(ವರದಿ:ಸಿದ್ದರಾಜು.ಕೊಳ್ಳೇಗಾಲ)
ಕೊಳ್ಳೇಗಾಲ,ಮಾ.5: ಯಾವುದೇ ಸಹಕಾರ ಸಂಘಗಳು ಬೆಳವಣಿಗೆ ಆಗಬೇಕಾದರೆ ಪರಸ್ಪರ ಸಹಕಾರ ಬೇಕು ಎಂದು ಚಾಮುಲ್ ನೂತನ ಅಧ್ಯಕ್ಷ ಎಂ.ನಂಜುಂಡಸ್ವಾಮಿ ತಿಳಿಸಿದರು.
ಕೊಳ್ಳೇಗಾಲ ಮತ್ತು ಹನೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ತಾಲ್ಲೂಕಿನ ಸಿಂಗನಲ್ಲೂರು ಗ್ರಾಮದ ಹಾಲು ಶೀಥಲೀಕರಣ ಕೇಂದ್ರ (ಚಾಮುಲ್ ಉಪಕೇಂದ್ರ) ದ ಆವರಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನಾನು ಕೆಎಂಎಫ್ ನಲ್ಲಿ ಐದು ವರ್ಷ ಕೆಲಸ ಮಾಡಿದ್ದೇನೆ ಮುಂದಿನ ದಿನದಲ್ಲಿ ಹೆಚ್ಚಿನ ಕೆಲಸ ಮಾಡಲು ನಿಮ್ಮ ಸಹಕಾರ ಬೇಕು ಎಂದು ಹಾಲು ಉತ್ಪಾದಕರಲ್ಲಿ ನಂಜುಂಡಸ್ವಾಮಿ ಮನವಿ ಮಾಡಿದರು.
ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರುಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಗುಂಡ್ಲುಪೇಟೆಯಲ್ಲಿ ಖಾಸಗಿಯವರ ಹಾವಳಿ ಹೆಚ್ಚಾಗಿದೆ ಇದರಿಂದ ನಮ್ಮ ರೈತರ ಹಾಲು ಖಾಸಿಗಿಯವರ ಪಾಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ದಿವಂಗತ ಹೆಚ್.ಎಸ್. ಮಹದೇವ ಪ್ರಸಾದ್ ರವರು 2017ರಲ್ಲಿ ಕೆಎಂಎಫ್ ಒಕ್ಕೂಟದಿಂದ ಬೇರ್ಪಡಿಸಿ ಪ್ರತ್ಯೇಕ ಚಾಮುಲ್ ಸ್ಥಾಪನೆಗೆ ಕಾರಣಿಭೂತರಾಗಿದ್ದಾರೆ. ಅವರ ಈ ಕೊಡುಗೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನೂತನ ಅಧ್ಯಕ್ಷರು ಹೇಳಿದರು.
ಮಳೆಗಾಲದಲ್ಲಿ 3.15 ಲಕ್ಷದವರೆಗೆ ಇಳುವರಿ ಬಂದಿದೆ ಆದರೆ ಈಗ ಬೇಸಿಗೆ ಆಗಿರುವುದರಿಂದ 20.15 ರಿಂದ 20.20 ಲಕ್ಷ ಇಳುವರಿ ಬರುತ್ತಿದೆ. ನೀವು ಗುಣಮಟ್ಟದ ಹಾಲು ನೀಡುತ್ತಿದ್ದಿರಾ, ಆ ಹಾಲಿಗೆ ತಕ್ಕ ದರ ನಾವು ನೀಡಬೇಕು ಈಗ ನೀಡುತ್ತಿರುವ ದರ ಯಾವುದಕ್ಕೂ ಸಾಕಾಗುವುದಿಲ್ಲ ಎಂಬುದು ಆಡಳಿತ ಮಂಡಳಿಗೆ ಗೊತ್ತಿದೆ. 30 ರೂ ಇದ್ದ ಹಾಲಿನ ದರವನ್ನು ನಾನು ಫೆ.10 ರಂದು ಚಾಮುಲ್ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರಧ ಮಾರನೆಯ ದಿನದಿಂದಲೇ ಒಂದು ರೂ. ಹೆಚ್ಚಳ ಮಾಡಲಾಗಿದೆ. ಇದು ಸಾಲುವುದಿಲ್ಲ ಎಂಬ ಕುರಿತು ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಮನವಿ ಮಾಡಿಕೊಳ್ಳಲಾಗಿದೆ ಎಂದು ನಂಜುಂಡಸ್ವಾಮಿ ತಿಳಿಸಿದರು.
ಈ ಹಿಂದೆ ಚಾಮುಲ್ ಗೆ ಸರ್ಕಾರ 83 ಕೋಟಿ ರೂ. ಅನುದಾನ ಮಂಜೂರು ಮಾಡಿತ್ತು. ಅದರಲ್ಲಿ 30 ಕೋಟಿ ರೂ.ಬಂದಿದ್ದು ಉಳಿದ 53 ಕೋಟಿ ರೂ. ಅನುದಾನ ಬರಬೇಕಾಗಿದೆ. ಅದಕ್ಕಾಗಿ ಆಡಳಿತ ಮಂಡಳಿ ಸರ್ಕಾರವನ್ನು ನಿರಂತರವಾಗಿ ಒತ್ತಾಯ ಮಾಡುತ್ತಿದೆ. ಆ ಹಣ ಬಂದರೆ ನಿಮಗೂ ಹೆಚ್ಚಿನ ದರವನ್ನು ಕೊಡಲು ಸಾಧ್ಯವಾಗುತ್ತದೆ.
ಮುಂದಿನ ದಿನಗಳಲ್ಲಿ ನಾವು ಐಸ್ ಕ್ರೀಮ್ ಫ್ಯಾಕ್ಟರಿ,ಮೈಸೂರು ಪಾಕ್ ತಯಾರಿಕೆ ಹಾಗೂ ನೀರಿನ ಪ್ಯಾಕಿಂಗ್ ಸೇರಿದಂತೆ ಇನ್ನಿತರ ಘಟಕಗಳನ್ನು ಸ್ಥಾಪಿಸಿ ಅದರಿಂದ ಬಂದ ಲಾಭದಿಂದ ರೈತರಿಗೆ ಹೆಚ್ಚಿನ ದರ ಕೊಡಬೇಕೆಂಬ ಉದ್ದೇಶ ಇಟ್ಟು ಕೊಂಡಿದ್ದೇವೆ. ಈಗಲೂ ಸಹ ಸರ್ಕಾರ ಮುಂದಿನ ತಿಂಗಳಲ್ಲಿ 5. ರೂ.ಗಳನ್ನು ಹೆಚ್ಚಳ ಮಾಡಬೇಕೆಂದಿದ್ದು ಅದರಲ್ಲಿ 2. ರೂ.ಗಳನ್ನು ಒಕ್ಕೂಟಕ್ಕೆ ಹಾಗೂ 3.ರೂಗಳನ್ನು ರೈತರಿಗೆ ಕೊಡಬೇಕೆಂಬ ಚಿಂತನೆ ನಡೆಸುತ್ತಿದೆ,ಒಟ್ಟಾರೆ ರೈತರಿಗೆ 40 ಆದರೂ ತಲುಪಿದರೆ ರೈತ ಸ್ವಲ್ಪ ಚೇತರಿಸಿಕೊಳ್ಳುತ್ತಾನೆ ಎಂದು ಅಭಿಪ್ರಾಯ ಪಟ್ಟರು.
ನೀವೇ ಇಲ್ಲ ಎಂದ ಮೇಲೆ ಕೆಎಂಎಫ್, ಚಾಮುಲ್ ಇವೆಲ್ಲಾ ಎಲ್ಲಿಂದ ಬರಬೇಕು. ಆದ್ದರಿಂದ ನೀವೆಲ್ಲ ಸಹಕಾರ ನೀಡಿ. ಕೇವಲ 4 – 5 ರೂ. ಆಸೆಗೆ ಖಾಸಗಿ ಅವರಿಗೆ ಹಾಲನ್ನು ಕೊಡಬೇಡಿ. ವಿಮೆ ಪ್ರೋತ್ಸಾಹ ಧನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಸರ್ಕಾರ ಮುಂದಿನ ದಿನಗಳಲ್ಲಿ ನಿಮಗೆ ಕಲ್ಪಿಸಿಕೊಡಲಿದೆ. ಸಹಕಾರ ಸಂಘಗಳಿಂದ ನೀವು ಪೆಟ್ರೋಲ್ ಬಂಕ್, ಗೊಬ್ಬರದ ಅಂಗಡಿ ಹಾಗೂ ಮೆಡಿಕಲ್ ಶಾಪ್ ಸೇರಿದಂತೆ ಇನ್ನಿತರ ಉದ್ದಿಮೆಗಳನ್ನು ತೆರೆದು ಅದರಿಂದ ಬಂದ ಲಾಭದಿಂದ ನಿಮ್ಮ ಪ್ರಾಥಮಿಕ ಸಂಘಗಳನ್ನು ಸದೃಢ ಮಾಡಬಹುದು ಸರ್ಕಾರ ಪ್ರಾಥಮಿಕ ಸಹಕಾರ ಸಂಘಗಳನ್ನು ಕಡೆಗಣಿಸುವ ಮಾತಿಲ್ಲ ಆದ್ದರಿಂದ ಸಂಘವನ್ನು ಸದ್ಬಳಕೆ ಮಾಡಿಕೊಂಡು ಮುಂದೆ ಬನ್ನಿ ಎಂದು ಹಾಲು ಉತ್ಪಾದಕರು ಹಾಗೂ ರೈತರಿಗೆ ಕರೆ ನೀಡಿದರು.
ಮಾಜಿ ಅಧ್ಯಕ್ಷ ನಂಜುಂಡ ಪ್ರಸಾದ್ ಮಾತನಾಡಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವುದು ಸಂತೋಷದ ಸಂಗತಿ, ಆದರೆ ನಿಭಾಯಿಸುವುದು ಅತ್ಯಂತ ಕ್ಲಿಷ್ಟಕರ ಆದರೆ ನಂಜುಂಡಸ್ವಾಮಿರವರಿಗೆ ಈ ಹಿಂದೆ ಮೈಸೂರು ಆಡಳಿತ ಮಂಡಳಿಯಲ್ಲೂ ಕೆಲಸ ಮಾಡಿರುವ ಅನುಭವಿದೆ. ಆದ್ದರಿಂದ ಎಲ್ಲರೂ ಸಹ ಅವರ ಜೊತೆ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.
ಗುಂಡ್ಲುಪೇಟೆಯಲ್ಲಿ ಹದಿನೈದು ಕಿಲೋಮೀಟರ್ ಹೋದರೆ ಆ ಕಡೆ ಕೇರಳ ಈ ಕಡೆ ತಮಿಳುನಾಡು ಸಿಗುತ್ತದೆ. ಹಾಲೆಲ್ಲಾ ಈಗ ಆ ಕಡೆ ಹೋಗುತ್ತಿದೆ. ಬೇರೆ ಬೇರೆ ಖಾಸಗಿ ಕಂಪನಿಗಳು ಬಂದು ಹಾಲು ಖರೀದಿ ಮಾಡಲು ಪ್ರಾರಂಭಿಸಿಬಿಟ್ಟಿವೆ. ಅಲ್ಲಿ 1.20 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಆದರೆ ನಮ್ಮ ಒಕ್ಕೂಟಕ್ಕೆ ಬರುತ್ತಿರುವುದು 60 ರಿಂದ 70, ಸಾವಿರ ಲೀಟರ್ ಮಾತ್ರ. ಉಳಿದ 40 ರಿಂದ 45 ಸಾವಿರ ಲೀಟರ್ ಹಾಲು ಖಾಸಗಿಯವರಿಗೆ ಹೋಗುತ್ತಿದೆ. ಕಾರಣ ಅವರು ಹಾಲಿನ ದರವನ್ನು ಮೂರು ನಾಲ್ಕು ರೂ. ಹೆಚ್ಚಾಗಿ ಕೊಡುವುದರಿಂದ ನಮ್ಮ ರೈತರಿಗೆ ನಾವು ಹೇಳುವುದಕ್ಕೆ ಆಗುವುದಿಲ್ಲ. ಸರ್ 40 ರೂ. ಮಾಡಿ ನಾವು ನಿಮಗೆ ಹಾಲು ಹಾಕುತ್ತೇವೆ ಎಂದು ಹೇಳುತ್ತಾರೆ. ನಾವು ಅವರಿಗೆ ಹೆಚ್ಚು ಒತ್ತಡ ಮಾಡಿ ನಮ್ಮ ಸಹಕಾರ ಸಂಘಗಳಿಗೆ ಹಾಲು ಹಾಕಿಸಲು ಆಗುವುದಿಲ್ಲ. ಆದರೆ ನಮ್ಮಲ್ಲಿರುವ ಸೌಲಭ್ಯಗಳನ್ನು ಅವರು ಕೊಡಲು ಆಗುವುದಿಲ್ಲ. ಈಗ ನಮ್ಮಲ್ಲಿ ಆರ್ ಕೆ ಟಿ ಸೌಲಭ್ಯವಿದೆ 15,000 ಕೊಡುವಂತಹದ್ದು. ಜನಶ್ರೀ ಯೋಜನೆಯಿದೆ. ನಂತರ ಜೀವವಿಮೆ ಸೌಲಭ್ಯ ಇದೆ. ಜೊತೆಗೆ 24 ಗಂಟೆಯೊಳಗೆ ಯಾವ ಸಂದರ್ಭದಲ್ಲಿ ಕರೆದರೂ ಜಾನುವಾರುಗಳಿಗೆ ಚಿಕಿತ್ಸೆ ನೀಡುವಂತಹ ವೈದ್ಯರ ಸೌಲಭ್ಯವಿದೆ ಸಹಕಾರ ಸಂಘಕ್ಕೆ ಕಟ್ಟಡಗಳನ್ನು ಕಟ್ಟಿಸಿ ಕೊಡುತ್ತಾರೆ. ಸಹಕಾರ ಇಲಾಖೆ ಅಧೀನದಲ್ಲಿರುವ ಸಹಕಾರಿ ಸಂಘಗಳು ಇಂದು ಎಲ್ಲ ರೀತಿಯ ವ್ಯವಸ್ಥೆ ಇರುವ ಸಂಸ್ಥೆಯಾಗಿದೆ. ಅಲ್ಲಿ ಎಲ್ಲಾ ರೀತಿಯ ಕಟ್ಟುಪಾಡುಗಳು ಇರುತ್ತವೆ, ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕೆ ಹೊರತು ನಮ್ಮ ನಮ್ಮ ವೈಶಮ್ಯಕ್ಕೆ ಇಂದು ರಾಜಕೀಯ ಮಾಡಿಕೊಂಡು ಯಾರೋ ಖಾಸಗಿಯವರನ್ನು ತಂದು ಕೆಲವು ಕಡೆ ನಡೆಸುತ್ತಿದ್ದಾರೆ. ಅದಕ್ಕೆಲ್ಲ ಆದ್ಯತೆ ಕೊಡುವಂತ ಕೆಲಸ ಆಗಬಾರದೆಂದು ಮನವಿ ಮಾಡಿದರು.
ಮಾಜಿ ಅಧ್ಯಕ್ಷ ವೈ.ಸಿ.ನಾಗೇಂದ್ರ, ನಿರ್ದೇಶಕರಾದ ಎಂ.ಟಿ. ಸುನಿಲ್, ಸಾಹಿಲ್ ಅಹಮದ್, ಎಸ್. ಮಹದೇವಸ್ವಾಮಿ, ಸದಾಶಿವಮೂರ್ತಿ, ಹೆಚ್.ಎಸ್.ಬಸವರಾಜು, ಕೆ.ಕೆ. ರೇವಣ್ಣ, ವ್ಯವಸ್ಥಾಪಕ ನಿರ್ದೇಶಕ ರಾಜ್ ಕುಮಾರ್ ಸಿಬ್ಬಂದಿಗಳಾದ ಶರತ್ ಕುಮಾರ್, ವೆಂಕಟೇಶ್ ಪ್ರಸಾದ್, ಶರತ್, ದೀಪು ಮತ್ತಿತರರು ಉಪಸ್ಥಿತರಿದ್ದರು.