ಗಣಪತಿ ಆಶ್ರಮದಲ್ಲಿ ವಿಶ್ವಶಾಂತಿಗಾಗಿ ದತ್ತ ಜಯಂತಿ ಆಚರಣೆ

ಮೈಸೂರು: ನಾಡಿನಾದ್ಯಂತ ದತ್ತಾತ್ರೇಯ ಜಯಂತಿಯನ್ನು ಸಡಗರದಿಂದ ಆಚರಿಸಲಾಗುತ್ತಿದ್ದು,ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿಶ್ವಶಾಂತಿಗಾಗಿ ದತ್ತ ಜಯಂತಿ ಆಚರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ವೇಳೆ ಶ್ರೀ ಗಣಪತಿ ಸಚ್ಚಿದಾನಂದ
ಸ್ವಾಮೀಜಿಯವರು ದತ್ತಾತ್ರೇಯ ಮಹಿಮೆ ಹಾಗೂ ಪುರಾಣಗಳಲ್ಲಿ ದತ್ತನ ಇರುವಿಕೆಯ ಬಗ್ಗೆ ತಿಳಿಸಿದರು.
ದತ್ತಾತ್ರೇಯ ಮಹಾವಿಷ್ಣುವಿನ ಆರನೇ ಅವತಾರ. ಅತ್ರಿ ಮತ್ತು ಅನುಸೂಯೆಯರಿಗೆ ಮಗನಾಗಿ ಬಂದವನು. ಆ ಕಾಲದ ರಾಜರುಗಳಿಗೆ ಮತ್ತು ಜನಸಾಮಾನ್ಯರಿಗೆ ಅದ್ಭುತವಾದ ಬೋಧನೆಗಳನ್ನು ಮಾಡಿದ ಜ್ಞಾನಸಾಗರ ಈ ದತ್ತಾತ್ರೇಯ ಎಂದು ಬಣ್ಣಿಸಿದರು.
ವೇದ-ಪುರಾಣಗಳಲ್ಲಿ ದತ್ತನ ಇರುವಿಕೆ:
ದತ್ತಾತ್ರೇಯರು ಕೇವಲ ದತ್ತ ಪರಂಪರೆಗೆ ಸೀಮಿತರಲ್ಲ, ಅವರು ವೇದ, ಮಹಾಭಾರತ ಮತ್ತು ರಾಮಾಯಣ ಕಾಲಘಟ್ಟದಲ್ಲೂ ಇದ್ದರು ಎಂದು ಶ್ರೀಗಳು ವಿವರಿಸಿದರು.
ದತ್ತಾತ್ರೇಯರು ಸಂಚಾರಿಗಳು, ಅವರಿಗೆ ಇಂಥದ್ದೇ ನೆಲೆ ಅಂತಿಲ್ಲ. ಅವರು ಎಲ್ಲೆಡೆ ಇರುತ್ತಾರೆ. ರಾಮಾಯಣದಲ್ಲಿ ರಾಮನಿಗೆ ದತ್ತಾತ್ರೇಯರು ಕಾಣಿಸಿಕೊಳ್ಳುತ್ತಾರೆ, ಎಂದು ಪೌರಾಣಿಕ ಹಿನ್ನೆಲೆಯನ್ನು ತೆರೆದಿಟ್ಟರು.
ಸೀತೆಯ ಆಭರಣ ಮತ್ತು ಅನುಸೂಯೆ
ರಾಮಾಯಣದ ಸ್ವಾರಸ್ಯಕರ ಪ್ರಸಂಗವೊಂದನ್ನು ಉಲ್ಲೇಖಿಸಿದ ಶ್ರೀಗಳು, ರಾಮ ವನವಾಸಕ್ಕೆ ಹೋದಾಗ ಮೊದಲು ಭೇಟಿ ನೀಡಿದ್ದು ಅತ್ರಿ ಮಹರ್ಷಿಗಳ ಆಶ್ರಮಕ್ಕೆ. ಅಲ್ಲಿ ಅತಿಥಿ ಸತ್ಕಾರದ ನಂತರ ಅನುಸೂಯೆ ಸೀತೆಗೆ ದಿವ್ಯವಾದ ಆಭರಣಗಳು ಮತ್ತು ಬಾಡದ ಹೂವುಗಳನ್ನು ನೀಡುತ್ತಾಳೆ. ಆಗ ರಾಮ, ‘ಎಲ್ಲವನ್ನೂ ತ್ಯಜಿಸಿ ಬಂದ ನಮಗೆ ಈ ಒಡವೆಗಳು ಏಕೆ?’ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಉತ್ತರಿಸಿದ ಅನುಸೂಯೆ, ‘ಇವು ಸಾಮಾನ್ಯ ಒಡವೆಗಳಲ್ಲ, ಅರಣ್ಯದಲ್ಲಿ ಸಂಚರಿಸುವಾಗ ಇವುಗಳ ಅವಶ್ಯಕತೆ ಇದೆ’ ಎಂದು ಹೇಳುತ್ತಾಳೆ.
“ಮುಂದೆ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ, ಸೀತೆ ಇದೇ ಆಭರಣಗಳನ್ನು ಗುರುತುಗಾಗಿ ಕೆಳಗೆ ಎಸೆಯುತ್ತಾಳೆ. ರಾಮ ಮತ್ತು ಲಕ್ಷ್ಮಣರು ಸೀತೆಯನ್ನು ಹುಡುಕುವಾಗ ಈ ದಿವ್ಯ ಆಭರಣಗಳೇ ದಾರಿದೀಪವಾಗುತ್ತವೆ. ಇದು ದತ್ತಾತ್ರೇಯರ ಕೃಪೆಯಿಂದಲೇ ನಡೆದಿದ್ದು ಎಂದು ಶ್ರೀಗಳು ವಿವರಿಸಿದರು.
ಪಟ್ಟಾಭಿಷೇಕ ಮತ್ತು ಪಿಂಗಳ ನಾಗ:
ಶ್ರೀರಾಮ ಪಟ್ಟಾಭಿಷೇಕದ ಸಂದರ್ಭದ ಮತ್ತೊಂದು ಅಪರೂಪದ ಕಥೆಯನ್ನು ಶ್ರೀಗಳು ಹಂಚಿಕೊಂಡರು. “ಪಟ್ಟಾಭಿಷೇಕದ ಸಮಯದಲ್ಲಿ ರಾಮ ಎಲ್ಲೋ ನೋಡುತ್ತಾ ಅನ್ಯಮನಸ್ಕನಾಗಿರುತ್ತಾನೆ. ಆಗ ಹನುಮಂತ (ಪಿಂಗಳ ನಾಗ) ರಾಮನನ್ನು ಪ್ರಶ್ನಿಸಿದಾಗ, ‘ನನ್ನ ಭಕ್ತನೊಬ್ಬ ಪಿಂಗಳ ನಾಗನ ರೂಪದಲ್ಲಿ ಬಂದಿದ್ದಾನೆ, ಅವನ ದರ್ಶನವಾಗುವರೆಗೂ ಪಟ್ಟಾಭಿಷೇಕ ಬೇಡ’ ಎಂದು ರಾಮ ಹೇಳುತ್ತಾನೆ. ಆ ಭಕ್ತನ ದರ್ಶನವಾದ ನಂತರವೇ ಪಟ್ಟಾಭಿಷೇಕ ನೆರವೇರುತ್ತದೆ,” ಎಂದು ದತ್ತ ತತ್ವದ ಗೂಢಾರ್ಥವನ್ನು ತಿಳಿಸಿಕೊಟ್ಟರು.
ವಿಶ್ವಶಾಂತಿಗಾಗಿ ಪ್ರಾರ್ಥನೆ: ದತ್ತ ಜಯಂತಿ ಪ್ರಯುಕ್ತ ವಿಶೇಷ ಪೂಜೆ ಮತ್ತು ಅಭಿಷೇಕಗಳನ್ನು ನಡೆದಿವೆ, ಪ್ರಪಂಚಕ್ಕೆ ಶಾಂತಿಯಾಗಲಿ, ಜನರಿಗೆ ಸದ್ಬುದ್ಧಿ ಸಿಗಲಿ ಎನ್ನುವುದು ನಮ್ಮ ಆಶಯ,” ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.

ನಂತರ ಭಕ್ತರು ದತ್ತಾತ್ರೇಯ ಸ್ವಾಮಿಗೆ ತೈಲಾಭಿಷೇಕ ಮಾಡಿದರು.
ಇದೇ ಸಂದರ್ಭದಲ್ಲಿ ಫೆಬ್ರವರಿ 14 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಶ್ರಮದ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ಹನುಮಾನ್ ಚಾಲೀಸಾ ಪಾರಾಯಣದ ಪೋಸ್ಟರ್ ಗಳನ್ನು ಶ್ರೀಗಳು ಬಿಡುಗಡೆ ಮಾಡಿದರು.
ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಉದ್ಯಮಿ ರಾಮೇಗೌಡ ಉಪಸ್ಥಿತರಿದ್ದರು.

ಗಣಪತಿ ಆಶ್ರಮದಲ್ಲಿ ವಿಶ್ವಶಾಂತಿಗಾಗಿ ದತ್ತ ಜಯಂತಿ ಆಚರಣೆ Read More

ಮೂಢನಂಬಿಕೆಗಳಿರುವ ಸಮಾಜದ ಜೊತೆ ರಾಜಿಯಾಗಬೇಡಿ: ಸಿದ್ದರಾಮಯ್ಯ

ಮಂಗಳೂರು: ವೈಜ್ಞಾನಿಕ ಹಾಗೂ ವೈಚಾರಿಕ ಜ್ಞಾನವನ್ನು ಪಡೆಯಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ಫೇಸ್ ಮತ್ತು ಎಐ ಉನ್ನತ ಅಧ್ಯಯನ ಕೇಂದ್ರದ ಶಿಲಾನ್ಯಾಸ ಫೇಸ್ ಟ್ರೈಡ್ ಪಾರ್ಕ್ ಮತ್ತು ಫೇಸ್ ಸ್ಪೋರ್ಟ್ಸ ಅರೇನಾ ಶಿಲಾನ್ಯಾಸ ಹಾಗೂ ಪೇಸ್ ಕೇರ್ಸ್ ಸಮುದಾಯ ಸೇವೆ ಯೋಜನೆಗಳನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.
ಪೇಸ್ ಗ್ರೂಪ್ನ ಸಂಸ್ಥಾಪಕರಾದ ಡಾ.ಪಿ.ಎ.ಇಬ್ರಾಹಿಂ ಅವರ ದೂರದೃಷ್ಟಿಯ ಫಲವಾಗಿ ಭಾರತ ಹಾಗೂ ವಿದೇಶಗಳಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳು ಸ್ಥಾಪಿತವಾಗಿದ್ದು, ಸುಮಾರು 36,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ದೊಡ್ಡಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಪೇಸ್ ಸಂಸ್ಥೆ , ಉತ್ತಮ ಗುಣಮಟ್ಟದ ವಿದ್ಯಾಸಂಸ್ಥೆಯಾಗಿದೆ ಎಂದು ಶ್ಲಾಘಿಸಿದರು.
ವಿದ್ಯೆ ಪಡೆದ ನಂತರ ಸಮಾಜಕ್ಕೆ ನೀಡುವ ಕೊಡುಗೆ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಬೇಕು. ಆಧುನಿಕ ಶಿಕ್ಷಣದ ಜೊತೆಗೆ ವೈಜ್ಞಾನಿಕ ಹಾಗೂ ವೈಚಾರಿಕ ಜ್ಞಾನವನ್ನೂ ಹೊಂದಿರಬೇಕು. ಆಗ ಮಾತ್ರ ಸಮಾಜದ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಲು ಸಾಧ್ಯ. ಮೂಢನಂಬಿಕೆಗಳಿರುವ ಸಮಾಜದ ಜೊತೆ ರಾಜಿಯಾಗಲೀ , ಅಂಧಶ್ರದ್ಧೆಯ ಪಾಲನೆಯಾಗಲಿ ಮಾಡಬಾರದು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
ಕೃತಕ ಬುದ್ಧಿಮತ್ತೆ ಕಲಿತು ಹಣೆಬರಹ ಅಂದರೆ ಅದು ವಿದ್ಯೆಯೇ ಅಲ್ಲ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವಂತ ವಿದ್ಯೆ ಅಗತ್ಯವಿದೆ,ಸ್ವಾತಂತ್ರ್ಯ, ಸಮಾನತೆ, ಭಾತೃತ್ವವನ್ನು ನಮ್ಮ ಸಂವಿಧಾನ ಸಾರುತ್ತದೆ. ನಾವು ಏನೇ ಕಲಿತರೂ ವೈಚಾರಿಕತೆ ವೈಜ್ಞಾನಿಕತೆಯನ್ನು ಮೈಗೂಡಿಸಿಕೊಳ್ಳಬೇಕು . ಪ್ರತಿಯೊಬ್ಬರೂ ಮೊದಲು ಮಾನವನಾಗಬೇಕು ಎಂದು ತಿಳಿಸಿದರು.
ಪರಸ್ಪರ ಪ್ರೀತಿಸಬೇಕೆಂಬ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆದರೆ ನಮ್ಮ ಸಮಾಜದಲ್ಲಿ ಅಸಮಾನತೆ ತೊಲಗಿಸುವುದು ಸುಲಭ ಸಿಎಂ ನುಡಿದರು.

ಮೂಢನಂಬಿಕೆಗಳಿರುವ ಸಮಾಜದ ಜೊತೆ ರಾಜಿಯಾಗಬೇಡಿ: ಸಿದ್ದರಾಮಯ್ಯ Read More

ಸರ್ಕಾರಿ ಸ್ಕೂಲ್ ಟೂರ್ ಮಾಡಿ ಬನ್ನಿ ಸ್ವಾಮಿ-ಸಿಎಂ ಗೆ ಅಶೋಕ್ ಟಾಂಗ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನವರೇ,
ಕಾಂಗ್ರೆಸ್ ಪಕ್ಷಕ್ಕೆ ಸೇರಿ ಸುಮಾರು 20 ವರ್ಷಗಳಾದ ಮೇಲೆ ಮೊಟ್ಟಮೊದಲ ಬಾರಿಗೆ ಡಿಸಿಎಂ ಡಿ‌.ಕೆ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ, ನಾಟಿಕೋಳಿ ತಿಂಡಿ ತಿಂದು ಹೋಮ್ ಟೂರ್ ಮಾಡಿಕೊಂಡು ಬಂದಿದ್ದೀರಿ.ಮುಂದಿನ ಬ್ರೇಕ್ ಫಾಸ್ಟ್ ಮೀಟಿಂಗ್ ಎಲ್ಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಛೇಡಿಸಿದ್ದಾರೆ.
ಯಾರ ಜೊತೆ ಅಂತ ನಿಮ್ಮ ಹೈಕಮಾಂಡ್ ಏಜೆಂಟ್ ವೇಣುಗೋಪಾಲ್ ಅವರು ಆದೇಶ ಕೊಡುವುದಕ್ಕೂ ಮುಂಚೆ ಒಮ್ಮೆ ಸರ್ಕಾರಿ ಸ್ಕೂಲ್ ಟೂರ್ ಮಾಡಿ ಬನ್ನಿ ಸ್ವಾಮಿ ಎಂದು ಟ್ವೀಟ್ ಮಾಡಿ‌ ಸಿಎಂ ಕಾಲೆಳೆದಿದ್ದಾರೆ.
ಶೌಚಾಲಯಗಳೇ ಇಲ್ಲದ ಶಾಲೆಗಳು, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳು, ಬಿದ್ದು ಹೋಗುತ್ತಿರುವ ಗೋಡೆಗಳು, ಶಿಕ್ಷಕರಿಲ್ಲದ ತರಗತಿಗಳನ್ನು ಒಮ್ಮೆ ಕಣ್ತುಂಬಿಕೊಂಡು ಬನ್ನಿ ಸಿದ್ದರಾಮಯ್ಯನವರೇ.
ಇಂತಹ ಲಜ್ಜೆಗೆಟ್ಟ ಸರ್ಕಾರವನ್ನ ಇಡೀ ಪ್ರಪಂಚದ ಇತಿಹಾಸದಲ್ಲೇ ಕಾಣಲು ಸಾಧ್ಯವಿಲ್ಲ ಎಂದು ಅಶೋಕ್ ಟೀಕಿಸಿದ್ದಾರೆ.

ಸರ್ಕಾರಿ ಸ್ಕೂಲ್ ಟೂರ್ ಮಾಡಿ ಬನ್ನಿ ಸ್ವಾಮಿ-ಸಿಎಂ ಗೆ ಅಶೋಕ್ ಟಾಂಗ್ Read More

ಬೆಳಗಾವಿ ಅಧಿವೇಶದಲ್ಲಿ ಸಮರ್ಥವಾಗಿ ವಿಪಕ್ಷಗಳನ್ನು ಎದುರಿಸುತ್ತೇವೆ-ಸಿಎಂ

ಬೆಂಗಳೂರು: ಬೆಳಗಾವಿ ಅಧಿವೇಶದಲ್ಲಿ ಸಮರ್ಥವಾಗಿ ವಿಪಕ್ಷಗಳನ್ನು ಎದುರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ‌ ಸಿಎಂ,ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿವೇಶನ ಕರೆಯಲಾಗಿದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಹ್ವಾನದ ಮೇರೆಗೆ ಬೆಳಗಿನ ಉಪಹಾರಕ್ಕಾಗಿ ಅವರ ನಿವಾಸಕ್ಕೆ ಭೇಟಿ ನೀಡಿದೆ.ನಮ್ಮ ಪಕ್ಷದ ವಿಚಾರಗಳನ್ನು ಈ ವೇಳೆ ಚರ್ಚಿಸಲಾಗಿದೆ. ಡಿಸೆಂಬರ್ 8 ರಂದು ಬೆಳಗಾವಿ ಅಧಿವೇಶನ ಪ್ರಾರಂಭವಾಗಲಿದ್ದು, ವಿಪಕ್ಷಗಳನ್ನು ಎದುರಿಸಲು ಸರ್ಕಾರದ ರಣನೀತಿಗಳ ಬಗ್ಗೆ ಚರ್ಚಿಸಲಾಯಿತು ಎಂದು ‌ತಿಳಿಸಿದರು.

ವಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿರುವ ಮಾಹಿತಿ ಪತ್ರಿಕೆಗಳಿಂದ ತಿಳಿದು ಬಂದಿದೆ.ಅಲ್ಲದೇ ವಿಪಕ್ಷಗಳು ಕೇಳಬಹುದಾದ ಪ್ರಶ್ನೆಗಳನ್ನು ಸಮರ್ಥವಾಗಿ ಸರ್ಕಾರ ಎದುರಿಸಲಿದೆ. ಕಬ್ಬು, ಮೆಕ್ಕೆಜೋಳದ ಸಮಸ್ಯೆ ಸೇರಿದಂತೆ ರಾಜ್ಯದ ಸಮಸ್ಯೆಗಳಿಗೆ ಸಮರ್ಪಕ ಪರಿಹಾರಗಳನ್ನು ಕಂಡುಕೊಳ್ಳಲು ಈ ಅಧಿವೇಶನದಲ್ಲಿ ಪ್ರಯತ್ನಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.

ನಮ್ಮ ಸರ್ಕಾರ ರೈತಪರ ನಿಲುವನ್ನು ಹೊಂದಿದೆ. ಮೆಕ್ಕೆ ಜೋಳ ಖರೀದಿ ಬಗ್ಗೆ ರೈತರು, ಡಿಸ್ಟಲರಿ ಕಾರ್ಖಾನೆ ಮಾಲೀಕರ ಜೊತೆ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 2,400 ರೂ ಬೆಂಬಲ ಬೆಲೆ ನಿಗದಿಪಡಿಸಿದೆ ಆದರೆ ಮಾರುಕಟ್ಟೆ ದರ 1900 ರಿಂದ 2100 ರೂ.ವೆರೆಗೆ ಇರುವುದರಿಂದ ಡಿಸ್ಟಲರಿ ಕಂಪನಿಗಳು , ಎಂಎಸ್ ಪಿ ದರದಲ್ಲಿಯೇ ರೈತರಿಂದ ಮೆಕ್ಕೆಜೋಳವನ್ನು ಖರೀದಿಸಬೇಕೆಂದು ಮನವೊಲಿಸಲಾಗುತ್ತಿದೆ. ಅಂತೆಯೇ ಪೌಲ್ಟ್ರಿ ಫಾರಂಗಳು , ಪಶು ಆಹಾರಗಳಿಗಾಗಿ ಮೆಕ್ಕೆ ಜೋಳವನ್ನು ಬಳಸಲಾಗುತ್ತದೆ ಎಂದು ಸಿಎಂ‌ ತಿಳಿಸಿದರು.

ಹೈ ಕಮಾಂಡ್ ಸೂಚನೆಯಂತೆ ನಡೆದುಕೊಳ್ಳುವುದಾಗಿ ಮೊನ್ನೆ ಮತ್ತು ಇಂದೂ ಕೂಡ ಚರ್ಚಿಸಲಾಗಿದೆ,
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಒಗ್ಗಟ್ಟಿನಿಂದ ಇದ್ದೇವೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರರಿದ್ದಂತೆ, ಒಂದೇ ಪಕ್ಷದಲ್ಲಿದ್ದು, ಒಂದೇ ಸಿದ್ಧಾಂತ ನಂಬಿಕೊಂಡಿದ್ದೇವೆ. 2028 ರ ಚುನಾವಣೆಯಲ್ಲಿಯೂ ಒಟ್ಟಿಗೆ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ ಎಂದು ಮುಖ್ಯ ಮಂತ್ರಿಗಳು‌ ಸ್ಪಷ್ಟವಾಗಿ ಹೇಳಿದರು.

ಬೆಳಗಾವಿ ಅಧಿವೇಶದಲ್ಲಿ ಸಮರ್ಥವಾಗಿ ವಿಪಕ್ಷಗಳನ್ನು ಎದುರಿಸುತ್ತೇವೆ-ಸಿಎಂ Read More

ಏಡ್ಸ್ ಶೂನ್ಯ ರಾಜ್ಯ ಮಾಡಲು ಎಲ್ಲರೂ ಕೈ ಜೋಡಿಸಿ:ದಿನೇಶ್ ಗುಂಡೂರಾವ್

ಮೈಸೂರು,ಡಿ.1: ರಾಜ್ಯ ಸರ್ಕಾರ ಹೆಚ್.ಐ.ವಿ ತಡೆಗಟ್ಟಬೇಕೆಂಬ ಉದ್ದೇಶ ಹೊಂದಿದೆ, 2030ಕ್ಕೆ ಏಡ್ಸ್ ಶೂನ್ಯ ರಾಜ್ಯವನ್ನಾಗಿ ಮಾಡುವ ಗುರಿಯನ್ನು ಇಟ್ಟು ಕೊಂಡಿದ್ದು ಎಲ್ಲರೂ ಕೈ ಜೋಡಿಸಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜೆ.ಕೆ.ಗ್ರೌಂಡ್ಸ್ ನಲ್ಲಿ ಅಮೃತ ಮಹೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ‌ಉದ್ಘಾಟಿಸಿ ಸಚಿವರು ಮಾತನಾಡಿದರು.

ಹೆಚ್.ಐ.ವಿ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಎ.ಆರ್.ಟಿ ಚಿಕಿತ್ಸೆ ನೀಡಿ ಹೆಚ್.ಐ.ವಿ ಸೋಂಕು ಏಡ್ಸ್ ಆಗಿ ಪರಿವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೆಚ್‌.ಐ‌‌‌.ವಿ ಸೋಂಕು ಅಸುರಕ್ಷಿತ ಲೈಂಗಿಕ ಸಂಪರ್ಕ, ಹೆಚ್.ಐ.ವಿ ಸೋಂಕಿತ ಗಭಿರ್ಣಿ ಮಹಿಳೆಯರಿಂದ ಮಗುವಿಗೆ ಹಾಗೂ ಹೆಚ್ಚಾಗಿ ಒಬ್ಬರು ಬಳಸುವ ಡ್ರಗ್ಸ್ ಸೂಜಿಯನ್ನು‌ ಮತ್ತೊಬ್ಬರು ಬಳಸುವುದರಿಂದ ಸಾಮಾನ್ಯವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹೆಚ್.ಐ.ವಿ ಹರಡುತ್ತಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ಪುರುಷರಿಂದ ಪುರುಷರಿಗೆ
ಸಲಿಂಗ ಲೈಂಗಿಕ ಸಂಪರ್ಕದಿಂದ ಹೆಚ್.ಐ.ವಿ ಹರಡುತ್ತಿದೆ ಎಂದು ದಿನೇಶ್‌‌ ಗುಂಡೂರಾವ್ ಹೇಳಿದರು.

ಹೆಚ್.ಐ.ವಿ ಹರಡದಂತೆ ತಡೆಗಟ್ಟಲು ಹೆಚ್ಚಾಗಿ ಯುವ ಜನರು ಇರುವ ಹಾಸ್ಟಲ್, ಕಾಲೇಜು ಹಾಗೂ ಲೈಂಗಿಕ ಕಾರ್ಯಕರ್ತೆಯರು ವಾಸಿಸುವ ಸ್ಥಳಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಹೆಚ್.ಐ.ವಿ. ಸೋಂಕು ಒಟ್ಟಿಗೆ ಊಟ ಸೇವಿಸುವುದು, ನೆಗಡಿ ಕೆಮ್ಮಿನಿಂದ ಹರಡುವುದಿಲ್ಲ. ಹೆಚ್.ಐ.ವಿ ಸೋಂಕಿತರಿಗೂ ಸಹ ಸಮಾಜದಲ್ಲಿ ಗೌರವಯುತ ಬದುಕು ನಡೆಸುವ ಹಕ್ಕಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ. ಎನ್ ಮಂಜೇಗೌಡ ಅವರು ಮಾತನಾಡಿ, ಇಂದಿಗೂ ಈ ಖಾಯಿಲೆ ಅಂದರೆ ಎಲ್ಲರಿಗೂ ಭಯ ಇದೆ, ಮೊದಲಿಗೆ ದೇಶದಲ್ಲಿ ಇಷ್ಟೊಂದು ಆಸ್ಪತ್ರೆಗಳು ವೈದ್ಯರು ಇರಲಿಲ್ಲ ಹಾಗಾಗಿ ಸರಿಯಾದ ಪರೀಕ್ಷೆ ಆಗುತ್ತಿರಲಿಲ್ಲ ಆದರೆ ಇಂದು ಆಸ್ಪತ್ರೆಗಳು ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದೆ ಶಸ್ತ್ರ ಚಿಕಿತ್ಸೆಗೆ ಒಳಪಡುವ ಪ್ರತಿಯೊಬ್ಬರನ್ನು ಏಡ್ಸ್ ಟೆಸ್ಟ್ ಮಾಡಿಯೇ ಮುಂದಿನ ಚಿಕಿತ್ಸೆ ಕೊಡುತ್ತಾರೆ ಹಾಗಾಗಿ ಯಾರು ಭಯ ಪಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು.

ಏಡ್ಸ್ ಪ್ರಿವೆನ್ ಷನ್ ಸೊಸೈಟಿಯ ಯೋಜನಾ ನಿರ್ದೇಶಕರಾದ ಪದ್ಮ ಬಸವಂತಪ್ಪ ಅವರು ಮಾತನಾಡಿ,
ಕರ್ನಾಟಕದಲ್ಲಿ ಒಟ್ಟು 442 ಸ್ಟ್ಯಾಂಡ್ – ಅಲೋನ್ ಐಸಿಟಿಸಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 94 ಆ್ಯಂಟಿರೆಟ್ರೋ ವೈರಲ್ ಥೆರಫಿ ( ಎ.ಆರ್.ಟಿ) ಕೇಂದ್ರಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಲವು ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಕೆಲವು ಖಾಸಗಿ ವೈದ್ಯಕೀಯ ವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಹಾಗೂ 290 ಉಪ ಎ ಆರ್ ಟಿ ಕೇಂದ್ರಗಳು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಹಾಗೂ ಸಿ. ಹೆಚ್. ಚಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಐ.ಇ.ಸಿ ಸಾಮಗ್ರಿಗಳ ಬಿಡುಗಡೆ ಮಾಡಲಾಯಿತು. ಏಡ್ಸ್ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವಿವಿಧ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನಿಸಲಾಯಿತು. ರಕ್ತದಾನ ಶಿಬಿರದ ವತಿಯಿಂದ ನೂತನ ವರ್ಷದ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು.

ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಪಿ. ಸಿ ಕುಮಾರಸ್ವಾಮಿ ಅವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಡಾ. ವಸಂತ್ ಕುಮಾರ್ ಕೆ, ಮೂಡದ ಮಾಜಿ ಅಧ್ಯಕ್ಷರಾದ ಹೆಚ್.ವಿ ರಾಜೀವ್, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಕೆ. ಆರ್. ದ್ರಾಕ್ಷಯಿಣಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ. ಮೊಹಮ್ಮದ್ ಶಿರಾಜ್ ಅಹಮ್ಮದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ವಿಭಾಗೀಯ ಸಹ ನಿರ್ದೇಶಕರಾದ ಡಾ. ಮಲ್ಲಿಕಾ ಬಿ. ಮತ್ತಿತರು ಉಪಸ್ಥಿತರಿದ್ದರು.

ಏಡ್ಸ್ ಶೂನ್ಯ ರಾಜ್ಯ ಮಾಡಲು ಎಲ್ಲರೂ ಕೈ ಜೋಡಿಸಿ:ದಿನೇಶ್ ಗುಂಡೂರಾವ್ Read More

ಅಪರಾಧ ಕೃತ್ಯಗಳ ತಡೆಗಟ್ಟಲು ಅಧಿವೇಶನದಲ್ಲಿ ವಿಶೇಷ ಚರ್ಚೆಗೆ ಆಪ್ ಆಗ್ರಹ

ಬೆಂಗಳೂರು: ಕರ್ನಾಟಕ ರಾಜ್ಯದಾದ್ಯಂತ ಅಪರಾಧ ಕೃತ್ಯಗಳ ಪ್ರಮಾಣ ದಿನೇ ದಿನೇ ಹೆಚ್ಚಾಗಿದ್ದು,ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಇವುಗಳನ್ನು ತಡೆಗಟ್ಟಲು ವಿಶೇಷ ಚರ್ಚೆ ಮಾಡಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಈ ಬಗ್ಗೆ ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷ ಹಾಗೂ ನ್ಯಾಯವಾದಿ ಲಕ್ಷ್ಮಿಕಾಂತ ರಾವ್ ಮಾತನಾಡಿ ಪ್ರತಿ ದಿವಸ 10 ಪೋಕ್ಸೋ ಕೇಸುಗಳು ದಾಖಲಾಗುತ್ತಿದ್ದರೆ , ಶಿಕ್ಷೆಯ ಪ್ರಮಾಣ ಅತ್ಯಂತ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.

ರಾಜ್ಯದಾದ್ಯಂತ ಸೈಬರ್ ಅಪರಾಧ ಕೃತ್ಯಗಳು ಕೂಡಾ ಏಗ್ಗಿಲ್ಲದೆ ನಡೆಯುತ್ತಿದ್ದು ಜನಸಾಮಾನ್ಯನ ದುಡಿಮೆಯ ಹಣ ಕಳ್ಳರ ಪಾಲಾಗುತ್ತಿದೆ. ಕೊರಿಯರ್ ಮತ್ತು ಆನ್ ಲೈನ್ ಬಂಡವಾಡ ಹೂಡಿಕೆಯ ಹೆಸರಿನಲ್ಲಿ ನಡೆಯುತ್ತಿರುವ ಸಂಘಟಿತ ಅಪರಾಧಗಳು ದಿನೇ ದಿನೇ ಮುಗಿಲು ಮುಟ್ಟುತ್ತಿದೆ. ಜನಸಾಮಾನ್ಯನ ಹಣವನ್ನು ಮರಳಿ ಪಡೆದುಕೊಳ್ಳಲು ಪೊಲೀಸ್ ಇಲಾಖೆಯಿಂದ ಎಳ್ಳಷ್ಟು ಅನುಕೂಲಗಳು ಸಿಗುತ್ತಿಲ್ಲ. ಸಾಕಷ್ಟು ಪ್ರಭಾವ ಹಾಗೂ ಹಣ ಬಲವಿಲ್ಲದೆ ಯಾವುದೇ ಆರೋಪಿಗಳ ಮೇಲೆ ಎಫ್ಐಆರ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನೇಕ ಅಪರಾಧ ಕೃತ್ಯಗಳಲ್ಲಿ ಪೊಲೀಸರೇ ನೇರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅಂತಹ ಪೊಲೀಸರ ಮೇಲೆ ಯಾವುದೇ ಕ್ರಿಮಿನಲ್ ಮುಖದ್ದಮೆಯನ್ನು ದಾಖಲಿಸದೆ ಕೇವಲ ಇಲಾಖಾ ತನಿಖೆಗೆ ಶಿಫಾರಸು ಮಾಡುತ್ತಿರುವುದರಿಂದ ಪೊಲೀಸ್ ಸಿಬ್ಬಂದಿ ಮತ್ತಷ್ಟು ಅಪರಾಧ ಕೃತ್ಯಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.

ಪ್ರತಿಯೊಂದು ದೂರಿನಲ್ಲೂ ರಾಜಕಾರಣಿಗಳ ಹಾಗೂ ಅವರ ಬಂಟರುಗಳ ಹಸ್ತಕ್ಷೇಪ ಎದ್ದು ಕಾಣುತ್ತಿದೆ. ನಗರದಾದ್ಯಂತ ಕೋಟಿಗಟ್ಟಲೆ ಹಣ ಸುರಿದು ವರ್ಗಾವಣೆ ಮಾಡಿಸಿಕೊಂಡು ಬಂದ ಅಧಿಕಾರಿಗಳಿಂದ ಯಾವುದೇ ಅಪರಾಧ ಕೃತ್ಯಗಳು ಹಾಗೂ ಶಿಕ್ಷೆಗಳು ತಕ್ಕ ಪ್ರಮಾಣದಲ್ಲಿ ಆಗದೆ ಪ್ರತಿಯೊಂದು ಪೊಲೀಸ್ ಠಾಣೆಗಳು ಸಹ ಪ್ರತಿ ದಿವಸ ಲಕ್ಷಾಂತರ ರೂಪಾಯಿಗಳನ್ನು ದುಡಿಯುವ ಎಟಿಎಂ ಗಳಾಗಿ ಪರಿವರ್ತನೆ ಆಗುತ್ತಿದೆ ಎಂದು ಕಿಡಿಕಾರಿದರು.

ಬೆಂಗಳೂರು ನಗರದಲ್ಲಿ ಸಂಚಾರಿ ಪೊಲೀಸರು ರಸ್ತೆಯಲ್ಲಿ ಕಾಣಿಸಿಕೊಳ್ಳದೆ ತಮ್ಮ ವೃತ್ತಿಪರತೆಯಲ್ಲಿ ವಿಫಲರಾಗಿರುವ ಕಾರಣದಿಂದ ಅತಿಯಾದ ಸಂಚಾರ ಸಮಸ್ಯೆ ಎದುರಾಗುತ್ತಿದೆ.

ಹಗಲಲ್ಲೇ ಬ್ಯಾಂಕ್ ರಾಬರಿಗಳು, ದೊಂಬಿ ಗಲಾಟೆಗಳು, ಗಣೇಶ ವಿಸರ್ಜನೆ ಹೆಸರಿನಲ್ಲಿ ಮೂಲಭೂತವಾದಿಗಳ ಕೋಮು ಪ್ರಚೋದಿತ ವ್ಯವಸ್ಥಿತ ಶಾಂತಿಭಂಗ ಕೃತ್ಯಗಳು ನಡೆಯುತ್ತಿದ್ದು, ತಹಬದಿಗೆ ತರಲು ಗೃಹ ಇಲಾಖೆ ಸಂಪೂರ್ಣ ವಿಫಲಗೊಂಡಿದ್ದು ಗೃಹ ಸಚಿವರು ಪ್ರತಿಯೊಂದು ಹಂತದಲ್ಲಿಯೂ ವೈಫಲ್ಯತೆಯನ್ನು ಕಾಣುತ್ತಿದ್ದಾರೆ. ಈ ಬಗ್ಗೆ ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಸಬೇಕು ಎಂದು ಲಕ್ಷ್ಮಿಕಾಂತ ರಾವ್ ಆಗ್ರಹಿಸಿದರು.

ಅಪರಾಧ ಕೃತ್ಯಗಳ ತಡೆಗಟ್ಟಲು ಅಧಿವೇಶನದಲ್ಲಿ ವಿಶೇಷ ಚರ್ಚೆಗೆ ಆಪ್ ಆಗ್ರಹ Read More

ಖ್ಯಾತ ಹಿರಿಯ ಹಾಸ್ಯ ನಟ ಉಮೇಶ್ ವಿಧಿವಶ

ಬೆಂಗಳೂರು: ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ಹಾಸ್ಯ ನಟ ಎಂ.ಎಸ್.ಉಮೇಶ್ ಅವರು ವಿಧಿವಶರಾಗಿದ್ದಾರೆ.

ಕಳೆದ ಎರಡು ತಿಂಗಳಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ‌ಕಾಯಿಲೆಗೆ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಸುಮಾರು 8.30 ಕ್ಕೆ ಕಿದ್ವಾಯಿ ಆಸ್ಪತ್ರೆಯಲ್ಲೇ ಉಮೇಶ್ ಕೊನೆಯುಸಿರೆಳೆದಿದ್ದಾರೆ.

ಮಧ್ಯಾಹ್ನ 2 ಗಂಟೆವರೆಗೂ ಉಮೇಶ್ ಅವರ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಇಟ್ಟು ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಎಂ. ಎಸ್. ಉಮೇಶ್ ಮೈಸೂರಿನಲ್ಲಿ ಏಪ್ರಿಲ್ 22, 1945ರಲ್ಲಿ ಜನಿಸಿದವರು.ಚಿಕ್ಕವಯಸಿನಿಂದಲೇ ಬಣ್ಣ ಹಚ್ಚಿದ್ದರು. ರಂಗಭೂಮಿ ಮತ್ತು ಚಲನಚಿತ್ರ ಎರಡರಲ್ಲೂ 1948ರಿಂದಲೂ ನಟಿಸುತ್ತಿದ್ದರು.

ಮಕ್ಕಳ ರಾಜ್ಯ, ಭಾಗ್ಯವಂತರು, ಕಿಲಾಡಿ ಜೋಡಿ, ಗುರು ಶಿಷ್ಯರು, ಭೂಮಿಗೆ ಬಂದ ಭಗವಂತ, ಹಾಲು ಜೇನು, ಕಾಮನಬಿಲ್ಲು, ಅಪೂರ್ವ ಸಂಗಮ, ಶೃತಿ ಸೇರಿದಾಗ,ಮೇಘ ಮಂದಾರ, ಆಕಸ್ಮಿಕ, ಸರ್ವರ್ ಸೋಮಣ್ಣ, ಮೇಘಮಾಲೆ, ನನ್ನಾಸೆಯ ಹೂವೆ, ಜಾಕಿ, ಮುಸ್ಸಂಜೆ ಮಾತು ಸೇರಿದಂತೆ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಅಯ್ಯೋ ಇವ್ರೂ ನನ್ನ ಅಪಾರ್ಥ ಮಾಡ್ಕೊಂಬಿಟ್ರಲ್ಲ. ನಾನೇನೂ ಬೇಕೂ ಅಂತ ಹೀಗ್ ಮಾಡ್ಲಿಲ್ಲ ಈ ಡೈಲಾಗ್ ಗಳು ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿವೆ.ಈ ಡೈಲಾಗ್ ಗಳನ್ನು ಬಹಳಷ್ಟು ಮಂದಿ ಈಗಲೂ ಸ್ಮರಿಸುತ್ತಾರೆ.

ಚಿತ್ರರಂಗದ ಗಣ್ಯರು,ನಟ,ನಟಿಯರು,ಕಲಾವುದರು ಅಂತಿಮ ನಮನ ಸಲ್ಲಿಸಿದರು.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು,ರಾಜಕೀಯ ನಾಯಕರು ಉಮೇಶ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.ಅವರ ಆತ್ಮಕ್ಕೆ‌ ಶಾಂತಿ ಕೋರಿದ್ದಾರೆ.

ಖ್ಯಾತ ಹಿರಿಯ ಹಾಸ್ಯ ನಟ ಉಮೇಶ್ ವಿಧಿವಶ Read More

ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ ವಿಶ್ವನಾಥ್

ಮೈಸೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣ. ತಮ್ಮ ಬೆಂಬಲಿಗ ಶಾಸಕರನ್ನು ಬಿಜೆಪಿಗೆ ಕಳಿಸಿದ್ದು ಇದೇ ಸಿದ್ದರಾಮಯ್ಯ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಪರಿಣಾಮ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಕಾಂಗ್ರೆಸ್‌ನಿಂದ ೧೪ ಮಂದಿ ಶಾಸಕರನ್ನು ಕಳುಹಿಸಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರ ಅವರನ್ನು ಗೆಲ್ಲಿಸುವ ಸಲುವಾಗಿ ಶಿಕಾರಿಪುರದಲ್ಲಿ ಕುರುಬ ಸಮುದಾಯದ ನಾಯಕನಿಗೆ ಟಿಕೆಟ್ ತಪ್ಪಿಸಿದರು ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆಯಲ್ಲಿ ನಾನು ಸೋಲಲು ಕೂಡ ಸಿದ್ದರಾಮಯ್ಯ ಕಾರಣ. ಪ್ರತಾಪ್‌ಸಿಂಹಗೆ ನೆರವು ನೀಡಿ ನನ್ನ ಸೋಲಿಗೆ ಕಾರಣರಾದರು ಎಂದು ಗಂಭೀರ ಆರೋಪ ಮಾಡಿದರು.

೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರ ಮೇಶ್ವರ್ ಸೋಲಿಗೆ ಕಾರಣ ಯಾರು? ಪರಮೇಶ್ವರ್ ಸಿಎಂ ಆಗುವುದನ್ನು ತಪ್ಪಿಸಲು ಅವರನ್ನೂ ಸೋಲಿಸಿದರು.

ವರುಣ ಕ್ಷೇತ್ರದಲ್ಲಿ ಸ್ಪರ್ದಿಸಿದಾಗ ಸುತ್ತೂರು ಶ್ರೀಗಳ ಕಾಲು ಹಿಡಿದು ಕಾ.ಪು.ಸಿದ್ದಲಿಂಗ ಸ್ವಾಮಿಯನ್ನು ತಣ್ಣಗಾಗಿಸಿದರು. ಚಾಮುಂಡೇಶ್ವರಿ ಬೈ ಎಲೆಕ್ಷನ್‌ನಲ್ಲಿ ಉಡುಪಿ ಮಠದ ಪೀಠಾಧಿಪತಿಗಳ ಕಾಲು ಹಿಡಿದರು. ಸಿದ್ದರಾಮಯ್ಯ ಒಳಗೊಂದು ಹೊರಗೊಂದು ಎಂಬಂತೆ ಡಬಲ್ ಸ್ಟ್ಯಾಂಡ್ ಹೊಂದಿದ್ದಾರೆ ಎಂದು ಎಚ್.ವಿಶ್ವನಾಥ್ ವಾಚಾಮಗೋಚರವಾಗಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ ವಿಶ್ವನಾಥ್ Read More

ಸಿಎಂ, ಡಿಸಿಎಂ ಕುರ್ಚಿ ಕಿತ್ತಾಟದಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆ-ಯದುವೀರ್

ಮಡಿಕೇರಿ: ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಅವರ ನಡುವಿನ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟದಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದ ಜನತೆ ಅವರನ್ನ ಆಡಳಿತ ಪಕ್ಷವಾಗಿ ಆಯ್ಕೆ ಮಾಡಿದ್ದಾರೆ. ಜನರ ಪರವಾಗಿ ಆಡಳಿತ ನಡೆಸುವುದು ಅವರ ಆದ್ಯ ಕರ್ತವ್ಯವಾಗಿದೆ. ಅವರ ಪಕ್ಷದಲ್ಲಿ ಆಂತರಿಕವಾಗಿ ಏನು ನಡೆಯುತ್ತಿದೆಯೋ ಅದು ಅವರಿಗೆ ಬಿಟ್ಡದ್ದು, ಆದರೆ ರಾಜ್ಯದ ಜನರ ಹಿತಕ್ಕಾಗಿ ಕೆಲಸ ಮಾಡುವುದು ಮೊದಲ ಕರ್ತವ್ಯ ಅದನ್ನ ಮಾಡಲಿ ಎಂದು ಯದುವೀರ್ ತಿಳಿಸಿದರು.

ಸಿಎಂ, ಡಿಸಿಎಂ ಕುರ್ಚಿ ಕಿತ್ತಾಟದಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆ-ಯದುವೀರ್ Read More

ಜಾನಪದ ಒಂದು ಅಲೌಕಿಕ ಸಂವಿಧಾನ-ಡಾ ಜಾನಪದ ಬಾಲಾಜಿ

ಬೆಂಗಳೂರು: ಜಾನಪದ ಒಂದು ಅಲೌಕಿಕ ಸಂವಿಧಾನ ಇದ್ದಂತೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಬಾಲಾಜಿ ಎಸ್ ತಿಳಿಸಿದರು.

ಬೆಂಗಳೂರಿನ ಪದ್ಮನಾಭನಗರ ಸಮುದಾಯ ಭವನದಲ್ಲಿ ಕನ್ನಡ ಜಾನಪದ ಪರಿಷತ್l ಪದ್ಮನಾಭನಗರ ವಿಧಾನ ಸಭಾ ಕ್ಷೇತ್ರ ಮಹಿಳಾ ಘಟಕದ ಉದ್ಘಾಟನೆ ಹಾಗೂ ಪದ ಪ್ರದಾನ ನೆರವೇರಿಸಿ ಅವರು ಮಾತನಾಡಿದರು.

ಜಾನಪದ ಮಹಿಳಾ ಪ್ರಧಾನವಾದದ್ದು, ಇದು ನಮ್ಮ ಪೂರ್ವಜರಿಂದ ಬಂದ ಬಳುವಳಿ, ಅದನ್ನು ಮುಂದಿನ ಪೀಳಿಗೆಗೆ ಕೊಂಡಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಜಾನಪದ ನಮ್ಮ ಸಂಸ್ಕೃತಿಯ ಮೂಲ ಬೇರು, ಇದನ್ನು ತರಬೇತಿ ಹಾಗೂ ದಾಖಲೀಕರಣದ ಮೂಲಕ ಉಳಿಸಿ ಬೆಳೆಸುವ ಕಾರ್ಯ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಮೂಲಕ ಆಗುತ್ತಿದೆ, ಕಲಾವಿದರ ಮಾಶಾಸನ ಹೆಚ್ಚಿಸಬೇಕು ಎಂದು ಸರ್ಕಾರವನ್ನು ಡಾ.ಜನಪದ ಎಸ್ ಬಾಲಾಜಿ ಅಗ್ರಹಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಡಾ. ರಿಯಾಜ್ ಪಾಷಾ ಮಾತನಾಡಿ ಬೆಂಗಳೂರು ಗೋವಿಂದರಾಜ ನಗರ ಮಹಿಳಾ ಘಟಕದ ವತಿಯಿಂದ ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ ಪ್ರಥಮ ಮಹಿಳಾ ಜಾನಪದ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಕೇಂದ್ರ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರ ಮಹಿಳಾ ಘಟಕಗಳನ್ನು ಶೀಘ್ರದಲ್ಲಿ ಸ್ಥಾಪಿಸಲಾಗುವುದು ಹಾಗೂ ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಜನಪದ ಕಲಾ ಪ್ರಕಾರಗಳ ಕುರಿತು ತರಬೇತಿ ನೀಡಲಾಗುವುದು ಎಂದು ಹೇಳಿದರು.

ಪದಾಪ್ರದಾನ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷೆ ನಾಗರತ್ನ ಹಿರೇಮಠ್, ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿ ಭರಾಟೆಯಿಂದ ನಮ್ಮ ಸಂಸ್ಕೃತಿ ಸಂಸ್ಕಾರಗಳು ಕುಸಿಯುತ್ತಿದೆ, ಇದನ್ನು ತಿಳಿಯುವ ಕೆಲಸ ಮಹಿಳಾ ಘಟಕದಿಂದ ಆಗಲಿ ಎಂದು ತಿಳಿಸಿದರು.

ಮಾರ್ಚ್ ತಿಂಗಳ ಒಳಗಾಗಿ
ಪದ್ಮನಾಭನಗರದ ಎಲ್ಲಾ ವಾರ್ಡ್ ಘಟಕಗಳನ್ನು ರಚಿಸಲಾಗುವುದು ಎಂದು ಹೇಳಿದರು.

ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ ಅಂಬಿಕಾ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಉದ್ದೇಶ ಹಾಗೂ ಮುಂದಿನ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ಪದಾಧಿಕಾರಿಗಳಿಗೆ ರಾಜ್ಯ ಹಾಗೂ ಜಿಲ್ಲಾ ಅಧ್ಯಕ್ಷರು ಪದ ಪ್ರದಾನ ಮಾಡಿದರು.

ಮೂಲ ಜನಪದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕಲಾವಿದರು, ಸಾಹಿತಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜಾನಪದ ಒಂದು ಅಲೌಕಿಕ ಸಂವಿಧಾನ-ಡಾ ಜಾನಪದ ಬಾಲಾಜಿ Read More