ಕರ್ತವ್ಯ ಲೋಪ-ಇಬ್ಬರು ಪಿಡಿಒ ಗಳು ಅಮಾನತು

Spread the love

ಚಾಮರಾಜನಗರ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇಬ್ಬರು ಪಿಡಿಒಗಳನ್ನು ಅಮಾನತು ಪಡಿಸಿ ಆದೇಶ ಹೊರಡಿಸಲಾಗಿದೆ.

ವೆಂಕಟಯ್ಯನಛತ್ರದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಆರ್. ಮಹೇಶ್ ಎಂಬುವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಆದೇಶ ಹೊರಡಿಸಿದ್ದಾರೆ.

ಚಾಮರಾಜನಗರ ತಾಲೂಕಿನ ವೆಂಕಟಯ್ಯನಛತ್ರದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿ ಆರ್. ಮಹೇಶ್ ಅವರು ದಿನಾಂಕ ೦೧-೦೪-೨೦೨೨ ರಿಂದ ೨೫-೦೫-೨೦೨೩ರವರೆಗೆ, ೦೫-೦೩-೨೦೨೪ ರಿಂದ ೩೧-೦೩-೨೦೨೪ರವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನೆ ಕೈಗೊಂಡ ಸಂದರ್ಭದಲ್ಲಿ ಗಮನಿಸಿದ ಲೋಪಗಳ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮತ್ತೊಬ್ಬ ಪಿಡಿಒ ಅಮಾನತು:
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ವೆಂಕಟಯ್ಯನಛತ್ರದ ಗ್ರಾಮ ಪಂಚಾಯಿತಿಯ ಹಿಂದಿನ ಪ್ರಭಾರ ಪಂಚಾಯತ್ ಅಭಿವೃದ್ದಿ ಅಧಿಕಾರಿ ಪ್ರಸ್ತುತ ಕೊತ್ತಲವಾಡಿ ಗ್ರಾಮ ಪಂಚಾಯಿತಿಯ ಗ್ರೇಡ್-೧ ಕಾರ್ಯದರ್ಶಿ ಎಲ್. ರಾಜೇಂದ್ರ ಪ್ರಸಾದ್ ಎಂಬುವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಆದೇಶ ಹೊರಡಿಸಿದ್ದಾರೆ.

ರಾಜೇಂದ್ರ ಪ್ರಸಾದ್ ಅವರು ಚಾಮರಾಜನಗರ ತಾಲೂಕಿನ ವೆಂಕಟಯ್ಯನಛತ್ರದ ಗ್ರಾಮ ಪಂಚಾಯಿತಿಯಲ್ಲಿ ೨೬-೦೫-೨೦೨೩ ರಿಂದ ೪-೦೩-೨೦೨೪ರವರೆಗೆ ಪ್ರಭಾರ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನೆ ಕೈಗೊಂಡ ಸಂದರ್ಭದಲ್ಲಿ ಗಮನಿಸಿದ ಲೋಪಗಳ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.