ಮಾಜಿ ಸಚಿವ, ದಾವಣಗೆರೆ‌ ಧಣಿ ಶಾಮನೂರು ಶಿವಶಂಕರಪ್ಪ ವಿಧಿವಶ

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭಾ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ವಿಧಿವಶರಾಗಿದ್ದಾರೆ.

ಅವರಿಗೆ‌ 95 ವರ್ಷಗಳಾಗಿತ್ತು,ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಭಾನುವಾರ ಸುಮಾರು 6.45 ರ ಸಮಯದಲ್ಲಿ ವಿಧಿವಶರಾಗಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರು ಭಾರತದಲ್ಲೇ ಹಿರಿಯ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿ ಶಿವಶಂಕರಪ್ಪ ಅವರ ಆರೋಗ್ಯ ವಿಚಾರಿಸಿದ್ದರು.

ಶಾಮನೂರ್ ಶಿವಶಂಕರಪ್ಪ ಅವರು 1931 ಜೂನ್‌ 16ರಂದು ಶಾಮನೂರು ಕಲ್ಲಪ್ಪ – ಶಾಮನೂರು ಸಾವಿತ್ರಮ್ಮ ದಂಪತಿ ಪುತ್ರನಾಗಿ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದರು.
ಅವರು ಪತ್ನಿ ಪಾರ್ವತಮ್ಮ, ನಾಲ್ವರು ಪುತ್ರಿಯರಾ ಡಾ. ಮಂಜುಳಾ ಶಿವಶಂಕರ್, ಸುಧಾ ಪಾಟೀಲ್, ಡಾ. ಶೈಲಜಾ ಭಟ್ಟಾಚಾರ್ಯ, ಮೀನಾ ಡಾ. ಶರಣ್‌ ಪಾಟೀಲ್ ಹಾಗೂ ಮೂವರು ಗಂಡು ಮಕ್ಕಳಾದ ಎಸ್.ಎಸ್ ಬಕ್ಕೇಶ್, ಎಸ್.ಎಸ್ ಗಣೇಶ್, ಎಸ್.ಎಸ್ ಮಲ್ಲಿಕಾರ್ಜುನ್ ಹಾಗೂ ಬಂಧು ಬಳಗ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಶಾಮನೂರು ಶಿವಶಂಕರಪ್ಪನವರು 1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. 1971 ರಿಂದ 1973ರ ವರೆಗೆ ಅವಿಭಜಿತ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1980ರಲ್ಲಿ ಲೋಕಸಭಾ ಚುನಾವಣೆಗೆ ಅರಸು ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಸ್ಪರ್ಧಿಸಿ ಇಂದಿರಾ ಗಾಂಧಿ ಕಾಂಗ್ರೆಸ್ ಅಭ್ಯರ್ಥಿ ಟಿ.ವಿ ಚಂದ್ರಶೇಖರಪ್ಪರ ವಿರುದ್ಧ ಪರಾಭವಗೊಂಡರು.

ಇದಾದ ಬಳಿಕ 1994ರಲ್ಲಿ ನಡೆದ 10ನೇ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಖಾಡಕ್ಕಿಳಿದ ಅವರು ಬಿಜೆಪಿ ಅಭ್ಯರ್ಥಿ ಕೆ.ಬಿ ಶಂಕರನಾರಾಯಣರನ್ನ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

1997 ರಲ್ಲಿ ಲೋಕಸಭಾ ಚುನಾವಣೆಗೆ ಸ್ಫರ್ಧಿಸಿದ ಶಿವಶಂಕರಪ್ಪ, ಬಿಜೆಪಿ ಅಭ್ಯರ್ಥಿ ಜಿ.ಮಲ್ಲಿಕಾರ್ಜುನಪ್ಪ ಅವರನ್ನ ಸೋಲಿಸಿ ಸಂಸದರಾದರು. 2004 ರಲ್ಲಿ ಶಿವಶಂಕರಪ್ಪ 2ನೇ ಬಾರಿ ಶಾಸಕರಾಗಿ ಆಯ್ಕೆಯಾದರು. ಆ ನಂತರ 2008 ರಲ್ಲಿ 3ನೇ ಬಾರಿಗೆ. 2013 ರಲ್ಲಿ 4ನೇ ಬಾರಿಗೆ, 2018ರಲ್ಲಿ 5ನೇ ಬಾರಿಗೆ ಹಾಗೂ 2023ರಲ್ಲಿ 6ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಶಾಮನೂರು ಅವರು 2013 ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಸಂಪುಟದಲ್ಲಿ ಎರಡೂವರೆ ವರ್ಷ ತೋಟಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಸಂತಾಪ: ಮುಖ್ಯ ಮಂತ್ರಿ ಸಿದ್ದ ರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್,ಮಾಜಿ ಮುಖ್ಯ ಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್,ಬಸವರಾಜ ಬೊಮ್ಮಾಯಿ,ಪ್ರತಿಪಕ್ಷ ನಾಯಕ ಆರ್.ಅಶೋಕ,ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ ಸೇರಿದಂತೆ ರಾಜಕೀಯ ನಾಯಕರು ಪಕ್ಷಾತೀತವಾಗಿ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ, ದಾವಣಗೆರೆ‌ ಧಣಿ ಶಾಮನೂರು ಶಿವಶಂಕರಪ್ಪ ವಿಧಿವಶ Read More

ಎಚ್ ಕೆ ರಾಮು ಜನುಮ ದಿನ:ವಿಶೇಷ ಮಕ್ಕಳಿಗೆ ಹಣ್ಣು ವಿತರಣೆ

ಮೈಸೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಕಾವೇರಿ ರಕ್ಷಣಾ ಸಮಿತಿ ಬೆಂಗಳೂರು ಅಧ್ಯಕ್ಷರಾದ
ಎಚ್ ಕೆ ರಾಮು ಅವರ ಜನುಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮೈಸೂರಿನ ಶ್ರೀ ರಾಪುರ ದಲ್ಲಿರುವ ಶ್ರೀ ಬಸವೇಶ್ವರ ನವಚೇತನ ವಿಶೇಷ ಮಕ್ಕಳ ಶಾಲೆಯಲ್ಲಿ ದೇವರ ಮಕ್ಕಳ ಸನ್ನಿಧಿಯಲ್ಲಿ ಶನಿವಾರ ಎಚ್ ಕೆ ರಾಮು ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಮಕ್ಕಳಿಗೆ ಹಣ್ಣು ಹಂಪಲು ನೀಡಿ ಆ ಮಕ್ಕಳಿಗೆ ಭಗವಂತ ಒಳ್ಳೆಯದನ್ನು ಮಾಡಲಿ ಎಂದು ಹಾರಿಸಲಾಯಿತು.

ಮಕ್ಕಳಿಗೆ ಹಿತನುಡಿಯನ್ನು ಹೇಳಿ ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ಪ್ರದೀಪ್ ಕೃಷ್ಣೆಗೌಡ, ಮಹೇಶ್, ದತ್ತ, ಅನಿಲ್ ಕುಮಾರ್, ಲಕ್ಷಿಕಾಂತ್, ಆನಂದ ಡಿ, ಅರುಣ್ ಕುಮಾರ್, ರಾಮಚಂದ್ರ, ಶ್ರೀ ನವಚೇತನ ಬಸವೇಶ್ವರ ವಿಶೇಷ ಶಾಲೆಯ ಅಧ್ಯಕ್ಷ ಮರಿಗೌಡರು ಮುಂತಾದವರು ಹಾಜರಿದ್ದರು .

ಎಚ್ ಕೆ ರಾಮು ಜನುಮ ದಿನ:ವಿಶೇಷ ಮಕ್ಕಳಿಗೆ ಹಣ್ಣು ವಿತರಣೆ Read More

ಬಿಬಿಎಂಪಿಗೆ ಚುನಾವಣೆ ನಡೆಸದೆ ನಾಮನಿರ್ದೇಶನ-ಆಪ್ ಖಂಡನೆ

ಬೆಂಗಳೂರು: ಬೆಂಗಳೂರು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸದೆ ನಾಮನಿರ್ದೇಶನ ಮಾಡುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಮ್ ಆದ್ಮಿ ಪಾರ್ಟಿ ಕಿಡಿಕಾರಿದೆ.

ಬೆಳಗಾವಿ ವಿಧಾನಸಭೆಯಲ್ಲಿ ಮಂಡಿಸಿರುವ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ 2025 ರಲ್ಲಿ ಸರ್ಕಾರಕ್ಕೆ ಬೆಂಗಳೂರಿನ 5 ನಗರ ಪಾಲಿಕೆಗಳಿಗೆ ನಾಮ ನಿರ್ದೇಶನ ಮಾಡುವ ಅಧಿಕಾರ ಪಡೆದುಕೊಳ್ಳಲು ಹೊರಟಿರುವುದು ನಿಜಕ್ಕೂ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಕಟುವಾಗಿ ಖಂಡಿಸಿದರು.

ಕಳೆದ ಐದು ವರ್ಷಗಳಿಂದ ಚುನಾವಣೆಗಳನ್ನು ನಡೆಸಲು ಹೆದರಿ ಬೆಂಗಳೂರಿನ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಈಗಾಗಲೇ ನುಂಗಿ ನೀರು ಕುಡಿದಿದ್ದಾರೆ. ಇಂತಹ ಭ್ರಷ್ಟ ವ್ಯವಸ್ಥೆಯನ್ನು ಮತ್ತಷ್ಟು ಅವಧಿಯ ಕಾಲ ಮುಂದುವರಿಸಲು ಈ ರೀತಿಯ ಕರಾಳ ಮಸೂದೆಯನ್ನು ಮಂಡಿಸುತ್ತಿದ್ದಾರೆ. ಇದು ಬೆಂಗಳೂರಿಗರಿಗೆ ಮಾಡುತ್ತಿರುವ ಅನ್ಯಾಯ ಎಂದು ಹೇಳಿದರು.
ಬೆಂಗಳೂರಿನ ಜನತೆಗೆ ಈ ರಾಷ್ಟ್ರದ ಸಂವಿಧಾನ ಕೊಡ ಮಾಡಿರುವ ಹಕ್ಕಿನಂತೆ ಚುನಾವಣೆಯನ್ನು ನಡೆಸಿ ತಮ್ಮ ತಮ್ಮ ನಗರ ಪಾಲಿಕೆ ಸದಸ್ಯರುಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲ ಅವಕಾಶವನ್ನು ತಪ್ಪಿಸುವುದೇ ಇವರ ಉದ್ದೇಶವಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರವು ಈ ಮೂಲಕ ಕಾನೂನನ್ನೇ ತಿರುಚಲು ಹೊರಟಿರುವುದನ್ನು ಬೆಂಗಳೂರಿನ ಪ್ರತಿ ಮನೆಮನೆಗಳಿಗೆ ತಿಳಿಸಿ ಸರ್ಕಾರದ ವಿರುದ್ಧ ಆಂದೋಲನವನ್ನು ರೂಪಿಸುತ್ತೇವೆ ಎಂದು ಸೀತಾರಾಮ್ ಗುಂಡಪ್ಪ ತಿಳಿಸಿದರು.

ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕರ್ತರುಗಳನ್ನು ಜೀತದಾಳುಗಳಂತೆ ದುಡಿಸಿಕೊಂಡು ಪಕ್ಷದ ವಿರುದ್ಧ ತಿರುಗಿ ಬೀಳುವ ಸಮಯದಲ್ಲಿ ಇವರೆಲ್ಲರಿಗೂ ಬೆಂಗಳೂರಿನ ಎಲ್ಲಾ ಐದು ಪಾಲಿಕೆಗಳಲ್ಲಿಯ ಆಡಳಿತದಲ್ಲಿ ಮೂಗು ತೂರಿಸಿ, ಭ್ರಷ್ಟ ದುಷ್ಟ ಕೂಟಗಳನ್ನು ತಯಾರು ಮಾಡುವ ಹುನ್ನಾರವೇ ಈ ಮಸೂದೆಯ ಮೂಲ ಉದ್ದೇಶವಾಗಿದೆ. ಆಮ್ ಆದ್ಮಿ ಪಕ್ಷವು ಯಾವುದೇ ಕಾರಣಕ್ಕೂ ಇದನ್ನು ಸಹಿಸುವುದಿಲ್ಲ. ಬೆಂಗಳೂರಿಗರನ್ನು ಒಟ್ಟುಗೂಡಿಸಿ ಈ ಕರಾಳ ಮಸೂದೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ಸೀತಾರಾಮ್ ಗುಂಡಪ್ಪ ಎಚ್ಚರಿಸಿದರು.

ಬಿಬಿಎಂಪಿಗೆ ಚುನಾವಣೆ ನಡೆಸದೆ ನಾಮನಿರ್ದೇಶನ-ಆಪ್ ಖಂಡನೆ Read More

ಸೆಶೆನ್ ಮುಗಿದ ನಂತರ ಡಿಕೆಶಿ ಮುಖ್ಯ ಮಂತ್ರಿ: ಇಕ್ಬಾಲ್‌ ಹುಸೇನ್‌ ಬಾಂಬ್

ಬೆಳಗಾವಿ: ಚಳಿಗಾಲದ ವಿಧಾನ ಮಂಡಲ ಅಧಿವೇಶನ ಮುಗಿದ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ರಾಮನಗರದ ಕಾಂಗ್ರೆಸ್‌ ಶಾಸಕ ಇಕ್ಬಾಲ್‌ ಹುಸೇನ್‌ ಬಾಂಬ್ ಸಿಡಿಸಿದ್ದು,

ಸಂಚಲನವನ್ನೇ ಸೃಷ್ಟಿಸಿದೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ನಾನೇ ಶುಭ ಸುದ್ದಿ ನೀಡಿದ್ದೇನೆ. ಚಳಿಗಾಲದ ಅಧಿವೇಶನ ಮುಗಿಯುತ್ತಿದ್ದಂತೆಯೇ ರಾಜ್ಯ ರಾಜ್ಯಕೀಯದಲ್ಲಿ ದೊಡ್ಡ ಬದಲಾವಣೆ ಯಾಗಲಿದೆ ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾಗುದು ಖಚಿತ!,ಈ ಬಗ್ಗೆ ಹೈಕಮಾಂಡ್ ದೊಡ್ಡ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ಭವಿಷ್ಯ ನುಡಿದರು.

ಡಿ.ಕೆ.ಶಿವಕುಮಾರ್ ಅವರು ಕಳೆದ ಹಲವು ದಶಕಗಳಿಂದ ಪಕ್ಷವನ್ನು ಸಂಘಟಿಸಿದ್ದಾರೆ. ಈಗ ಅವರಿಗೊಂದು ಅವಕಾಶ ಬಂದಿದೆ, ಹಾಗಾಗಿ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಇಕ್ಬಾಲ್‌ ಹುಸೇನ್‌ ಸ್ಪಷ್ಟವಾಗಿ ನುಡಿದರು.

ಇಕ್ಬಾಲ್‌ ಹುಸೇನ್‌ ಅವರ ಈ ಹೇಳಿಕೆ ನಿಜಕ್ಕೂ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.ಜತೆಗೆ ಚರ್ಚೆಗೆ‌ ಗ್ರಾಸ ಒದಗಿಸಿದೆ.

ಸೆಶೆನ್ ಮುಗಿದ ನಂತರ ಡಿಕೆಶಿ ಮುಖ್ಯ ಮಂತ್ರಿ: ಇಕ್ಬಾಲ್‌ ಹುಸೇನ್‌ ಬಾಂಬ್ Read More

ಪ್ರಧಾನಿ ವಿರುದ್ಧ ಅವಹೇಳನಕಾರಿ ವೀಡಿಯೋ: ನಾಳೆಯಿಂದ ಬಿಜೆಪಿ ಪ್ರತಿಭಟನೆ

ಮೈಸೂರು: ದೇಶದ ಪ್ರಧಾನಿಯವರನ್ನು ನಿಂದಿಸಿರುವವರಿಗೆ ಕಠಿಣ ಶಿಕ್ಷೆ ಜಾರಿಯಾಗಬೇಕೆಂದು ಆಗ್ರಹಿಸಿ ನಾಳೆಯಿಂದ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಸಂಸದ ಯದುವೀರ್ ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುವ ವೀಡಿಯೋಗಳನ್ನು ಹರಿಯಬಿಟ್ಟಿರುವ ಫಾಹಾದ್‌, ಬಾಸಿಲ್‌, ಸಮೀರ್‌ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟು ಮಾತ್ರ ಸಾಲದು ಇವರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಯದುವೀರ್‌ ಆಗ್ರಹಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಯದುವೀರ್, ಇಂಥವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ತಕ್ಕ ಪಾಠ ಕಲಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗ ಬಂಧಿತರಾಗಿರುವವರಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.

ಈ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ಜಾರಿಯಾದರೆ ಮುಂದೆ ಇಂತಹ ಅಪರಾಧ ಎಸಗಲು ಭೀತಿ ಉಂಟಾಗಬೇಕು. ಈ ಸಂಬಂಧ ಪೊಲೀಸ್‌ ಅಧಿಕಾರಿಗಳೊಂದಿಗೆ ಈಗಾಗಲೇ ಮಾತನಾಡಿದ್ದು, ಕಠಿಣ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಯದುವೀರ್ ಹೇಳಿದ್ದಾರೆ.

ಪ್ರಧಾನಿ ವಿರುದ್ಧ ಅವಹೇಳನಕಾರಿ ವೀಡಿಯೋ: ನಾಳೆಯಿಂದ ಬಿಜೆಪಿ ಪ್ರತಿಭಟನೆ Read More

ಪ್ರತಿಭಟನೆ ವೇಳೆ ರೈತ ತೀವ್ರ ಅಸ್ವಸ್ಥ

ಬೆಳಗಾವಿ: ಚಳಿಗಾಲದ ಅಧಿವೇಶನ ಮೂರನೇಯ ದಿನ ಕೂಡಾ ವಿವಿಧ ಸಂಘಟನೆಗಳ ಪ್ರತಿಭಟನೆ ತೀವ್ರಗೊಂಡಿದ್ದು,ಈ ವೇಳೆ ರೈತರೊಬ್ಬರು ತೀವ್ರವಾಗಿ ‌ಅಸ್ವಸ್ಥಗೊಂಡ ಪ್ರಸಂಗ ನಡೆದಿದೆ.

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಕಾವು ಜೋರಾಗಿದೆ,
ಈ ಸಂದರ್ಭದಲ್ಲಿ ರಾಯಬಾಗ ತಾಲೂಕಿನ ಕುಡಚಿ ಗ್ರಾಮದ ರೈತ ಯಲ್ಲಪ್ಪಾ ಹಿರೇಕುರಬರ (35) ಅವರು ಅಸ್ವಸ್ಥರಾಗಿದ್ದಾರೆ.

ಬುಧವಾರ ಸುವರ್ಣಸೌಧದ ಪಕ್ಕದಲ್ಲಿರುವ ಪ್ರತಿಭಟನಾ ಸ್ಥಳದಲ್ಲಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾಗ ಭಾರೀ ಒತ್ತಡ, ಜನಸಮೂಹ ಹಾಗೂ ದೀರ್ಘ ಕಾಲದಿಂದ ಕೂಗಾಟ, ಘೋಷಣೆಗಳ ತೀವ್ರಗೊಂಡಿತು,ಆಗ ರೈತ ಯಲ್ಲಪ್ಪಾ ಹಿರೇಕುರಬರ ತಲೆ ಸುತ್ತಿ ನೆಲಕ್ಕೆ ಬಿದ್ದರು.

ತಕ್ಷಣ ಇತರೆ ರೈತರು, ಸಂಘಟಕರು ಹಾಗೂ ಪೊಲೀಸರು ಶಿಶ್ರೂಷೆ ಮಾಡಿದರು.
ಸ್ಥಳಕ್ಕೆ ವೈದ್ಯಕೀಯ ಸಿಬ್ಬಂದಿ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು.
ಇದರಿಂದ ಆತಂಕ ಹಾಗೂ ಗೊಂದಲ ವಾತಾವರಣ ನಿರ್ಮಾಣಕೊಂಡಿತ್ತು, ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು.

ಯಲ್ಲಪ್ಪಾ ಹಿರೇಕುರಬರ ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಆಸ್ಪತ್ರೆಗೆ ಮೂಲಗಳು ತಿಳಿಸಿವೆ.

ರೈತರ ಬೇಡಿಕೆಗಳನ್ನು ತ್ವರಿತವಾಗಿ ಮೌಲ್ಯಮಾಪನ ಮಾಡಿ ಈಡೇರಿಸಲು ಸರಕಾರ ಕೂಡಲೇ ಕ್ರಮ ಕೈಗೊಳಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.

ಪ್ರತಿಭಟನೆ ವೇಳೆ ರೈತ ತೀವ್ರ ಅಸ್ವಸ್ಥ Read More

ಡಿ.ಕೆ.ಶಿ ಭೇಟಿಯಾದ ಖ್ಯಾತ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್

ಬೆಳಗಾವಿ: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಖ್ಯಾತ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾದರು.

ವೆಂಕಟೇಶ್ ಪ್ರಸಾದ್ ಅವರು ಡಿ.ಕೆ.ಶಿವಕುಮಾರ್ ಅವರನ್ನು
ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ಬುಧವಾರ ಭೇಟಿಯಾಗಿ ಸಮಾಲೋಚನೆ ನಡೆಸಿದರು.

ಈ ವೇಳೆ ಕಾರ್ಯದರ್ಶಿ ಸಂತೋಷ್ ಮೆನನ್, ಉಪಾಧ್ಯಕ್ಷ ಸುಜಿತ್ ಸೋಮಸುಂದರ್, ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಮತ್ತಿತರರು ವೆಂಕಟೇಶ್ ಪ್ರಸಾದ್ ಗೆ ಸಾಥ್ ನೀಡಿದರು.

ಡಿ.ಕೆ.ಶಿ ಭೇಟಿಯಾದ ಖ್ಯಾತ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ Read More

ಸುವರ್ಣಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಪೊಲೀಸ್ ವಶಕ್ಕೆ

ಬೆಳಗಾವಿ: ರಾಜ್ಯ ಸರಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಬೆಳಗಾವಿಯಲ್ಲಿ ಬಿಜೆಪಿಗರು ಬೃಹತ್ ಪ್ರತಿಭಟನೆ ನಡೆಸಿದರು.
ಮೊದಲಿಗೆ ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಬೃಹತ್ ಸಮಾವೇಶ ನಡೆಸಿದ ಬಿಜೆಪಿ ನಾಯಕರು ನಂತರ ಬೃಹತ್ ರ‌್ಯಾಲಿ ಮೂಲಕ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಬಿಗಿ ಪೊಲೀಸ್ ಬಂದೊಬಸ್ತ್ ಮಾಡಿರುವುದರಿಂದ ಮುತ್ತಿಗೆ ಯತ್ನ ವಿಫಲವಾಯಿತು.

ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ,ಅಶೋಕ ಸೇರಿದಂತೆ ನೂರಾರು ಪ್ರಮುಖ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೈತ ವಿರೋಧಿ ಸರಕಾರ ಎಂದು ದಿಕ್ಕಾರ ಕೂಗುತ್ತಿದ್ದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ವೇಳೆ ಹೈಡ್ರಾಮಾನೆ ಸೃಷ್ಟಿಯಾಯಿತು.

ಈ ಸಂದರ್ಭದಲ್ಲಿ ಪೊಲೀಸರು ಮತ್ತು ಬಿಜೆಪಿ ನಾಯಕರ ನಡುವೆ ತೀವ್ರ ವಾಗ್ವಾದ ನಡೆಯಿತು.
ಶಾಸಕರಾದ ಚಲವಾದಿ ರವಿಕುಮಾರ್, ಬಾಲಚಂದ್ರ ಜಾರಕಿಹೊಳಿ, ನಿಖಿಲ್ ಕತ್ತಿ ಸೇರಿ 50ಕ್ಕೂ ಹೆಚ್ಚು ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಸುವರ್ಣಸೌಧ ಮುತ್ತಿಗೆ ಹಾಕುವ ಮುನ್ನ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅತೀವೃಷ್ಟಿ, ಬೆಳೆ ಹಾನಿಗೆ ರಾಜ್ಯ ಸರಕಾರ ಸೂಕ್ತವಾಗಿ ಸ್ಪಂದಿಸಿಲ್ಲ. ಬೆಳೆ ಪರಿಹಾರವನ್ನು ತಕ್ಷಣ ರೈತರಿಗೆ ಕೊಡಬೇಕು ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರಿಗೆ ಹೆಚ್ಚು ದರ ಕೊಡಿ ಕಬ್ಬು ಬೆಳೆಗೆ ಎಫ್‌ಆರ್‌ಪಿ ನಿಗದಿ ಮಾಡಿದ್ದರೂ, ಆ ದರಕ್ಕಿಂತ ಹೆಚ್ಚಿನ ದರ ನೀಡುವ ಅವಕಾಶ ರಾಜ್ಯ ಸರ್ಕಾರಕ್ಕೆ ಇದೆ. ಕಬ್ಬು ಬೆಳೆಗಾರರಿಗೆ ಹೆಚ್ಚು ದರ ಕೊಡಲು ನಿಮಗೆ ಏನು ಕಷ್ಟ ಎಂದು ಆಕ್ರೋಶದಿಂದ ವಿಜಯೇಂದ್ರ ಪ್ರಶ್ನಿಸಿದರು.

ಈ ಹಿಂದೆ ಯಡಿಯೂರಪ್ಪ ಅವರು ರೈತರು ಸಂಕಷ್ಟದಲ್ಲಿದ್ದಾಗ ಅವರೊಂದಿಗೆ ಇರುತ್ತಿದ್ದರು. ಅದೇ ರೀತಿ ನಾನು ಹಾಗೂ ನಮ್ಮ ಪಕ್ಷವು ಯಾವಾಗಲೂ ರೈತರ ಜೊತೆ ಇರುತ್ತೇವೆ ಎಂದು ಭರವಸೆ ನೀಡಿದರು.

ಸುವರ್ಣಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಪೊಲೀಸ್ ವಶಕ್ಕೆ Read More

ಬೆಂಗಳೂರಿನಿಂದ ಬೆಳಗಾವಿಗೆ ಬಂದರೂ ಒಳಬೇಗುದಿ ತಣ್ಣಗಾಗಿಲ್ಲ-ಅಶೋಕ್

ಬೆಂಗಳೂರು: ಬೂದಿ ಮುಚ್ಚಿದ ಕೆಂಡದಂತಿರುವ ಕಾಂಗ್ರೆಸ್ ಪಕ್ಷದ ಒಳಬೇಗುದಿ ಎಷ್ಟು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿಸಿದರೂ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ವೇದಿಕೆಯಾಗಬೇಕಿದ್ದ ಬೆಳಗಾವಿ ಅಧಿವೇಶನ, ಕಾಂಗ್ರೆಸ್ ಪಕ್ಷದ ಕುರ್ಚಿ ಕಿತ್ತಾಟದಲ್ಲಿ ವ್ಯರ್ಥವಾಗುತ್ತಿರುವುದು ವಿಷಾದಕರ ಎಂದು ಟ್ವೀಟ್ ಮಾಡಿ ಹೇಳಿದ್ದಾರೆ.

ಒಂದು ಕಡೆ ಸಿಎಂ ಸಿದ್ದರಾಮಯ್ ಅವರ ಪುತ್ರ ಎಂಎಲ್ಸಿ ಯತೀಂದ್ರ ಅವರು ತಮ್ಮ ಬಾಲಿಶ ಹೇಳಿಕೆಗಳಿಂದ ಇಡೀ ಅಧಿವೇಶನದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸದನಕ್ಕೆ ಗೈರು ಹಾಜರಾಗಿ ಹೈದರಾಬಾದಿನಲ್ಲಿ ತೆಲಂಗಾಣ ಸರ್ಕಾರದ ಹೂಡಿಕೆ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತಮ್ಮ ಮುನಿಸು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನ ನಂಬಿ ಅಧಿಕಾರ ಕೊಟ್ಟ ತಪ್ಪಿಗೆ ಕನ್ನಡಿಗರು ದಿನನಿತ್ಯ ಪಶ್ಚಾತಾಪ ಪಡುವುದಂತೂ ಅನಿವಾರ್ಯ ಎಂದು ಅಶೋಕ್ ವಿಷಾದಿಸಿದ್ದಾರೆ.

ಬೆಂಗಳೂರಿನಿಂದ ಬೆಳಗಾವಿಗೆ ಬಂದರೂ ಒಳಬೇಗುದಿ ತಣ್ಣಗಾಗಿಲ್ಲ-ಅಶೋಕ್ Read More

ಕ ಪೊ ಅಕಾಡೆಮಿ ಜೊತೆ ಸಾವಿತ್ರಿಬಾಯಿ ಫುಲೆ ಮಹಿಳಾ ಮಕ್ಕಳ ಅಭಿವೃದ್ಧಿ ಸಂಸ್ಥೆ ಸಹಿ

ಮೈಸೂರು: ಕರ್ನಾಟಕ ಪೊಲೀಸ್ ಅಕಾಡೆಮಿ ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿವೆ.

ಈ ಒಡಂಬಡಿಕೆಯು ಎರಡೂ ಸಂಸ್ಥೆಗಳ ನಡುವೆ ಸಂಪನ್ಮೂಲ ವ್ಯಕ್ತಿಗಳ ವಿನಿಮಯ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಿಶೇಷ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸಿ ನಿರ್ವಹಿಸುವ ಕುರಿತಾಗಿದ್ದು, ಎರಡೂ ಸಂಸ್ಥೆಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಒಡಂಬಡಿಕೆಗೆ ಸಹಿ ಹಾಕಿ ಮಾತನಾಡಿದ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಎಸ್.ಎಲ್.ಚೆನ್ನಬಸವಣ್ಣ, ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾದ ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯೊಡನೆ ಒಡಂಬಡಿಕೆ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಬಹಳ ವಿಶಿಷ್ಟವಾಗಿದೆ ಎಂದು ಹೇಳಿದರು.

ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳು ಎದುರಿಸುತ್ತಿರುವ ಸವಾಲುಗಳು, ಅವರ ಸಮಸ್ಯೆಗಳ ನಿರ್ವಹಣೆಯಲ್ಲಿ ಪೊಲೀಸ್ ಇಲಾಖೆಯ ಪಾತ್ರ, ಅವರ ಕುರಿತಾದ ಕಾನೂನುಗಳು ಹಾಗೂ ಅವರಿಗೆ ಸಂಬಂಧಪಟ್ಟ ಪ್ರಚಲಿತ ವಿದ್ಯಮಾನಗಳ ಕುರಿತು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುವ ಅಧಿಕಾರಿ ಗಳು ಹಾಗೂ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರನ್ನು ಸಂವೇದನಾಶೀಲರನ್ನಾಗಿ ಮಾಡಲು ಬಹಳ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ಒಡಂಬಡಿಕೆಯ ಮೂಲಕ ಪ್ರಸ್ತುತ ಸಮಾಜದಲ್ಲಿ ಮಹಿಳೆ ಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿ, ದೌರ್ಜನ್ಯಮುಕ್ತ ಸಮಾಜ ನಿರ್ಮಾಣವಾಗುವಂತಾಗಲಿ ಎಂದು ಆಶಿಸಿದರು.

ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಪರವಾಗಿ ಒಡಂಬಡಿಕೆಗೆ ಸಹಿ ಹಾಕಿ ಮಾತನಾಡಿದ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪಿ.ಜೆ.ಫಿಲಿಪ್ಸ್ ಅವರು, ಕರ್ನಾ ಟಕ ಪೊಲೀಸ್ ಅಕಾಡೆಮಿಯೊಡನೆ ಒಡಂಬಡಿಕೆ ನಮ್ಮ ಸಂಸ್ಥೆಗೂ ಹೆಮ್ಮೆಯ ವಿಷಯವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ವರದಿಯಾಗುತ್ತಿರುವ ಮಹಿಳೆಯರ ಮತ್ತು ಮಕ್ಕಳ ದೌರ್ಜನ್ಯಗಳ ಸಂಖ್ಯೆಯನ್ನು ಗಣನೀಯ ವಾಗಿ ಕಡಿಮೆ ಮಾಡುವುದಲ್ಲದೇ, ರಾಜ್ಯವನ್ನು ದೌರ್ಜನ್ಯಮುಕ್ತ ಮಾಡುವಲ್ಲಿ ಪೊಲೀಸ್ ಇಲಾಖೆ ಯೊಂದಿಗೆ ಕೈಜೋಡಿಸುವುದು ಈ ಒಡಂಬಡಿಕೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ತರಬೇತಿ ಸಂಸ್ಥೆ ಹಾಗೂ ಕರ್ನಾಟಕ ಪೊಲೀಸ್ ಅಕಾಡೆಮಿ ಕ್ರಾಂತಿಕಾರಕ ಹೆಜ್ಜೆ ಇಟ್ಟಿದೆ. ಇಂತಹ ಆಲೋಚನೆಗೆ ಈ ಸಂಸ್ಥೆಯ ನಿರ್ದೇಶಕ ಚೆನ್ನಬಸವಣ್ಣ ಅವರು ಹಾಗೂ ಎಲ್ಲಾ ಅಧಿಕಾರಿಗಳು ಅಭಿನಂದನಾರ್ಹರು ಎಂದು ತಿಳಿಸಿದರು.

ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಪ್ರಾದೇಶಿಕ ಕೇಂದ್ರದ ಉಪನಿರ್ದೇಶಕ ಲೋಕೇಶ್, ಕರ್ನಾಟಕ ಪೊಲೀಸ್ ಅಕಾಡೆಮಿಯ ಅಧಿಕಾರಿ ವರ್ಗ ಹಾಗೂ ಬೋಧಕರು ಹಾಜರಿದ್ದರು.

ಕ ಪೊ ಅಕಾಡೆಮಿ ಜೊತೆ ಸಾವಿತ್ರಿಬಾಯಿ ಫುಲೆ ಮಹಿಳಾ ಮಕ್ಕಳ ಅಭಿವೃದ್ಧಿ ಸಂಸ್ಥೆ ಸಹಿ Read More