯಾವಾಗಲೂ ರಕ್ಷಣೆಯಾಗಬೇಕು, ಪವಿತ್ರವಾಗಿ ಇರಬೇಕು. ಹಿಂದೂಗಳ ಭಾವನೆಗೆ ಧಕ್ಕೆಯಾಗಬಾರದು ಎಂದು ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ನುಡಿದರು.
ಮೈಸೂರಿನ ಒಡೆಯರ್ ರಾಜವಂಶಸ್ಥರು ನೂರಾರು ವರ್ಷಗಳಿಂದಲೂ ದಸರಾ ಆಚರಿಸಿಕೊಂಡು ಬಂದಿದ್ದಾರೆ. ಇಂತಹ ಪವಿತ್ರವಾದ ಹಬ್ಬವನ್ನು ಕಾಂಗ್ರೆಸ್ ಸರ್ಕಾರ ಅಪವಿತ್ರ ಮಾಡಬಾರದು. ಇದು ಹಿಂದೂಗಳ ದೇವಾಲಯ ಅಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅಂದಮೇಲೆ ಇದು ಯಾರದ್ದು ಇವರಿಗೆ ಧೈರ್ಯವಿದ್ದರೆ ಮಸೀದಿ ಮುಂದೆ ಹೋಗಿ ಇದು ಮುಸ್ಲಿಮರದ್ದಲ್ಲ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಚುನಾವಣೆ ಸಮಯದಲ್ಲಿ ಮುಸ್ಲಿಮರ ಮೂಗಿಗೆ ತುಪ್ಪ ಸವರಲಿ. ಅದನ್ನು ಬಿಟ್ಟು ಈ ಸಮಯದಲ್ಲಿ ಓಲೈಕೆ ಮಾಡಲಾಗುತ್ತಿದೆ. ಧರ್ಮಸ್ಥಳಕ್ಕೆ ನಾವೆಲ್ಲರೂ ಹೋಗಿ ಧರ್ಮಸ್ಥಳ ಚಲೋ ಮಾಡಲಿದ್ದೇವೆ. ಚಾಮುಂಡೇಶ್ವರಿ ದೇವಾಲಯಕ್ಕೆ ಧಕ್ಕೆಯಾದರೆ ಆಗ ಚಾಮುಂಡೇಶ್ವರಿ ಚಲೋ ಎಂದು ಹೋರಾಟ ಮಾಡುತ್ತೇವೆ ಎಂದು ಅಶೋಕ್ ತಿಳಿಸಿದರು.