ಜಾತಿ ವ್ಯವಸ್ಥೆ ಕಾರಣದಿಂದ ಬಹು ಜನರು ಶಿಕ್ಷಣದಿಂದ ವಂಚಿತರಾದರು:ಸಿಎಂ

ಬೆಂಗಳೂರು: ಧರ್ಮ-ಜಾತಿ ಹೆಸರಲ್ಲಿ ಸಮಾಜವನ್ನು ಒಡೆಯುತ್ತಾ ಹೋದ ಹಾಗೆ ಅಸಮಾನತೆ ಕೂಡಾ‌ ಹೆಚ್ಚುತ್ತಾ ಹೋಗುತ್ತದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗಾಂಧಿ ಸ್ಮಾರಕ ನಿಧಿಯ 75ನೇ ವರ್ಷದ ಸಂಸ್ಮರಣೆ ಹಿನ್ನೆಲೆಯಲ್ಲಿ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ 21ನೇ ಶತಮಾನಕ್ಕೆ ಮಹಾತ್ಮಗಾಂಧೀಜಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ಜಾತಿ ವ್ಯವಸ್ಥೆಯಿಂದ ಬಹು ಜನರು ಶಿಕ್ಷಣದಿಂದ ವಂಚಿತರಾದರು,ಹಾಗಾಗಿ ಅಸಮಾನತೆ ಹೆಚ್ಚಾಯಿತು ವಿದ್ಯಾವಂತರೇ ಹೆಚ್ಚೆಚ್ಚು ಜಾತಿವಾದಿಗಳಾಗುತ್ತಿರುವುದು ದುರಂತ,ಜಾತಿ ಅಸಮಾನತೆಯ ಪೋಷಕರೇ ಮಹಾತ್ಮಗಾಂಧಿಯವರನ್ನು ಕೊಂದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗಾಂಧೀಜಿ ವಿಚಾರಗಳು, ಸಮಾಜಕ್ಕೆ ನೀಡಿದ ಮಾರ್ಗದರ್ಶನಗಳು 20ನೇ ಶತಮನಕ್ಕೆ ಮಾತ್ರ ಸೀಮಿತವಾಗಿಲ್ಲ. ಈಗಿನ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಸಿಎಂ ತಿಳಿಸಿದರು.

ಮನುಷ್ಯ ತನ್ನ ನೆಮ್ಮದಿಗಾಗಿ ಬೇರೆ ಗ್ರಹಗಳನ್ನು ಹುಡುಕಿಕೊಂಡು ಹೋಗುವಂತಾಗಬಾರದು ಎನ್ನುವ ಸ್ಟೀಫನ್ ಹಾಕಿಂಗ್ ಅವರ ಮಾತನ್ನು ಪ್ರಸ್ತಾಪಿಸಿ, ಮನುಷ್ಯ ಮನುಷ್ಯರ ನಡುವೆ ಸಹಿಷ್ಣುತೆ ರೂಢಿಸಿಕೊಳ್ಳದಿದ್ದರೆ ಸರ್ವನಾಶವಾಗುತ್ತದೆ. ಕೋಮು ಭಾವನೆ ಹೀಗೇ ಬೆಳೆದರೆ ಕವೆಂಪು ಅವರ ವಿಶ್ವ ಮಾನವ ಆಶಯ ಈಡೇರುವುದು ಕಷ್ಟವಾಗುತ್ತದೆ ಎಂದು ಸಿದ್ದು ಅಭಿಪ್ರಾಯ ಪಟ್ಟರು.

ಬಹಳ ಮಂದಿ ಶಿಕ್ಷಿತರೇ ಕಂದಾಚಾರ, ಕರ್ಮ ಸಿದ್ಧಾಂತ, ಮೌಡ್ಯವನ್ನು ಆಚರಿಸುತ್ತಾರೆ. ಇದಕ್ಕೆ ಸರಿಯಾದ ವೈಜ್ಞಾನಿಕ ಶಿಕ್ಷಣದ ಕೊರತೆಯೇ ಕಾರಣ. 850 ವರ್ಷಗಳ ಹಿಂದೆಯೇ ಬಸವಾದಿ ಶರಣರು ಕರ್ಮ ಸಿದ್ಧಾಂತವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಆದರೆ ಈಗಿನ ಕೆಲವು ಶಿಕ್ಷಿತರೇ ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನೆಹರೂ ಅವರು ವೈಜ್ಞಾನಿಕ ಮತ್ತು ವೈಚಾರಿಕ ಮಾರ್ಗದಲ್ಲಿ ಸಮಾಜವನ್ನು ಸನ್ನದ್ದಗೊಳಿಸಿ ದೇಶವನ್ನು ಮುನ್ನಡೆಸುತ್ತಿದ್ದರು ಎಂದರು.

ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಈಡೇರಿಸಬೇಕಾಗಿದೆ.‌ ಗಾಂಧಿಯವರ ಆಶಯದಂತೆ ರಾತ್ರಿ 12 ಗಂಟೆಗೂ ನಮ್ಮ ಹೆಣ್ಣು ಮಕ್ಕಳು ನಿರ್ಭಯದಿಂದ ಓಡಾಡುವಂತಾಗಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ರಾಮಚಂದ್ರ ರಾಹಿ, ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಕಾರ್ಯಾಧ್ಯಕ್ಷರಾದ ವಿಶುಕುಮಾರ್ , ನವದೆಹಲಿ ಸ್ಮಾರಕ ನಿಧಿ ಅಧ್ಯಕ್ಷ ಸಂಜೋಯ್ ಸಿಂಗ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಜಾತಿ ವ್ಯವಸ್ಥೆ ಕಾರಣದಿಂದ ಬಹು ಜನರು ಶಿಕ್ಷಣದಿಂದ ವಂಚಿತರಾದರು:ಸಿಎಂ Read More

ಸಾವಿರಾರು ನಿವೇಶನಗಳನ್ನು ಸಿಎಂ, ಬೆಂಬಲಿಗರು ಲೂಟಿ ಮಾಡಿದ್ದಾರೆ:ಅಶೋಕ್

ಮಂಡ್ಯ, ಆ. 23: ಮುಡಾ ಹಗರಣದಲ್ಲಿ 14 ನಿವೇಶನ ಅಷ್ಟೇ ಅಲ್ಲಾ ಸಾವಿರಾರು ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಲೂಟಿ ಹೊಡೆದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.

ಈ ಹಗರಣದ ಹಿಂದೆ ಇರುವ ದೊಡ್ಡ ತಿಮಿಂಗಿಲಗಳು ಹೊರಬರಲು ಸಿಬಿಐ ತನಿಖೆ ಆಗಲೇಬೇಕು ಎಂದು ಒತ್ತಾಯಿಸಿದರು.

ಮಂಡ್ಯದಲ್ಲಿ ಮಾತನಾಡಿದ ಅವರು, ಹಗರಣದಲ್ಲಿ ಸಿಲುಕಿದಾಗ ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಾತಿ ನೆನಪಾಗುತ್ತದೆ ವ್ಯಂಗ್ಯವಾಡಿದರು.

ಇವರು 14 ಸೈಟು ನುಂಗಿದ ಕೂಡಲೇ ಹಿಂಬಾಲಕರು ನೂರಾರು ಸೈಟುಗಳನ್ನು ಲಪಟಾಯಿಸಿದ್ದಾರೆ ಎಂದು ದೂರಿದರು.

ಸಿಎಂ ಹಿಂಬಾಲಕರಾದ ಮರಿಗೌಡರೇ ಪತ್ರ ಬರೆದು ಅಕ್ರಮವಾಗಿದೆ ಎಂದು ಹೇಳಿದ್ದಾರೆ, ಅದನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ಆರ್‌ಟಿಐ ಮೂಲಕ ಹೊರತೆಗೆದಾಗ ಎಲ್ಲವೂ ಬಯಲಾಗಿದೆ, ಆದರೆ ಸಿದ್ದರಾಮಯ್ಯ ಒಂದೂ ಸೈಟು ಅಕ್ರಮವಾಗಿ ಪಡೆದಿಲ್ಲ ಎಂದು ಹೇಳಿದ್ದಾರೆ ಇದಕ್ಕೆ ಏನನ್ನಬೇಕು ಎಂದು ‌ಅಶೋಕ್ ವಾಗ್ದಾಳಿ ನಡೆಸಿದರು.

ಈಗ ವೈಟ್‌ನರ್‌ ಅಕ್ರಮ ಬಯಲಾಗಿದೆ, ಏನಾದರೂ ತಪ್ಪಾಗಿದ್ದರೆ ಅದರ ಮೇಲೆ ಪೆನ್‌ನಲ್ಲಿ ಗೆರೆ ಎಳೆದರೆ ಸಾಕಿತ್ತು. ಆದರೆ ವಿಷಯವನ್ನು ಮುಚ್ಚಿಹಾಕಲು ವೈಟ್‌ನರ್‌ ಬಳಸಿದ್ದಾರೆ, ವಿಜಯನಗರದಲ್ಲೇ ನಿವೇಶನ ಬೇಕು ಎಂದು ಸಿಎಂ ಪತ್ನಿ ಬರೆದಿದ್ದಾರೆ. ಅದಕ್ಕೆ ವೈಟ್‌ನರ್‌ ಹಚ್ಚಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ದಾಖಲೆ ತಿದ್ದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸಿದ್ದರಾಮಯ್ಯನವರಿಗೆ ಪ್ರಮಾಣ ವಚನ ಬೋಧಿಸಿದ್ದೇ ರಾಜ್ಯಪಾಲರು. ಅಂತಹವರು ತನಿಖೆ ಮಾಡಿ ಎಂದಿದ್ದನ್ನು ವಿರೋಧಿಸಿದರೆ ಅದು ಸರ್ವಾಧಿಕಾರಿ ಧೋರಣೆಯಾಗುತ್ತದೆ. ಅದು ತುಘಲಕ್‌ ದರ್ಬಾರ್‌ ಆಗುತ್ತದೆ, ಇದು ದಲಿತರಿಗೆ ಮಾಡುವ ಅಪಮಾನ,ಇದಕ್ಕಾಗಿ ಕಾಂಗ್ರೆಸ್‌ ಕ್ಷಮೆ ಯಾಚಿಸಬೇಕು ಎಂದು ಆರ್.ಅಶೋಕ್ ಒತ್ತಾಯಿಸಿದರು.

ಸಾವಿರಾರು ನಿವೇಶನಗಳನ್ನು ಸಿಎಂ, ಬೆಂಬಲಿಗರು ಲೂಟಿ ಮಾಡಿದ್ದಾರೆ:ಅಶೋಕ್ Read More

ಮುಡಾ ಹಗರಣ; ಸಿಎಂ, ಕುಟುಂಬದ ಪಾತ್ರವಿದೆ: ದಾಖಲೆ ಇಟ್ಟ ಕುಮಾರಸ್ವಾಮಿ

ಬೆಂಗಳೂರು,ಆ.23: ಮೂಡಾ ಹಗರಣದಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಪಾತ್ರವೇ ಇಲ್ಲ ಎಂದು ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದಾಖಲೆ ಸಮೇತ ಉತ್ತರ ನೀಡಿದ್ದಾರೆ.

ಇದರ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಹೆಚ್ ಡಿ ಕೆ, ಮಾರುಕಟ್ಟೆ ದರದಲ್ಲಿ ಜಮೀನಿನ ಪರಿಹಾರ ಅಥವಾ 40:60ರ ಅನುಪಾತದಲ್ಲಿ ನಿವೇಶನ ನೀಡುವ ಮೂಡಾ ಪ್ರಸ್ತಾವನೆಯನ್ನು ನಿರಾಕರಿಸಿ ಬದಲಿ ಜಮೀನನ್ನೇ ನೀಡುವಂತೆ ಒತ್ತಾಯ ಮಾಡಿರುವ ದಾಖಲೆಯನ್ನೂ ಬಿಡುಗಡೆ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ ಮೂಡಾ ನಿವೇಶನ ಹಂಚಿಕೆಯಲ್ಲಿ ನನ್ನ ಹಾಗೂ ನನ್ನ ಕುಟುಂಬದ ಪಾತ್ರವೇ ಇಲ್ಲ ಎಂದು ಸುಳ್ಳು ಹೇಳುವ ನಿಮಗೆ ಭಾಷೆ ಗೊತ್ತಿದೆ ಎಂದು ನಾನಾ ಪರಿಭಾವಿಸುತ್ತೇನೆ ನೀವು ಸ್ವಯಂಘೋಷಿತ ವಕೀಲರಲ್ಲವೇ, ದಾಖಲೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಓದಿ ಎಂದು ದಾಖಲೆಯನ್ನು ಎಕ್ಸ್ ಖಾತೆಯಲ್ಲಿ ಟ್ಯಾಗ್ ಮಾಡಿದ್ದಾರೆ.

50:50ರ ಅನುಪಾತದಲ್ಲಿಯೇ ಮೂಡಾ ಬದಲಿ ನಿವೇಶನ ನೀಡಲೇಬೇಕು ಎಂದು ಸಿಎಂ ಸಾಹೇಬರ ಧರ್ಮಪತ್ನಿ ಒತ್ತಾಯ ಮಾಡಿದ್ದಾರೆ ಹಾಗೂ ಅರ್ಜಿದಾರರಾದ ಶ್ರೀಮತಿ ಪಾರ್ವತಮ್ಮ ಇವರಿಗೆ ಮಾರುಕಟ್ಟೆ ದರದಲ್ಲಿ ಜಮೀನಿನ ಪರಿಹಾರ ನೀಡುವುದಾಗಿಯೂ ಅಥವಾ 40:60ರ ಅನುಪಾತದಲ್ಲಿ ನಿವೇಶನ ನೀಡುವುದಾಗಿಯೂ ತಿಳಿಸಲಾಗಿತ್ತು. ಆದರೆ ಪ್ರಾಧಿಕಾರದ ಈ ಸಲಹೆಗೆ ಅವರು ಒಪ್ಪಿಗೆ ನೀಡದೇ ಇದ್ದು, ಬದಲಿ ಜಮೀನನ್ನು ನೀಡುವಂತೆ ಒತ್ತಾಯಿಸಿರುತ್ತಾರೆ,ಇದು ಮೂಡಾ ದಾಖಲೆಯಲ್ಲಿರುವ ಒಕ್ಕಣೆ. ಇದಕ್ಕೆ ತಾವು ಏನಂತೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ವಿಧಾನಸೌಧದ 3ನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದಿರಿ, ಈಗ ಹೇಳಿ, ಯಾರ ತಟ್ಟೆಯಲ್ಲಿ ಏನು ಸತ್ತು ಬಿದ್ದಿದೆ ಅಥವಾ ಕಪ್ಪುಚುಕ್ಕೆಯನ್ನು ವೈಟ್ನರ್ ನುಂಗಿತ್ತಾ ಎಂದು ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಗಿ‌ ಪ್ರಶ್ನಿಸಿದ್ದಾರೆ.

ಮುಡಾ ಹಗರಣ; ಸಿಎಂ, ಕುಟುಂಬದ ಪಾತ್ರವಿದೆ: ದಾಖಲೆ ಇಟ್ಟ ಕುಮಾರಸ್ವಾಮಿ Read More

ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು

ಮಂಗಳೂರು,ಆ.22: ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ.

ತಡರಾತ್ರಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಡಿ ಪರಾರಿಯಾಗಿದ್ದಾರೆ.

ಮನೆಗೆ ಸಣ್ಣ,ಪುಟ್ಟ ಹಾನಿಯಾಗಿದೆ. ಪಾಂದವೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು Read More

ಜೆಡಿಎಸ್ ವಿರುದ್ಧ ಪ್ಲೆಕ್ಸ್ ಸಮರ ಸಾರಿದ ಕಾಂಗ್ರೆಸ್

ಮೈಸೂರು: ರಾಜ್ಯ ಸರಕಾರದ ವಿರುದ್ಧ ಬಿಜೆಪಿ-ಜೆಡಿಎಸ್  ಹೋರಾಟ ನಡೆಸುತ್ತಿರುವಾಗಲೇ ಕಾಂಗ್ರೆಸ್ ನವರು ಜೆಡಿಎಸ್ ವಿರುದ್ಧ ಪ್ಲೆಕ್ಸ್ ಸಮರ ಸೇರಿದ್ದಾರೆ.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧ ಕೇಳಿ ಬಂದಿರುವ ಮೂಡ ಹಗರಣ ವಿಚಾರ ಮುಂದಿಟ್ಟುಕೊಂಡು ಬಿಜೆಪಿ,ಜೆಡಿಎಸ್ ಪಾದಯಾತ್ರೆ ಮಾಡುತ್ತಿವೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡಾ ಜನಾಂದೋಲನ ಹಮ್ಮಿಕೊಂಡು,ಸಮಾವೇಶ ನಡೆಸಿ,ಶಕ್ತಿ ಪ್ರದರ್ಶನ ಮಾಡಿದೆ.

ಶುಕ್ರವಾರ ಸಮಾರೋಪ ಮೈಸೂರಿನಲ್ಲಿ ನಡೆಯುತ್ತಿದ್ದು, ಜೆಡಿಎಸ್ ವಿರುದ್ಧ  ಪ್ಲೆಕ್ಸ್ ಹಾಕುವ ಅವರ ಬಣ್ಣ ಬಯಲು ಮಾಡಿದೆ.

ನಗರದ ಹಲವೆಡೆ ಕಾಂಗ್ರೆಸ್ ನವರು ಜೆಡಿಎಸ್ ವಿರುದ್ಧ ಪ್ಲೆಕ್ಸ್ ಗಳನ್ನು ಹಾಕಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

ಅದರಲ್ಲೂ ದೇವೇಗೌಡರ ಕುಟುಂಬದವರು ಮೂಡ ನಿವೇಶನ ಪಡೆದಿದ್ದಾರೆಂದು ಪ್ಲೆಕ್ಸ್ ಗಳನ್ನು ಸಮಾವೇಶದ ಸ್ಥಳ ಸೇರಿದಂತೆ‌ ಅನೇಕ ಕಡೆ ಹಾಕಲಾಗಿದೆ.

ಇದನ್ನು ವಿರೋಧಿಸಿ ಬೆಳಿಗ್ಗೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ವೇಳೆ  ಪೊಲೀಸರು ಅವರನ್ನು ವಶಕ್ಕೆ ಪಡೆದರು.

ಜೆಡಿಎಸ್ ವಿರುದ್ಧ ಪ್ಲೆಕ್ಸ್ ಸಮರ ಸಾರಿದ ಕಾಂಗ್ರೆಸ್ Read More

ತುಂಗಭದ್ರಾ ಜಲಾಶಯದ 19 ನೇ ಗೇಟ್​​ ಚೈನ್ ಲಿಂಕ್ ಕಟ್:ಅಪಾರ ನೀರು ವೇಸ್ಟ್

ಕೊಪ್ಪಳ: ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ 19 ನೆ ನಂಬರ್‌ ಗೇಟ್​​ನ ಚೈನ್ ಲಿಂಕ್ ತುಂಡಾಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.

ಶನಿವಾರ ರಾತ್ರಿ ಸುಮಾರು 11 ಗಂಟೆ ವೇಳೆ ಚೈನ್ ಲಿಂಕ್ ತುಂಡಾಗಿ 1 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಜಲಾಶಯದಿಂದ ನದಿಗೆ ಹರಿದು ಹೋಗುತ್ತಿದೆ.ಈ ಭಾಗದ ಬೆಳೆಗಳಿಗೂ ಹಾನಿಯಾಗಿದೆ.

ಅಪಾರ ಪ್ರಮಾಣದ ನೀರು ಹೊರಬರುತ್ತಿರುವುದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಗಳಿಗೆ ಮಾತ್ರವಲ್ಲದೇ ನೆರೆಯ ಆಂಧ್ರ, ತೆಲಂಗಾಣ ‌ರಾಜ್ಯಗಳ ಪಾಲಿನ ಜೀವನಾಡಿಯಾದ ತುಂಗಭದ್ರ ಜಲಾಶಯದಿಂದ ನೀರು ಹರಿದು ಹೋಗುತ್ತಿರುವುದರಿಂದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ತಡ ರಾತ್ರಿಯೇ ಬೆಂಗಳೂರಿಂದ ಮುನಿರಬಾದ್ ಗೆ ಆಗಮಿಸಿದ‌ ಸಚಿವ ತಂಗಡಗಿ ಜಲಾಶಯವನ್ನು ಪರಿಶೀಲನೆ ನಡೆಸಿದ್ದಾರೆ.‌

19 ಗೇಟ್ ದುರಸ್ಥಿಗಾಗಿ ಡ್ಯಾಂ ನಲ್ಲಿರುವ ಕನಿಷ್ಠ 60 ಟಿಎಂಸಿ ನೀರು ಖಾಲಿ ಅನಿವಾರ್ಯ ಎಂದು ಇಂಜಿನಿರುಗಳು ಹೇಳಿದ್ದಾರೆ.‌ ತುಂಗಭದ್ರಾ ಜಲಾಶಯದ‌ 19ನೇ ಗೇಟ್ ರಿಪೇರಿ ಕುರಿತು ಚರ್ಚಿಸಲು ಬೆಂಗಳೂರು, ಹೈದರಾಬಾದ್ ನಿಂದ ತಜ್ಞರನ್ನು ಕರೆಸಲಾಗುತ್ತಿದೆ.

ತುಂಗಭದ್ರಾ ಜಲಾಶಯದ 19 ನೇ ಗೇಟ್​​ ಚೈನ್ ಲಿಂಕ್ ಕಟ್:ಅಪಾರ ನೀರು ವೇಸ್ಟ್ Read More

ಬಿಜೆಪಿ-ಜೆಡಿಎಸ್ ಷಡ್ಯಂತ್ರಕ್ಕೆಬಲಿಯಾಗೋ ನಲ್ಲಾ, ಕೈ ಕಟ್ಟಿ ಕೂರೋನಲ್ಲ-ಸಿದ್ದು

ಮೈಸೂರು: ನಾನು ಯಾವುದೇ ಕಾರಣಕ್ಕೂ ಬಿಜೆಪಿ-ಜೆಡಿಎಸ್ ಷಡ್ಯಂತ್ರಕ್ಕೆ ಬಲಿಯಾಗೋನಲ್ಲಾ,,ಕೈ ಕಟ್ಟಿ ಕೂರೋನೂ ಅಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಗುಡುಗಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಸಿಎಂ ಮಾತನಾಡಿದರು.

ಈ ನೆಲದ ಶೋಷಿತರು, ಶ್ರಮಿಕರು, ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿ ನಾನು ಇದ್ದೇನೆ, ಇವರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ ಎಂಬ ಕಾರಣಕ್ಕೆ ನನ್ನನ್ನು ಕೆಳಗಿಳಿಸುವ ಹುನ್ನಾರ ನಡೆಸುತ್ತಿದ್ದಾರೆ ಇದಕ್ಕೆ ನಮ್ಮ ನಾಡಿನ‌ ಜನತೆ ಅವಕಾಶ ಕೊಡುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ, ಜೆಡಿಎಸ್ ಎಷ್ಟೇ ಕಪಟ ಉದ್ದೇಶದಿಂದ ಪಾದಯಾತ್ರೆ ನಡೆಸಿದರೂ ನಾನು ಹೆದರುವುದಿಲ್ಲ ಎಂದು ಹೇಳಿದರು.

ರಾಜಭವನ ಮತ್ತು ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ನಡೆಸಿದರೂ ನಾನು ಬೆದರುವುದಿಲ್ಲ, ನಾನು ಇವರ ಷಡ್ಯಂತ್ರಕ್ಕೆ ಬಲಿಯಾಗಿ ಮನೆಯಲ್ಲಿ ಕೂರುವವನಲ್ಲ ಸಿದ್ದರಾಮಯ್ಯ ಕಡಕ್ಕಾಗಿ ನುಡಿದರು.

ಸಮಾವೇಶದಲ್ಲಿ ಭಾಗವಹಿಸಿದ್ದ ಅಭಿಮಾನಿಯೊಬ್ಬರು ತಮ್ಮ ಹೊಟ್ಟೆಯ ಮೇಲೆ ಸಿಎಂ ಸಿದ್ದರಾಮಯ್ಯ,ಸಿಎಂ ಸಿದ್ದು,ಡಿಕೆಸಿ, ಹುಲಿಯ ಕೈ ಲೋಗೊ ಹಾಗೂ ಹಣೆಯ ಮೇಲೆ ಬಾವುಟದ ಚಿನ್ಹೆ ಹೀಗೆ ಬರೆದುಕೊಂಡು ಕೈನಲ್ಲಿ ಬಾವುಟ ಹಿಡಿದು ತಮ್ಮ ಅಭಿಮಾನ ತೋರಿಸಿದ್ದು ಎಲ್ಲರ ಗಮನ ಸೆಳೆಯಿತು.

ಬಿಜೆಪಿ-ಜೆಡಿಎಸ್ ಷಡ್ಯಂತ್ರಕ್ಕೆಬಲಿಯಾಗೋ ನಲ್ಲಾ, ಕೈ ಕಟ್ಟಿ ಕೂರೋನಲ್ಲ-ಸಿದ್ದು Read More

ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೋ ಇಲ್ಲವೋ ಕಾದು ನೋಡಿ:ವಿಜಯೇಂದ್ರ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮಾರ್ಮಿಕವಾಗಿ ನುಡಿದರು.

ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಜಯೇಂದ್ರ ಅವರು ಪೂಜೆ ಸಲ್ಲಿಸಿ ಮೆರವಣಿಗೆ ಪ್ರಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯ ಕಾಂಗ್ರೆಸ್ ವಿರುದ್ಧ ನಡೆಸಿದ ಪಾದಯಾತ್ರೆ ಯಶಸ್ವಿಯಾಗಿದೆ, ಮುಂದಿನ ದಿನಗಳಲ್ಲಿ ಅದರ ಪರಿಣಾಮ ಗೊತ್ತಾಗುತ್ತದೆ, ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ಸಮಾವೇಶ ಯಶಸ್ವಿಯಾಗಲಿ ಎಂದು ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಜನತೆಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ನಾವು ಈ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೆವು, ಅದು ಯಶಸ್ವಿಯಾಗಿದೆ.

ಹಾಗಾಗಿ ಸಮಾವೇಶ ನಡೆಸುವ ಮೂಲಕ ನಾಡಿನ ಜನತೆಗೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಾಗೂ ಅವರು ನಡೆಸುತ್ತಿರುವ ದುರಾಡಳಿತ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ವಿಜಯೇಂದ್ರ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವುದಿಲ್ಲ ಎಂದು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ಇಯಿಸಿದ ಅವರು,ರಾಜೀನಾಮೆ ನೀಡುತ್ತಾರೋ ಇಲ್ಲವೋ ಎಂಬುದನ್ನು ನೀವೇ ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು.

ನಮ್ಮ ಪಾದಯಾತ್ರೆಯ ಪರಿಣಾಮದಿಂದ ಸಿಎಂ ಮುಂದಿನ ದಿನದಲ್ಲಿ ರಾಜೀನಾಮೆ ನೀಡಲೇ ಬೇಕಾಗುವ ಪರಿಸ್ಥಿತಿ ಬಂದೇ ಬರುತ್ತದೆ ಎಂದು ಹೇಳಿದರು.

ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸುವ ವೇಳೆ ಮಾಜಿ ಶಾಸಕ ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೋ ಇಲ್ಲವೋ ಕಾದು ನೋಡಿ:ವಿಜಯೇಂದ್ರ Read More