ಅವಧೂತ ದತ್ತ ಪೀಠದಲ್ಲಿ ಶ್ರೀ ದತ್ತಾತ್ರೇಯ ಜಯಂತಿ

ಮೈಸೂರು: ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಅವಧೂತ ದತ್ತ ಪೀಠದಲ್ಲಿ 2025ರ ಸಾಲಿನ ‘ಶ್ರೀ ದತ್ತಾತ್ರೇಯ ಜಯಂತಿ ಮಹೋತ್ಸವ’ವು ನವೆಂಬರ್ 30 ರಿಂದ ಡಿಸೆಂಬರ್ 8 ರವರೆಗೆ ವಿಜೃಂಭಣೆಯಿಂದ ಜರುಗಲಿದೆ.

ಪೂಜ್ಯ ಶ್ರೀಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ವಿವರಗಳು ಈ ಕೆಳಗಿನಂತಿವೆ:

ನವೆಂಬರ್ 30, ಭಾನುವಾರ:
ಬೆಳಿಗ್ಗೆ 10 ಗಂಟೆಗೆ ಅಖಿಲ ಭಾರತ ಜ್ಞಾನ ಬೋಧ ಸಭಾ ಸಮ್ಮೇಳನ ನಡೆಯಲಿದೆ.
ಡಿಸೆಂಬರ್ 1, ಸೋಮವಾರ (ಶ್ರೀ ಗೀತಾ ಜಯಂತಿ):
ಬೆಳಿಗ್ಗೆ 10 ಗಂಟೆಗೆ ನಾದ ಮಂಟಪದಲ್ಲಿ ಸಂಪೂರ್ಣ ಭಗವದ್ಗೀತಾ ಪಾರಾಯಣ ಹಮ್ಮಿಕೊಳ್ಳಲಾಗಿದೆ.

ಮಧ್ಯಾಹ್ನ 3 ಗಂಟೆಗೆ ಭಗವದ್ಗೀತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪದಕ ವಿತರಣಾ ಸಮಾರಂಭ ನಡೆಯಲಿದೆ.

ಡಿಸೆಂಬರ್ 2, ಮಂಗಳವಾರ:
ಬೆಳಿಗ್ಗೆ 9 ಗಂಟೆಗೆ ಶ್ರೀ ಕಾಲಾಗ್ನಿ ಶಮನ ದತ್ತಾತ್ರೇಯ ಸ್ವಾಮಿಗೆ ಮಂಟಪೋತ್ಸವ ಹಾಗೂ ಪಂಚಾಮೃತ ಅಭಿಷೇಕ, ಬೆಳಿಗ್ಗೆ 10ಕ್ಕೆ ಶ್ರೀ ಚಕ್ರ ಪೂಜೆ ಹಾಗೂ ದತ್ತಾತ್ರೇಯ ಹೋಮದ ಪೂರ್ಣಾಹುತಿ ನೆರವೇರಲಿದೆ. ಸಂಜೆ 6 ಗಂಟೆಗೆ ನಾದ ಮಂಟಪದಲ್ಲಿ ದಿವ್ಯ ನಾಮ ಸಂಕೀರ್ತನೆ ಇರಲಿದೆ.

ಡಿಸೆಂಬರ್ 3, ಬುಧವಾರ (ಶ್ರೀ ಹನುಮಾನ್ ಜಯಂತಿ):
ಬೆಳಿಗ್ಗೆ 7 ಗಂಟೆಗೆ ಕಾರ್ಯ ಸಿದ್ಧಿ ಹನುಮಾನ್ ಸ್ವಾಮಿಗೆ 13ನೇ ವಾರ್ಷಿಕ ಅಭಿಷೇಕ, ಬೆಳಿಗ್ಗೆ 11 ಗಂಟೆಗೆ ಹನುಮದ್ ವ್ರತ ಪೂಜೆ, ಸಂಜೆ 5 ಗಂಟೆಗೆ ರಥೋತ್ಸವ, ಸಂಜೆ 6 ಗಂಟೆಗೆ ಸನಾತನ ದತ್ತ ಬಂಧು ಮಹೋತ್ಸವ ಮತ್ತು ರಾತ್ರಿ 8 ಗಂಟೆಗೆ ಹನುಮಾನ್ ದೇವಾಲಯದಲ್ಲಿ ಲಕ್ಷ ದೀಪೋತ್ಸವ ಜರುಗಲಿದೆ.

ಡಿಸೆಂಬರ್ 4, ಗುರುವಾರ (ಹುಣ್ಣಿಮೆ – ಶ್ರೀ ದತ್ತಾತ್ರೇಯ ಜಯಂತಿ):
ಅಂದು ಉತ್ಸವದ ಪ್ರಮುಖ ದಿನವಾಗಿದ್ದು, ಬೆಳಿಗ್ಗೆ 9 ಗಂಟೆಗೆ ಶ್ರೀ ಕಾಲಾಗ್ನಿ ಶಮನ ದತ್ತಾತ್ರೇಯ ಸ್ವಾಮಿಗೆ ತೈಲಾಭಿಷೇಕ, ಬೆಳಿಗ್ಗೆ 10 ಗಂಟೆಗೆ ಭಕ್ತಾದಿಗಳಿಂದ ಸಹಸ್ರ ಕಳಶ ತೈಲಾಭಿಷೇಕ ನೆರವೇರಲಿದೆ.

ಸಂಜೆ 6 ಗಂಟೆಗೆ ಸಪ್ತರ್ಷಿ ಸರೋವರದಲ್ಲಿ ಶ್ರೀ ದತ್ತಾತ್ರೇಯ ಸ್ವಾಮಿಯ ಪಲ್ಲಕ್ಕಿ ಉತ್ಸವ ಮತ್ತು ತೆಪ್ಪೋತ್ಸವ ನಡೆಯಲಿದ್ದು, ರಾತ್ರಿ 8 ಗಂಟೆಗೆ ಕಾಕಡಾರತಿ ಹಾಗೂ ಡೋಲೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ

ಡಿಸೆಂಬರ್ 5, ಶುಕ್ರವಾರ:
ಬೆಳಿಗ್ಗೆ 9 ಗಂಟೆಗೆ ಮಂತ್ರ ಉಪದೇಶ ಕಾರ್ಯಕ್ರಮವಿರುತ್ತದೆ.

ಡಿಸೆಂಬರ್ 6, ಶನಿವಾರ:
ಶ್ರೀ ರಾಜರಾಜೇಶ್ವರಿ ದೇವಾಲಯದ 2ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ.
ಡಿಸೆಂಬರ್ 6, 7 ಮತ್ತು 8 ರಂದು ವಾರ್ಷಿಕ ಶಾಸ್ತ್ರ ಸಭೆ ನಡೆಯಲಿದೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.

ಅವಧೂತ ದತ್ತ ಪೀಠದಲ್ಲಿ ಶ್ರೀ ದತ್ತಾತ್ರೇಯ ಜಯಂತಿ Read More

ಸಿದ್ದಾರ್ಥ ಬಡಾವಣೆಯಲ್ಲಿ ಸಂಚರಿಸಿದ ಚಿರತೆ!

ಮೈಸೂರು: ಮೈಸೂರಿನ ಸಿದ್ದಾರ್ಥ ನಗರದಲ್ಲಿ ಚಿರತೆ ಕಾಣಿಸಿಕೊಂಡಿದ್ದು,ಸಿಸಿ ಟಿವಿಯಲ್ಲಿ ಸೆರೆಯಾಗಿದೆ.ಈ ವಿಷಯ ಹರಡುತ್ತಿದ್ದಂತೆ ಜನ ಗಾಬರಿಗೊಂಡಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ಹತ್ತಿರ ಇರುವ ಕೆಸಿ ಲೇಔಟ್,ಸಕ್ಕಳ್ಳಿ ಮತ್ತಿತರ ಹತ್ತಿರದ ಪ್ರದೇಶದಲ್ಲಿ ಚಿರತೆ ಕಾಣಿಸುವುದು ಸಾಮಾನ್ಯವಾಗಿತ್ತು.ಒಮ್ಮೆ ಲಲಿತಮಹಲ್ ಗೇಟ್‌ ತನಕ ಬಂದ ಉದಾಹರಣೆಯೂ ಇದೆ.

ಆದರೆ ಈಗ ಚಿರತೆ ಸಿದ್ದಾರ್ಥ ಬಡಾವಣೆಯ ಒಳಗೇ ಬಂದಿದೆ.ಮನೆಗಳ ಮುಂದೆಯೇ ನಿಧಾನವಾಗಿ ಸಂಚರಿಸಿದೆ.ಈ‌ ದೃಶ್ಯ ವೈರಲ್ ಆಗಿದೆ ಹಾಗಾಗಿ ಜನತೆ ಆತಂಕಗೊಂಡಿದ್ದಾರೆ.

ಆದರೆ ಇದು ಸಿದ್ದಾರ್ಥ ಬಡಾವಣೆಯೇ ಎಂಬುದನ್ನು ಖಚಿತವಾಗಿ ಯಾರೂ ಹೇಳಿಲ್ಲ.ಎಲ್ಲಾ ಅಂತೆ ಕಂತೆ.

ಇದೆಲ್ಲಾ ಏನೇ ಇರಲಿ ಜನ ಆತಂಕ ಗೊಂಡಿರುವುದಂತೂ ಸತ್ಯ.ತಕ್ಷಣ ಅರಣ್ಯ‌ ಇಲಾಖೆಯವರು‌ ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕೆಂದು ಜನತೆ ಆಗ್ರಹಿಸಿದ್ದಾರೆ.

ಸಿದ್ದಾರ್ಥ ಬಡಾವಣೆಯಲ್ಲಿ ಸಂಚರಿಸಿದ ಚಿರತೆ! Read More

ಕನ್ನಡ ದೀಪ ನಿರತರ ಬೆಳಗಲಿ-ಎಂ ಡಿ ಪಾರ್ಥಸಾರಥಿ

 

ಮೈಸೂರು: ಕನ್ನಡ ದೀಪವು ನಿತ್ಯವು ಬೆಳಗಲಿ ರಾಜ್ಯೋತ್ಸವ ನಿತ್ಯೋತ್ಸವವಾಗಲಿ ಎಂದು
ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎಂ ಡಿ ಪಾರ್ಥಸಾರಥಿ ಹೇಳಿದರು.

ಉದ್ಬೂರ್ ಗೇಟ್ ಹತ್ತಿರ ಇರುವ ಸಾಹಸಸಿಂಹ ಕರ್ನಾಟಕ ರತ್ನ ವಿಷ್ಣುವರ್ಧನ್ ಸ್ಮಾರಕದಲ್ಲಿ ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ಸಾಹಸಸಿಂಹ ವಿಷ್ಣುವರ್ಧನ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿದ ಸಂದರ್ಭದಲ್ಲಿ ಪಾರ್ಥಸಾರಥಿ ಮಾತನಾಡಿದರು.

ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡದ ಅಭಿವೃದ್ಧಿ ಹಾಗೂ ಏಕೀಕರಣಕ್ಕಾಗಿ ಅನೇಕರು ಹೋರಾಡಿದ್ದಾರೆ, ಇಂಗ್ಲೀಷ್ ಗೆ ಗೌರವ ಕೊಡುವುದು ತಪ್ಪಲ್ಲ, ಆದರೆ ಆ ನೆಪದಲ್ಲಿ ಕನ್ನಡವನ್ನು ಮರೆತರೆ ಅದು ದೌರ್ಭಾಗ್ಯ, ಮಾತೃಭಾಷೆಯನ್ನು ಪ್ರೀತಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎನ್ ರಾಜೇಶ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್,ಆಟೋ ಸದಾಶಿವ್, ಮಹದೇವ್, ರಘು, ಸಂತೋಷ್, ಅಮಿತ್, ಸದಾಶಿವ್, ಚಂದ್ರು, ಪ್ರಭು, ಸುರೇಶ್ ಮತ್ತಿತರ ಅಭಿಮಾನಿಗಳು ಹಾಜರಿದ್ದರು.

ಕನ್ನಡ ದೀಪ ನಿರತರ ಬೆಳಗಲಿ-ಎಂ ಡಿ ಪಾರ್ಥಸಾರಥಿ Read More

ಕನ್ನಡ ಬೆಳೆಸುವುದು ಕನ್ನಡಿಗರ ಕರ್ತವ್ಯ:ಅಂಕೇಗೌಡ

ಮೈಸೂರು: ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿ ಕನ್ನಡಿಗರ ಆದ್ಯ ಕರ್ತವ್ಯ ಎಂದು ಪುಸ್ತಕದ ಮನೆ ಖ್ಯಾತಿಯ ಅಂಕೇಗೌಡ ತಿಳಿಸಿದರು.

ಮೈಸೂರಿನ ವಿಜಯನಗರ ಒಂದನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ರಾಜ್ಯದಲ್ಲಿ ಕನ್ನಡ ಭಾಷೆ ತನ್ನದೇ ಆದ ಗೌರವ ಮೌಲ್ಯ ಹೊಂದಿದೆ, ಕನ್ನಡ ಪ್ರೇಮ ನಿರಂತರವಾಗಿ ಇರಬೇಕು ಎಂದು ಹೇಳಿದರು.

ಸಂಘದ ಅಧ್ಯಕ್ಷ ಲಯನ್ ಯು ಬಿ ಉದಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಾಗರಾಜ್ ಬೈರಿ ಮತ್ತು ಸುಗಮ ಸಂಗೀತ ಪರಿಷತ್ ಪ್ರಶಸ್ತಿಗೆ ಭಾಜನನರಾದ ಎ ಡಿ ಶ್ರೀನಿವಾಸ್ ಅವರನ್ನು
ಸನ್ಮಾನಿಸಲಾಯಿತು,

ಕಾವ್ಯ ಅವರು ನಡೆಸಿಕೊಟ್ಟ ಮಾತನಾಡುವ ಗೊಂಬೆ ಪ್ರದರ್ಶನ, ಬಡಾವಣೆಯ ನಿವಾಸಿಗಳ ಮನರಂಜನೆ ಎಲ್ಲರ ಗಮನ ಸೆಳೆಯಿತು. ಬಡಾವಣೆಯ ಸಾಧಕ ನಿವಾಸಿಗಳನ್ನು ಗೌರವಿಸಲಾಯಿತು.

ಬಡಾವಣೆಯ ನಿವಾಸಿಗಳಿಗೆ ಲಕ್ಕಿ ಡಿಪ್ ಹಾಗೂ ವಿವಿಧ ಕ್ರೀಡಾ ಸ್ಪರ್ಧೆ ಆಯೋಜಿಸಿ ವಿಜೇತರಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ,
ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎಂ.ಕೆ. ನಂಜಯ್ಯ, ಉಪಾಧ್ಯಕ್ಷ ವೆಂಕಟೇಗೌಡ, ಜಂಟಿ ಕಾರ್ಯದರ್ಶಿ ಅಲುಮೇಲು ಪ್ರದೀಪ್, ಖಜಾಂಚಿ ಶ್ರೀನಿವಾಸ್ ಮತ್ತು ಮಾಜಿ ಅದ್ಯಕ್ಷ ನರಸೇಗೌಡರು, ಹಾಗೂ ನಿರ್ದೇಶಕರು ನಿವಾಸಿಗಳು ಹಾಜರಿದ್ದರು.

ಕನ್ನಡ ಬೆಳೆಸುವುದು ಕನ್ನಡಿಗರ ಕರ್ತವ್ಯ:ಅಂಕೇಗೌಡ Read More

ಸುಬ್ರಹ್ಮಣ್ಯ ‌ಷಷ್ಠಿ ಆಚರಣೆ

ಮೈಸೂರು: ನಾಡಿನಾದ್ಯಂತ ಎಲ್ಲೆಡೆ ಸುಬ್ರಹ್ಮಣ್ಯ ಷಷ್ಠಿಯನ್ನು ಭಕ್ತಿಯಿಂದ ‌ಆಚರಿಸಲಾಯಿತು.

ನಾಗರಿಕರಲ್ಲಿ ಕೆಲವರು‌ ವಿವಿಧ ದೇವಾಲಯಗಳಲ್ಲಿ ಸುಬ್ರಹ್ಮಣ್ಯ ವಿಗ್ರಹಗಳಿಗೆ ಹಾಲೆರೆದು ಪೂಜಿಸಿದರೆ ಇನ್ನ ಕೆಲವರು ಸಮೀಪದಲ್ಲಿರುವ ಹುತ್ತಗಳಿಗೆ ಹಾಲೆರೆದು ಪೂಜಿಸಿದರು.

ವಿಗ್ರಹಗಳನ್ನು ತೊಳೆದು‌ ಹಾಲೆರೆದು ಅರಿಷಿಣ,ಕುಂಕುಮ ಹೂಗಳಿಂದ ಪೂಜಿಸಿದರು.ನಂತರ ಯಳ್ಳುಂಡೆ,ತಂಬಿಟ್ಟು,ಹಣ್ಣು,ತೆಂಗಿನ ಕಾಯಿ ನೈವೇದ್ಯ ಮಾಡಿ ಮಂಗಳಾರತಿ ಮಾಡಿದರು.

ಸುಬ್ರಹ್ಮಣ್ಯ ‌ಷಷ್ಠಿ ಆಚರಣೆ Read More

ಗಿಡ ನೆಟ್ಟು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಯವರ ಜನ್ಮದಿನೋತ್ಸವ ಆಚರಣೆ

ಮೈಸೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ಡಾ. ವೀರೇಂದ್ರ ಹೆಗಡೆ ಅವರ 77ನೇ ಜನ್ಮದಿನೋತ್ಸವವನ್ನು ಕೆಎಂಪಿಕೆ ಟ್ರಸ್ಟ್ ಹಾಗೂ ಡಾ ವೀರೇಂದ್ರ ಹೆಗಡೆ ಅಭಿಮಾನಿ ಬಳಗ ವಿಶೇಷವಾಗಿ ಆಚರಿಸಿದವು.

ಚಾಮುಂಡಿಪುರಂ ವೃತ್ತ, ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಜನುಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ವೇಳೆ ಕೆಎಂಪಿಕೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ
ಐವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಧರ್ಮಸ್ಥಳ ಶ್ರೀ ಕ್ಷೇತ್ರದಲ್ಲಿ ಧರ್ಮಾಧಿಕಾರಿಯಾಗಿರುವ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ತಮ್ಮ ಭಕ್ತಿ, ಧರ್ಮಸೇವೆ ಮತ್ತು ಸಮಾಜಸೇವೆಗಳಿಂದ ಜನಜನಿತವಾಗಿದ್ದಾರೆ. ಶ್ರೀ ಕ್ಷೇತ್ರಕ್ಕೆ ಭವ್ಯ ಕಳೆ ಮತ್ತು ಗೌರವ ತಂದುಕೊಟ್ಟ ಕೀರ್ತಿ ಅವರದ್ದು ಎಂದು ಬಣ್ಣಿಸಿದರು.

ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡದ ಕನ್ನಡಿಗರು ಯಾರೂ ಇಲ್ಲ ಎಂದರೆ ಅತಿಶಯೋಕ್ತಿ ಎನಿಸಲಾರದು. ಬಹುತೇಕ ಭಕ್ತರಿಗೆ ಧರ್ಮಸ್ಥಳದ ಮಂಜುನಾಥ ಎಂದರೆ ಗಾಢವಾದ ಭಕ್ತಿ ಮತ್ತು ನಂಬಿಕೆ ಇದೆ. ಹಾಗೆಯೇ ಧರ್ಮಾಧಿಕಾರಿ ವೀರಂದ್ರ ಹೆಗ್ಗಡೆ ಅಂದರೂ ಅಷ್ಟೇ ಗೌರವವಿದೆ ಎಂದು ಹೇಳಿದರು.

ಹೆಗಡೆ ಅವರು ಸಮುದಾಯ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ, ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಅವರು ಮಾಡುತ್ತಿರುವ ಕಾರ್ಯಗಳು ಶ್ರೇಷ್ಠ ಎಂದು ಬಣ್ಣಿಸಿದರು.

ಜನ್ಮದಿನೋತ್ಸವ ಆಚರಣೆ ವೇಳೆ ನಿರೂಪಕ ಅಜಯ್ ಶಾಸ್ತ್ರಿ, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್,ಎಸ್ ಎನ್ ರಾಜೇಶ್,ಎಸ್.ಬಿ ವಾಸುದೇವಮೂರ್ತಿ, ಧರ್ಮೇಂದ್ರ, ಆನಂದ, ಪ್ರಮೋದ್ ಆಚಾರ್, ಶುಚಿಂದ್ರ, ರಾಮಚಂದ್ರು,ಜತ್ತಿ ಪ್ರಸಾದ್,ಅಪೂರ್ವ ಸುರೇಶ್,ರವಿಶಂಕರ್ ಮತ್ತಿತರರು ಹಾಜರಿದ್ದರು.

ಗಿಡ ನೆಟ್ಟು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಯವರ ಜನ್ಮದಿನೋತ್ಸವ ಆಚರಣೆ Read More

ಹೈಕಮಾಂಡ್‌ ತೀರ್ಮಾನ ಅಂತಿಮ:ತನ್ವೀರ್ ಸೇಠ್

ಮೈಸೂರು: ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತದೆ,ಅದೇ ಅಂತಿಮ,ಅದಕ್ಕೆ ನಾವೆಲ್ಲ‌ ಬದ್ದರಾಗಿರುತ್ತೇವೆ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ತನ್ವೀರ್‌ ಸೇಠ್‌ ಅವರು, ರಾಜ್ಯದ ಜನ ನಮಗೆ ಸ್ಪಷ್ಟ ಬಹುಮತ ನೀಡಿದ್ದಾರೆ, ನಮ್ಮ ಸರ್ಕಾರ ಈಗ ಎರಡೂವರೆ ವರ್ಷ ಪೂರೈಸಿದೆ. ಎಲ್ಲದಕ್ಕೂ ವರಿಷ್ಠರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಹೇಳಿದರು.

ಅಧಿಕಾರ‌ ಹಂಚಿಕೆ‌ ಸೂತ್ರ ನಮಗೆ ಗೊತ್ತಿಲ್ಲ, ನಾನು ಯಾವ ಬಣದಲ್ಲೂ ಇಲ್ಲ, ನಾವು ನಾಯಕರ ಪೂಜೆ, ಆರಾಧನೆ ಮಾಡುವುದಿಲ್ಲ. ಕೇವಲ ರಾಜಕಾರಣ ಮಾಡಲು ಪಕ್ಷದಲ್ಲಿಲ್ಲ. ಡಿ.ಕೆ ಸುರೇಶ್, ರಾಜಣ್ಣ ಅವರ ಹೇಳಿಕೆಗೆ ವೈಯ್ಯಕ್ತಿಕ ಸ್ವಾತಂತ್ರ್ಯವಿದೆ. ಡಿಕೆಶಿ ಋಣ ನನ್ನ ಮೇಲೆ ಇದ್ದೆ ಇದೆ. ಈ ಹಿಂದೆ ನನ್ನ ತಂದೆ ತೀರಿ ಹೋದ ಸಮಯದಲ್ಲಿ ಉಪಚುನಾವಣೆ ಬಂತು.ಲೋಕಸಭಾ ಸೋತಿದ್ರೂ ಡಿಕೆಶಿ ನನ್ನ ಪರವಾಗಿ ಪ್ರಚಾರ ಮಾಡಿ ಗೆಲ್ಲಿಸಿದ್ರು. ನಾನು ಅದನ್ನು ಮರೆಯುವುದಿಲ್ಲ. ನಾನು ಪಕ್ಷೇತರವಾಗಿ ನಗರ ಪಾಲಿಕೆಗೆ ಆಯ್ಕೆಯಾಗಿದ್ದೆ. ಆ ಸಮಯದಲ್ಲಿ ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದರು. ನನ್ನನ್ನು ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರು. ಆದ್ರೆ ನಾನು ಮೇಯರ್ ಆಗಲಿಲ್ಲ. ಅದು ಬೇರೆ ವಿಚಾರ. ಸಿದ್ದರಾಮಯ್ಯ ಋಣ ಕೂಡ ನನ್ನ ಮೇಲಿದೆ ಎಂದು ಸ್ಮರಿಸಿದರು.

ಬದಲಾವಣೆ ಬಗ್ಗೆ ಏನು ಮಾತನಾಡಬೇಡಿ ಎಂದು ಹೈಕಮಾಂಡ್ ಹೇಳಿದೆ, ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ನನ್ನ ಬೆಂಬಲವಿದೆ. ಹೈಕಮಾಂಡ್ ಯಾರನ್ನೇ ಸಿಎಂ ಮಾಡಿದ್ರು ನಾನು ಬೆಂಬಲಿಸುತ್ತೇನೆ. ಪಕ್ಷದ ಪರ ನಾನು ನಿಲ್ಲುತ್ತೇನೆ ಎಂದು ತನ್ವೀರ್ ಸೇಠ್ ತಿಳಿಸಿದರು.

ಹೈಕಮಾಂಡ್‌ ತೀರ್ಮಾನ ಅಂತಿಮ:ತನ್ವೀರ್ ಸೇಠ್ Read More

ತಾಯಿ ಪಾರ್ವತಿಗೆ‌ ವಿಶೇಷ ಅಲಂಕಾರ

ಮೈಸೂರು: ಮಾರ್ಗಶಿರ ಶುಕ್ರವಾರದ‌ ಪ್ರಯುಕ್ತ ಮೈಸೂರಿನ ‌ಅಗ್ರಹಾರ‌ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ ವಿಶೇಷ ಪೂಜಾಕಾರ್ಯ ನೆರವೇರಿಸಲಾಯಿತು.

ತಾಯಿ‌ ಪಾರ್ವತಿಯನ್ನು‌ ಬಗೆ,ಬಗೆಯ‌‌ ಹೂಗಳು,ಆಭರಣಗಳಿಂದ ಅಲಂಕರಿಸಲಾಗಿದೆ.

ಕೆಂಪು‌ ಬಣ್ಣದ ಸೀರೆ ಉಡಿಸಿ
ಮಲ್ಲಿಗೆ,ಸೇವಂತಿಗೆ,ಕನಕಾಂಬರ,ಗುಲಾಬಿ ಸುಗಂಧರಾಜ ಹೂಗಳು ಮತ್ತು ನಿಂಬೆಹಣ್ಣಿನ
ಆಹಾರಗಳನ್ನು ‌ತೊಡಿಸಿ ಹೊಂಬಾಳೆಗಳನ್ನು ಇಟ್ಟು ಕಂಗೊಳಿಸುವಂತೆ ಮಾಡಲಾಗಿದೆ.

ತಾಯಿಯು ಕಿರೀಟ ಧರಿಸಿ ಕೈನಲ್ಲಿ ತ್ರಿಶೂಲ ಹಿಡಿದು ಬೆಳ್ಳಿಯ ಕೈ,ಕಾಲುಗಳಿಂದ ಅಲಂಕೃತಗೊಂಡಿದ್ದು ನೋಡಲು‌ ಅದ್ಭುತವಾಗಿದ್ದಾಳೆ.

ಶಿವಾರ್ಚಕರಾದ‌ ಎಸ್.ಯೋಗಾನಂದ ಅವರು ಪೂಜಾಕಾರ್ಯ ನೆರವೇರಿಸಿದರು.

ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ತಾಯಿ ಪಾರ್ವತಿ ಮತ್ತು ಮೃತ್ಯುಂಜಯೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿದ್ದಾರೆ.

ತಾಯಿ ಪಾರ್ವತಿಗೆ‌ ವಿಶೇಷ ಅಲಂಕಾರ Read More

ದಾಖಲೆ ಬರೆದ ಕೆಆರ್‌ಎಸ್‌ ಡ್ಯಾಂ

ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ವಿಶ್ವವಿಖ್ಯಾತ ಕೆಆರ್‌ಎಸ್‌ ಡ್ಯಾಂ ದಾಖಲೆಯ ಮೈಲಿಗಲ್ಲುಗಳನ್ನು ತಲುಪಿದೆ.

ಇದೀಗ ಕೆಆರ್‌ಎಸ್‌ ಅಣೆಕಟ್ಟೆ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದೆ.ಕೆಆರ್‌ಎಸ್‌ ಅಣೆಕಟ್ಟೆ ಬರೋಬ್ಬರಿ 150 ದಿನಗಳ ಕಾಲ ಗರಿಷ್ಠ ಮಟ್ಟವನ್ನು ಕಾಯ್ದಿರಿಸಿಕೊಳ್ಳುವ ಮೂಲಕ ನೂತನ ದಾಖಲೆ ಬರೆದಿದೆ.

ಈ ಬಾರಿ ವರುಣನ ಕೃಪಾಕಟಾಕ್ಷದಿಂದ ಜೂನ್‌ ತಿಂಗಳಲ್ಲೇ ಕೆ‌ ಆರ್ ಎಸ್ ದಾಖಲೆ ಬರೆದಿತ್ತು.

ಈಗ ಅಂತಹುದೇ ದಾಖಲೆಯನ್ನು ನಿರ್ಮಾಣ ಮಾಡಿದೆ.124.80 ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್‌ ಅಣೆಕಟ್ಟೆ ಕಳೆದ 150 ದಿನಗಳಿಂದಲೂ ಅದೇ ಮಟ್ಟವನ್ನು ಕಾಯ್ದಿರಿಸಿಕೊಂಡಿರುವುದು ಈ ಬಾರಿಯ ವಿಶೇಷ.

ದಾಖಲೆ ಬರೆದ ಕೆಆರ್‌ಎಸ್‌ ಡ್ಯಾಂ Read More

ಮೀನು ಹಿಡಿಯಲು ಹೋದ ಯುವಕ ನೀರು ಪಾಲು

ಚಾಮರಾಜನಗರ: ಮೀನು ಹಿಡಿಯಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ಸುವರ್ಣಾವತಿ ಹಿನ್ನೀರಿನಲ್ಲಿ ಈ ಘಟನೆ ನಡೆದಿದೆ.

ಚಾಮರಾಜನಗರ ತಾಲೂಕಿನ ಅಟ್ಟುಗೂಳಿಪುರ ಗ್ರಾಮದ ನಿವಾಸಿ ಶಿವಸ್ವಾಮಿ (24) ಮೃತಪಟ್ಟ ಯುವಕ.

ಗೆಳೆಯ ದಿಲೀಪ್ ಕುಮಾರ್ ಜೊತೆ ಸುವರ್ಣಾವತಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಸೋಮವಾರ ರಾತ್ರಿ ತೆಪ್ಪದಲ್ಲಿ ಶಿವಸ್ವಾಮಿ ತೆರಳಿದ್ದರು.ಈ ಸಂದರ್ಭದಲ್ಲಿ ತೆಪ್ಪ ಮಗುಚಿದೆ,ಹಾಗಾಗಿ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.ಆದರೆ ದಿಲೀಪ್ ಕುಮಾರ್ ಈಜಿ ದಡ ಸೇರಿದ್ದಾರೆ, ಶಿವಸ್ವಾಮಿ ಈಜಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ವಿಷಯ ತಿಳಿದ ಕೂಡಲೇ ಪೂರ್ವ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹ‌ ಹುಡುಕಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೀನು ಹಿಡಿಯಲು ಹೋದ ಯುವಕ ನೀರು ಪಾಲು Read More