(ವರದಿ: ಡಿ ಸಿದ್ದರಾಜು ಕೊಳ್ಳೇಗಾಲ)
ಕೊಳ್ಳೇಗಾಲ: ಚಾಮುಲ್ ನ ನೂತನ ಅಧ್ಯಕ್ಷರಾಗಿ ಎರಡನೇ ಅವಧಿಗೆ ಕಾಂಗ್ರೆಸ್ ನ ನಂಜುಂಡಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕುದೇರಿನಲ್ಲಿರುವ ಚಾಮುಲ್ ಸಂಸ್ಥೆಯ ಸಭಾಂಗಣದಲ್ಲಿ ಚುನಾವಣಾ ಅಧಿಕಾರಿ ಜವಳಿ ಮತ್ತು ಕೈಮಗ್ಗ ಅಭಿವೃದ್ಧಿ ನಿಗಮದ ಉಪ ನಿರ್ದೇಶಕರಾದ ಶಿವಶಂಕರ್ ಅವರ ಸಮ್ಮುಖದಲ್ಲಿ ಚಾಮುಲ್ ನೂತನ ಅಧ್ಯಕ್ಷರ ಚುನಾವಣೆ ನಡೆಯಿತು.

ಚಾಮುಲ್ ನಲ್ಲಿ ಒಂಬತ್ತು ನಿರ್ದೇಶಕರ ಸಂಖ್ಯಾ ಬಲವಿದ್ದು ಇಂದು ನಡೆದ ಚುನಾವಣೆಯಲ್ಲಿ ಆರು ಜನ ನಿರ್ದೇಶಕರು ಭಾಗವಹಿಸಿದ್ದರು. ಉಳಿದ ಮೂರು ಜನ ನಿರ್ದೇಶಕರು ಗೈರು ಹಾಜರಾಗಿದ್ದರು.
ನಿರ್ದೇಶಕರುಗಳಾದ ನಂಜುಂಡ ಪ್ರಸಾದ್, ಶಾಹಿಲ್ ಅಹಮದ್, ಮಹದೇವಸ್ವಾಮಿ, ಸದಾಶಿವಮೂರ್ತಿ, ಶೀಲಾ ಪುಟ್ಟರಂಗಶೆಟ್ಟಿ ಹಾಗೂ ನಾಮ ನಿರ್ದೇಶಿತ ನಿರ್ದೇಶಕ ರೇವಣ್ಣ, ಹಾಜರಾಗಿದ್ದರು.
ನಂಜುಂಡಸ್ವಾಮಿ ಹೊರತುಪಡಿಸಿ ಇನ್ಯಾರು ನಾಮಪತ್ರ ಸಲ್ಲಿಸದ ಕಾರಣ ನಂಜುಂಡಸ್ವಾಮಿ ರವರನ್ನು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಲಾಯಿತು.
ಈ ವೇಳೆ ಮಾಜಿ ಅಧ್ಯಕ್ಷ ನಾಗೇಂದ್ರ, ನಿರ್ದೇಶಕರಾದ ಬಸವರಾಜು, ಸುನಿಲ್ ಗೈರು ಹಾಜರಾಗಿದ್ದರು.

ನಂತರ ಚಾಮುಂಡ ಆವರಣದಲ್ಲಿ ನಡೆದ ವೇದಿಕೆಯಲ್ಲಿ ನೂತನ ಅಧ್ಯಕ್ಷರನ್ನು ಪಕ್ಷದ ಕಾರ್ಯಕರ್ತರು ಮುಖಂಡರು ಹಾಗೂ ಹಿತೈಷಿಗಳು ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಸಂಸ್ಥೆಯ ಮಾಜಿ ಅಧ್ಯಕ್ಷ ನಂಜುಂಡ ಪ್ರಸಾದ್ 2015ರಲ್ಲಿ ಸಿದ್ದರಾಮಯ್ಯನವರ ಸರ್ಕಾರದ ನೇತೃತ್ವದಲ್ಲಿ ಚಾಮುಲ್ ಸಂಸ್ಥೆಯ ನಿರ್ಮಾಣಕ್ಕೆ ಮಾಜಿ ಸಚಿವ ದಿವಂಗತ ಮಹದೇವ ಪ್ರಸಾದ್ ಕಾರಣೀ ಭೂತರಾದರು ಎಂದು ಸ್ಮರಿಸಿದರು.
ಅಂದು ಶಾಸಕರಾಗಿದ್ದ ಆರ್.ನರೇಂದ್ರ, ಎಸ್.ಜಯಣ್ಣ, ಪುಟ್ಟರಂಗಶೆಟ್ಟಿ ಅವರು ಸಹಕಾರ ನೀಡಿದ್ದರು. ನಾನು ಹಾಗೂ ನಂಜುಂಡಸ್ವಾಮಿ ಅವರು ಮೊದಲ ಬಾರಿಗೆ ಚಾಮುಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದೆವು. ಈಗ ಎರಡು ವರ್ಷ ನಾಲ್ಕು ತಿಂಗಳ 2 ನೇ ಅವಧಿಗೆ ಮತ್ತೆ ಆಯ್ಕೆಯಾಗಿದ್ದಾರೆ,
ನಂಜುಂಡಸ್ವಾಮಿ ಸಹಕಾರ ಕ್ಷೇತ್ರದಲ್ಲಿ ಬಹಳ ಅನುಭವ ಇರುವ ವ್ಯಕ್ತಿ. ಉಳಿದ ಅವಧಿಗೆ ಉತ್ತಮವಾದ ಕೆಲಸವನ್ನು ಮಾಡಿಕೊಂಡು ಹೋಗುವಂತೆ ಸಲಹೆ ನೀಡಿದರು. ನಿಮ್ಮ ಬೆಂಬಲಕ್ಕೆ ನಮ್ಮ ಸದಸ್ಯರೆಲ್ಲರೂ ಇರುತ್ತಾರೆ ಎಂದು ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ ಮಾತನಾಡಿ,ಗೌರವಯುತವಾಗಿ, ಒಮ್ಮತವಾಗಿ ಆಯ್ಕೆ ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಈ ಸಂಸ್ಥೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ನಾವೆಲ್ಲರೂ ನಂಜುಂಡ ಸ್ವಾಮಿಯವರಿಗೆ ಕೊಟ್ಟಿದ್ದೇವೆ, ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿಯು ಜೀವನವನ್ನು ನಡೆಸಲು ಅವಕಾಶವಿರುವಂತ ಒಂದು ಸಂಸ್ಥೆ ಎಂದರೆ ಅದು ಹೈನುಗಾರಿಕೆ.
ಕರ್ನಾಟಕದಲ್ಲಿ ಹಾಲಿನ ಶೇಖರಣೆ ಹೆಚ್ಚು, ಹೆಚ್ಚು ಆಗುತ್ತದೆ. ಅಧ್ಯಕ್ಷರಾಗಿ ಜವಾಬ್ದಾರಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಇದು ಕಷ್ಟದ ಕೆಲಸವೂ ಆಗಿದೆ. ಖಾಸಗಿಯವರ ಹಾವಳಿ ಹೆಚ್ಚುತ್ತಿದೆ ಇದರ ನಡುವೆ ಸಂಸ್ಥೆಯನ್ನು ಉಳಿಸಿ, ಬೆಳೆಸಿ ಕೊಂಡು ಹೋಗುವುದು ಕಷ್ಟದ ಕೆಲಸ, ನಂಜುಂಡಸ್ವಾಮಿ ಅವರು ಉತ್ತಮ ಕೆಲಸವನ್ನು ಮಾಡಿಕೊಂಡು ಎಲ್ಲಾ ರೈತಾಪಿ ವರ್ಗದವರಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ಸಲಹೆ ನೀಡಿದರು.
ಈಗಿರುವ ಧಾರಣೆಯಲ್ಲಿ ರೈತರು ಬದುಕುವುದು ಕಷ್ಟ. ಕನಿಷ್ಠ 40 ರೂಪಾಯಿ ಆದರೂ ಪ್ರತಿ ಲೀಟರ್ ಗೆ ಧಾರಣೆ ದೊರೆತರೆ ರೈತರು ಬದುಕಲು ಅನುಕೂಲವಾಗುತ್ತದೆ. ಈ ಕೆಲಸವನ್ನು ನಮ್ಮ ಚಾಮುಲ್ ಸಂಸ್ಥೆಯೊಂದೇ ಮಾಡಲು ಸಾಧ್ಯವಿಲ್ಲ ಒಕ್ಕೂಟದ 16 ಸಂಸ್ಥೆಗಳು ಸೇರಿ ಮಾಡಬೇಕಿದೆ ಹಾಗಾದಾಗ ಮಾತ್ರ ಇದು ಯಶಸ್ವಿಗಲು ಸಾಧ್ಯ ಎಂದು ತಿಳಿಸಿದರು.
ನೂತನ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ ಜಿಲ್ಲೆಯ ರೈತರು ಮತ್ತು ಉತ್ಪಾದಕರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ನಿಮ್ಮ ಸಲಹೆ ಮೇರೆಗೆ ರೈತರ ಹಿತಕ್ಕಾಗಿ ದುಡಿಯುತ್ತೇನೆ. ಎಲ್ಲಾ ಸೇರಿ ನಿರ್ಧಾರ ತೆಗೆದುಕೊಂಡು ಇಂದಿನಿಂದ ಹಾಲಿನ ದರವನ್ನು ಒಂದು ರೂಪಾಯಿ ಹೆಚ್ಚಿಸಿದ್ದೇವೆ. 52 ಕೋಟಿ ರೂಗಳನ್ನು ಈ ಬಜೆಟ್ ನಲ್ಲಿ ಚಾಮುಲ್ ಗೆ ಮಂಜೂರು ಮಾಡಿ ಕೊಡುವಂತೆ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರು ಮತ್ತು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಅದಕ್ಕಾಗಿ ಅವರನ್ನು ಭೇಟಿ ಮಾಡಲು ಸಂಸ್ಥೆಯಿಂದ ನಿಯೋಗ ಹೋಗುತ್ತಿದ್ದೇವೆ. ಉತ್ಪನ್ನಗಳು ಮಾರಾಟವಾದಾಗ ರೈತರಿಗೆ ಹೆಚ್ಚಿನ ಬೆಲೆ ನೀಡಬಹುದು ಹಾಗೂ ಅನುಕೂಲ ಮಾಡಿಕೊಡಬಹುದು, ಎಲ್ಲವನ್ನು ಕೊಡಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ಮಾಣಕ್ಕೆ ಕಾರಣಕರ್ತರಾದ ಮಹದೇವ ಪ್ರಸಾದ್ ರವರನ್ನು ಸ್ಮರಿಸಲಾಯಿತು.
ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರುಗಳು, ಗಣ್ಯರು, ಮುಖಂಡರು ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಿದ್ದರು.
