ಪ್ರತಿಭೆ ಹೊರಬರಲು ಅವಕಾಶಗಳು ದೊರೆಯಬೇಕು: ಸಿಎಂ

Spread the love

ಚಾಮರಾಜನಗರ: ಜಾತಿಯಿಂದ ಯಾರೂ ಪ್ರತಿಭಾವಂತರಾಗುವುದಿಲ್ಲ, ಎಲ್ಲರಲ್ಲಿಯೂ ಪ್ರತಿಭೆ ಇರುತ್ತದೆ ಅದು ಹೊರಬರಲು ಅವಕಾಶಗಳು ಸಿಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸತ್ತೇಗಾಲದಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮಮ್ಮ ಸೋಸಯ್ಯನ ಸಿದ್ದಯ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ಎರಡು ಕೋಟಿ ರೂ ವೆಚ್ಚ ಮಾಡಿ ನಿರ್ಮಾಣವಾಗಿರುವ ಶಾಲೆಯಲ್ಲಿ ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯಗಳನ್ನು ನಿರ್ಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ದೊರಕುವಂತೆ ಮಾಡಿದ್ದಾರೆ. ಸ್ವಾತಂತ್ಯ್ರಕ್ಕೂ ಮುನ್ನ ಶೂದ್ರರು, ದಲಿತರಿಗೆ ಅವಕಾಶಗಳೇ ಇರಲಿಲ್ಲ. ಅಂಬೇಡ್ಕರ್ ಅವರು ಕಷ್ಟಪಟ್ಟು ವಿದ್ಯಾವಂತರಾದರು. ಶಿಕ್ಷಣ ಪ್ರಬಲವಾದ ಅಸ್ತ, ಶಿಕ್ಷಣದಿಂದ ವಂಚಿತರಾದವರು ಸ್ವಾಭಿಮಾನದಿಂದ, ಗೌರವದಿಂದ ಬದುಕುವುದು ಕಷ್ಟವಾಗುತ್ತದೆ. ಅದಕ್ಕಾಗಿ ಎಲ್ಲರೂ ವಿದ್ಯಾವಂತ ರಾಗಲೇಬೇಕು ಎಂದು ಸಿಎಂ ಕರೆ ನೀಡಿದರು.

ಮರಿಸ್ವಾಮಿಯವರು ಈ ಊರಿನಲ್ಲಿ ಹುಟ್ಟಿ ಐಪಿಎಸ್ ಅಧಿಕಾರಿಯಾಗಿ, ಪೊಲೀಸ್ ಮಹಾನಿರ್ದೇಶಕರಾಗಿ ಈ ಊರಿಗೆ ಹಾಗೂ ಈ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಈ ಊರಿನ ಜನ ಹೆಮ್ಮೆ ಪಡುವಂತೆ ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅವರು ಸತ್ತೇಗಾಲ ಗ್ರಾಮದ ಗ್ರಾಮಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಈ ಶಾಲೆಯ ನಿರ್ಮಾಣಕ್ಕೆ ಆಸಕ್ತಿ ತಳೆದು ಇತರರ ಸಹಾಯವನ್ನು ಪಡೆದು ಶಾಲೆಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ನಾವು ವಿದ್ಯಾರ್ಥಿಗಳಾಗಿದ್ದಾಗ ಬರಿಗಾಲಿನಲ್ಲಿ ಶಾಲೆಗೆ ತರಳುತ್ತಿದ್ದೆವು. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಯೂ ಶೂ, ಸಾಕ್ಸ್ ಹಾಗೂ ಸಮವಸ್ತ್ರ ಹಾಕಿಕೊಳ್ಳಬೇಕೆಂದು ಶೂಭಾಗ್ಯ ಕಾರ್ಯಕ್ರಮವನ್ನು ಜಾರಿ ಮಾಡಿದ್ದೆ. ಈಗ ಹಾಲು, ರಾಗಿ ಮಾಲ್ಟ್, ಮೊಟ್ಟೆ, ಚಿಕ್ಕಿ, ಬಾಳೆಹಣ್ಣು, ಸಮವಸ್ತ್ರ, ಪುಸ್ತಕವನ್ನು ಕೊಡುತ್ತಿದ್ದೇವೆ. ಹಾಗಾಗಿ ಮಕ್ಕಳು ಎಲ್ಲಾ ಸೌಲಭ್ಯ ಪಡೆದು ಚೆನ್ನಾಗಿ ಓದಬೇಕು, ವಿದ್ಯೆಯಿಂದ ವಂಚಿತರಾಗಬಾರದು ಎಂದು ಸಿಎಂ ಸಲಹೆ ನೀಡಿದರು.

ನಮ್ಮ ಬಜೆಟ್ 3 ಲಕ್ಷದ 71 ಸಾವಿರ ಕೋಟಿ. ಅದರಲ್ಲಿ 1.20 ಲಕ್ಷ ಕೋಟಿ ರೂ.ಗಳನ್ನು ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಸತ್ತೇಗಾಲದಲ್ಲಿ 14 ಮತಗಟ್ಟೆಗಳಿದ್ದು ಪಟ್ಟಣ ಪಂಚಾಯಿತಿ ಮಾಡಲು ಮನವಿ ಸಲ್ಲಿಸಿದ್ದಾರೆ. ಅದನ್ನು ಈಡೇರಿಸುತ್ತೇನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಧನಗೆರೆ ಜಾಗೀರ್‌ದಾರ್ ಅಣೆಕಟ್ಟೆಗೆ ನೀರು ಒದಗಿಸುವ ಜೊತೆಗೆ ಬೇಸಿಗೆ ಬೆಳೆಗೆ ನೀರು ಕೊಡಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ನೀರಿದ್ದರೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಚಾಮರಾಜನಗರ ಜಿಲ್ಲಾ ಉಸ್ತುವರಿ ಸಚಿವ ಕೆ.ವೆಂಕಟೇಶ್, ಸಚಿವರಾದ ಡಾ:ಹೆಚ್.ಸಿ ಮಹದೇವಪ್ಪ, ಮಧು ಬಂಗಾರಪ್ಪ. ಶಾಸಕ ಎಂ.ಆರ್.ಮಂಜುನಾಥ್, ಎಂಎಸ್‌ಐಎಲ್ ಅಧ್ಯಕ್ಷ ಪುಟ್ಟರಂಗಶೆಟ್ಟಿ, ಶಾಸಕರಾದ ಕೃಷ್ಣಮೂರ್ತಿ, ಗಣೇಶ್ ಪ್ರಸಾದ್, ಮಾಜಿ ಶಾಸಕರಾದ ನರೇಂದ್ರ, ನಂಜುಂಡಸ್ವಾಮಿ, ಮಾಜಿ ಸಚಿವ ಲಿಂಗಯ್ಯ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಶಾಲಾ ಕಟ್ಟಡದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ದಾನಿಗಳು ಹಾಗೂ ನಿವೃತ್ತ ಪೋಲೀಸ್ ಮಹಾನಿರ್ದೇಶಕರಾದ ಎಸ್ ಮರಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.