ಮೈಸೂರು: ಜಗದ್ಗುರು ಶ್ರೀ ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಹೇಳಿರುವ ಪ್ರತಿಯೊಂದು ಮಾತು ಹಾಗೂ ಅಕ್ಷರಗಳನ್ನು ಅರ್ಥಮಾಡಿಕೊಂಡು ನಮ್ಮ ಜೀವನವನ್ನು ಮುನ್ನಡೆಸಬೇಕು ಎಂದು ಅವಧೂತ ದತ್ತ ಪೀಠದ ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಕ್ತರಿಗೆ ಕರೆ ನೀಡಿದರು.
ಅವಧೂತ ದತ್ತ ಪೀಠದಲ್ಲಿ ಗೀತಾ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಸಂಪೂರ್ಣ ಭಗವದ್ಗೀತೆ ಪಾರಾಯಣ ಮತ್ತು ಚಿನ್ನದ ಪದಕ ಪ್ರದಾನ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು.
ಪುಸ್ತಕ ದಾನ ಶ್ರೇಷ್ಠ:
ಭಾರತೀಯ ಸಂಪ್ರದಾಯದ ಬಗ್ಗೆ ಮಾತನಾಡಿದ ಅವರು,ನಮ್ಮ ಪೂರ್ವಜರು ಭಗವದ್ಗೀತೆಯನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದರು. ಹಿಂದೆ ಮಹಾತ್ಮರು ಮತ್ತು ಶ್ರೀಮಂತರು ಲಕ್ಷಾಂತರ ಚಿಕ್ಕ ಭಗವದ್ಗೀತೆ ಪುಸ್ತಕಗಳನ್ನು ಮುದ್ರಿಸಿ ಜನರಿಗೆ ಉಚಿತವಾಗಿ ಹಂಚುತ್ತಿದ್ದರು. ಆ ಸಂಪ್ರದಾಯ ಮತ್ತೆ ಮರುಕಳಿಸಬೇಕು ಎಂದು ಆಶಿಸಿದರು.
ದತ್ತ ಪೀಠದಲ್ಲಿ ಮುದ್ರಿತವಾದ ಪುಸ್ತಕಗಳನ್ನು ಭಕ್ತರು ಖರೀದಿಸಿ, ಅದನ್ನು ಕೊಂಡುಕೊಳ್ಳಲು ಶಕ್ತಿಯಿಲ್ಲದವರಿಗೆ ಉಚಿತವಾಗಿ ಹಂಚುವ ಸಂಕಲ್ಪ ಮಾಡಬೇಕು,ಎಂದು ತಿಳಿಸಿದರು.
ಕಂಠಪಾಠದ ಮಹತ್ವ:
ಪುಸ್ತಕಗಳು ಯಾವಾಗಲೂ ನಮ್ಮ ಕೈಯಲ್ಲಿ ಇರುವುದಿಲ್ಲ, ಆದರೆ ಭಗವದ್ಗೀತೆಯನ್ನು ಕಂಠಪಾಠ ಮಾಡಿದರೆ ಶ್ಲೋಕಗಳು 24 ಗಂಟೆಯೂ ನಮ್ಮ ಜೊತೆಗೇ ಇರುತ್ತವೆ. ಪ್ರಯಾಣದ ಸಮಯದಲ್ಲಿ ಅಥವಾ ಊಟ ಮಾಡುವಾಗಲೂ ಮನಸ್ಸಿನಲ್ಲಿಯೇ ಪಾರಾಯಣ ಮಾಡಬಹುದು ಎಂದು ಸ್ವಾಮೀಜಿ ಕಂಠಪಾಠದ ಮಹತ್ವವನ್ನು ವಿವರಿಸಿದರು.
ಹೈದರಾಬಾದ್‌ನಲ್ಲಿ ಬೃಹತ್ ಪಾರಾಯಣ:
ಇದೇ ವೇಳೆ ಮುಂಬರುವ ಬೃಹತ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಸ್ವಾಮೀಜಿ, 2026ರ ಮಾರ್ಚ್ 22 ರಂದು ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸಂಪೂರ್ಣ ಭಗವದ್ಗೀತೆ ಪಾರಾಯಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಲ್ಲದೆ ದೆಹಲಿಯ ಭಾರತ ಮಂಟಪದಲ್ಲಿಯೂ ಕಾರ್ಯಕ್ರಮ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀಗಳು ಆಹ್ವಾನಿದರು.
ಗೀತಾ ಪಾರಾಯಣ ಸಂಕಲ್ಪ:
ಪ್ರತಿಯೊಬ್ಬರೂ ಪ್ರತಿನಿತ್ಯ ಭಗವದ್ಗೀತೆಯ ಕನಿಷ್ಠ ಒಂದು ಅಧ್ಯಾಯವನ್ನಾದರೂ ಪಾರಾಯಣ ಮಾಡಬೇಕು ಎಂದು ಭಕ್ತರಿಂದ ಇದೇ ವೇಳೆ ಸಂಕಲ್ಪ ಮಾಡಿಸಿದರು.
ಇಂದು ಕೇವಲ ತೆಲುಗು ರಾಜ್ಯಗಳಲ್ಲದೆ, ಕರ್ನಾಟಕ, ತಮಿಳುನಾಡು ಸೇರಿದಂತೆ ದೇಶ ವಿದೇಶಗಳಲ್ಲಿ ಗೀತಾ ಪಾರಾಯಣದ ಅರಿವು ಮೂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಚಿನ್ನದ ಪದಕ ಪ್ರದಾನ:
ಕಾರ್ಯಕ್ರಮದಲ್ಲಿ ಭಗವದ್ಗೀತೆಯನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿ ಒಪ್ಪಿಸಿದ ಸುಮಾರು 948 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಶ್ರೀಗಳು ಚಿನ್ನದ ಪದಕ ಹಾಗೂ ಬಹುಮಾನಗಳನ್ನು ವಿತರಿಸಿದರು.
ನಂತರ ಮೈಸೂರಿನ ‘ಗೀತಾ ಪರಿವಾರ’ದ ಸದಸ್ಯರು ಮತ್ತು ರಾಜ್ಯದ ವಿವಿಧ ಮೂಲೆಗಳಿಂದ ಬಂದಿದ್ದ ಭಕ್ತರನ್ನು ಶ್ರೀಗಳು ಅಭಿನಂದಿಸಿದರು.
ಗೀತಾ ಜಯಂತಿ ಅಂಗವಾಗಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ಇಂದು ಸಂಪೂರ್ಣ ಭಗವದ್ಗೀತಾ ಪಾರಾಯಣ ಹಮ್ಮಿಕೊಳ್ಳಲಾಗಿತ್ತು.
ಈ ಪಾರಾಯಣದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 5000ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಗೀತೆಯ ಸಂಪೂರ್ಣ 700 ಶ್ಲೋಕಗಳನ್ನು ಪಠಣ ಮಾಡಿದರು. 6 ವರ್ಷದಿಂದ ಮಕ್ಕಳಿಂದ 75 ವರ್ಷದವರೆಗಿನ ಭಕ್ತರು ಈ ಪಾರಾಯಣದಲ್ಲಿ ಪಾಲ್ಗೊಂಡಿದ್ದುದು ವಿಶೇಷ.