ಮೈಸೂರು: ಈ ಬಾರಿಯ ಮೈಸೂರು ದಸರಾ ಉದ್ಘಾಟನೆಗೆ ಸರ್ಕಾರದಿಂದ ಆಹ್ವಾನ ನೀಡಿರುವ ಕನ್ನಡದ ಹೆಸರಾಂತ ಲೇಖಕಿ ಹಾಗೂ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವ ಭಾನು ಮುಷ್ತಾಕ್ ಅವರಿಗೆ ಅಪಮಾನ ಮಾಡುವುದು ಸರಿಯಲ್ಲ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಅಪಮಾನ ಆಗುವ ರೀತಿ ಹಾಗೂ ಸಮಾಜದಲ್ಲಿ ಅಶಾಂತಿ, ಶಾಂತಿಭಂಗ ಆಗಲು ಪ್ರಚೋದನೆ ನೀಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಆಗ್ರಹಿಸಿದ್ದಾರೆ.
ಭಾನು ಮುಷ್ತಾಕ್ ಅವರ ರಾಷ್ಟ್ರಪ್ರೇಮ ಹಾಗೂ ಕನ್ನಡ ಪ್ರೀತಿಯನ್ನೇ ಕೇವಲ ಧರ್ಮದ ಆಧಾರದಲ್ಲಿ ಪ್ರಶ್ನಿಸುತ್ತಿರುವ ಬಿಜೆಪಿಗರ ನಡೆ ಅವರ ಹೀನ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಸ್ತ ಆರೂವರೆ ಕೋಟಿ ಕನ್ನಡಿಗರೆಲ್ಲರು ಎಂದಿಗೂ ಸಹ ಭಾನು ಮುಷ್ತಾಕ್ ಅವರನ್ನು ಧರ್ಮದ ಆಧಾರದಲ್ಲಿ ನೋಡಿಲ್ಲ, ಮೈಸೂರಿನ ದಸರಾ ಹಬ್ಬದ ಉದ್ಘಾಟನೆಯನ್ನು ಭಾನು ಮುಷ್ತಾಕರಿಂದ ಮಾಡಿಸುತ್ತಿರುವುದು ಎಲ್ಲ ಕನ್ನಡಿಗರಿಗೂ ಹೆಮ್ಮೆಯ ವಿಷಯ ಹಾಗೂ ನಾವು ನೀಡುತ್ತಿರುವ ಗೌರವ ಎಂದು ತಿಳಿಸಿದ್ದಾರೆ.
ಬಾನು ಅವರು ತಮ್ಮ ಕನ್ನಡದ ಬರಹಗಳಿಂದ ಭಾಷೆಗೆ ಹಿರಿಮೆ ಮತ್ತು ಗರಿಮೆಯನ್ನು ತಂದು ಕೊಟ್ಟಿರುವಂತಹ ಶ್ರೇಯಸ್ಸು ಅವರಿಗಿದೆ. ಕೆಲ ಬಿಜೆಪಿಯ ಡೋಂಗಿ ನಾಯಕರ ಈ ರೀತಿಯ ಹೇಳಿಕೆಗಳು ಎಲ್ಲ ಕನ್ನಡಿಗರಿಗೂ ಮಾಡುತ್ತಿರುವ ಅಪಮಾನ. ಕೆಲಸ ಕಾರ್ಯವಿಲ್ಲದ ಕೋಮುವಾದಿ ನಾಯಕರುಗಳು ಕೂಡಲೇ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದ್ದಾರೆ.
ಹುಣಸೂರು: ಹುಣಸೂರು ತಾಲೂಕು ಸುಮಾರು 330ಕ್ಕೂ ಹೆಚ್ಚು ಗ್ರಾಮಗಳನ್ನು ಹೊಂದಿದ್ದು ಯಾರಿಗೇ ಆರೋಗ್ಯ ಹದಗೆಟ್ಟರೂ ಹಿಂದೆ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರು ಕಟ್ಟಿಸಿದ ಆಸ್ಪತ್ರೆಯೇ ಆಸರೆಯಾಗಿದೆ.
ಈ ಆಸ್ಪತ್ರೆ ಹಳೆಯದಾಗಿದೆ ಆದರೂ ಅತ್ಯುತ್ತಮ ವೈದ್ಯರು, ನರ್ಸ್ ಗಳು ಇದ್ದಾರೆ ಹಾಗಾಗಿ ಪ್ರತಿದಿನ ನೂರಾರು ರೋಗಿಗಳು ಎಲ್ಲಿಗೆ ಬರುತ್ತಲೇ ಇರುತ್ತಾರೆ.
ಈ ಆಸ್ಪತ್ರೆ ಅತಿ ಚಿಕ್ಕದಾಗಿದ್ದು ರೋಗಿಗಳು ಓಡಾಡಲು ತೊಂದರೆ ಆಗುತ್ತಿದೆ. ಅದನ್ನು ಮನಗಂಡು ದೇವರಾಜ ಅರಸು ಭವನದ ಸಮೀಪದಲ್ಲಿ ಅತ್ಯುತ್ತಮವಾದ ಹೈಟೆಕ್ ಆಸ್ಪತ್ರೆಯನ್ನು ಜನರ ಉಪಯೋಗಕ್ಕಾಗಿ ಸರ್ಕಾರದ ನೆರವಿನಲ್ಲಿ ನಿರ್ಮಿಸಲಾಗಿದೆ.
2022ರಲ್ಲಿ ಈ ಆಸ್ಪತ್ರೆ ನಿರ್ಮಾಣ ಪೂರ್ಣಗೊಂಡಿದ್ದರೂ ಇದುವರೆಗೂ ಉದ್ಘಾಟನೆ ಭಾಗ್ಯವನ್ನು ಕಂಡಿಲ್ಲ.
ಇದಕ್ಕೆ ಕಾರಣ ಏನು ಎಂಬುದು ಯಾರಿಗೂ ಗೊತ್ತಿಲ್ಲ,ಪ್ರತೀದಿನ ಬಹಳಷ್ಟು ರೋಗಿಗಳು ಬರುವುದರಿಂದ ಎಲ್ಲ ರೋಗಿಗಳಿಗೂ ಉತ್ತಮ ಸೌಲಭ್ಯ ಸಿಗುವುದು ಸಾಧ್ಯವಾಗುತ್ತಿಲ್ಲ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು,ಹುಣಸೂರು ಜನಪ್ರತಿನಿಧಿಗಳು ಮತ್ತು ಸರ್ಕಾರ ಇತ್ತ ಗಮನ ಹರಿಸಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚಲುವರಾಜು ಒತ್ತಾಯಿಸಿದ್ದಾರೆ.
ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಸಾವರ್ಜನಿಕರ ಉಪಯೋಗಕ್ಕೆಂದೇ ನಿರ್ಮಾಣವಾಗಿರುವ ಈ ನೂತನ ಆಸ್ಪತ್ರೆಗೆ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ.
ಜನರ ತೆರಿಗೆ ಹಣ ಈ ರೀತಿಯಲ್ಲಿ ಪೋಲು ಮಾಡುತ್ತಿದ್ದಾರೆ.ಉದ್ಘಟನೆಯಾಗದೆ ಜನರಿಗೆ ಉಪಯೋಗದೆ ಕಟ್ಟಡ ಪಾಳು ಬೀಳುತ್ತಿದೆ,ಆಸ್ಪತ್ರೆಯ ಸುತ್ತ ಗಿಡಗಂಟಿ ಬೆಳೆಯುತ್ತಿದೆ ಯಾರೂ ಕೇಳುವವರೇ ಇಲ್ಲದಂತಾಗಿದೆ ಎಂದು ಚಲುವರಾಜು ಬೇಸರ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟವೊ ಅಥವಾ ಹಾಲಿ,ಮಾಜಿ ಶಾಸಕರ ತುಮುಲವೊ ಅಂತೂ ಗಂಡ ಹೆಂಡತಿ ನಡುವಿನ ಜಗಳದಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿನಂತೆ ಹುಣಸೂರು ಸಾರ್ವಜನಿಕ ಆಸ್ಪತ್ರೆಯ ಕತೆಯಾಗಿದೆ.ಇದನ್ನು ಹೀಗೇ ಬಿಟ್ಟರೆ ಕೋಟ್ಯಂತರ ರೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.
ಇನ್ನಾದರೂ ಈ ಹೊಸ ಆಸ್ಪತ್ರೆ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಬರುವುದೆ,ಜನತೆಗೆ ಉತ್ತಮ ಆರೋಗ್ಯ ಭಾಗ್ಯ ಸಿಕ್ಕೀತೆ ಕಾದುನೋಡಬೇಕಿದೆ.
ಮೈಸೂರು: ಬುಧವಾರ ವಿಧಾನ ಪರಿಷತ್ ಸದಸ್ಯ ಸಿ. ಎನ್ ಮಂಜೇಗೌಡರ ಜನುಮದಿನ.
ಹಾಗಾಗಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದಿಂದ ಸಿ. ಎನ್ ಮಂಜೇಗೌಡರಿಗೆ ಶುಭ ಹಾರೈಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಭರತ್ ಎಂ ಗೌಡ, ದಿನೇಶ್ ಗೌಡ, ಡಿ.ಸಿ ಬಾಬು, ಹನುಮಂತಯ್ಯ, ವಿಜಯೇಂದ್ರ ಮುಂತಾದವರು ಮಂಜೇಗೌಡರ ನಿವಾಸಕ್ಕೆ ತೆರಳಿ ಅವರಿಗೆ ಶಾಲು ಹೊದಿಸಿ,ಹಾರ ಹಾಕಿ ಹುಟ್ಟು ಹಬ್ಬಕ್ಕೆ ಶುಭಕೋರಿದರು.
ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಹಾನಗರ ಪಾಲಿಕೆ ಕಾಯಂ ಪೌರ ಕಾರ್ಮಿಕರು ಹಾಗೂ ಗುತ್ತಿಗೆ ಪೌರ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದು ಶಾಸಕ ಟಿ.ಎಸ್ ಶ್ರೀವತ್ಸ ಬೆಂಬಲ ಸೂಚಿಸಿದರು.
ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತು ಈ ಮುಷ್ಕರಕ್ಕೆ ಕರೆ ನೀಡಿದ್ದು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಅಗ್ರಹಿಸಿ ಅನಿರ್ದಿಷ್ಟಾವದಿ ಮುಷ್ಕರ ನಡೆಸಲಾಗುತ್ತಿದೆ.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀ ವತ್ಸ ಮೈಸೂರು ನಗರ ಪಾಲಿಕೆ ಆವರಣದಲ್ಲಿ ನೌಕರರು ನಡೆಸುತ್ತಿರುವ ಮುಷ್ಕರದಲ್ಲಿ ಪಾಲ್ಗೊಂಡರು.
7ನೇ ವೇತನ ಆಯೋಗದ ಪರಿಷ್ಕೃತ ಪಾವತಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಆರ್ಥಿಕ ಇಲಾಖೆ ಬಿಡುಗಡೆ ಮಾಡಬೇಕು, ಆರೋಗ್ಯ ಸಂಜೀವಿನಿ ಕಾರ್ಯಕ್ರಮವನ್ನು ಪೌರಕಾರ್ಮಿಕರಿಗೂ ಅನುಷ್ಟಾನಗೊಳಿಸಬೇಕು, ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ ಮಾಡಬೇಕು,ನೌಕರರಿಗೆ ಮುಂಬಡ್ತಿ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪೌರಕಾರ್ಮಿಕರು ಅನಿರ್ದಿಷ್ಟಾವದಿ ಮುಷ್ಕರ ನಡೆಸುತ್ತಿದ್ದಾರೆ.
ಮೈಸೂರು: ಮೈಸೂರಿನ ಜೆಕೆ ಟೈರ್ಸ್ ಅಂಡ್ ಇಂಡಸ್ಟ್ರೀಸ್‌ನ ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಜೆಕೆ ಟೈರ್ಸ್ ಅಂಡ್ ಇಂಡಸ್ಟ್ರೀಸ್, ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಸಂಸ್ಥೆ, ಕೆ.ಆರ್.ಆಸ್ಪತ್ರೆಯ ರಕ್ತನಿಧಿ ಕೇಂದ್ರ, ಲಯನ್ಸ್ ಕ್ಲಬ್ ಆಸರೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಜೆಕೆ ಟೈರ್ಸ್ ಉಪಾಧ್ಯಕ್ಷರು ವರ್ಕ್ಸ್ ಹಾಗೂ ಸಿಐಐ ಮೈಸೂರು ಚಾಪ್ಟರ್ ಮಾಜಿ ಅಧ್ಯಕ್ಷರಾದ ವಿ. ಈಶ್ವರ್ ರಾವ್ ಅವರ ಮಾರ್ಗದರ್ಶನದಲ್ಲಿ ಸುಮಾರು 1300 ಮಂದಿ ರಕ್ತದಾನ ಮಾಡಿದರು.
ಜೆಕೆ ಟೈರ್ಸ್ ಆಂಡ್ ಇಂಡಸ್ಟ್ರೀಸ್ ಸಂಸ್ಥೆ ವತಿಯಿಂದ -ಜೆಕೆ ಸಮೂಹ ಸಂಸ್ಥೆ ಅಧ್ಯಕ್ಷರಾಗಿದ್ದ ದಿವಂಗತ ಹರಿಶಂಕರ್ ಸಿಂಘಾನಿಯಾ ಅವರ ಜನ್ಮದಿನಾಚರಣೆ ಅಂಗವಾಗಿ ಕಳೆದ 11 ವರ್ಷಗಳಿಂದಲೂ ರಕ್ತದಾನ -ಶಿಬಿರವನ್ನು ಆಯೋಜಿಸಲಾಗುತ್ತಿದೆ.
ಶುಕ್ರವಾರ ಏಕ ಕಾಲದಲ್ಲಿ ಮೇಟಗಳ್ಳಿಯಲ್ಲಿರುವ ಸಂಸ್ಥೆಯ -ಎರಡು ಘಟಕ, ಹೆಬ್ಬಾಳ ಕೈಗಾರಿಕ ಪ್ರದೇಶ, ಜೆಕೆ ಅತಿಥಿ ಗೃಹ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಸಿಐಐ ಮೈಸೂರು ಜೋನ್ ಮಾಜಿ ಅಧ್ಯಕ್ಷ ಸ್ಯಾಮ್ ಚೇರಿಯನ್ ಹಾಗೂ ಜೆಕೆ ಟೈರ್ ಕಂಪೆನಿಯ ನಿರ್ದೇಶಕರಾದ ಸಲ್ವಾಯ್ನ್ ಗೇಬ್ರಿಯಲ್ ಡೆನಿಸ್ ಸಂಗೋತ್ ಉದ್ಘಾಟಿಸಿದರು.
ಅವರು ಈ ವೇಳೆ ಮಾತನಾಡಿದ ಅವರು, ಜೆಕೆ ಟೈರ್ಸ್ ಸಂಸ್ಥೆ ಸಂಸ್ಥಾಪಕರಾದ ದಿವಂಗತ ಹರಿಶಂಕರ್ ಸಿಂಘಾನಿಯಾ ಅವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶ ದಿಂದ ಪ್ರತೀ ವರ್ಷ ಸಂಸ್ಥೆಯ ಸಾವಿರಾರು ಉದ್ಯೋಗಿ ಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಸಂಪ್ರದಾಯ ನಡೆದು ಬಂದಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೆಕೆ ಟೈರ್ಸ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಆರ್.ಜಗದೀಶ್ ಮಾತನಾಡಿ, ಕೈಗಾರಿಕೆಗಳಲ್ಲಿ ಈ ರೀತಿ ರಕ್ತದಾನ ಶಿಬಿರ ಆಯೋಜಿಸುವುದರಿಂದ ಸಿಬ್ಬಂದಿ ಹಾಗೂ ಸಂಸ್ಥೆ ನಡುವಿನ ಸಂಬಂಧ ಗಟ್ಟಿಯಾಗುತ್ತದೆ. ಅಲ್ಲದೆ ತುರ್ತು ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ರಕ್ತ ಬೇಕಾದಲ್ಲಿ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್.ಇ.ಗಿರೀಶ್ ಮಾತನಾಡಿ, ಇಂದೋರ್ ನಗರದ ಮಾದರಿಯಲ್ಲಿ ಮೈಸೂರಿನಲ್ಲೂ ಅಗತ್ಯವುಳ್ಳವರಿಗೆ ಶೇಕಡ ನೂರರಷ್ಟು ರಕ್ತ ಲಭ್ಯವಾಗುವಂತೆ ಮಾಡುವುದು ನಮ್ಮೆಲ್ಲರ ಗುರಿಯಾಗಬೇಕು ಎಂದು ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಹೆಚ್ಚಾಗಿದೆ. 5 ವರ್ಷಕ್ಕೂ ಹಿಂದೆ ಜಿಲ್ಲೆಯಲ್ಲಿ ರಕ್ತದ ಬೇಡಿಕೆಯ ಶೇ.60 ರಷ್ಟು ಪೂರೈಕೆಯಾಗುತ್ತಿತ್ತು. ಈಗ ಶೇ.90ರಷ್ಟು ಲಭ್ಯವಾಗುತ್ತಿದೆ. ರಕ್ತದಾನ ಪ್ರೋತ್ಸಾಹಿಸುತ್ತಿದ್ದ ನಟ ಪುನೀತ್ ರಾಜ್‌ಕುಮಾರ್ ನಿಧನರಾದ ನಂತರ ಸಾಕಷ್ಟು ಯುವಕರು ರಕ್ತದಾನಕ್ಕೆ ಮುಂದಾಗುತ್ತಿದ್ದಾರೆ. ಸಂಸ್ಥೆ ಗಳಲ್ಲಿ ಶಿಬಿರ ಆಯೋಜನೆ ಮಾಡಿದರೆ ಖಂಡಿತ ಹೆಚ್ಚು ಮಂದಿ ರಕ್ತ ನೀಡುತ್ತಾರೆ. ಈ ನಿಟ್ಟಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಆಡಳಿತ ಮಂಡಳಿಯವರು ಸಾಮಾಜಿಕ ಕಳಕಳಿಯಿಂದ ಸಹಕಾರ ನೀಡಬೇ ಕೆಂದು ಮನವಿ ಮಾಡಿದರು.
ಈ ವೇಳೆ ಜೀವಧಾರ ರಕ್ತನಿಧಿ ಕೇಂದ್ರದ ಮುತ್ತಣ್ಣ, ಲಯನ್ ಮನೋಜ್ ಕುಮಾರ್, ಕೆ.ಆರ್.ಆಸ್ಪತ್ರೆ ರಕ್ತನಿಧಿ ಕೇಂದ್ರದ ಅಧಿಕಾರಿ ಕುಸುಮ, ಜೆಕೆ ಟೈರ್ ಕಂಪನಿಯ ಅಧಿಕಾರಿಗಳಾದ ರಾಜೀವ್ ಕುಮಾರ್, ಡೊನಾಲ್ಡ್, ಸುಬ್ರಮಣ್ಯ, ನವೀನ್, ರಾಮ್ ಪ್ರಸಾದ್, ರವೀಂದ್ರ, ನಾಗರಾಜ್, ಶ್ರೀನಾಥ್ ಹಾಗೂ ಕಾರ್ಮಿಕರ ಯೂನಿಯನ್ ಸಂಘದ ಪದಾಧಿಕಾರಿಗಳಾದ ಚನ್ನಕೇಶವ, ದಾದಾಪೀರ್, ಅಶೋಕ್, ಶಿವಕುಮಾರ್ , ಕಾಂತರಾಜು, ರವಿಕುಮಾರ್ ಹಾಗೂ ಇತರೆ ಸಿಬ್ಬಂದಿಗಳು, ಅಧಿಕಾರಿಗಳು ಆಸರೆ ಕ್ಲಬ್ ನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಂಡ್ಯ: ಪ್ರಯಾಣಿಕರನ್ನ ಗ್ರಾಮಕ್ಕೆ ಕರೆದೊಯ್ಯದೆ ಮಾರ್ಗ ಮಧ್ಯದಲ್ಲೆ ಬಸ್ ನಿಲ್ಲಿಸಿ ಉದ್ಧಟತನ ಪ್ರದರ್ಶಿಸಿದ ಕೆಎಸ್ ಆರ್ ಟಿಸಿ ನಿರ್ವಾಹಕ,ಚಾಲಕನ ವಿರುದ್ಧ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು, ಐಚನಹಳ್ಳಿ ಬಳಿ ಈ ಪ್ರಸಂಗ ನಡೆದಿದೆ.
ಕೆ.ಆರ್.ಪೇಟೆಯಿಂದ ಐಚನಹಳ್ಳಿಗೆ ತೆರಳುತ್ತಿದ್ದ ಬಸ್ ನಲ್ಲಿ ಕೆಲವೇ ಮಂದಿ ಪ್ರಯಾಣಿಕರಿದ್ದರು.
ಕೆಲವೇ ಮಂದಿ ತಾನೆ ಎಂದು ಕೊಂಡು ಗ್ರಾಮಕ್ಕೆ ಹೋಗಲು ಚಾಲಕ ನಿರಾಕರಿಸಿದ್ದಾರೆ,ಇಷ್ಟು ಜನಕ್ಕೆ ನಿಮ್ಮೂರಿಗೆ ಹೋಗಲು ಆಗಲ್ಲ, ಇಲ್ಲಿಂದ ನಡೆದುಕೊಂಡು ಹೋಗಿ ಎಂದು ಅವಾಜ್ ಹಾಕಿ,ಬೂಕನಕೆರೆಯಲ್ಲಿಯೇ ಬಸ್ ನಿಲ್ಲಿಸಿ, ಪ್ರಯಾಣಿಕರಿಗೆ ಇಳಿಯುವಂತೆ ಆದೇಶಿಸಿದ್ದಾನೆ.
ಈ ವೇಳೆ ಪ್ರಯಾಣಿಕರು ಗ್ರಾಮಕ್ಕೆ ಕರೆದೊಯ್ಯುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಇದ್ಯಾವುದಕ್ಕೂ ಕ್ಯಾರೇ ಅನ್ನದೆ ಪ್ರಯಾಣಿಕರಿಗೆ ಅವಾಚ್ಯ ಪದ ಬಳಸಿ ನಿಂದಿಸಿ, ಮರಳಿ ಕೆ.ಆರ್.ಪೇಟೆಯತ್ತ ಕರೆದುಕೊಂಡು ಹೋಗಲು ಯತ್ನಿಸಿದ್ದಾನೆ.
ಮಾಹಿತಿ ತಿಳಿದ ಐಚನಹಳ್ಳಿ ಗ್ರಾಮಸ್ಥರು ಬೊಮ್ಮೇಗೌಡನ ಕೊಪ್ಪಲು ಬಳಿ ಬಸ್ ತಡೆದು ಚಾಲಕ,ನಿರ್ವಾಹಕನಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಪ್ರಯಾಣಿಕರ ಗಲಾಟೆ ಜೋರಾಗುತ್ತಿದ್ದಂತೆ ಡ್ರೈವರ್ ಮನು ಹಾಗೂ ಕಂಡಕ್ಟರ್ ಪ್ರಭಾಕರ್ ಓಡಿ ಹೋಗಿದ್ದಾರೆ.
ಬಸ್ ಮುಂದೆ ನಿಂತು ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಲ್ಲದೆ ಸ್ಥಳಕ್ಕೆ ಬಂದ ಕೆ ಎಸ್ ಆರ್ ಟಿ ಸಿ ಅಧಿಕಾರಿಗೂ ಚಳಿ ಬಿಡಿಸಿದ್ದಾರೆ.
ಉದ್ದಟತನ ತೋರಿದ ವಿರುದ್ಧ ಡ್ರೈವರ್ ಕಂಡಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೋಲ್ಕತ್ತಾ: ವ್ಯಕ್ತಿಯೊಬ್ಬ ತನ್ನ ಅತ್ತಿಗೆಯನ್ನೇ ಕೊಚ್ಚಿ ಕೊಂದು ರುಂಡವನ್ನು ಹಿಡಿದು ಬೀದಿಗಳಲ್ಲಿ ಸುತ್ತುತ್ತಾ ಆತಂಕ ಸೃಷ್ಟಿಸಿದ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಸಂತ್‌ನಲ್ಲಿ ನಡೆದಿದೆ.
ಬಿಮಲ್ ಮಂಡಲ್ ಅತ್ತಿಗೆಯನ್ನೇ ಕೊಂದ ಪಾಪಿ ಮೈದುನ, ಸತಿ ಮಂಡಲ್ ಕೊಲೆಯಾದ ಅತ್ತಿಗೆ. ಕೌಟುಂಬಿಕ ಕಲಹ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಸತಿ ಮಂಡಲ್ ಮತ್ತು ಬಿಮಲ್ ಮಂಡಲ್ ನಡುವೆ ಕೆಲವು ಸಮಯದಿಂದ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಜಗಳ ನಡೆದಿತ್ತು.ಜತೆಗೆ ಕೊಲೆ ಮಾಡುವುದಾಗಿಯೂ ಹಲವು ಬಾರಿ ಸಾರ್ವಜನಿಕವಾಗಿಯೇ ಬೆದರಿಕೆ ಹಾಕಿದ್ದನಂತೆ.
ಹರಿತವಾದ ಆಯುಧದಿಂದ ಆಕೆಯ ತಲೆಯನ್ನು ಕತ್ತರಿಸಿ ರಕ್ತಸಿಕ್ತ ರುಂಡ ಮತ್ತು ರಕ್ತಸಿಕ್ತ ಚಾಕುವಿನಿಂದ ಸ್ವಲ್ಪ ಸಮಯದವರೆಗೆ ರಸ್ತೆಯಲ್ಲಿ ಓಡಾಡುತ್ತಾ, ತನಗೆ ಆಗಿರುವ ಅನ್ಯಾಯಕ್ಕೆ ಸೇಡು ತೀರಿಸಿಕೊಂಡಿದ್ದೇನೆ ಎಂದು ಕೂಗುತ್ತಾ ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದ್ದ.
ಕೆಲವರು ಈ ಘಟನೆಯನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ ಸ್ವಲ್ಪ ಸಮಯದ ನಂತರ, ಬಿಮಲ್ ಪೊಲೀಸ್ ಠಾಣೆ ರುಂಡ ಮತ್ತು ಚಾಕುವಿನೊಂದಿಗೆ ಬಂದು ಶರಣಾಗಿದ್ದಾನೆ. ಪೊಲೀಸರೂ ಕೂಡಾ ಅವನನ್ನು ನೋಡಿ ಶಾಕ್ ಆಗಿದ್ದಾರೆ.
ಮೈಸೂರು: ಮೈಸೂರಿನ ವೇದಾಂತ ಹೆಮ್ಮಿಗೆ ವೃತ್ತ ದಲ್ಲಿರುವ ಪಂಚವಟಿ ಹೋಟೆಲ್ ನವರು ಹೋಟೆಲ್ ಗೆ ಬರುವ ಜನರ ಕಾರು ಬೈಕ್ ಗಳನ್ನು ಪುಟ್ ಪಾತ್ ಮೇಲೆ ಪಾರ್ಕಿಂಗ್ ಮಾಡುವ ಮೂಲಕ ದುರುಪಯೋಗ ಮಾಡಿದ್ದಾರೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆರೋಪ ಮಾಡಿದ್ದಾರೆ.
ಪುಟ್ ಪಾತ್ ಗಳಲ್ಲಿ ವಾಹನ ಪಾರ್ಕಿಂಗ್ ಮಾಡುವ ಮೂಲಕ ಪಾದಚಾರಿಗಳಿಗೆ ತೊಂದರೆ ಯಾಗುತ್ತಿದೆ ಮತ್ತು ಪಕ್ಕದಲ್ಲಿ ಇರುವ ಕಾರ್ ಶೋರೂಂ ಮತ್ತು ಬೈಕ್ ಶೋರೂಂ ನವರು ಕೂಡ ಪುಟ್ ಪಾತ್ ಗಳಲ್ಲಿ ಪಾರ್ಕಿಂಗ್ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಮೈಸೂರು ನಗರ ಪಾಲಿಕೆ ಆಯುಕ್ತರು ಮತ್ತು ಸಂಚಾರಿ ಪೊಲೀಸ್ ಇಲಾಖೆ ಯವರು ಕೂಡಲೇ ಫುಟ್ ಪಾತ್ ಅತಿಕ್ರಮಣ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.
ಮೈಸೂರು: ಜಲ ಜೀವನ್ ಮಿಷನ್ ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಸೂಚಿಸಿದರು.
ನಂಜನಗೂಡು ತಾಲ್ಲೂಕಿನ ತಾಂಡವಪುರ, ಸುತ್ತೂರು ,ಹದಿನಾರು ಗ್ರಾಮ ಪಂಚಾಯಿತಿ ಹಾಗೂ ತಿ.ನರಸೀಪುರ ತಾಲೂಕಿನ ಸೋಸಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಮೋಳೆ ಗ್ರಾಮ ಹಾಗೂ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ ಕೆಂಪಯ್ಯನಹುಂಡಿ ಗ್ರಾಮಗಳಿಗೆ ಭೇಟಿ ನೀಡಿ ಯುಕೇಶ್ ಪರಿಶೀಲಿಸಿದರು.
ನಂಜನಗೂಡು ತಾಲೂಕು ತಾಂಡವಪುರ ಮತ್ತು ಇತರೆ 31 ಜನವಸತಿಗಳಿಗೆ ಡಿಬಿಒಟಿ ಆಧಾರಿತ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಪರಿಶೀಲನೆ ನಡೆಸಿ, ಕಾಮಗಾರಿಯ ಗುಣಮಟ್ಟ ಕಾಯ್ದುಕೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ತಿ. ನರಸೀಪುರ ತಾಲೂಕಿನ ಸೋಸಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಮೋಳೆ ಗ್ರಾಮದ ಅಂಗನವಾಡಿಗೆ ಭೇಟಿ ನೀಡಿ ಮಕ್ಕಳ ಹಾಜರಾತಿ ಪರಿಶೀಲಿಸಿದರು.
ಹಾಗೂ ಗರ್ಭಿಣಿಯರಿಗೆ ನಿಗಧಿತ ಸಮಯದಲ್ಲಿ ಆಹಾರ ಪೂರೈಸಲು ಸೂಚಿಸಿದರು.
ಜೆ.ಜೆ.ಎಂ. ಯೋಜನೆಯ ಅರ್ಥ್ ವರ್ಕಿಂಗ್ ಪರಿಶೀಲಿಸಿ, ಬಳಿಕ ಕೆಲ ಮನೆಗಳಿಗೆ ತೆರಳಿ ಜೆಜೆಎಂ ಯೋಜನೆಯಲ್ಲಿ ಅಳವಡಿಸಲಾಗಿರುವ ನಲ್ಲಿಯಲ್ಲಿ ಬರುವ ನೀರಿನ ತೀವ್ರತೆಯನ್ನು ಪರಿಶೀಲಿಸಿದರು.
ಗ್ರಾಮಗಳಲ್ಲಿ ನೀರಿನ ಟ್ಯಾಂಕ್ ಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸಬೇಕು. ಟ್ಯಾಂಕ್ ಗಳನ್ನು ಸ್ವಚ್ಚ ಮಾಡಿದ ದಿನಾಂಕವನ್ನು ಕಡ್ಡಾಯವಾಗಿ ಗೋಡೆ ಮೇಲೆ ಬರೆಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಿಇಒ ಸೂಚಿಸಿದರು.
ಈ ವೇಳೆ ಗ್ರಾಮೀಣ ಕುಡಿಯುವ ನೀರು ವಿಭಾಗದ ಕಾರ್ಯ ಪಾಲಕ ಅಭಿಯಂತರರಾದ ರಂಜಿತ್ ಕುಮಾರ್, ಸಹಾಯಕ ಕಾರ್ಯ ಪಾಲಕ ಅಭಿಯಂತರು ಹಾಗೂ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ಮೈಸೂರು: ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ರೋಟರಿ ಶಾಲೆ ಸಭಾಂಗಣದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಯಿತು.
ಕೊಳ್ಳೇಗಾಲದ ಮಾಜಿ ಶಾಸಕ ನಂಜುಂಡಸ್ವಾಮಿ ಜಿ. ಎನ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು,ಬಸವಣ್ಣ ಅವರು 12 ನೇ ಶತಮಾನದಲ್ಲಿಯೇ ಸಮಾನತೆ ವಿಚಾರವಾಗಿ ಹೋರಾಡಿದವರು. ಅನುಭವ ಮಂಟಪ ವನ್ನು ತೆರೆದು ಎಲ್ಲಾ ಸಮುದಾಯಗಳನ್ನು ಸೇರಿಸಿದವರು. ಅವರೊಬ್ಬ ಜಗತ್ತು ಕಂಡ ದಾರ್ಶನಿಕರು ಎಂದು ನುಡಿದರು.
ಅವರ ತತ್ವ, ಆದರ್ಶ ಸಿದ್ದಾಂತ ಗಳನ್ನು ಈಗಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.
ಅಂಬೇಡ್ಕರ್ ರವರು ವಿಶ್ವ ಜ್ಞಾನಿ, ಓದು ಓದು ಓದಿದರೆ ಮಾತ್ರ, ನಿನ್ನ ವಿದ್ಯೆಗೆ ಜನರು ಹೆದರುತ್ತಾರೆ ಎಂದವರು, ಬೇರೆ ದೇಶಗಳಿಗೆ ಸಂವಿಧಾನ ರಚಿಸುವುದು ಸುಲಭ, ಆದರೆ ಭಾರತದಲ್ಲಿ ಹಲವಾರು ಭಾಷೆಗಳು ಹಾಗೂ ಸಮುದಾಯಗಳು, ಜಾತಿ ಧರ್ಮಗಳು ಇರುವುದರಿಂದ, ಸಂವಿಧಾನ ರಚಿಸಿರುವುದು ಅತ್ಯಂತ ಕ್ಲಿಷ್ಟಕರ ಎಂದು ನಂಜುಂಡಸ್ವಾಮಿ ತಿಳಿಸಿದರು.
ಹಾಗಾಗಿಯೇ ಇಂದಿಗೂ ವಿಶ್ವದಾದ್ಯಂತ ಅಂಬೇಡ್ಕರ್ ಅವರನ್ನು ನೆನೆಯುತ್ತಾರೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳ ಸಾಧಕರಾದ ಸರ್ಕಾರಿ ಕ್ಷೇತ್ರದ- ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಲಕ್ಷಮ್ಮ, ಸಹಕಾರ ಕ್ಷೇತ್ರದ – ಮೈಸೂರು ಚಾಮರಾಜನಗರ ಸಹಕಾರ ಬ್ಯಾಂಕ್ ನಿರ್ದೇಶಕ ಡಾ. ಎಂ.ಬಿ ಮಂಜೇಗೌಡ, ಸಾರಿಗೆ ಕ್ಷೇತ್ರದ – ಕೆ ಎಸ್ ಆರ್ ಟಿ ಸಿ ಜಾಗೃತಿ & ಭದ್ರತಾ ಅಧಿಕಾರಿ ಎನ್ ಎಸ್ ಶಿವರಾಜೇಗೌಡ, ನಿರ್ಮಾಣ – ಕ್ಷೇತ್ರದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಗೃಹ ನಿರ್ಮಾಣ ಕ್ಷೇತ್ರದ ಅಧ್ಯಕ್ಷ ಜಿ ಎಸ್ ಅಶೋಕ್ ಕುಮಾರ್, ಸಮಾಜ ಸೇವಾ ಕ್ಷೇತ್ರದ – ವಿಷನ್ ಟೀಂ ಮೈಸೂರು ಅಧ್ಯಕ್ಷ ನಂದೀಶ್ ಕುಮಾರ್ ಬಿ ಆರ್, ವೈದ್ಯಕೀಯ ಕ್ಷೇತ್ರದ – ಜೀವಧಾರ ರಕ್ತ ದಾನ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಲಯನ್ ಗಿರೀಶ್ ಎಸ್ ಇ, ಶಿಕ್ಷಣ ಕ್ಷೇತ್ರದ – ಪಾಂಡವಪುರ ಪ್ರೌಢಶಾಲೆ ಶಿಕ್ಷಕ ಲೋಕೇಶ್ ಕುಲ್ಕುಂದ, ಕನ್ನಡ ಹೋರಾಟ ಕ್ಷೇತ್ರದ – ಗೋವಿಂದರಾಜು ಮುತ್ತಿಗೆ ರವರಿಗೆ ಶ್ರೀ ಬಸವೇಶ್ವರ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಕಾಯಕ ರತ್ನ ಪ್ರಶಸ್ತಿ ಯನ್ನು ಸಮಾಜ ಸೇವಕರಾದ ಡಾ ರಘುರಾಂ ಕೆ ವಾಜಪೇಯಿ ಪ್ರದಾನ ಮಾಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಡೀನ್ ಡಾ. ಪ್ರೊಫೆಸರ್ ಲಕ್ಷ್ಮಿ ಎನ್ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾದ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್ ಮಾತನಾಡಿ ಬುದ್ಧ ಬಸವ ಅಂಬೇಡ್ಕರ್ ರವರು ನಮ್ಮ ದೇಶದ ಆಸ್ತಿ, ಇಡೀ ಪ್ರಪಂಚಕ್ಕೆ ಬಸವಣ್ಣ ಸಾಂಸ್ಕೃತಿಕ ರಾಯಭಾರಿ ಹಾಗೂ ಅಂಬೇಡ್ಕರ್ ರವರು ವಿಶ್ವದ ಜ್ಞಾನಿ. ಇವರ ಹಾದಿಯಲ್ಲಿಯೇ ಈಗ ಪ್ರಧಾನ ಮಂತ್ರಿ ಮೋದಿ ಅವರು ಸಾಗಿ ನಮ್ಮ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ತಿಳಿಸಿದರು.
ಮಹಾರಾಣಿ ಕಲಾ ಕಾಲೇಜಿನ ಸುಮಾರು 40 ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಎಸ್ ಎಂ ಪಿ ಡೆವಲಪರ್ಸ್ ಮಾಲೀಕ ಎಸ್ ಎಂ ಶಿವಪ್ರಕಾಶ್ ಅವರು ಪ್ರತಿಭಾ ಪುರಸ್ಕಾರ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಶ್ರೀನಿವಾಸ ಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮೂಗೂರು ನಂಜುಂಡಸ್ವಾಮಿ, ಪ್ರಭುಶಂಕರ್, ಗೋಲ್ಡ್ ಸುರೇಶ್, ಕೃಷ್ಣಪ್ಪ, ನೇಹಾ, ಸಿಂಧುವಳ್ಳಿ ಶಿವಕುಮಾರ್, ವರಕುಡು ಕೃಷ್ಣೇಗೌಡ, ನಾಗರಾಜು, ಬೋಗಾದಿ ಸಿದ್ದೇಗೌಡ, ಲಕ್ಷಿ, ಭಾಗ್ಯಮ್ಮ ಪ್ರಭಾಕರ್, ಮಹದೇವಸ್ವಾಮಿ ಹನುಮಂತಯ್ಯ, ಡಾ. ಶಾಂತರಾಜೇಅರಸ್, ಅಂಬಳೆ ಶಿವಣ್ಣ, ಗೀತಾ ಗೌಡ, ಮೂರ್ತಿ ಲಿಂಗಯ್ಯ, ಕುಮಾರ್, ರವಿ ನಾಯಕ್, ಶಿವರಾಂ ,ರಘು ಅರಸ್,ವಿಷ್ಣು ಮಹದೇವಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.