ಬಾಲಿವುಡ್ ನಟ‌ ಸೈಫ್ ಅಲಿ ಖಾನ್ ಡಿಸ್ಚಾರ್ಜ್

ಮುಂಬೈ:‌ ಚಾಕು ಇರಿತದಿಂದ ತೀವ್ರ ಗಾಯಗೊಂಡು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ.

ಐದು ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿದುಕೊಂಡು ಆರೋಗ್ಯ ಸುಧಾರಣೆಯಾದ ಕಾರಣ ಅವರು ಮನೆಗೆ ಮರಳಲಿದ್ದಾರೆ.

ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಜ.16 ರಂದು ಇರಿತಕ್ಕೊಳಗಾಗಿದ್ದ ನಟ ಸೈಫ್ ಅಲಿ ಖಾನ್, ಲೀಲಾವತಿ ಆಸ್ಪತ್ರೆಯಲ್ಲಿ ಐದು ಗಂಟೆಗಳ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆರು ಗಾಯಗಳಾಗಿದ್ದು ಎರಡು, ಮೂರು ಗಾಯಗಳು ತುಂಬಾ ಆಳವಾಗಿದ್ದವು.

ಅವರು ಆಸ್ಪತ್ರೆಗೆ ಸೇರಿದ ದಿನವೇ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು ಅದಾದ ಬಳಿಕ ಅವರನ್ನು ಐಸಿಯುದಿಂದ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಈಗ ಮನೆಗೆ ಕರೆದುಕೊಂಡು ಹೋಗಲಾಯಿತು.

ಆಸ್ಪತ್ರೆಯಿಂದ ಸೈಫ್ ಆರಾಮವಾಗಿ ನಡೆದುಕೊಂಡೇ ಕಾರಿನ ಬಳಿಗೆ ಬಂದರು.
ಇದನ್ನು ಕಂಡು ಸೈಫ್ ಫ್ಯಾನ್ ಗಳು ಫುಲ್ ಖುಷಿಯಾಗಿದ್ದಾರೆ.

ಬಾಲಿವುಡ್ ನಟ‌ ಸೈಫ್ ಅಲಿ ಖಾನ್ ಡಿಸ್ಚಾರ್ಜ್ Read More

ನಟ ದರ್ಶನ್‌ ಗನ್‌ ಲೈಸೆನ್ಸ್‌ ತಾತ್ಕಾಲಿಕ ಅಮಾನತು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ದಯಾನಂದ್‌ ತಿಳಿಸಿದ್ದಾರೆ.

ಮೂರು ವರ್ಷಕ್ಕಿಂತ ಮೇಲ್ಪಟ್ಟ ಶಿಕ್ಷೆ ವಿಧಿಸಬಹುದಾದ ಕೇಸ್‍ನಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಬಳಿ ಲೈಸೆನ್ಸ್ ಇರುವ ಗನ್ ಇದ್ದರೆ ಅದನ್ನು ಕೂಡಲೇ ವಶಕ್ಕೆ ಪಡೆಯಲಾಗುತ್ತದೆ. ಅಲ್ಲದೇ ಆ ವ್ಯಕ್ತಿಯ ಲೈಸೆನ್ಸ್ ರದ್ದು ಮಾಡಬಹುದಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‍ನಲ್ಲಿ ಲೈಸೆನ್ಸ್ ಗನ್ ಬಳಕೆ ಮಾಡಿರುವುದು ಎಲ್ಲಿಯೂ ಕಂಡುಬರದ ಕಾರಣ ತಾತ್ಕಾಲಿಕವಾಗಿ ಅಂದರೆ ಕೇಸ್ ಮುಗಿಯುವತನಕ ಅಮಾನತ್ತಿನಲ್ಲಿಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ನಟ ದರ್ಶನ್ ಗನ್ ಲೈಸೆನ್ಸ್ ರದ್ದು ಮಾಡಲು ಈಗಾಗಲೇ ಪೊಲೀಸರು ನೋಟಿಸ್ ನೀಡಿದ್ದರು. ನೋಟಿಸ್‍ನಲ್ಲಿ, ನೀವು ಕೊಲೆ ಪ್ರಕರಣದ ಆರೋಪಿಯಾಗಿದ್ದೀರಿ. ಜಾಮೀನಿನ ಮೇಲೆ ಹೊರಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಗನ್ ಇರುವುದರಿಂದ ಸಾಕ್ಷಿಗಳನ್ನು ಬೆದರಿಸುವ ಬಗ್ಗೆ ಅನುಮಾನ ಇದೆ. ಆದ್ದರಿಂದ ನಿಮ್ಮ ಲೈಸೆನ್ಸ್ ರದ್ದು ಮಾಡಬೇಕಿದೆ. ಈ ಬಗ್ಗೆ ಒಂದು ವಾರದೊಳಗೆ ಉತ್ತರಿಸಬೇಕು. ನೋಟಿಸ್‍ಗೆ ಉತ್ತರ ನೀಡಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದರು.

ಪೊಲೀಸರ ನೋಟಿಸ್‍ಗೆ ಉತ್ತರಿಸಿದ್ದ ದರ್ಶನ್, ನಾನು ಸೆಲೆಬ್ರಿಟಿ ಆಗಿರುವುದರಿಂದ ಆತ್ಮರಕ್ಷಣೆಗೆ ಗನ್ ಅವಶ್ಯಕತೆ ಇದೆ. ನನ್ನ ಮೇಲಿರುವ ಕೇಸ್‍ನ ಸಮಯದಲ್ಲಿ ಆ ಗನ್ ಬಳಕೆ ಮಾಡಿಲ್ಲ. ಯಾವುದೇ ಕಾರಣಕ್ಕೂ ಗನ್ ದುರ್ಬಳಕೆ ಮಾಡಿಕೊಳ್ಳುವುದಿಲ್ಲ, ಹಾಗಾಗಿ ಗನ್ ಲೈಸೆನ್ಸ್ ಮುಂದುವರೆಸಿ ಎಂದು ಮನವಿ ಮಾಡಿದ್ದರು.

ನಟ ದರ್ಶನ್‌ ಗನ್‌ ಲೈಸೆನ್ಸ್‌ ತಾತ್ಕಾಲಿಕ ಅಮಾನತು Read More

ಬಿಗ್ ಬಾಸ್‌ಗೆ ಗುಡ್ ಬೈ ಹೇಳಿದ ಕಿಚ್ಚ

ಬೆಂಗಳೂರು: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಗುಡ್ ಬೈ ಹೇಳಿದ್ದಾರೆ.

ಈ ಬಗ್ಗೆ ನಟ ಸುದೀಪ್‌ ಅವರೇ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಕಳೆದ 11 ಸೀಸನ್‌ಗಳಿಂದ ನಾನು ಬಿಗ್ ಬಾಸ್ ಅನ್ನು ತುಂಬಾ ಇಷ್ಟಪಟ್ಟಿದ್ದೇನೆ. ನೀವು ತೋರಿಸಿದ ಪ್ರೀತಿಗೆ ಧನ್ಯವಾದಗಳು, ಮುಂಬರುವ ಫೈನಲ್ ಆತಿಥೇಯನಾಗಿ ನನ್ನ ಕೊನೆಯದು, ಇದು ಮರೆಯಲಾಗದ ಪ್ರಯಾಣ, ಇದನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

ಈ ಅವಕಾಶ ನೀಡಿದ ಕಲರ್ಸ್‌ ಕನ್ನಡಗೆ ಧನ್ಯವಾದಗಳು ಹಾಗೂ ನಿಮ್ಮೆಲ್ಲರ ಮೇಲೂ ಅಪಾರವಾದ ಪ್ರೀತಿ ಮತ್ತು ಗೌರವವಿದೆ ಎಂದು ಕಿಚ್ಚ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್‌ ಬಾಸ್‌ ಕಾರ್ಯಕ್ರಮವನ್ನ ನಟ ಕಿಚ್ಚ ಸುದೀಪ್‌ ಅವರು ನಡೆಸಿಕೊಟ್ಟಿದ್ದಾರೆ, ಬಿಗ್ ಬಾಸ್ ಕನ್ನಡದ ಹೋಸ್ಟ್ ಆಗಿ 11 ಸೀಸನ್​ಗಳನ್ನು ನಡೆಸಿಕೊಟ್ಟಿದ್ದಾರೆ. ಇದು ನನ್ನ ಕೊನೆಯ ಸೀಸನ್ ಎಂದು ಸುದೀಪ್‌ ಈ ಮೊದಲೇ ಹೇಳಿದ್ದರು. ಈಗ ಅವರು ಅಧಿಕೃತವಾಗಿ ಬಿಗ್ ಬಾಸ್ ತೊರೆಯುತ್ತಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ.

ಕಳೆದ ಬಿಗ್‌ ಬಾಸ್ ಸೀಸನ್​ ನಡೆಯುವಾಗ ನನ್ನ ಸಿನಿಮಾದ ಶೂಟಿಂಗ್​‌ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯುತ್ತಿತ್ತು. ಚೆನ್ನೈನಿಂದ ಅಲ್ಲಿಗೆ ಹೋಗಲು ಒಂದೂವರೆ ಗಂಟೆ ಬೇಕು. ಬೆಂಗಳೂರಿನಿಂದ ನಾನು ಅಲ್ಲಿಗೆ ಹೋಗಿ, ಅಲ್ಲಿ ಶೂಟಿಂಗ್ ಮಾಡಿ, ಮಧ್ಯರಾತ್ರಿ ಶೂಟಿಂಗ್ ಮುಗಿಸಿ, ಖಾಸಗಿ ವಿಮಾನದಲ್ಲಿ ವಾಪಸ್ ಬೆಂಗಳೂರಿಗೆ ಬಂದು ಬಿಗ್ ಬಾಸ್ ಎಪಿಸೋಡ್​ ನೋಡಿ, ವೀಕೆಂಡ್​ ಸಂಚಿಕೆ ಶೂಟ್ ಮಾಡಬೇಕು. ಇದರಿಂದ ನನಗೆ ತುಂಬ ಸುಸ್ತಾಗುತ್ತಿತ್ತು. ನಾನು ಬೆಂಗಳೂರಿನಲ್ಲಿ ಇದ್ದರೆ ಯಾವುದೇ ಸಮಸ್ಯೆ ಇಲ್ಲ. ಬೇರೆ ಕಡೆ ಸಿನಿಮಾ ಶೂಟಿಂಗ್‌ ಇದ್ದಾಗ ಈ ಶೋ ಮಾಡಲು ಕಷ್ಟ ಆಗುತ್ತದೆ ಎಂದು ಖಾಸಗಿ ಸಂದರ್ಶನದಲ್ಲಿ ನಟ ಸುದೀಪ್‌ ಅವರು ತಿಳಿಸಿದ್ದರು.

ಬಿಗ್ ಬಾಸ್‌ಗೆ ಗುಡ್ ಬೈ ಹೇಳಿದ ಕಿಚ್ಚ Read More

ಹಾಸ್ಯ ನಟ ಸರಿಗಮ‌ ವಿಜಿ ವಿಧಿವಶ

ಬೆಂಗಳೂರು: ಕನ್ನಡ ಚಿತ್ರರಂಗದ ಹಾಸ್ಯ ನಟ ಸರಿಗಮ ವಿಜಯ್ ಅವರು ಇಂದು ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಿಧನರಾಗಿದ್ದು,ಈ ವಿಚಾರವನ್ನು ಪುತ್ರ ರೋಹಿತ್‌ ತಿಳಿಸಿದ್ದಾರೆ.

ಚಿತ್ರರಂಗದಲ್ಲಿ ಅವರು ಸರಿಗಮ ವಿಜಿ ಎಂದೇ ಪ್ರಸಿದ್ದರಾಗಿದ್ದಾರೆ.ಸರಿಗಮ ವಿಜಿ ಅವರಿಗೆ 76 ವರ್ಷಗಳಾಗಿತ್ತು.ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಹಾಗಾಗಿ ಯಶವಂತಪುರದ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೇ ಅವರು ಬುಧವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.

1980ರಲ್ಲಿ ಗೀತಪ್ರಿಯಾ ನಿರ್ದೇಶನದ ಬೆಳವಳದ ಮಡಿಲಲ್ಲಿ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು.

ಆ ನಂತರ ಚಿತ್ರರಂಗದಲ್ಲಿ ತೊಡಗಿಕೊಂಡು 269 ಚಿತ್ರಗಳಲ್ಲಿ ನಟಿಸಿದ್ದಾರೆ,80 ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ.ಅವರು ಹೆಚ್ಚಾಗಿ ಹಾಸ್ಯಭರಿತ ಪಾತ್ರಗಳಲ್ಲಿ ನಟಿಸಿ ಫೇಮಸ್ ಆಗಿದ್ದರು.

ನೂರಾರು ಧಾರಾವಾಹಿಗಳಿಗೆ ನಿರ್ದೇಶನ ಮಾಡಿದ್ದಾರೆ, ಜೊತೆಗೆ ನಟನೆ ಕೂಡಾ ಮಾಡಿದ್ದಾರೆ.

ಹಾಸ್ಯ ನಟ ಸರಿಗಮ‌ ವಿಜಿ ವಿಧಿವಶ Read More

ಸಂಕ್ರಾಂತಿ ದಿನವೇ ಸೆಟ್ಟೇರಿದ ದೊಡ್ಮನೆ ಸೊಸೆ: ಆಸ್ಕರ್ ಕೃಷ್ಣ ಚಿತ್ರಕ್ಕೆ ಶುಭ ಹಾರೈಸಿದ ಸಾ.ರಾ ಗೋವಿಂದು.

ಬೆಂಗಳೂರು: ನಿರ್ದೇಶಕ ಆಸ್ಕರ್ ಕೃಷ್ಣ ಮತ್ತೊಂದು ಸಿನಿಮಾ ಶುರು ಮಾಡಿದ್ದು, ಹೊಸ ಚಿತ್ರಕ್ಕೆ “ದೊಡ್ಮನೆ ಸೊಸೆ” ಎಂಬ ಶೀರ್ಷಿಕೆಯನ್ನಿಟ್ಟಿದ್ದಾರೆ.

ಮಾನ್ಯ ಸಿನಿ ಕ್ರಿಯೇಷನ್ಸ್ ಲಾಂಚನದಲ್ಲಿ ತೇಜ್ ವಿನಯ್.ಎಸ್ ದೊಡ್ಮನೆ ಸೊಸೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಪ್ರವೇಶ ನೀಡಿದ್ದಾರೆ.

ವರ್ಷದ ಮೊದಲ ಹಬ್ಬ “ಸಂಕ್ರಾಂತಿ” ಯಂದು ಹಿರಿಯ ನಿರ್ಮಾಪಕರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾ.ರಾ ಗೋವಿಂದು ಅವರು “ದೊಡ್ಮನೆ ಸೊಸೆ” ಶೀರ್ಷಿಕೆಯನ್ನು ಬಿಡುಗಡೆ ಮಾಡಿದರು.

ಪ್ರತಿ ಹೆಣ್ಣು ಮಗಳೂ ಒಂದು ಮನೆಗೆ ಸೊಸೆಯಾಗಿ ಪ್ರವೇಶ ನೀಡುತ್ತಾಳೆ, ಆ ಮನೆಗೆ ಬರುವ ಸೊಸೆಯ ವ್ಯಕ್ತಿತ್ವ ಮತ್ತು ನಡತೆ ಇಡೀ ಮನೆಯ ಗೌರವ ಹಾಗೂ ಘನತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಈ ವೇಳೆ ಸಾ ರಾ ಗೋವಿಂದು ತಿಳಿಸಿದರು.

ಹೆಣ್ಣು ಕಟ್ಟಲೂ ಬಲ್ಲಳು, ಕೆಡವಲೂ ಬಲ್ಲಳು. ಆಸ್ಕರ್ ಕೃಷ್ಣ ಅವರ ಚಿತ್ರದ ಕಥೆಯ ಪಾತ್ರವು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಲಿ, ಮುರಿದ ಮನೆ, ಮನಗಳ ಪುನಃಶ್ಚೇತನಕ್ಕೆ ಸ್ಪೂರ್ತಿಯಾಗಲಿ ಎಂದು ಹೇಳಿ‌ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು ಸಾ.ರಾ.ಗೋವಿಂದು.

ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎಂ.ನರಸಿಂಹಲು‌ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಿರ್ಮಾಪಕ ಡಾ. ಸುನಿಲ್ ಕುಮಾರ್ ಆರ್.ಎಂ ಅವರ ಪುತ್ರ ತೇಜ್ ವಿನಯ್.ಎಸ್ ನಿರ್ಮಾಣದ ಚೊಚ್ಚಲ ಚಿತ್ರ “ದೊಡ್ಮನೆ ಸೊಸೆ” ಯ ಕಥೆಯನ್ನು ಆಸ್ಕರ್ ಕೃಷ್ಣ ಅವರೇ ಬರೆದಿದ್ದು, ಇದು ಅವರ ನಿರ್ದೇಶನದ ಏಳನೇ ಚಿತ್ರವಾಗಿದೆ.

ನಿತೀಶ್.ವಿ ಸಂಗೀತ, ಮೈಸೂರು ಸೋಮು ಛಾಯಾಗ್ರಹಣ, ಕೌಶಿಕ್ ಕಿರಣ್ ಸಂಕಲನ, ಬಿ. ನಿಂಗರಾಜ್ ನಿರ್ಮಾಣ ಮೇಲ್ವಿಚಾರಣೆ ಹಾಗೂ ವಿನಯ್ ಕುಮಾರ್ ಸಂಭಾಷಣೆ ಚಿತ್ರಕ್ಕಿದೆ.

ಕಲಾವಿದರ ಆಯ್ಕೆ ಕೆಲಸ ಮುಗಿಯುವ ಹಂತದಲ್ಲಿದ್ದು “ದೊಡ್ಮನೆ ಸೊಸೆ” ಪಾತ್ರವನ್ನು ಯಾರು ಮಾಡಲಿದ್ದಾರೆ? ಎಂಬ ಪ್ರಶ್ನೆಗೆ ಒಂದೆರಡು ದಿನಗಳಲ್ಲಿ ಉತ್ತರ ದೊರೆಯಲಿದೆ ಎಂದು ಆಸ್ಕರ್ ಕೃಷ್ಣ ತಿಳಿಸಿದ್ದಾರೆ.

ಫೆಬ್ರವರಿ ಮೊದಲ ವಾರದಿಂದ ಚಿತ್ರೀಕರಣ ಪ್ರಾರಂಭವಾಗಿ ಒಂದೇ ಶೆಡ್ಯೂಲ್ ನಲ್ಲಿ ಸಂಪೂರ್ಣ ಚಿತ್ರೀಕರಣ ಮುಗಿಸಿ ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಾಪಕ ತೇಜ್ ವಿನಯ್ ತಿಳಿಸಿದರು.

ಸಂಕ್ರಾಂತಿ ದಿನವೇ ಸೆಟ್ಟೇರಿದ ದೊಡ್ಮನೆ ಸೊಸೆ: ಆಸ್ಕರ್ ಕೃಷ್ಣ ಚಿತ್ರಕ್ಕೆ ಶುಭ ಹಾರೈಸಿದ ಸಾ.ರಾ ಗೋವಿಂದು. Read More

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರಾಯಭಾರಿ ಕಿಶೋರ್

ಬೆಂಗಳೂರು: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್‌ 1ರಿಂದ‌ 8 ರವರೆಗೆ ನಡೆಯಲಿದೆ.

16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ
ಖ್ಯಾತ ನಟ ಕಿಶೋರ್ ಕುಮಾರ್. ಜಿ‌ ನೇಮಕವಾಗಿದ್ದಾರೆ.

ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನೇಮಕಗೊಂಡಿರುವ ನಟ ಕಿಶೋರ್ ಕುಮಾರ್. ಜಿ‌ ಅವರಿಗೆ ಮುಖ್ಯ ಮಂತ್ರಿ‌ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಸರ್ವ ಜನಾಂಗದ ಶಾಂತಿಯ ತೋಟ ಎಂಬ ಘೋಷವಾಕ್ಯದಡಿ ಈ ಬಾರಿಯ ಚಲನಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದ್ದು, ಈ ಸಾಲುಗಳಿಗೆ ಬದ್ಧವಾಗಿರುವ ಕಿಶೋರ್ ಅವರ ಮುಂದಾಳತ್ವದಲ್ಲಿ ಬೆಂಗಳೂರು ಚಲನಚಿತ್ರೋತ್ಸವ ಅತ್ಯಂತ ಯಶಸ್ವಿಯಾಗಲಿದೆ ಎಂದು ಮುಖ್ಯ ಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿ ಸಿಎಂ ಸಿದ್ದರಾಮಯ್ಯ ಕಿಶೋರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರಾಯಭಾರಿ ಕಿಶೋರ್ Read More

ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಶಿವಣ್ಣ

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಅವರು ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾಗಿದ್ದು,ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಕ್ಯಾನ್ಸರ್ ಗೆದ್ದಿರುವ ಶಿವಣ್ಣ ಅಭಿಮಾನಿಗಳಿಗೆ ಹೊಸ ವರ್ಷದಂದೆ ದರ್ಶನ ಕೊಟ್ಟು,ತಾವು ಕ್ಯಾನ್ಸರ್‌ನಿಂದ ಮುಕ್ತರಾಗಿರುವುದಾಗಿ ಸಂತಸ ಹಂಚಿಕೊಂಡಿದ್ದಾರೆ.

ಅಮೆರಿಕದಿಂದಲೇ ಅಭಿಮಾನಿಗಳಿಗೆ ಸಂದೇಶವನ್ನು ಶಿವಣ್ಣ ರವಾನಿಸಿದ್ದಾರೆ.ಈ ಬಗ್ಗೆ ಗೀತಾ ಶಿವರಾಜ್‌ಕುಮಾರ್‌ ಮಾತನಾಡಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನೀವೆಲ್ಲರೂ ಮಾಡಿದ ಪ್ರಾರ್ಥನೆಯಿಂದ ಶಿವರಾಜ್‌ಕುಮಾರ್‌ ಅವರ ಎಲ್ಲಾ ರಿಪೋರ್ಟ್‌ ನೆಗೆಟಿವ್‌ ಬಂದಿದೆ ಎಂದು ಸಂತಸದಿಂದ ಹೇಳಿದ್ದಾರೆ.

ಶಿವರಾಜ್ಕುಮಾರ್ ಈವಾಗ ಕ್ಯಾನ್ಸರ್‌ ಫ್ರೀ ಅಂತ ವೈದ್ಯರು ಅಧಿಕೃತವಾಗಿ ಹೇಳಿದ್ದಾರೆ. ನಿಮ್ಮೆಲ್ಲರ ಹಾರೈಕೆಯಿಂದ ಅವರು ಗುಣಮುಖರಾಗಿದ್ದಾರೆ. ನಾನು ಎಂದಿಗೂ ಮರೆಯುವುದಿಲ್ಲ,ನಿಮಗೆಲ್ಲ ಧನ್ಯವಾದ ಎಂದು ತಿಳಿಸಿದ್ದಾರೆ.

ನಂತರ ಶಿವರಾಜಕುಮಾರ್ ಕೂಡಾ ಮಾತನಾಡಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಭಯ ಆಗುತ್ತೆ ಮಾತನಾಡಬೇಕಾದರೆ, ಎಲ್ಲಿ ಎಮೋಷನಲ್‌ ಆಗಿ ಬಿಡುವೆನೊ ಅಂತ ಎಮೋಶನಲ್ ಅಗಿಯೇ ಹೇಳಿದರು.

ನಮ್ಮ ನಾಡಿಂದ ಬರುವಾಗ ಎಮೋಷನಲ್‌ ಆಗಿದ್ದೆ, ಭಯ ಇದ್ದೇ ಇರುತ್ತದೆ. ಆ ಭಯ ಕಮ್ಮಿ ಮಾಡಲೆಂದೇ ಅಭಿಮಾನಿ ದೇವರುಗಳಿದ್ದಾರೆ. ವೈದ್ಯರು ನನ್ನ ನೋಡಿಕೊಂಡ ರೀತಿಯಿಂದ ಇನ್ನಷ್ಟು ಧೈರ್ಯ ಬಂತು. ’45’ ಚಿತ್ರದ ಶೂಟಿಂಗ್‌ ಮಾಡುವಾಗ ಕಿಮೋ ಥೆರಫಿಯಲ್ಲಿ ಕೆಲಸ ಮಾಡಿದ್ದೀನಿ. ಕ್ಲೈಮ್ಯಾಕ್ಸ್‌ ಫೈಟ್‌ ಎಲ್ಲಾ ಮಾಡಿದ್ದೇನೆ ಎಂದು ಶಿವಣ್ಣ ಹೇಳಿದ್ದಾರೆ.

ಅಮೆರಿಕಗೆ ಚಿಕಿತ್ಸೆಗೆ ಹೊರಡುವ ಡೇಟ್‌ ಹತ್ತಿರ ಬಂದಾಗ ಟೆನ್ಷನ್‌ ಹೆಚ್ಚಾಗಿತ್ತು, ಆದರೆ ಸದಾ ಪತ್ನಿ ಗೀತಾ ಮತ್ತು ಮಗಳು ನಿವಿ ನನ್ನ ಜೊತೆ ಬೆಂಬಲವಾಗಿ ನಿಂತಿದ್ದಾರೆ ಎಂದು ಮನದ ಮಾತುಗಳನ್ನು ಹಂಚಿಕೊಂಡರು.

ನನ್ನ ಚಿಕಿತ್ಸೆ ಮಾಡಿದ ವೈದ್ಯ ಮನೋಹರ್‌ ಅವರು ಮಗುವಿನಂತೆ ನನ್ನ ನೋಡಿಕೊಂಡರು. ಯೂರಿನರಿ ಬ್ಲಾಡ್‌ ತೆಗೆದು ಹೊಸದು ಬ್ಲಾಡ್‌ ಹಾಕಿದ್ದಾರೆ. ಯಾರು ಗಾಬರಿ ಆಗಬೇಡಿ ನಾನು ಆರಾಮವಾಗಿದ್ದೇನೆ. ಐ ವಿಲ್‌ ಬಿ ಬ್ಯಾಕ್‌, ಡಬಲ್‌ ಪವರ್‌ನೊಂದಿಗೆ ಬರುತ್ತೇನೆ. ಎಲ್ಲಾ ನನ್ನ ಅಭಿಮಾನಿ ದೇವರುಗಳಿಗೆ ಧನ್ಯವಾದಗಳು ಎಂದು ಶಿವಣ್ಣ ತಿಳಿಸಿದ್ದಾರೆ.

ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಶಿವಣ್ಣ Read More

ಮ್ಯಾಕ್ಸ್ ಚಿತ್ರ ಯಶಸ್ವಿಯಾಗಲೆಂದು ಡಿ.23 ಸುದೀಪ್ ಅಭಿಮಾನಿಗಳ ಪೂಜೆ

ಮೈಸೂರು: ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿ ಬಳಗದ ವತಿಯಿಂದ
ಸುದೀಪ್ ನಾಯಕನಟನಾಗಿ ಅಭಿನಯಿಸಿರುವ ಮ್ಯಾಕ್ಸ್ ಚಿತ್ರ ಯಶಸ್ವಿಯಾಗಲೆಂದು ಪ್ರಾರ್ಥಿಸಿ ಗಣಪನಿಗೆ ಪೂಜೆ ಸಲ್ಲಿಸಲಿದ್ದಾರೆ

ಮೈಸೂರಿನ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಡಿ 23ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಮ್ಯಾಕ್ಸ್ ಚಿತ್ರ ಯಶಸ್ವಿಯಾಗಲೆಂದು
ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ.

ಕಿಚ್ಚನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕಿಚ್ಚ ಸುದೀಪ್ ಅಭಿಮಾನಿ ಬಳಗದ ಅಧ್ಯಕ್ಷ ಆಲನಹಳ್ಳಿ ಎಂ ಎನ್ ಚೇತನ್ ಗೌಡ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಮ್ಯಾಕ್ಸ್ ಚಿತ್ರ ಯಶಸ್ವಿಯಾಗಲೆಂದು ಡಿ.23 ಸುದೀಪ್ ಅಭಿಮಾನಿಗಳ ಪೂಜೆ Read More

ತನಿಖೆಗೆ ಸಹಕರಿಸುತ್ತೇನೆ: ಅಲ್ಲು ಅರ್ಜುನ್‌

ಅಮರಾವತಿ: ಎಲ್ಲ ರೀತಿಯ ತನಿಖೆಗೆ ಸಹಕರಿಸುತ್ತೇನೆ ಎಂದು ಕಾಲ್ತುಳಿತದಲ್ಲಿ ಮಹಿಳೆ ಸಾವು ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿ 24ಯೊಳಗೆ ಜೈಲಿನಿಂದ ಹೊರಬಂದ ನಟ ಅಲ್ಲು ಅರ್ಜುನ್‌ ಹೇಳಿದರು.

ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ,ನಾನು ಮತ್ತೊಮ್ಮೆ ಮೃತರ ಕುಟುಂಬಕ್ಕೆ ನನ್ನ ಸಂತಾಪವನ್ನು ವ್ಯಕ್ತಪಡಿಸಲು ಇಚ್ಚಿಸುತ್ತೇನೆ. ಇದು ದುರದೃಷ್ಟಕರ ಘಟನೆ, ನಡೆದಿದ್ದಕ್ಕಾಗಿ ನಾವು ವಿಷಾದಿಸುತ್ತೇವೆ ಎಂದು ತಿಳಿಸಿದ್ದಾರೆ.

ನಾನು ಕಾನೂನು ಪಾಲಿಸುವ ನಾಗರಿಕನಾಗಿದ್ದು, ತನಿಖೆಗೆ ಎಲ್ಲ ರೀತಿಯಲ್ಲೂ ಸಹಕರಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಡಿಸೆಂಬರ್ 4 ರಂದು ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಚಂಚಲಗುಡ ಜೈಲಿನಲ್ಲಿ ಒಂದು ರಾತ್ರಿ ಕಳೆದರು. ಶುಕ್ರವಾರ ತಡರಾತ್ರಿಯವರೆಗೂ ಜಾಮೀನು ಆದೇಶದ ಪ್ರತಿಯನ್ನು ಅಧಿಕಾರಿಗಳು ಸ್ವೀಕರಿಸದ ಕಾರಣ ತೆಲಂಗಾಣ ಹೈಕೋರ್ಟ್ ಜಾಮೀನು ಮಂಜೂರು ಮಾಡಿದರೂ ಅವರನ್ನು ಬಿಡುಗಡೆ ಮಾಡಲಾಗಿರಲಿಲ್ಲ.

ಅಲ್ಲು ಅರ್ಜುನ್ ಬಂಧನವಾದ ಕೆಲವೇ ಗಂಟೆಗಳಲ್ಲಿ ಸಂತ್ರಸ್ತೆಯ ಪತಿ ಪ್ರಕರಣವನ್ನು ಹಿಂಪಡೆಯಲು ಸಿದ್ಧ ಎಂದು ಹೇಳಿದ್ದರು.

ನಾನು ಪ್ರಕರಣವನ್ನು ಹಿಂಪಡೆಯಲು ಸಿದ್ಧನಿದ್ದೇನೆ. ನನಗೆ ಬಂಧನದ ಬಗ್ಗೆ ತಿಳಿದಿರಲಿಲ್ಲ. ಅಲ್ಲು ಅರ್ಜುನ್ ಅವರಿಗೂ ನನ್ನ ಹೆಂಡತಿ ಸಾವನ್ನಪ್ಪಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದರು.

ಬ್ಲಾಕ್‌ಬಸ್ಟರ್ ‘ಪುಷ್ಪಾ 2: ದಿ ರೂಲ್’ ನ ಪ್ರಥಮ ಪ್ರದರ್ಶನ ವೀಕ್ಷಿಸಲು ಬಂದ ನೆಚ್ಚಿನ ನಟನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಥಿಯೇಟರ್‌ ಮುಂದೆ ನೆರೆದಿದ್ದರು. ಈ ವೇಳೆ ನೂಕುನುಗ್ಗಲಿನಿಂದಾದ ಕಾಲ್ತುಳಿತಕ್ಕೆ 35 ವರ್ಷದ ಮಹಿಳೆ ಸಾವನ್ನಪ್ಪಿದ್ದರು. ಅವರ ಎಂಟು ವರ್ಷದ ಮಗ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಘಟನೆಯ ನಂತರ, ಮಹಿಳೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಥಿಯೇಟರ್ ಆಡಳಿತದ ವಿರುದ್ಧ ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ತನಿಖೆಗೆ ಸಹಕರಿಸುತ್ತೇನೆ: ಅಲ್ಲು ಅರ್ಜುನ್‌ Read More

ದರ್ಶನ್,ಪವಿತ್ರಾ ಗೌಡಾಗೆ ಜಾಮೀನು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ಸೇರಿ ಏಳು ಮಂದಿ ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು ಬಿಗ್ ರಿಲೀಫ್ ದೊರೆತಿದೆ.

ಜಾಮೀನು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ದರ್ಶನ್‌, ಪವಿತ್ರಾ ಗೌಡ ಸೇರಿ ಎಲ್ಲಾ ಏಳು ಆರೋಪಿಗಳಿಗೂ ಜಾಮೀನು ನೀಡಿದೆ.

ನ್ಯಾ. ವಿಶ್ವಜಿತ್‌ ಶೆಟ್ಟಿ ಅವರಿದ್ದ ಪೀಠ ಏಳು ಎಂದಿಗೂ ಜಾಮೀನು ನೀಡಿ ಆದೇಶ ಹೊರಡಿಸಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೂ.11 ರಂದು ನಟ ದರ್ಶನ್‌ ಸೇರಿ ಹಲವರು ಬಂಧನಕ್ಕೊಳಗಾಗಿದ್ದರು. ಈ ನಡುವೆ ಜೈಲಿನಲ್ಲಿ ರಾಜಾತಿಥ್ಯದ ಆರೋಪದ ಹಿನ್ನೆಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ‌ ದರ್ಶನ್ ರನ್ನು ಸ್ಥಳಾಂತರಿಸಲಾಗಿತ್ತು.

ಬೆನ್ನು ನೋವಿನ ಕಾರಣ ದರ್ಶನ್ ಗೆ ಶಸ್ತ್ರಚಿಕಿತ್ಸೆ ಅಗತ್ಯದ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಇನ್ನೂ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ.

ಈ ಮಧ್ಯೆ ಜಾಮೀನಿಗಾಗಿ ದರ್ಶನ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ ಜಾಮೀನು ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಿತ್ತು.

ದರ್ಶನ್,ಪವಿತ್ರಾ ಗೌಡಾಗೆ ಜಾಮೀನು Read More