ಚಾಮರಾಜನಗರ: ದೇಶದ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಸಮಾನತೆ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಮತ್ತಿತರೆ ಹಕ್ಕುಗಳನ್ನು ಯಾವುದೇ ತಾರತಮ್ಯವಿಲ್ಲದೇ ನೀಡವುದು ಸಂವಿಧಾನದ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವ ಕೆ. ವೆಂಕಟೇಶ್ ತಿಳಿಸಿದರು.
ನಗರದ ಡಾ. ಬಿ.ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ೭೬ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಜನವರಿ ೨೬ ೧೯೫೦ರಲ್ಲಿ ಭಾರತವು ಗಣತಂತ್ರ ದೇಶವೆಂದು ಘೋಷಿಸಿಕೊಂಡು ಇಂದಿಗೆ ೭೫ ವರ್ಷಗಳು ಸಂದಿವೆ. ಸಂವಿಧಾನ ಜಾರಿಗೊಳಿಸಿದ ದಿನವನ್ನು ದೇಶಾದ್ಯಂತ ಗಣರಾಜ್ಯೋತ್ಸವ ದಿನವನ್ನಾಗಿ ಹೆಮ್ಮೆಯಿಂದ ಆಚರಿಸುತ್ತಿದ್ದೇವೆ. ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ಇಡೀ ಜಗತ್ತಿಗೆ ಮಾದರಿಯಾಗುವಂತಹ ಸಂವಿಧಾನ ರಚಿಸಿ ನಮಗೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಬಣ್ಣಿಸಿದರು.
ದೇಶದ ಸಮಗ್ರತೆಯನ್ನು ಎತ್ತಿ ಹಿಡಿಯಲು ಸಂವಿಧಾನ ನೆರವಾಗಿದೆ. ಇಡೀ ವಿಶ್ವದಲ್ಲಿಯೇ ಶ್ರೇಷ್ಠವಾಗಿರುವ ಭಾರತ ಸಂವಿಧಾನದ ಘನತೆ, ಗೌರವವನ್ನು ಕಾಪಾಡಿಕೊಳ್ಳಬೇಕಾದ್ದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಜಾನಪದ ಕಲೆ, ಸಂಸ್ಕೃತಿಗಳ ತವರೂರು ಆಗಿರುವ ಗಡಿಜಿಲ್ಲೆ ಚಾಮರಾಜನಗರದ ಸರ್ವತೋಮುಖ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದೆ. ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯಸರ್ಕಾರವು ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಜನಪರ ಅಗತ್ಯತೆಗಳನ್ನು ಪೂರೈಸುವ ಉದ್ದೇಶದೊಂದಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದು ವೆಂಕಟೇಶ್ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಲೋಕಸಭಾ ಸದಸ್ಯ ಸುನಿಲ್ ಬೋಸ್, ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಸೇರಿದಂತೆ ಗಣ್ಯರು ರಾಷ್ಟ್ರನಾಯಕರಾದ ಮಹಾತ್ಮ ಗಾಂಧಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ, ತಹಶೀಲ್ದಾರ್ ಗಿರಿಜ ಮತ್ತಿತರರು ಉಪಸ್ಥಿತರಿದ್ದರು.