ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಮಳವಳ್ಳಿ: ಸಾಲಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನಲ್ಲಿ ನಡೆದಿದೆ.

ಮಳವಳ್ಳಿ ತಾಲೂಕಿನ ಕೆಂಪನದೊಡ್ಡಿಯ ರೈತ ರಾಮಲಿಂಗಯ್ಯ ಎಂಬುವರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಕಳೆದ ಮೂರು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ರಾಮಲಿಂಗಯ್ಯ ಅವರನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಕಳೆದ ತಡರಾತ್ರಿ ರಾಮಲಿಂಗಯ್ಯ ಚಿಕಿತ್ಸೆ ಫಲಕಾರಿಯಾಗದೇ ಮೃತ ಪ್ಪಿದ್ದಾರೆ.

ಕಾಳಿಕಂಪನ ದೊಡ್ಡಿಯಲ್ಲಿ ಮೂರು ಎಕರೆ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದಿದ್ದ‌ ರಾಮಲಿಂಗಯ್ಯ ಅವರು, ಬಾಳೆಯಲ್ಲಿ ಸರಿಯಾದ ಬೆಲೆ ಸಿಗದೆ ನೊಂದಿದ್ದರು.

ಸಾಲಗಾರರ ಕಾಟ ತಡೆಯಲಾಗದೇ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮಲಿಂಗಯ್ಯ ಅವರು, ಪತ್ನಿ ಸೌಮ್ಯ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ Read More

ವಿಜಯೇಂದ್ರಗೆ ಮುದ್ದು ಕುರಿಮರಿ ಗಿಫ್ಟ್!

ಬೆಂಗಳೂರು:‌ ಬೆಂಗಳೂರಿನ ಧವಳಗಿರಿ ನಿವಾಸದಲ್ಲಿ ಬಿಜೆಪಿ ಕಾರ್ಯಕರ್ತರು,ಅಭಿಮಾನಿಗಳು,ಮುಖಂಡ ರ ಸಂಭ್ರಮ,ಸಡಗರ‌ ಮನೆ ಮಾಡಿತ್ತು.

ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜೇಂದ್ರ ಅವರ ಹುಟ್ಟು ಹಬ್ಬ ಆಚರಣೆಗಾಗಿ ವಿಶೇಷ‌ ಅತಿಥಿಯನ್ನು ಕರೆಯಲಾಗಿತ್ತು.

ವಿಶೇಷ ಅತಿಥಿ ಅಂದರೆ ಕುರಿಮರಿ.ವಿಜಯೇಂದ್ರ ಅವರ ಅಭಿಮಾನಿಗಳು ಪುಟ್ಟ ಮುದ್ದಾದ ಕುರಿಮರಿ ಹಾಗೂ ಕಂಬಳಿಯನ್ನು ಉಡುಗೊರೆಯಾಗಿ ನೀಡಿ ಜನುಮದಿನದ ಶುಭ ಕೋರಿದರು.

ಉಡುಗೊರೆಯನ್ನು ಸಂತಸದಿಂದ‌ ಸ್ವೀಕರಿಸಿದ‌ ವಿಜಯೇಂದ್ರ ಕರಿಕಂಬಳಿಯನ್ನು ಹೆಗಲ ಮೇಲೆ‌ ಹಾಕಿಕೊಂಡು ಖುಷಿ ಪಟ್ಟರು.ನಂತರ‌ ಮುದ್ದು ಮರಿಗೆ ಹಾಲು ಕುಡಿಸಿ ಪ್ರೀತಿ ತೋರಿದರು.

ವಿಜಯೇಂದ್ರಗೆ ಮುದ್ದು ಕುರಿಮರಿ ಗಿಫ್ಟ್! Read More

ರಿವಾಲ್ವರ್ ಕಳವು: ಪ್ರಕರಣ ದಾಖಲು

ಮೈಸೂರು: ಕಾರಿನಲ್ಲಿ ಇಟ್ಟಿದ್ದ ಪ್ರೆಸ್ ರಿಪೋರ್ಟರ್ ಒಬ್ಬರ ರಿವಾಲ್ವರ್ ಕಾಣೆಯಾಗಿದ್ದು, ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಶಾಲನಗರ ಮಂಗಲಾ ಗ್ರಾಮದ ಕಾಫಿ ಎಸ್ಟೇಟ್ ಮಾಲೀಕರೂ ಹಾಗೂ ಪ್ರೆಸ್ ರಿಪೋರ್ಟರ್ ಆಗಿರುವ ತಿಮ್ಮಯ್ಯ (52) ಅವರ ರಿವಾಲ್ವರ್ ಕಳ್ಳತನವಾಗಿದೆ.

ಡ್ರೈವರ್ ಸೀಟ್ ನ ಜಿಪ್ ಪರ್ಸ್ ನಲ್ಲಿ ಇಡಲಾಗಿದ್ದ 22 ಬೋರ್ ರಿವಾಲ್ವರ್ ಹಾಗೂ ಲೋಡ್ ಮಾಡಲಾಗಿದ್ದ 8 ಜೀವಂತ ಗುಂಡುಗಳು ನಾಪತ್ತೆಯಾಗಿದೆ.

ಕಾರನ್ನ ರಿಪೇರಿಗೆ ಬಿಟ್ಟಿದ್ದ ವೇಳೆ ಕಳ್ಳತನವಾಗಿದೆ ಎಂದು ತಿಮ್ಮಯ್ಯ ಅವರು ದೂರು ನೀಡಿದ್ದಾರೆ.

ತಮ್ಮ ಆತ್ಮರಕ್ಷಣೆಗಾಗಿ ತಿಮ್ಮಯ್ಯ ಅವರು, 2016 ರಲ್ಲಿ 22 ಬೋರ್ ರಿವಾಲ್ವರ್ ಖರೀದಿಸಿ 100 ಲೈವ್ ಬುಲೆಟ್ ಗಳನ್ನೂ ಸಹ ಕೊಂಡಿದ್ದರು.

ತಿಮ್ಮಯ್ಯ ತಮ್ಮ ಫೋರ್ಡ್ ಕಾರನ್ನ ರಿಪೇರಿ ಮಾಡಿಸುವ ಸಲುವಾಗಿ ಮೈಸೂರಿಗೆ ಬಂದಿದ್ದಾರೆ.ತಮ್ಮ ಪ್ಯಾಂಟ್ ಜೇಬಿನಲ್ಲಿದ್ದ ರಿವಾಲ್ವರ್ ಹಾಗೂ 8 ಜೀವಂತ ಗುಂಡುಗಳನ್ನ ಡ್ರೈವರ್ ಸೀಟ್ ನ ಜಿಪ್ ಪರ್ಸ್ ನಲ್ಲಿಟ್ಟಿದ್ದಾರೆ.

ಟಿಪ್ಪು ಸರ್ಕಲ್ ಬಳಿ ಇರುವ ಗ್ಯಾರೇಜ್ ನಲ್ಲಿ ಕಾರನ್ನ ಬಿಡುವ ಸಮಯದಲ್ಲಿ ರಿವಾಲ್ವರ್ ತೆಗೆದುಕೊಂಡಿಲ್ಲ ಹಾಗೆಯೇ ಬಂದಿದ್ದಾರೆ, ರಿಪೇರಿಯಾದ ಕಾರನ್ನ ಹಿಂಪಡೆದು ತಾವು ತಂಗಿದ್ದ ಲಾಡ್ಜ್ ಗೆ ತಲುಪಿದಾಗ ರಿವಾಲ್ವರ್ ನಾಪತ್ತೆಯಾಗಿರುವುದು ಗೊತ್ತಾಗಿದೆ.

ಗ್ಯಾರೇಜ್ ಮಾಲೀಕನನ್ನ ಕೇಳಿದಾಗ ಗೊತ್ತಿಲ್ಲವೆಂದು ತಿಳಿಸಿದ್ದಾನೆ,ಹಾಗಾಗಿ ತಿಮ್ಮಯ್ಯ ಅವರು ಎನ್.ಆರ್.ಪೊಲೀಸ್ ಠಾಣೆಯಲ್ಲಿ ದೂರು ನೀಡಿ ರಿವಾಲ್ವರ್ ಪತ್ತೆ ಹಚ್ಚಿಕೊಡುವಂತೆ ಮನವಿ ಮಾಡಿದ್ದಾರೆ.

ರಿವಾಲ್ವರ್ ಕಳವು: ಪ್ರಕರಣ ದಾಖಲು Read More

ನಟ ಪ್ರಕಾಶ್ ರಾಜ್ ಸೇರಿ 70 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು: 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಸಲಾಗಿದ್ದು, ಬಹುಭಾಷಾ ನಟ ಪ್ರಕಾಶ್ ರಾಜ್ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 70 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಯಾವುದೇ ಅರ್ಜಿ ಆಹ್ವಾನಿಸದೆ ಈ ಆಯ್ಕೆ ನಡೆದಿರುವುದು ಈ ಬಾರಿಯ ವಿಶೇಷ.

ಈ ಬಾರಿ 12 ಮಹಿಳೆಯರು ಹಾಗೂ ಸಮಗಾರ ಹರಳಯ್ಯ ಸಮುದಾಯದ ಇಬ್ಬರು ಪ್ರತಿಭೆಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

ಈ ಬಾರಿ‌ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. 12 ಮಂದಿ‌ ಮಹಿಳೆಯರನ್ನು ಈ ಬಾರಿ ಪ್ರಶಸ್ತಿಗೆ ಆಯ್ಕೆ‌‌ ಮಾಡಲಾಗಿದೆ. ಈ ಪೈಕಿ‌ ಕೆಲವರು ಸ್ವಯಂ ಮನವಿ ನೀಡಿದ್ದರು. ಅಂತಹವರು ಪ್ರಶಸ್ತಿಗೆ ಅರ್ಹರಿದ್ದ ಕಾರಣ‌‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಆಡಳಿತ/ ವೈದ್ಯಕೀಯ:
ಮತಿ ವಿಜಯಲಕ್ಷ್ಮೀ ಸಿಂಗ್ ಕೊಡಗು
ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) ಬೆಂಗಳೂರು ದಕ್ಷಿಣ (ರಾಮನಗರ)
ಡಾ. ಆಲಮ್ಮ ಮಾರಣ್ಣ ತುಮಕೂರು
ಡಾ. ಜಯರಂಗನಾಥ್ ಬೆಂಗಳೂರು ಗ್ರಾಮಾಂತರ

ಸಾಹಿತ್ಯ ಕ್ಷೇತ್ರ:
ಪ್ರೊ. ರಾಜೇಂದ್ರ ಚೆನ್ನಿ ಶಿವಮೊಗ್ಗ
ತುಂಬಾಡಿ ರಾಮಯ್ಯ ತುಮಕೂರು
ಪ್ರೊ ಅರ್ ಸುನಂದಮ್ಮ ಚಿಕ್ಕಬಳ್ಳಾಪುರ
ಡಾ.ಎಚ್.ಎಲ್ ಪುಷ್ಪ ತುಮಕೂರು
ರಹಮತ್ ತರೀಕೆರೆ ಚಿಕ್ಕಮಗಳೂರು
ಹ.ಮ. ಪೂಜಾರ ವಿಜಯಪುರ

ಜಾನಪದ:
ಬಸಪ್ಪ ಭರಮಪ್ಪ ಚೌಡ್ಕಿ ಕೊಪ್ಪಳ
ಬಿ. ಟಾಕಪ್ಪ ಕಣ್ಣೂರು ಶಿವಮೊಗ್ಗ
ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ ಬೆಳಗಾವಿ
ಹನುಮಂತಪ್ಪ, ಮಾರಪ್ಪ, ಚೀಳಂಗಿ ಚಿತ್ರದುರ್ಗ
ಎಂ. ತೋಪಣ್ಣ ಕೋಲಾರ
ಸೋಮಣ್ಣ ದುಂಡಪ್ಪ ಧನಗೊಂಡ ವಿಜಯಪುರ
ಸಿಂಧು ಗುಜರನ್‌ ದಕ್ಷಿಣ ಕನ್ನಡ
ಎಲ್. ಮಹದೇವಪ್ಪ ಉಡಿಗಾಲ ಮೈಸೂರು

ಸಮಾಜ ಸೇವೆ:
ಸೂಲಗಿತ್ತಿ ಈರಮ್ಮ ವಿಜಯನಗರ
ಫಕ್ಕೀರಿ ಬೆಂಗಳೂರು ಗ್ರಾಮಾಂತರ
ಕೋರಿನ್ ಆಂಟೊನಿಯಟ್ ರಸ್ಕೀನಾ ದಕ್ಷಿಣ ಕನ್ನಡ
ಡಾ. ಎನ್. ಸೀತಾರಾಮ ಶೆಟ್ಟಿ ಉಡುಪಿ
ಕೋಣಂದೂರು ಲಿಂಗಪ್ಪ ಶಿವಮೊಗ್ಗ
ಉಮೇಶ ಪಂಬದ ದಕ್ಷಿಣ ಕನ್ನಡ
ಡಾ. ರವೀಂದ್ರ ಕೋರಿಶೆಟ್ಟಿರ್ ಧಾರವಾಡ
ಕೆ.ದಿನೇಶ್ ಬೆಂಗಳೂರು
ಶಾಂತರಾಜು ತುಮಕೂರು
ಜಾಫರ್ ಮೊಹಿಯುದ್ದೀನ್ ರಾಯಚೂರು
ಪೆನ್ನ ಓಬಳಯ್ಯ ಬೆಂಗಳೂರು ಗ್ರಾಮಾಂತರ
ಶಾಂತಿ ಬಾಯಿ ಬಳ್ಳಾರಿ
ಪುಂಡಲೀಕ ಶಾಸ್ತ್ರೀ(ಬುಡಬುಡಕೆ) ಬೆಳಗಾವಿ

ಹೊರನಾಡು/ ಹೊರದೇಶ:
ಜಕರಿಯ ಬಜಪೆ (ಸೌದಿ)
ಪಿ ವಿ ಶೆಟ್ಟಿ (ಮುಂಬೈ)

ಸಂಗೀತ/ ನೃತ್ಯ ಕ್ಷೇತ್ರ:
ದೇವೆಂದ್ರಕುಮಾರ ಪತ್ತಾರ್ ಕೊಪ್ಪಳ
ಮಡಿವಾಳಯ್ಯ ಸಾಲಿ ಬೀದರ್
ಪ್ರೊ. ಕೆ. ರಾಮಮೂರ್ತಿ ರಾವ್ ಮೈಸೂರು

ಪರಿಸರ:
ರಾಮೇಗೌಡ ಚಾಮರಾಜನಗರ
ಮಲ್ಲಿಕಾರ್ಜುನ ನಿಂಗಪ್ಪ ಯಾದಗಿರಿ

ಕೃಷಿ:ಡಾ.ಎಸ್.ವಿ.ಹಿತ್ತಲಮನಿ ಹಾವೇರಿ
ಎಂ ಸಿ ರಂಗಸ್ವಾಮಿ ಹಾಸನ

ಮಾಧ್ಯಮ ಕ್ಷೇತ್ರ:
ಕೆ.ಸುಬ್ರಮಣ್ಯ ಬೆಂಗಳೂರು
ಅಂಶಿ ಪ್ರಸನ್ನಕುಮಾರ್ ಮೈಸೂರು
ಬಿ.ಎಂ ಹನೀಫ್ ದಕ್ಷಿಣ ಕನ್ನಡ
ಎಂ ಸಿದ್ಧರಾಜು ಮಂಡ್ಯ

ವಿಜ್ಞಾನ ತಂತ್ರಜ್ಞಾನ:
ರಾಮಯ್ಯ ಚಿಕ್ಕಬಳ್ಳಾಪುರ
ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ ದಾವಣಗೆರೆ
ಡಾ. ಆರ್. ವಿ ನಾಡಗೌಡ ಗದಗ

ಸಹಕಾರ:
ಶೇಖರಗೌಡ ವಿ ಮಾಲಿಪಾಟೀಲ್ ಕೊಪ್ಪಳ

ಯಕ್ಷಗಾನ/ ಬಯಲಾಟ/ ರಂಗಭೂಮಿ:
ಕೋಟ ಸುರೇಶ ಬಂಗೇರ ಉಡುಪಿ
ಐರಬೈಲ್‌ ಆನಂದ ಶೆಟ್ಟಿ ಉಡುಪಿ
ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ) ಉತ್ತರ ಕನ್ನಡ
ಗುಂಡೂರಾಜ್ ಹಾಸನ
ಹೆಚ್.ಎಂ. ಪರಮಶಿವಯ್ಯ ಬೆಂಗಳೂರು ದಕ್ಷಿಣ (ರಾಮನಗರ)
ಎಲ್.ಬಿ.ಶೇಖ್ (ಮಾಸ್ತರ್) ವಿಜಯಪುರ
ಬಂಗಾರಪ್ಪ ಖುದಾನ್‌ಪುರ ಬೆಂಗಳೂರು
ಮೈಮ್ ರಮೇಶ್ ದಕ್ಷಿಣ ಕನ್ನಡ

ಡಿ.ರತ್ನಮ್ಮ ದೇಸಾಯಿ ರಾಯಚೂರು

ಶಿಕ್ಷಣ ಕ್ಷೇತ್ರ:
ಡಾ. ಎಂ.ಆರ್. ಜಯರಾಮ್ ಬೆಂಗಳೂರು
ಡಾ. ಎನ್ ಎಸ್ ರಾಮೇಗೌಡ ಮೈಸೂರು
ಎಸ್. ಬಿ. ಹೊಸಮನಿ ಕಲಬುರಗಿ
ನಾಗರಾಜು ಬೆಳಗಾವಿ

ಕ್ರೀಡೆ:
ಆಶೀಶ್ ಕುಮಾರ್ ಬಲ್ಲಾಳ್ ಬೆಂಗಳೂರು
ಎಂ ಯೋಗೇಂದ್ರ ಮೈಸೂರು
ಡಾ. ಬಬಿನಾ ಎನ್.ಎಂ (ಯೋಗ) ಕೊಡಗು

ನ್ಯಾಯಾಂಗ:
ನ್ಯಾ. ಪಿ.ಬಿ. ಭಜಂತ್ರಿ (ಪವನ್ಕುಮಾರ್ ಭಜಂತ್ರಿ ) ಬಾಗಲಕೋಟೆ

ಶಿಲ್ಪಕಲೆ/ ಚಿತ್ರಕಲೆ/ ಕರಕುಶಲ:
ಬಸಣ್ಣ ಮೋನಪ್ಪ ಬಡಿಗೇರ ಯಾದಗಿರಿ
ನಾಗಲಿಂಗಪ್ಪ ಜಿ ಗಂಗೂರ ಬಾಗಲಕೋಟೆ
ಬಿ. ಮಾರುತಿ ವಿಜಯನಗರ
ಎಲ್. ಹೇಮಾಶೇಖರ್ ಮೈಸೂರು.

ಇವರುಗಳು ರಾಜ್ಯೋತ್ಸವ ಪ್ರಶಸ್ತಿ ಗೆ ಭಾಜನರಾಗಿದ್ದಾರೆ.

ನಟ ಪ್ರಕಾಶ್ ರಾಜ್ ಸೇರಿ 70 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ Read More

ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ 6 ಕೋಟಿ ರೂ. ನಗದು ಬಹುಮಾನ-ಸಿಎಂ

ಮೈಸೂರು: ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಕರ್ನಾಟಕ ಸರ್ಕಾರ 6 ಕೋಟಿ ರೂ. ನಗದು ಬಹುಮಾನ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ ವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ಈ ಕ್ರೀಡಾಕೂಟದಲ್ಲಿ ಒಂದು ವಿಭಾಗದಿಂದ 720 ಕ್ರೀಡಾಪಟುಗಳಂತೆ 5 ವಿಭಾಗಗಳಿಂದ ಒಟ್ಟು 3600 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳು ಚೆನ್ನಾಗಿ ಆಡಬೇಕೆಂದು ಶುಭಕೋರಿದರಲ್ಲದೆ
ಸೋಲು ಗೆಲುವುಗಳಿಗಿಂತ ಕ್ರೀಡಾ ಮನೋಭಾವ ಮುಖ್ಯ ಎಂದು ಹೇಳಿದರು.

ಇಂದು ಚಾಮುಂಡಿವಿಹಾರ ಕ್ರೀಡಾಂಗಣದ ಗ್ಯಾಲರಿ ಹಾಗೂ ಈಜುಕೊಳಗಳಿಗೆ ಅತ್ಯಾಧುನಿಕ ಟೆನ್ಸೈಲ್ ಮೆಂಬ್ರೇನ್ ಛಾವಣಿ ಅಳವಡಿಸುವ ಮತ್ತು ಫುಟ್ಬಾಲ್ ಅಂಕಣ ನಿರ್ಮಿಸುವ ಕಾಮಗಾರಿಯನ್ನು 20.78 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ತಿಳಿಸಿದರು.

ಸಮಾರಂಭದಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಮಹಿಳಾ ಕುಸ್ತಿಪಟು ಶ್ರೀಮತಿ ವಿನೇಶ್ ಫೋಗಟ್ ಭಾಗವಹಿಸಿರುವುದು ವಿಶೇಷ.

ಕುಸ್ತಿ ಕೇವಲ ಪುರುಷರ ಕ್ರೀಡೆ ಎಂದು ಪರಿಗಣಿಸಲಾಗಿದ್ದ ಕಾಲದಲ್ಲಿ ಸಾಮಾಜಿಕ ಅಡೆತಡೆಗಳು ಮತ್ತು ಹಿನ್ನಡೆಗಳನ್ನು ಅನುಭವಿಸಿದರೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿದ್ದಾರೆ. ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ, ಭಾರತದ ಕೀರ್ತಿ ಮೆರೆದ ವಿನೇಶ್ ಅವರು ಹರಿಯಾಣ ರಾಜ್ಯದಲ್ಲಿ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಮೆಚ್ವುಗೆ ವ್ಯಕ್ತಪಡಿಸಿದರು.

ಸರ್ಕಾರ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದೆ. ಮುಂದಿನ ಒಲಿಂಪಿಕ್ಸ್ ಗೆ ತರಬೇತಿ ಪಡೆಯಲು ರಾಜ್ಯದ 60 ಅತ್ಯಂತ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ವಾರ್ಷಿಕ ತಲಾ 10 ಲಕ್ಷ ಸಹಾಯಧನ ನೀಡಿ ತರಬೇತಿ ನೀಡಲಾಗುವುದು. ಅಲ್ಲದೇ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕವಿಜೇತ ಕ್ರೀಡಾಪಟುಗಳಿಗೆ ಸರ್ಕಾರ 6 ಕೋಟಿ ರೂ ನಗದು ಬಹುಮಾನವನ್ನೂ ನೀಡಲಿದೆ. ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಒದಗಿಸಲು ಎಲ್ಲ ಇಲಾಖೆಗಳಲ್ಲಿ ಶೇ.2 ರಷ್ಟು ಮೀಸಲಾತಿಯನ್ನೂ, ಹಾಗೂ ಪೊಲೀಸ್ ಇಲಾಖೆಯಲ್ಲಿ 2 ರಿಂದ ಶೇ.3 ರಷ್ಟು ಕ್ರೀಡಾಮೀಸಲಾತಿಯನ್ನು ನೀಡಲಾಗುತ್ತಿದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ 6 ಕೋಟಿ ರೂ. ನಗದು ಬಹುಮಾನ-ಸಿಎಂ Read More

ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು 57ನೇ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.

ಪವಿತ್ರಾ ಗೌಡ ಪರ ವಕೀಲರು ತಾಂತ್ರಿಕ ಕಾರಣ ನೀಡಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಕುರಿತು ಆ.30ರಂದು ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸಿತ್ತು. ಈ ವೇಳೆ ಪವಿತ್ರಗೌಡ ಪರ ಹಿರಿಯ ವಕೀಲ ಬಾಲನ್ ವಾದ ಮಂಡಿಸಿ, ಪವಿತ್ರಗೌಡ ವಿರುದ್ಧ ಆರೋಪಪಟ್ಟಿಯನ್ನು ಬಿಎನ್‌ಎಸ್ ಬದಲು ಸಿಆರ್‌ಪಿಸಿ ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ. ಇದು ಕಾನೂನು ಬಾಹಿರವಾಗಿರುವುದರಿಂದ ಕಡ್ಡಾಯ ಜಾಮೀನಿಗೆ ನಮ್ಮ ಕಕ್ಷಿದಾರರು ಅರ್ಹರು, ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

ವಾದ-ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಾಲಯ ಸೆ.2ಕ್ಕೆ ಆದೇಶವನ್ನು ಕಾಯ್ದಿರಿಸಿತ್ತು. ಇದೀಗ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ Read More

ಎ ಐ ಐ ಎಸ್ ಹೆಚ್ ಸಂಸ್ಥೆಗೆ ವರುಣ ಕ್ಷೇತ್ರದಲ್ಲಿ 10 ಎಕರೆ ಜಾಗ-ಸಿ.ಎಂ

ಮೈಸೂರು ಸೆ 1: ಮಗು ಹೊಟ್ಟೆಯಲ್ಲಿರುವಾಗಲೇ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರುವುದು ನಿಜಕ್ಕೂ ದೊಡ್ಡ ಸಾಧನೆ,ಅದಕ್ಕಾಗಿ ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆ ಅಭಿನಂದನಾರ್ಹ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.

ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ ಮೈಸೂರು ವತಿಯಿಂದ ಆಯೋಜಿಸಿದ್ದ
ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯ
ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿದರು.

ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮತ್ತು ಪ್ರಗತಿ ಕಾಣಬೇಕಾಗಿದೆ. ಇದಕ್ಕಾಗಿ ನಮ್ಮ‌ ಸರ್ಕಾರ ಈಗಾಗಲೇ ವರುಣ ಕ್ಷೇತ್ರದಲ್ಲಿ 10 ಎಕರೆ ಜಾಗ ಒದಗಿಸಿದೆ. ಇಷ್ಟಲ್ಲದೆ ಅಗತ್ಯ ಇರುವ ಎಲ್ಲಾ ನೆರವನ್ನೂ ಒದಗಿಸಲು ನಾವು ಸಿದ್ದರಿದ್ದೇವೆ ಎಂದು ಭರವಸೆ ನೀಡಿದರು.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯು ವಾಕ್ ಮತ್ತು ಶ್ರವಣ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಏಷ್ಯಾದ ಅತ್ಯುತ್ತಮ ಸಂಸ್ಥೆಗಳಲ್ಲೊಂದಾಗಿರುವುದು ನಮ್ಮ ಜಿಲ್ಲೆಯ ಮತ್ತು ರಾಜ್ಯದ ಹೆಮ್ಮೆ.
ಧ್ವನಿಯಿಲ್ಲದವರಿಗೆ ಧ್ವನಿಯಾಗಿರುವ, ಕಿವಿ ಕೇಳದೆ ಮೌನವಾಗಿರುವವರಿಗೆ ಮಾತಿನ ಚೈತನ್ಯ ತುಂಬಿರುವ ಇಂಥ ಸಂಸ್ಥೆಯು ಮೈಸೂರಿನಲ್ಲಿರುವುದು ಹಾಗೂ ವಜ್ರ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಖುಷಿ ವ್ಯಕ್ತಪಡಿಸಿದರು.

1966ರಲ್ಲಿ ಮೈಸೂರಿನಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ವಾಕ್ ಮತ್ತು ಶ್ರವಣ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಶೋಧನೆ, ಚಿಕಿತ್ಸೆ, ಪುನರ್ವಸತಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆ ಒದಗಿಸುತ್ತಿರುವ ಮಹತ್ವದ ರಾಷ್ಟ್ರೀಯ ಸಂಸ್ಥೆಯಾಗಿದೆ ಎಂದು ಹೇಳಿದರು.

ನಮ್ಮ ರಾಜ್ಯ ಸರ್ಕಾರದ ಪ್ರಾಯೋಜಿತ ಕಾಕ್ಲಿಯರ್ ಇಂಪ್ಲಾಂಟ್ ಕಾರ್ಯಕ್ರಮವಾದ ‘ಶ್ರವಣ ಸಂಜೀವಿನಿ’ ಯೋಜನೆಗೆ 2024-25ರ ಬಜೆಟ್ಟಿನಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ದುಬಾರಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಒದಗಿಸಲು 32 ಕೋಟಿ ರೂ ಮೀಸಲಿಟ್ಟಿದೆ ಎಂದು ಸಿಎಂ ಮಾಹಿತಿ ನೀಡಿದರು.

ಮಗು ಭ್ರೂಣಾವಸ್ಥೆಯಲ್ಲಿರುವಾಗಲೇ ಅದರ ಸಂವಹನದ ಸಮಸ್ಯೆಗಳನ್ನು ಪತ್ತೆ ಹಚ್ಚುವ ತಂತ್ರಜ್ಞಾನ ಗಳಿಸಲು ನಮಗೆ ಸಾಧ್ಯವಾಗಿರುವುದು ಇಂತಹ ಪ್ರೀಮಿಯರ್ ಸಂಸ್ಥೆಗಳಿಂದಾಗಿ, ಸಮಸ್ಯೆಯನ್ನು ಗುರುತಿಸಿ ಚಿಕಿತ್ಸೆ ನೀಡುವ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಮಹತ್ತರ ಕೆಲಸವನ್ನು ಈ ಸಂಸ್ಥೆಯು ಮಾಡುತ್ತಿದೆ. ವಜ್ರ ಮಹೋತ್ಸವದ ಈ ಸಂದರ್ಭದಲ್ಲಿ ಈ ಸಂಸ್ಥೆಯಲ್ಲಿದ್ದುಕೊಂಡು ಸ್ವಸ್ಥ ಸಮಾಜದ ಏಳಿಗೆಗಾಗಿ ದುಡಿದ-ದುಡಿಯುತ್ತಿರುವ ತಜ್ಞರು, ಪ್ರಾಧ್ಯಾಪಕರು, ಸಹಾಯಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದು ಹೇಳಿದರು.

60 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ವಾಕ್ ಮತ್ತು ಶ್ರವಣದೋಷದ ಸಮಸ್ಯೆಗಳು ಶಾಶ್ವತವಾಗಿ ಬಾರದಂತೆ ತಡೆಯಲು ಅಗತ್ಯವಿರುವ ಎಲ್ಲ ಸಂಶೋಧನೆಗಳನ್ನು ಕೈಗೊಂಡು ಜಗತ್ತಿಗೆ ಬೆಳಕು ನೀಡಲಿ ಎಂದು ಸಿದ್ದರಾಮಯ್ಯ ಹಾರೈಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರ್ಯಕ್ರಮ ಉದ್ಘಾಟಿಸಿದರು.
ರಾಜ್ಯಪಾಲ ಥೇವರ್ ಚಂದ್ ಗೆಹ್ಲೋಟ್, ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಖಾತೆ ಸಚಿವೆ ಅನುಪ್ರಿಯಾ ಪಟೇಲ್, ರಾಜ್ಯ ಸರ್ಕಾರದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉಪಸ್ಥಿತರಿದ್ದರು.

ಎ ಐ ಐ ಎಸ್ ಹೆಚ್ ಸಂಸ್ಥೆಗೆ ವರುಣ ಕ್ಷೇತ್ರದಲ್ಲಿ 10 ಎಕರೆ ಜಾಗ-ಸಿ.ಎಂ Read More

ಶಿಕ್ಷಣವನ್ನೇ ಆಸ್ತಿ ಮಾಡಿಕೊಳ್ಳಿ; ವಿದ್ಯಾರ್ಥಿಗಳಿಗೆ ಯುಕೇಶ್‌ ಕುಮಾರ್ ಕರೆ

ಮೈಸೂರು: ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಸಾಧನೆ ಮಾಡುವುದರ ಮೂಲಕ ಶಿಕ್ಷಣವನ್ನೇ ಆಸ್ತಿಯನ್ನಾಗಿ ಮಾಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್‌ ಕುಮಾರ್‌ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಮೈಸೂರು ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಚಿಕ್ಕಂದಿನಲ್ಲೇ ಉತ್ತಮ ವಿದ್ಯಾರ್ಥಿಯಾಗಿದ್ದೆ, ಯುಪಿಎಸ್ಸಿ ತರಬೇತಿಯಲ್ಲಿಯೂ ನನಗೆ ಚಿನ್ನದ ಪದಕ ಬಂದಿತ್ತು, ಅದು ನಮ್ಮ ತಂದೆ ತಾಯಿಯ ಪುಣ್ಯ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿ ಜೀವನದ ಬಹುಮುಖ್ಯ ಘಟ್ಟಗಳಾಗಿದ್ದು ಚೆನ್ನಾಗಿ ಓದಿ, ತಂದೆ ತಾಯಿಯರಿಗೆ ಒಳ್ಳೆಯ ಮಕ್ಕಳಾಗಿರಿ ಎಂದು ಕಿವಿ ಮಾತು ಹೇಳಿದರು.

ಪಿಡಿಒಗಳು ಸ್ಥಳೀಯ ಹಂತದಲ್ಲಿ ಗ್ರಾಮಸ್ಥರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಉತ್ತಮ ಕೆಲಸ ಮಾಡಬೇಕೆಂದು ಸಲಹೆ ನೀಡಿದ ಯುಕೇಶ್ ಕುಮಾರ್, ತಮ್ಮ ಆರೋಗ್ಯ ಮತ್ತು ಕೌಟಂಬಿಕ ಜೀವನದತ್ತ ಹೆಚ್ಚು ಗಮನ ನೀಡಿ ಎಂದು ತಿಳಿಸಿದರು.

ನಿವೃತ್ತರಾದ ಉಪಕಾರ್ಯದರ್ಶಿ, ಕೃಷ್ಣಂರಾಜು ಹಾಗೂ ಪಿಡಿಒಗಳು ಒಳ್ಳೆಯ ಕೆಲಸ ಮಾಡಿದ್ದಾರೆ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ಕಾರ್ಯ ಕ್ರಮದಲ್ಲಿಅ ಜಿಪಂ ಉಪಕಾರ್ಯದರ್ಶಿ ಬಿ.ಎಂ. ಸವಿತ, ಉಪಕಾರ್ಯದರ್ಶಿ ಅಭಿವೃದ್ಧಿ ಭೀಮಪ್ಪ ಕೆ. ಲಾಳಿ, ಲೆಕ್ಕಾಧಿಕಾರಿ ಸಿದ್ದಗಂಗಮ್ಮ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಿ. ಕೃಷ್ಣ, ಜೆರಾಲ್ಡ್‌ ರಾಜೇಶ್‌, ಧರಣೇಶ್‌, ಪ್ರೇಮ್‌ ಕುಮಾರ್‌ ಕುಲದೀಪ್, ಎ.ಎನ್. ರವಿ, ಹೊಂಗಯ್ಯ, ಸುನಿಲ್‌ ಕುಮಾರ್‌, ಪಿ.ಎಸ್‌. ಅನಂತರಾಜು, ಜಿಲ್ಲಾ ಪಿಡಿಒ ಸಂಘದ ಅಧ್ಯಕ್ಷ ಕೆ. ರುಕ್ಮಾಂಗದ, ಉಪಾಧ್ಯಕ್ಷ ಮೊಹಮ್ಮದ್‌ ಇಸ್ತಾಕ್‌, ಖಜಾಂಚಿ ಸಿ. ಪ್ರಕಾಶ್‌, ರಾಘವೇಂದ್ರ ಪ್ರಸನ್ನ, ಟಿ. ಸೌಮ್ಯಲತಾ, ಮಹದೇವಸ್ವಾಮಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿಕ್ಷಣವನ್ನೇ ಆಸ್ತಿ ಮಾಡಿಕೊಳ್ಳಿ; ವಿದ್ಯಾರ್ಥಿಗಳಿಗೆ ಯುಕೇಶ್‌ ಕುಮಾರ್ ಕರೆ Read More

ಲೇಖಕಿಗೆ ಅಪಮಾನ ಬಿಜೆಪಿಗರ ವಿರುದ್ಧ ಕ್ರಮ ಆಗಲಿ: ಸೀತಾರಾಮ್ ಗುಂಡಪ್ಪ

ಮೈಸೂರು: ಈ ಬಾರಿಯ ಮೈಸೂರು ದಸರಾ ಉದ್ಘಾಟನೆಗೆ ಸರ್ಕಾರದಿಂದ ಆಹ್ವಾನ ನೀಡಿರುವ ಕನ್ನಡದ ಹೆಸರಾಂತ ಲೇಖಕಿ ಹಾಗೂ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವ ಭಾನು ಮುಷ್ತಾಕ್ ಅವರಿಗೆ ಅಪಮಾನ ಮಾಡುವುದು ಸರಿಯಲ್ಲ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.

ಅಪಮಾನ ‌ಆಗುವ ರೀತಿ ಹಾಗೂ ಸಮಾಜದಲ್ಲಿ ಅಶಾಂತಿ, ಶಾಂತಿಭಂಗ ಆಗಲು ಪ್ರಚೋದನೆ ನೀಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಆಗ್ರಹಿಸಿದ್ದಾರೆ.

ಭಾನು ಮುಷ್ತಾಕ್ ಅವರ ರಾಷ್ಟ್ರಪ್ರೇಮ ಹಾಗೂ ಕನ್ನಡ ಪ್ರೀತಿಯನ್ನೇ ಕೇವಲ ಧರ್ಮದ ಆಧಾರದಲ್ಲಿ ಪ್ರಶ್ನಿಸುತ್ತಿರುವ ಬಿಜೆಪಿಗರ ನಡೆ ಅವರ ಹೀನ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಸ್ತ ಆರೂವರೆ ಕೋಟಿ ಕನ್ನಡಿಗರೆಲ್ಲರು ಎಂದಿಗೂ ಸಹ ಭಾನು ಮುಷ್ತಾಕ್ ಅವರನ್ನು ಧರ್ಮದ ಆಧಾರದಲ್ಲಿ ನೋಡಿಲ್ಲ, ಮೈಸೂರಿನ ದಸರಾ ಹಬ್ಬದ ಉದ್ಘಾಟನೆಯನ್ನು ಭಾನು ಮುಷ್ತಾಕರಿಂದ ಮಾಡಿಸುತ್ತಿರುವುದು ಎಲ್ಲ ಕನ್ನಡಿಗರಿಗೂ ಹೆಮ್ಮೆಯ ವಿಷಯ ಹಾಗೂ ನಾವು ನೀಡುತ್ತಿರುವ ಗೌರವ ಎಂದು ತಿಳಿಸಿದ್ದಾರೆ.

ಬಾನು ಅವರು ತಮ್ಮ ಕನ್ನಡದ ಬರಹಗಳಿಂದ ಭಾಷೆಗೆ ಹಿರಿಮೆ ಮತ್ತು ಗರಿಮೆಯನ್ನು ತಂದು ಕೊಟ್ಟಿರುವಂತಹ ಶ್ರೇಯಸ್ಸು ಅವರಿಗಿದೆ. ಕೆಲ ಬಿಜೆಪಿಯ ಡೋಂಗಿ ನಾಯಕರ ಈ ರೀತಿಯ ಹೇಳಿಕೆಗಳು ಎಲ್ಲ ಕನ್ನಡಿಗರಿಗೂ ಮಾಡುತ್ತಿರುವ ಅಪಮಾನ. ಕೆಲಸ ಕಾರ್ಯವಿಲ್ಲದ ಕೋಮುವಾದಿ ನಾಯಕರುಗಳು ಕೂಡಲೇ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದ್ದಾರೆ.

ಲೇಖಕಿಗೆ ಅಪಮಾನ ಬಿಜೆಪಿಗರ ವಿರುದ್ಧ ಕ್ರಮ ಆಗಲಿ: ಸೀತಾರಾಮ್ ಗುಂಡಪ್ಪ Read More

ಉದ್ಘಾಟನೆ ಭಾಗ್ಯ ಕಾಣದಹುಣಸೂರು ಹೈಟೆಕ್ ನೂತನ ಆಸ್ಪತ್ರೆ

ಹುಣಸೂರು: ಹುಣಸೂರು ತಾಲೂಕು ಸುಮಾರು 330ಕ್ಕೂ ಹೆಚ್ಚು ಗ್ರಾಮಗಳನ್ನು ಹೊಂದಿದ್ದು ಯಾರಿಗೇ ಆರೋಗ್ಯ ಹದಗೆಟ್ಟರೂ ಹಿಂದೆ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರು ಕಟ್ಟಿಸಿದ ಆಸ್ಪತ್ರೆಯೇ ಆಸರೆಯಾಗಿದೆ.

ಈ ಆಸ್ಪತ್ರೆ ಹಳೆಯದಾಗಿದೆ ಆದರೂ ಅತ್ಯುತ್ತಮ ವೈದ್ಯರು, ನರ್ಸ್ ಗಳು ಇದ್ದಾರೆ ಹಾಗಾಗಿ ಪ್ರತಿದಿನ ನೂರಾರು ರೋಗಿಗಳು ಎಲ್ಲಿಗೆ ಬರುತ್ತಲೇ ಇರುತ್ತಾರೆ.

ಈ ಆಸ್ಪತ್ರೆ ಅತಿ ಚಿಕ್ಕದಾಗಿದ್ದು ರೋಗಿಗಳು ಓಡಾಡಲು ತೊಂದರೆ ಆಗುತ್ತಿದೆ. ಅದನ್ನು ಮನಗಂಡು ದೇವರಾಜ ಅರಸು ಭವನದ ಸಮೀಪದಲ್ಲಿ ಅತ್ಯುತ್ತಮವಾದ ಹೈಟೆಕ್ ಆಸ್ಪತ್ರೆಯನ್ನು ಜನರ ಉಪಯೋಗಕ್ಕಾಗಿ ಸರ್ಕಾರದ ನೆರವಿನಲ್ಲಿ ನಿರ್ಮಿಸಲಾಗಿದೆ.

2022ರಲ್ಲಿ ಈ ಆಸ್ಪತ್ರೆ ನಿರ್ಮಾಣ ಪೂರ್ಣಗೊಂಡಿದ್ದರೂ ಇದುವರೆಗೂ ಉದ್ಘಾಟನೆ ಭಾಗ್ಯವನ್ನು ಕಂಡಿಲ್ಲ.

ಇದಕ್ಕೆ ಕಾರಣ ಏನು ಎಂಬುದು ಯಾರಿಗೂ ಗೊತ್ತಿಲ್ಲ,ಪ್ರತೀದಿನ ಬಹಳಷ್ಟು ರೋಗಿಗಳು ಬರುವುದರಿಂದ ಎಲ್ಲ ರೋಗಿಗಳಿಗೂ ಉತ್ತಮ ಸೌಲಭ್ಯ ಸಿಗುವುದು ಸಾಧ್ಯವಾಗುತ್ತಿಲ್ಲ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು,ಹುಣಸೂರು ಜನಪ್ರತಿ‌ನಿಧಿಗಳು ಮತ್ತು ಸರ್ಕಾರ ಇತ್ತ ಗಮನ ಹರಿಸಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ‌ ಹುಣಸೂರು ತಾಲೂಕು ಅಧ್ಯಕ್ಷ‌ ಚಲುವರಾಜು ಒತ್ತಾಯಿಸಿದ್ದಾರೆ.

ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಸಾವರ್ಜನಿಕರ ಉಪಯೋಗಕ್ಕೆಂದೇ ನಿರ್ಮಾಣವಾಗಿರುವ ಈ ನೂತನ ಆಸ್ಪತ್ರೆಗೆ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ.

ಜನರ ತೆರಿಗೆ ಹಣ ಈ ರೀತಿಯಲ್ಲಿ ಪೋಲು ಮಾಡುತ್ತಿದ್ದಾರೆ.ಉದ್ಘಟನೆಯಾಗದೆ ಜನರಿಗೆ ಉಪಯೋಗದೆ ಕಟ್ಟಡ ಪಾಳು ಬೀಳುತ್ತಿದೆ,ಆಸ್ಪತ್ರೆ‌ಯ ಸುತ್ತ ಗಿಡಗಂಟಿ ಬೆಳೆಯುತ್ತಿದೆ ಯಾರೂ ಕೇಳುವವರೇ ಇಲ್ಲದಂತಾಗಿದೆ‌ ಎಂದು ಚಲುವರಾಜು ಬೇಸರ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟವೊ ಅಥವಾ ಹಾಲಿ,ಮಾಜಿ ಶಾಸಕರ ತುಮುಲವೊ ಅಂತೂ ಗಂಡ ಹೆಂಡತಿ ನಡುವಿನ ಜಗಳದಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿನಂತೆ ಹುಣಸೂರು ಸಾರ್ವಜನಿಕ ಆಸ್ಪತ್ರೆಯ ಕತೆಯಾಗಿದೆ.ಇದನ್ನು ಹೀಗೇ ಬಿಟ್ಟರೆ ಕೋಟ್ಯಂತರ ರೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.

ಇನ್ನಾದರೂ ಈ ಹೊಸ ಆಸ್ಪತ್ರೆ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಬರುವುದೆ,ಜನತೆಗೆ ಉತ್ತಮ ಆರೋಗ್ಯ ಭಾಗ್ಯ ಸಿಕ್ಕೀತೆ ಕಾದುನೋಡಬೇಕಿದೆ.

ಉದ್ಘಾಟನೆ ಭಾಗ್ಯ ಕಾಣದಹುಣಸೂರು ಹೈಟೆಕ್ ನೂತನ ಆಸ್ಪತ್ರೆ Read More