(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೆಗಾಲ: ಕಳೆದ ಒಂದು ತಿಂಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು,
ಪ್ರವಾಹದ ಭೀತಿ ಎದುರಾಗಿದೆ.
ತಾಲ್ಲೂಕಿನ ಹಳೇ ಹಂಪಾಪುರ ಹಾಗೂ ಮುಳ್ಳೂರು ಗ್ರಾಮಗಳಲ್ಲಿ ಜಮೀನು ಜಲಾವೃತವಾಗಿದ್ದು ಗ್ರಾಮದ ಅಂಚಿನಲ್ಲಿ ನೀರು ಹರಿಯುತ್ತಿರುವುದರಿಂದ ಜನರು ಆತಂಕಗೊಂಡಿದ್ದಾರೆ
ರಾಜ್ಯದ ಕರಾವಳಿ ತೀರದ ಜಿಲ್ಲೆಗಳಲ್ಲಿ ವರುಣ ನಿರಂತರವಾಗಿ ಆರ್ಭಟಿಸುತ್ತಿರುವುದರಿಂದ ಕೆ ಆರ್ ಎಸ್ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ,
ಕೆ ಆರ್ ಎಸ್ ಜಲಾಶಯದಿಂದ 80 ಸಾವಿರ ಕ್ಯೂಸೆಕ್, ಕಬಿನಿ ಜಲಾಶಯದಿಂದ 45 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗಳಿಗೆ ಹರಿಬಿಡಲಾಗುತ್ತಿದೆ. ಕಬಿನಿ ಹಾಗೂ ಕೆ.ಆರ್,ಎಸ್ 2 ಅಣೆಕಟ್ಟೆಗಳಿಂದ 1.25. ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದಲ್ಲಿ ನದಿಗಳಿಗೆ ನೀರು ಹರಿದು ಬರುತ್ತಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ.

ಕಬಿನಿ ಹಾಗೂ ಕಾವೇರಿ ನದಿಗಳು ಟಿ.ನರಸೀಪುರದ ಬಳಿ ಒಂದಾಗುತ್ತವೆ. ಇದರಿಂದ ಮುಂದೆ ಸಾಗುವುದರಿಂದ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತದೆ. ಹಾಗಾಗಿ ಕೆಳಭಾಗದಲ್ಲಿರುವ ಕೆಲವು ನದಿ ಪಾತ್ರದ ಗ್ರಾಮಗಳು ಪ್ರತಿವರ್ಷ ಪ್ರವಾಹ ಭೀತಿ ಎದುರಿಸುತ್ತವೆ.
ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು, ಹಳೇ ಹoಪಾಪುರ ಗ್ರಾಮಗಳೊಡನೆ ದಾಸನಪುರ, ಹಳೇ ಅಣಗಳ್ಳಿ, ಹರಳೆ, ಯಡಕುರಿಯಾ ಗ್ರಾಮಗಳ ಜನ ಕಳೆದ ಭಾರಿಯಂತೆ ಈ ಭಾರಿಯು ಮಳುಗಡೆಯ ಭೀತಿ ಎದುರಿಸುತ್ತಿದ್ದಾರೆ.
ನಿನ್ನೆ ವರೆಗೂ ನದಿ ಪಾತ್ರದಲ್ಲಿ ತುಂಬಿ ಹರಿಯುತ್ತಿದ್ದ ನೀರು ಇಂದು ಜಮೀನುಗಳಿಗೆ ನುಗ್ಗಿದೆ.
ಅಣೆಕಟ್ಟೆಗಳಿಂದ ನದಿಗಳಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿ ಬಿಡುವ ಸಾಧ್ಯತೆ ಇರುವುದರಿಂದ ನದಿಯಲ್ಲಿ ಪ್ರವಾಹ ಹೆಚ್ಚಳವಾಗಿ ಯಾವುದೇ ಕ್ಷಣದಲ್ಲಾದರು ಅಪಾಯದ ಮಟ್ಟ ಮೀರ ಬಹುದು. ಒಂದು ವೇಳೆ ಅಂತಹ ಪರಿಸ್ಥಿತಿ ಎದುರಾದರೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದು ಕಟ್ಟೆಚ್ಚರ ವಹಿಸಿದೆ.
ಈಗಾಗಲೆ ಚಾಮರಾಜನಗರ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾ ನಾಗ್. ಅಧಿಕಾರಿಗಳೊಡನೆ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ನದಿಯಲ್ಲಿ ಪ್ರವಾಹದ ಮಟ್ಟ ತಗ್ಗುವವರೆಗೆ ನದಿ ತೀರದ ಗ್ರಾಮಗಳ ಜನರು ನದಿಯ ಬಳಿ ತೆರಳುವುದಾಗಲಿ ನೀರಿಗೆ ಇಳಿಯುವುದಾಗಲಿ ಮಾಡಭಾರದು, ಜಾನುವಾರುಗಳು ಮಕ್ಕಳನ್ನು ನದಿಯ ಬಳಿ ತೆರಳದಂತೆ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ. ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ಕಟ್ಟೆಚ್ಚರ ವಹಿಸಲು ಅಗತ್ಯ ಬಿದ್ದರೆ ಗಂಜಿ ಕೇಂದ್ರ ತೆರೆಯಲು ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಕೊಳ್ಳೇಗಾಲ ಉಪವಿಭಾಗಧಿಕಾರಿ ಮಹೇಶ್ ಅವರು ಇಂದು ಬೆಳಗಿನಿಂಲೇ ತಮ್ಮ ಅಧೀನ ಅಧಿಕಾರಿಗಳಿಂದ ಮಾಹಿತಿ ಪಡೆದು ರಾತ್ರಿ
ದಾಸನಪುರ, ಹಳೇ ಹಂಪಾಪುರ ಗ್ರಾಮಗಳಿಗೆ ಭೇಟಿ ನೀಡಿ ಜಲಾವೃತಗೊಂಡಿರುವ ಜಮೀನುಗಳನ್ನು ವೀಕ್ಷಿಸಿ ರೈತರಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ್, ಕಬಿನಿ ಹಾಗೂ ಕೆ ಆರ್ ಎಸ್ ಜಲಾಶಯಗಳಿಂದ 1.25 ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ನೀರನ್ನು ನದಿಗೆ ಹರಿ ಬಿಟ್ಟಿರುವುದರಿಂದ ಜನರು ನದಿಯ ಬಳಿ ತೆರಳದಂತೆ, ತಮ್ಮ ಮಕ್ಕಳು ಹಾಗೂ ಜಾನುವಾರುಗಳನ್ನು ನದಿಯ ಕಡೆ ಕಳುಹಿಸಿದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ಪ್ರವಾಹದ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ,ಇಡೀ ರಾತ್ರಿ ಎಚ್ಚರವಾಗಿದ್ದು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು. ಕಾಳಜಿ ಕೇಂದ್ರ ತೆರೆಯಲು ಸಿದ್ದತೆ ಮಾಡಿ ಕೊಳ್ಳಲಾಗಿದೆ. ಪರಿಸ್ಥಿತಿಗೆ ತಕ್ಕಂತೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ನದಿ ತೀರದ ಗ್ರಾಮಗಳ ಜನರು ಯಾವುದೇ ಕ್ಷಣದಲ್ಲಾದರು ಸ್ಥಳಾಂತರಗೊಳ್ಳಲು ಸಿದ್ದರಿರಬೇಕು ಎಂದು ಮನವಿ ಮಾಡಿದರು.
ಈಗಾಗಲೆ ಸ್ಥಳೀಯ ಗ್ರಾಮ ಪಂಚಾಯಿತಿಗಳಿಂದ ಜಲಾಶಯದಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಬಿಟ್ಟಿರುವ ಬಗ್ಗೆ ನದಿ ತೀರದ ಗ್ರಾಮಗಳಲ್ಲಿ ಟಾಮ್ ಟಾಮ್ ಹೊಡೆಸಲಾಗಿದೆ. ಪೋಲೀಸ್ ಇಲಾಖೆಯ ಸಹಕಾರ ದೊಡನೆ ಪ್ರವಾಹ ಭೀತಿ ಎದುರಿಸಲು ಕ್ರಮ ವಹಿಸಲಾಗಿದೆ ಎಂದು ಮಹೇಶ್ ಹೇಳಿದರು.
