ಬೆಂಗಳೂರು: ನಟ ದರ್ಶನ್ ತೂಗುದೀಪ ಅಭಿನಯದ ದಿ ಡೆವಿಲ್ ಚಿತ್ರ ಗುರುವಾರ ತೆರೆ ಕಂಡಿದ್ದು,ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಅಭಿಮಾನಿಗಳು ಚಿತ್ರಕ್ಕೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ದಿ ಡೆವಿಲ್’ ನ ರೇಟಿಂಗ್ ಮತ್ತು ವಿಮರ್ಶೆಗಳನ್ನು ಬುಕ್ ಮೈ ಶೊ ನಂತಹ ಕೆಲ ವೇದಿಕೆಗಳಲ್ಲಿ ತಿಳಿಸುವಂತಿಲ್ಲ. ಅಭಿಮಾನಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ಕುರಿತು ಚಿತ್ರ ವೀಕ್ಷಿಸಿದ ಬಳಿಕ ದರ್ಶನ್ ಸಹೋದರ, ನಿರ್ದೇಶಕ ದಿನಕರ್ ತೂಗುದೀಪ ಮಾತನಾಡಿ, ನೆಗೆಟಿವ್ ವಿಮರ್ಶೆ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಅದನ್ನು ಆಫ್ ಮಾಡಿಸಿದ್ದೇವೆ ಎಂದು ತಿಳಿಸಿದ್ದಾರೆ.
ದುಡ್ಡು ಕೊಟ್ಟು ರೇಟಿಂಗ್ ಮಾಡಿಸೋ ಕೆಲಸ ಆಗುತ್ತಿದೆ. ಈ ಮೂಲಕ ಸಿನಿಮಾ ಸಂಸ್ಕೃತಿಯನ್ನು ಹಾಳು ಮಾಡುವ ಕೆಲಸ ಮಾಡಲಾಗುತ್ತಿದೆ ನನ್ನ ರಾಯಲ್ ಸಿನಿಮಾಗೂ ಇದೇ ಅನುಭವ ಆಗಿದೆ ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಬೆಂಗಳೂರು: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ಹಾಸ್ಯ ನಟ ಎಂ.ಎಸ್.ಉಮೇಶ್ ಅವರು ವಿಧಿವಶರಾಗಿದ್ದಾರೆ.
ಕಳೆದ ಎರಡು ತಿಂಗಳಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕಾಯಿಲೆಗೆ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಸುಮಾರು 8.30 ಕ್ಕೆ ಕಿದ್ವಾಯಿ ಆಸ್ಪತ್ರೆಯಲ್ಲೇ ಉಮೇಶ್ ಕೊನೆಯುಸಿರೆಳೆದಿದ್ದಾರೆ.
ಮಧ್ಯಾಹ್ನ 2 ಗಂಟೆವರೆಗೂ ಉಮೇಶ್ ಅವರ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಇಟ್ಟು ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಎಂ. ಎಸ್. ಉಮೇಶ್ ಮೈಸೂರಿನಲ್ಲಿ ಏಪ್ರಿಲ್ 22, 1945ರಲ್ಲಿ ಜನಿಸಿದವರು.ಚಿಕ್ಕವಯಸಿನಿಂದಲೇ ಬಣ್ಣ ಹಚ್ಚಿದ್ದರು. ರಂಗಭೂಮಿ ಮತ್ತು ಚಲನಚಿತ್ರ ಎರಡರಲ್ಲೂ 1948ರಿಂದಲೂ ನಟಿಸುತ್ತಿದ್ದರು.
ಮಕ್ಕಳ ರಾಜ್ಯ, ಭಾಗ್ಯವಂತರು, ಕಿಲಾಡಿ ಜೋಡಿ, ಗುರು ಶಿಷ್ಯರು, ಭೂಮಿಗೆ ಬಂದ ಭಗವಂತ, ಹಾಲು ಜೇನು, ಕಾಮನಬಿಲ್ಲು, ಅಪೂರ್ವ ಸಂಗಮ, ಶೃತಿ ಸೇರಿದಾಗ,ಮೇಘ ಮಂದಾರ, ಆಕಸ್ಮಿಕ, ಸರ್ವರ್ ಸೋಮಣ್ಣ, ಮೇಘಮಾಲೆ, ನನ್ನಾಸೆಯ ಹೂವೆ, ಜಾಕಿ, ಮುಸ್ಸಂಜೆ ಮಾತು ಸೇರಿದಂತೆ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಅಯ್ಯೋ ಇವ್ರೂ ನನ್ನ ಅಪಾರ್ಥ ಮಾಡ್ಕೊಂಬಿಟ್ರಲ್ಲ. ನಾನೇನೂ ಬೇಕೂ ಅಂತ ಹೀಗ್ ಮಾಡ್ಲಿಲ್ಲ ಈ ಡೈಲಾಗ್ ಗಳು ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿವೆ.ಈ ಡೈಲಾಗ್ ಗಳನ್ನು ಬಹಳಷ್ಟು ಮಂದಿ ಈಗಲೂ ಸ್ಮರಿಸುತ್ತಾರೆ.
ಚಿತ್ರರಂಗದ ಗಣ್ಯರು,ನಟ,ನಟಿಯರು,ಕಲಾವುದರು ಅಂತಿಮ ನಮನ ಸಲ್ಲಿಸಿದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು,ರಾಜಕೀಯ ನಾಯಕರು ಉಮೇಶ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಮೈಸೂರು: ಕಾಂತಾರ ಚಾಪ್ಟರ್ 1 ಯಶಸ್ಸಿನ ಬೆನ್ನಲ್ಲೇ ನಟ ರಿಷಬ್ ಶೆಟ್ಟಿ ಟೆಂಪಲ್ ರನ್ ಮಾಡುತ್ತಿದ್ದು ಗುರುವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು.
ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಿಷಬ್ ಶೆಟ್ಟಿ, ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದೇನೆ. ಕಾಂತಾರ ಚಾಪ್ಟರ್ 1 ಯಶಸ್ವಿಯಾಗಿದೆ. ನಮ್ಮ ತಂಡದ ಶ್ರಮವನ್ನ ಜನರು ಒಪ್ಪಿದ್ದಾರೆ. ನಮ್ಮ ಸಿನಿಮಾದ ಯಶಸ್ಸು ಮೊದಲು ಕನ್ನಡಿಗರಿಗೆ ಸಲ್ಲಬೇಕು ಎಂದು ಹೇಳಿದರು.
ಕಾಂತಾರ ಬಂದಾಗ ಜನರು ಇಷ್ಟ ಪಟ್ಟಿದ್ದರು. ಸಿನಿಮಾದ ಗಳಿಕೆ, ಆದಾಯದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.
ಸಿನಿಮಾದಲ್ಲಿ ಚಾಮುಂಡಿ ದೈವದ ಆಶೀರ್ವಾದ ಇರೋದಕ್ಕೆ ಸಿನಿಮಾ ಒಳ್ಳೆ ರೀತಿ ಆಗಿದೆ. ದೈವವನ್ನು ನಾನು ನಂಬುತ್ತೇನೆ ಆರಾಧನೆ ಮಾಡುತ್ತೇನೆ. ನಾನು ಅದನ್ನು ತೋರಿಸುವಾಗ ಎಲ್ಲರ ಹಿರಿಯರ ಮಾರ್ಗದರ್ಶನ ತೆಗೆದುಕೊಂಡಿದ್ದೇನೆ. ನನಗೂ ದೈವಕ್ಕೂ ಒಂದು ಸಂಬಂಧ ಇದೆ. ಇಂತಹ ದೊಡ್ಡ ಯಶಸ್ಸು ಸಿಕ್ಕಿರೋದು ಖುಷಿ ಇದೆ ಎಂದು ಸಂತಸ ವ್ಯಕ್ತಪಡಿಸಿದರು.
ನಾನು ಸಣ್ಣ ಊರಿನಿಂದ ಬಂದವನು, ಕರ್ನಾಟಕದಿಂದ ವಿಶ್ವದಾದ್ಯಂತ ಸಿನಿಮಾವನ್ನ ಜನ ಇಷ್ಟ ಪಟ್ಟಿದ್ದಾರೆ. ಇದು ಚಿತ್ರರಂಗಕ್ಕೆ ಒಳ್ಳೆಯ ಬೆಳವಣಿಗೆ. ಇದು ಇನ್ನೂ ಹೆಚ್ಚಿನ ಶಕ್ತಿ ಕೊಡುತ್ತದೆ. ಮುಂದಿನ ಚಿತ್ರ ಜೈ ಹನುಮಾನ್ ಮಾಡುತ್ತಿದ್ದೇನೆ ಎಂದು ನಟ ರಿಷಬ್ ಶೆಟ್ಟಿ ತಿಳಿಸಿದರು.
ನಟ ಅಮಿತಾಬ್ ಬಚ್ಚನ್ ಭೇಟಿ ಮಾಡಿದ್ದೆ. ಅಣ್ಣಾವ್ರ ಬಗ್ಗೆ ಅವರು ಬಹಳ ಮಾತನಾಡಿದರು,ಜತೆಗೆ ತಮ್ಮ ಅನುಭವ ಹಂಚಿಕೊಂಡರು. ಅಂತಹ ಲೆಜೆಂಡ್ ಜೊತೆ ನಾನು ಕಾಲ ಕಳೆದದ್ದು ಖುಷಿ ಕೊಟ್ಟಿದೆ ಎಂದು ನಟ ರಿಷಬ್ ಶೆಟ್ಟಿ ತಿಳಿಸಿದರು.
ಫ್ಯಾನ್ಸ್ ವಾರ್ ಬಗ್ಗೆ ಪ್ರತಿಕ್ರಿಯಿಸಿದ ನಟ ರಿಷಬ್ ಶೆಟ್ಟಿ, ಫ್ಯಾನ್ಸ್ ವಾರ್ ಬಗ್ಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಎಲ್ಲರ ಸಿನಿಮಾ ನೋಡಿ ಕನ್ನಡ ಸಿನಿಮಾ ಗೆಲ್ಲಿಸಿ ಅಂತ ಕೇಳಿಕೊಳ್ಳುತ್ತೇವೆ ಎಂದು ಮನವಿ ಮಾಡಿದರು.
ಥಿಯೇಟರ್ ನಲ್ಲಿ ದೈವ ಆರಾಧನೆ ನೆಪದಲ್ಲಿ ಹುಚ್ಚಾಟ ಮಾಡಬೇಡಿ. ಅದಕ್ಕೆ ಒಂದು ಕ್ರಮ ಇರತ್ತದೆ. ದೈವ ಆರಾಧನೆಗೆ ಒಂದು ಶಿಸ್ತುಬದ್ಧ ಕ್ರಮವಿದೆ. ಆ ರೀತಿ ಮಾಡಬೇಡಿ ಅಂತ ಎಲ್ಲರಿಗೂ ಕೇಳಿಕೊಳ್ಳುತ್ತೇನೆ ಎಂದು ರಿಷಬ್ ಕೋರಿದರು.
ಮೈಸೂರು: ಗುಬ್ಬಿವಾಣಿ ಟ್ರಸ್ಟ್, ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಸಹಯೋಗದೊಂದಿಗೆ, ಮಹಿಳಾ ನಿರ್ದೇಶಕಿಯರ ಆಯ್ದ ಕನ್ನಡ ಕಿರುಚಿತ್ರಗಳ ಮರುಪ್ರದರ್ಶನ ಭರ್ಜರಿ ಯಶಸ್ಸು ಕಂಡಿತು.
ಈ ವರ್ಷದ ಆರಂಭದಲ್ಲಿ ಅವಳ ಹೆಜ್ಜೆ ಕಿರುಚಿತ್ರೋತ್ಸವಕ್ಕೆ ದೊರೆತ ಅಗಾಧ ಪ್ರತಿಕ್ರಿಯೆಯ ನಂತರ, ಇದು ಮೂರನೇ ಪ್ರದರ್ಶನವಾಗಿದ್ದು,ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಮಹಿಳಾ ಧ್ವನಿಗೆ ಪ್ರೇಕ್ಷಕರನ್ನು ಒಟ್ಟುಗೂಡಿಸಿ ಕರೆತಂದಿತು.
ಈ ಆಕರ್ಷಕ ಕಿರುಚಿತ್ರಗಳು ಪ್ರತ್ಯೇಕವಾಗಿ ಮಹಿಳೆಯರಿಗೆಂದೇ ಏರ್ಪಡಿಸಿದ್ದ ಅವಳ ಹೆಜ್ಜೆ ಕಿರುಚಿತ್ರೋತ್ಸವ ಸ್ಪರ್ಧೆಯಲ್ಲಿ ಆಯ್ಧ ಚಿತ್ರಗಳಾಗಿದ್ದು, ವಿವಿಧ ಸಮಕಾಲೀನ ವಿಷಯಗಳ ಕುರಿತು ವಿಭಿನ್ನ ಅಭಿವ್ಯಕ್ತಿ, ದೃಷ್ಟಿಕೋನಗಳನ್ನು ನಿರೂಪಿಸಿದವು.
ಸುಚಿತ್ರದ ಸಂಸ್ಥಾಪಕ ಎಚ್.ಎನ್. ನರಹರಿ ರಾವ್ ಅವರ ಆರಂಭಿಕ ಹೇಳಿಕೆಗಳು ಮತ್ತು ನಾರ್ಮನ್ ಮೆಕ್ಲಾರೆನ್ ಅವರ ಅಮರ (ಕ್ಲಾಸಿಕ್) ಕಿರುಚಿತ್ರ ನೈಬರ್ಸ್ (1952) ಪ್ರದರ್ಶನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಗುಬ್ಬಿವಾಣಿ ಟ್ರಸ್ಟ್ನ ಮಹಿಳಾ ಸಬಲೀಕರಣ ವಿಭಾಗವಾದ ಅವಳ ಹೆಜ್ಜೆಯ ನಿರ್ದೇಶಕಿ ಶಾಂತಲಾ ದಾಮ್ಲೆ,ಚಿತ್ರೋತ್ಸವದ ಆಶಯ ಮತ್ತು ದೃಷ್ಟಿಕೋನವನ್ನು ಹಂಚಿಕೊಂಡರು.
ಈ ವರ್ಷ ದೊರೆತ ಹೆಚ್ಚು ಬೆಂಬಲದಿಂದ ನಮಗೆ ಅಗಾಧ ಪ್ರೋತ್ಸಾಹ ಸಿಕ್ಕಿದೆ. ಮುಂದಿನ ವರ್ಷದ ಸ್ಪರ್ಧೆಗೆ ಸಲ್ಲಿಕೆಗಳು ಇದೇ ನವೆಂಬರ್ 1 ರಂದು ತೆರೆದಿರುತ್ತವೆ ಎಂದು ಹೇಳಿದರು.
ರಾಜ್ಯೋತ್ಸವ ವಿಶೇಷ ಕಾರ್ಯಕ್ರಮವಾಗಿ, ನವೆಂಬರ್ 30 ರೊಳಗೆ ಸಲ್ಲಿಸಿದ ಸಲ್ಲಿಕೆಗಳಿಗೆ ಪ್ರವೇಶ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಹೆಚ್ಚಿನ ವಿವರಗಳು ನಮ್ಮ ವೆಬ್ಸೈಟ್: www.gubbivanitrust.ngo ನಲ್ಲಿ ಲಭ್ಯವಿರುತ್ತವೆ ಎಂದು ಮಾಹಿತಿ ನೀಡಿದರು.
ಪ್ರದರ್ಶಿತ ಕಿರುಚಿತ್ರಗಳು: ಸತ್ಯ ಪ್ರಮೋದ ಎಂ.ಎಸ್ ನಿರ್ದೇಶನದ ‘ಆನ್ ಲೈನ್’* (2025), ಮಾನಸ ಯು ಶರ್ಮ ನಿರ್ದೇಶನದ ‘ಸೊಲೋ ಟ್ರಾವೆಲ್ಲರ್’ (2023), ತೃಪ್ತಿ ಕುಲಕರ್ಣಿ ನಿರ್ದೇಶನದ ‘ಹೌ ಆರ್ ಯು?’ (2023), ಮಂದಾರ ಬಟ್ಟಲಹಳ್ಳಿ ನಿರ್ದೇಶನದ ‘ದಿ ಲಾಸ್ಟ್ ಹ್ಯಾಪಿ ಕಸ್ಟಮರ್’ (2024), ಚಂದನಾ ನಾಗ್ ನಿರ್ದೇಶನದ ‘ಉಭಯ’ (2024), ಕ್ಷಮಾ ಅಂಬೆಕಲ್ಲು ನಿರ್ದೇಶನದ ‘ಪುಷ್ಪ’ (2024), ಕವಿತಾ ಬಿ ನಾಯಕ್ ನಿರ್ದೇಶನದ ‘ಗ್ಲೀ’ (2023), ಸಿಂಚನಾ ಶೈಲೇಶ್ ನಿರ್ದೇಶನದ ‘ಕೇಕ್ ವಾಕ್’ (2025)
ಪುರವಂಕರ ಸಭಾಂಗಣವು ಉತ್ಸಾಹಭರಿತ ಪ್ರೇಕ್ಷಕರಿಂದ ತುಂಬಿ, ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ನಿರ್ದೇಶಕಿಯರೊಂದಿಗೆ ಪ್ರಶ್ನೋತ್ತರ ಅವಧಿಯಲ್ಲಿ, ಪ್ರೇಕ್ಷಕರು ನೇರವಾಗಿ ಉತ್ಸಾಹಭರಿತ ಹಾಗೂ ಚಿಂತನಶೀಲ ಸಂವಾದದಲ್ಲಿ ತೊಡಗಿದ್ದು ಬಹಳ ವಿಶೇಷ.
ಬೆಂಗಳೂರು: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 12ಕ್ಕೆ ಕೆಲವು ತಿಂಗಳು ಬಾಕಿ ಇರುವಾಗಲೇ ಬಿಗ್ಬಾಸ್ ತಂಡದ ಕಡೆಯಿಂದ ಹಾಗೂ ಕಿಚ್ಚ ಸುದೀಪ್ ಅವರಿಂದ ಬಿಗ್ ಅಪ್ಡೇಟ್ ಸಿಕ್ಕಿದ್ದು ಅಭಿಮಾನಿಗಳು ಸಕತ್ ಖುಷಿಯಾಗಿದ್ದಾರೆ
ಹೌದು ಇದು ನಿಜ, ಕಿಚ್ಚ ಸುದೀಪ್ ಅವರೇ 12ನೇ ಸೀಸನ್ಗೂ ನಿರೂಪಣೆ ಮಾಡುವುದಾಗಿ ಸ್ಪಷ್ಟನೆ ನೀಡಿದ್ದಾರೆ.ಬಿಗ್ಬಾಸ್ ಸಂಯೋಜಕರು ಹಾಗೂ ಕಲರ್ಸ್ ತಂಡ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
11ನೇ ಸೀಸನ್ ಸಂದರ್ಭದಲ್ಲಿ ನಿರೂಪಕ ಕಿಚ್ಚ ಸುದೀಪ್ ವಿದಾಯ ಹೇಳಿದ್ದರು. ಇದಾದ ಬಳಿಕ ಸಾಕಷ್ಟು ಚರ್ಚೆಗಳು ನಡೆದವು. ಈ ಬಗ್ಗೆ ಕಿಚ್ಚ ಸುದೀಪ್ ಕೂಡಾ ಕಾದು ನೋಡಿ ಅಂದಿದ್ದರು. ಇದೀಗ ಮತ್ತೆ 12ನೇ ಸೀಸನ್ ನಡೆಸಿಕೊಡುವ ಬಗ್ಗೆ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಬೆಂಗಳೂರು: ಗುಬ್ಬಿವಾಣಿ ಟ್ರಸ್ಟ್ ಆಯೋಜಿಸಿದ್ದ ಅವಳ ಹೆಜ್ಜೆ ಮಹಿಳಾ ಕನ್ನಡ ಕಿರುಚಿತ್ರೋತ್ಸವದಲ್ಲಿ ನಿರ್ದೇಶಕಿ ಕವಿತಾ ಬಿ ನಾಯಕ್ ಅವರ ಅನ್ ಹರ್ಡ್ ಎಕೋಸ್ ಎಂಬ ಕನ್ನಡ ಕಿರುಚಿತ್ರವು ಪ್ರತಿಷ್ಠಿತ ಅವಳ ಹೆಜ್ಜೆ ಪ್ರಶಸ್ತಿಯನ್ನು1 ಲಕ್ಷ ನಗದು ಬಹುಮಾನದೊಂದಿಗೆ ಮುಡಿಗೇರಿಸಿಕೊಂಡಿದೆ.
ಎಂಟು ಆಕರ್ಷಕ ಕಿರುಚಿತ್ರಗಳನ್ನು ಪ್ರದರ್ಶಿಸಿದ ಈ ಉತ್ಸವಕ್ಕೆ ಪ್ರೇಕ್ಷಕರು ಉತ್ತಮ ಸ್ಪಂದನೆ ನೀಡಿದರು.ಎಂಟು ನಿರ್ದೇಶಕಿಯರೊಂದಿಗಿನ ಪ್ರಶ್ನೋತ್ತರದಲ್ಲಿ ಪ್ರೇಕ್ಷಕರು ಉತ್ಸಾಹಭರಿತ, ಚಿಂತನಶೀಲ ಪ್ರಶ್ನೆಗಳನ್ನು ಅವರ ಮುಂದಿಟ್ಟರು.
ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕಿನ ಕವಿತಾ ಬಿ ನಾಯಕ್ ರಂಗಭೂಮಿ ಕಲಾವಿದೆ ಮತ್ತು ನಿರ್ದೇಶಕಿ. ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ನಿರ್ದೇಶನ ಮತ್ತು ಚಿತ್ರಕಥೆಗಳಲ್ಲಿ ಡಿಪ್ಲೋಮಾ ಪಡೆದು “ಹದಿನೇಳೆಂಟು” ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಸಿನಿಮಾ ಮಾಧ್ಯಮದ ಮೂಲಕ ಮಹಿಳೆಯರ ಸಮಸ್ಯೆಗಳನ್ನು ಪ್ರೇಕ್ಷಕರಿಗೆ ತಲುಪಿಸಬೇಕೆಂಬ ಅವರ ಬದ್ಧತೆ, “ಅನ್ಹರ್ಡ್ ಎಕೋಸ್” ಮೂಲಕ ಮುಂದುವರೆಸಿದ್ದಾರೆ. ಈ ಚಿತ್ರವು ಪ್ರೇಕ್ಷಕರ ಆಯ್ಕೆ ಬಹುಮಾನವನ್ನು ಸಹ ಪಡೆದುಕೊಂಡಿದ್ದು, ಅದರ ಬಲವಾದ ಭಾವನಾತ್ಮಕ ಸಂಪರ್ಕಕ್ಕೆ ಸಾಕ್ಷಿಯಾಗಿದೆ.
ಕ್ಷಮಾ ಅಂಬೆಕಲ್ಲು ಅವರ ಕಿರುಚಿತ್ರ “ಪುಷ್ಪ”, ವಿದ್ಯಾರ್ಥಿನಿ ನಿರ್ದೇಶಕಿ ಎಂಬ ವಿಶೇಷ ವರ್ಗದಲ್ಲಿ ನಗದು ಬಹುಮಾನ ಪಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ಕ್ಷಮಾ, ಮೈಸೂರಿನ ಅಮೃತ ವಿಶ್ವ ವಿದ್ಯಾಪೀಠದಲ್ಲಿ ದೃಶ್ಯ ಸಂವಹನದಲ್ಲಿ ಬಿ.ಎಸ್ಸಿ. ಪದವಿ ಪಡೆಯುತ್ತಿದ್ದಾರೆ.
ಚೊಚ್ಚಲ ನಿರ್ದೇಶನದ ಇತರ ಮೂರು ಕಿರುಚಿತ್ರಗಳು ಸಹ ನಗದು ಬಹುಮಾನಗಳನ್ನು ಪಡೆದಿವೆ: ಮಂದಾರ ಬಟ್ಟಲಹಳ್ಳಿ ನಿರ್ದೇಶನದ “ದಿ ಲಾಸ್ಟ್ ಹ್ಯಾಪಿ ಕಸ್ಟಮರ್” (2024), ಸಿಂಚನಾ ಶೈಲೇಶ್ ನಿರ್ದೇಶನದ “ಕೇಕ್ವಾಕ್” (2025) ಮತ್ತು ಸತ್ಯ ಪ್ರಮೋದ ಎಂ.ಎಸ್ ನಿರ್ದೇಶನದ “ಆನ್ಲೈನ್” (2025).
ಹಾವೇರಿ ಜಿಲ್ಲೆಯ ರೈತ ಮಹಿಳೆ ರೇಣುಕಾ ಯಲ್ಲಪ್ಪ ಮಲ್ಲಿಗಾರ್ ನಿರ್ಮಿಸಿದ “ನೀರೆಲ್ಲವೂ ತೀರ್ಥ” (2025) ಎಂಬ ಕಿರುಚಿತ್ರವನ್ನು ಸ್ಪರ್ಧಾತ್ಮಕವಲ್ಲದ ವಿಭಾಗದಲ್ಲಿ ಪ್ರದರ್ಶಿಸಲಾಯಿತು.
ಚಿತ್ರೋತ್ಸವದ ಪ್ರಮುಖ ಆಕರ್ಷಣೆ, ಪತ್ರಕರ್ತೆ ಸುನಯನ ಸುರೇಶ್ ನಿರ್ವಹಿಸಿದ ಚರ್ಚಾಗೋಷ್ಠಿ ಕನ್ನಡ ಸಿನಿಮಾದಲ್ಲಿ ಮಹಿಳಾ ಧ್ವನಿ ಯಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕಿ ರೂಪಾ ರಾವ್(ಗಂಟು ಮೂಟೆ), ಟೆಂಟ್ ಸಿನೆಮಾ ಶಾಲೆಯ ಸ್ಥಾಪಕ ನಿರ್ದೇಶಕಿ ಶೋಭಾ ಸಿ.ಎಸ್. ಮತ್ತು ಮುಖ್ಯ ಅತಿಥಿ ಡಿ. ಸುಮನ್ ಕಿತ್ತೂರು ಭಾಗವಹಿಸಿದ್ದರು.
ತಮ್ಮ ಜಾತಕಗಳು ಹೊಂದಿಕೆಯಾಗಲಿಲ್ಲ ಎಂಬ ಕಾರಣಕ್ಕೆ ತನ್ನ ಚಿತ್ರಕ್ಕೆ ಹಣಕಾಸು ಒದಗಿಸಲು ನಿರಾಕರಿಸಿದ ನಿರ್ಮಾಪಕರ ಬಗ್ಗೆ ಸುಮನ್ ಕಿತ್ತೂರು ಒಂದು ಸ್ವಾರಸ್ಯಕರ ಅನುಭವವನ್ನು ಹಂಚಿಕೊಂಡು ಇದು ನಿರ್ದೇಶಕರಿಗೆ ಇರುವ ತರ್ಕಹೀನ ಅಡೆತಡೆಗಳ ಉದಾಹರಣೆಯಾಗಿದೆ ಎಂದು ತಿಳಿಸಿದರು.
ರೂಪಾ ರಾವ್ ಅವರು ಮಾತನಾಡಿ, ಚಲನಚಿತ್ರೋದ್ಯಮದಲ್ಲಿ ಎದುರಿಸಿದ ಲಿಂಗ ತಾರತಮ್ಯದ ಬಗ್ಗೆ ಮುಕ್ತವಾಗಿ ಮಾತನಾಡಿ, “ನಿರ್ಮಾಪಕರು ಮತ್ತು ವಿತರಕರು ನನ್ನನ್ನು ನೇರವಾಗಿ ಉದ್ದೇಶಿಸಿ ಮಾತನಾಡುವ ಬದಲು ನನ್ನ ಪುರುಷ ಸಹಾಯಕರೊಂದಿಗೆ ಮಾತನಾಡುತ್ತಿದ್ದರು. ಹಲವು ನಿರಾಕರಣೆಗಳು ಮತ್ತು ಆರ್ಥಿಕ ಸಂಕಷ್ಟಗಳ ನಡುವೆಯೂ ‘ಹುಚ್ಚು ಮತ್ತು ಉತ್ಸಾಹ’ ಇದ್ದರೆ ಮಾತ್ರ ಚಲನಚಿತ್ರ ನಿರ್ದೇಶಕರು ಮುಂದುವರೆಯಲು ಸಾಧ್ಯ ಎಂದು ಹೇಳಿದರು.
ಇದು ಕೇವಲ ಕಿರುಚಿತ್ರ ಪ್ರದರ್ಶನವಲ್ಲ – ಮಹಿಳೆಯರ ಅನುಭವ, ದೃಷ್ಟಿಕೋನಗಳಿಗೆ ವೇದಿಕೆ ನೀಡುವ, ಲಿಂಗ ಸಮಾನತೆಯ ಚಿಂತನೆಗೆ ಉತ್ತೇಜನ ನೀಡುವ ಒಂದು ಚಳುವಳಿ ಎಂದು ಗುಬ್ಬಿವಾಣಿ – ಸ್ಥಾಪಕ ಟ್ರಸ್ಟಿ ಮಾಲವಿಕ ಅವರು ಹೇಳಿದರು.
ಈ ಉತ್ಸವದ ಮೊದಲ ಆವೃತ್ತಿಯ ಯಶಸ್ಸಿನಿಂದ ನಮಗೆ ತುಂಬಾ ಪ್ರೋತ್ಸಾಹ ಸಿಕ್ಕಿದೆ. ಮುಂದಿನ ವರ್ಷದಲ್ಲಿ ಕರ್ನಾಟಕದಾದ್ಯಂತ ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದಕ್ಕಾಗಿ ಎದುರು ನೋಡುತ್ತೇವೆ ಎಂದು ಚಿತ್ರೋತ್ಸವ ನಿರ್ದೇಶಕಿ ಶಾಂತಲಾ ದಾಮ್ಲೆ ಸಂತಸದಿಂದ ತಿಳಿಸಿದರು.