ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಅರೆಸ್ಟ್

ನವದೆಹಲಿ: ಅಕ್ರಮವಾಗಿ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದ ಆರೋಪ ಸಂಬಂಧ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರನ್ನು
ಬಂಧಿಸಲಾಗಿದೆ.

ವೀರೇಂದ್ರ ಅವರನ್ನು ಸಿಕ್ಕಿಂನಲ್ಲಿ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಶುಕ್ರವಾರ ಹಲವು ರಾಜ್ಯಗಳಲ್ಲಿ ನಡೆಸಿದ ದಾಳಿಯ ನಂತರ 12 ಕೋಟಿ ರೂ, 6 ಕೋಟಿ ರೂ. ಮೌಲ್ಯದ ಚಿನ್ನಾಭರಣ, 10 ಕೆಜಿ ಬೆಳ್ಳಿ ಮತ್ತು ನಾಲ್ಕು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶುಕ್ರವಾರ ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್‌ನಲ್ಲಿನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ, ಬೆಂಗಳೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಟ್ರಾನ್ಸಿಟ್ ರಿಮಾಂಡ್ ಪಡೆಯಲಾಯಿತು ಎಂದು ಇಡಿ ತಿಳಿಸಿದೆ.

ಶಾಸಕರು ತಮ್ಮ ಸಹಚರರೊಂದಿಗೆ ಕ್ಯಾಸಿನೊವನ್ನು ಗುತ್ತಿಗೆ ಪಡೆಯುವ ಸಲುವಾಗಿ ಮಾತುಕತೆ ನಡೆಸಲು ಗ್ಯಾಂಗ್ಟಾಕ್‌ಗೆ ಭೇಟಿ ನೀಡಿದ್ದರು ಎಂದು ತನಿಖಾ ಸಂಸ್ಥೆ ತಿಳಿಸಿದೆ.

‘ವೀರೇಂದ್ರ ಅವರ ಸಹೋದರ ಕೆ.ಸಿ ನಾಗರಾಜ್ ಮತ್ತು ಅವರ ಮಗ ಪೃಥ್ವಿ ಎನ್ ರಾಜ್ ಅವರ ನಿವಾಸದಿಂದ ಆಸ್ತಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಸಹೋದರ ಕೆ.ಸಿ ತಿಪ್ಪೇಸ್ವಾಮಿ ಮತ್ತು ಅವರ ಇತರ ಸಹಚರರು ದುಬೈನಿಂದ ಆನ್‌ಲೈನ್ ಗೇಮಿಂಗ್ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಇ.ಡಿ ತಿಳಿಸಿದೆ.

ಪಪ್ಪೀಸ್ ಕ್ಯಾಸಿನೊ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಷನ್ 7 ಕ್ಯಾಸಿನೊ ಮತ್ತು ಬಿಗ್ ಡ್ಯಾಡಿ ಕ್ಯಾಸಿನೊ ಎಂಬ ಹೆಸರಿನ ಗೋವಾದ ಐದು ಕ್ಯಾಸಿನೊಗಳ ಮೇಲೆಯೂ ದಾಳಿ ನಡೆಸಲಾಗಿದೆ.

ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಅರೆಸ್ಟ್ Read More

ಡಾ ಜಾನಪದ ಎಸ್ ಬಾಲಾಜಿ ಅವರಿಗೆ ಅಂತರಾಜ್ಯ ಜಾನಪದ ಸಿರಿ ಪ್ರಶಸ್ತಿ ಪ್ರದಾನ

ಮಂತ್ರಾಲಯ: ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಸಭಾಂಗಣದಲ್ಲಿ ನಡೆದ
ಸಮಾರಂಭದಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಅವರಿಗೆ ಅಂತರಾಜ್ಯ ಜಾನಪದ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ತೆಲಂಗಾಣ, ಆಂಧ್ರ ಪ್ರದೇಶ್, ಗೋವಾ, ಚಿಕ್ಕಮಗಳೂರು ವತಿಯಿಂದ ಅಂತಾ ರಾಜ್ಯ‌ ಕನ್ನಡ ಸಾಹಿತ್ಯ ಸಮ್ಮೇಳನ ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಸಭಾಂಗಣದಲ್ಲಿ ಜರುಗಿತು.

ಪೂಜ್ಯ ಶ್ರೀ ಸುಭುದೇಂದ್ರ ತೀರ್ಥ ಮಹಾ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಡಾ ಜಾನಪದ ಎಸ್ ಬಾಲಾಜಿ ಯವರ 30 ವರ್ಷಗಳ ಜಾನಪದ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಅಂತ ರಾಜ್ಯ ಜಾನಪದ ಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ ಮಹೇಶ್ ಜೋಶಿ, ಅಯೋಧ್ಯ ರಾಮ ಲಲ್ಲಾ ಶಿಲ್ಪಿ ಡಾ ಅರುಣ್ ಯೋಗಿರಾಜ್, ಸಾಹಿತಿ ಡಾ. ಪ್ರದೀಪ್ ಕುಮಾರ್ ಹೆಬ್ರಿ,
ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಕಾರ್ಯದರ್ಶಿ ಡಾ ಬಿ ಎಂ ಪಟೇಲ್ ಪಾಂಡು,
ಆಂಧ್ರ ಪ್ರದೇಶ ಘಟಕದ ಅಧ್ಯಕ್ಷ ಅಂಜನ್ ಕುಮಾರ್, ತೆಲಂಗಾಣ ರಾಜ್ಯ ಅಧ್ಯಕ್ಷ ಡಾ ಗುಡಗುಂಟಿ ವಿಟ್ಟಲ್ ಜೋಶಿ, ಮಹಾರಾಷ್ಟ್ರ ಅಧ್ಯಕ್ಷ ಸೋಮಶೇಖರ್ ಜಮಶೆಟ್ಟಿ, ಗೋವಾ ಅಧ್ಯಕ್ಷ ಡಾ ಸಿದ್ದಣ್ಣ ಸಂಗಣ್ಣ ಮೇಟಿ, ಚಿಕ್ಕಮಗಳೂರು ಅಧ್ಯಕ್ಷ ಸೂರಿ ಶ್ರೀನಿವಾಸ್, ರಾಯಚೂರು ಜಿಲ್ಲಾ ಕಾರ್ಯದರ್ಶಿ ದಂಡಪ್ಪ ಬಿರಾದರ್ ಅವರ ಸಮ್ಮುಖದಲ್ಲಿ ಡಾ.ಬಾಲಾಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಡಾ ಜಾನಪದ ಎಸ್ ಬಾಲಾಜಿ ಅವರಿಗೆ ಅಂತರಾಜ್ಯ ಜಾನಪದ ಸಿರಿ ಪ್ರಶಸ್ತಿ ಪ್ರದಾನ Read More

ಜಮ್ಮು- ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಮೇಘಸ್ಫೋಟ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭಾನುವಾರ ಮೇಘಸ್ಫೋಟ ಸಂಭವಿಸಿ,ನಾಲ್ಕೈದು ಜನ ಮೃತಪಟ್ಟಿದ್ದಾರೆ.

ಆರು ಜನರು ಗಾಯಗೊಂಡಿದ್ದಾರೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಜಮ್ಮು-ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿ ಕೂಡಾ ಹಾನಿಯಾಗಿದೆ.

ಕಥುವಾ ಜಿಲ್ಲೆಯ ಘಾಟಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಹಲವಾರು ಮನೆಗಳು ಮಣ್ಣಿನಡಿ ಮುಚ್ಚಿಹೋಗಿವೆ. ಪ್ರವಾಹದ ನೀರು ಎಲ್ಲೆಡೆ ಆವರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು-ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿಗೂ ಹಾನಿಯಾಗಿದೆ.

ಕಥುವಾದ ಪೊಲೀಸ್ ಠಾಣೆಯೊಂದು ಸಂಪೂರ್ಣವಾಗಿ ಮುಳುಗಡೆಯಾಗಿದೆ. ರೈಲ್ವೆ ಹಳಿಗೂ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಥುವಾ ಪೊಲೀಸ್ ಠಾಣೆ ವ್ಯಾಪ್ತಿಯ ಬಗಾರ್ಡ್ ಮತ್ತು ಚಾಂಗ್ಡಾ ಗ್ರಾಮಗಳಲ್ಲೂ ಭೂಕುಸಿತ ಸಂಭವಿಸಿದೆ. ಲಖನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ದಿಲ್ವಾನ್-ಹುಟ್ಲಿಯಲ್ಲಿಯೂ ಭೂಕುಸಿತವಾಗಿದೆ.

ಭಾರಿ ಮಳೆಯಿಂದಾಗಿ ನದಿಗಳ ಮಟ್ಟ ಹೆಚ್ಚಾಗಿದೆ. ಉಜ್ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಡಳಿತ ಜನರು ನದಿಗಳ ಬಳಿಗೆ ಹೋಗದಂತೆ ಎಚ್ಚರಿಕೆ ನೀಡಿದೆ.

ಕಿಶ್ತ್ವಾರ್‌ನಲ್ಲಿ ಇನ್ನೂ ನೂರಾರು ಜನರು ಕಾಣೆಯಾಗಿದ್ದಾರೆ. ಮಚ್ಚೇಲ್ ಮಾತಾ ಯಾತ್ರೆಯ ಮಾರ್ಗದಲ್ಲಿ ಪ್ರವಾಹ ಸಂಭವಿಸಿದೆ. ಅನೇಕರು ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಈವರೆಗೆ 167 ಜನರನ್ನು ರಕ್ಷಿಸಲಾಗಿದೆ ಅವರಲ್ಲಿ 38 ಜನರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಮ್ಮು- ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಮೇಘಸ್ಫೋಟ Read More

ತಿರುನೆಲ್ವೆಲಿ-ಶಿವಮೊಗ್ಗ ಮಧ್ಯೆ ವಿಶೇಷ ರೈಲು

ಮೈಸೂರು: ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ತಮಿಳುನಾಡಿನ ತಿರುನೆಲ್ವೆಲಿ – ಶಿವಮೊಗ್ಗ ಮಧ್ಯೆ ಒಂದು ಟ್ರಿಪ್‌ ವಿಶೇಷ ರೈಲು ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ರೈಲು ಸಂಖ್ಯೆ 06103 ತಿರುನಲ್ವೆಲಿಯಿಂದ ಆಗಸ್ಟ್ 17 ಭಾನುವಾರ ಸಂಜೆ 4.20ಕ್ಕೆ ಹೊರಟು ಸೋಮವಾರ ಮಧ್ಯಾಹ್ನ 01.00 ಗಂಟೆಗೆ ಶಿವಮೊಗ್ಗ ಟೌನ್ ತಲುಪಲಿದೆ.

ರೈಲು ಸಂಖ್ಯೆ. 06104 ಶಿವಮೊಗ್ಗ ಟೌನ್ ನಿಂದ ಆಗಸ್ಟ್ 18 ಸೋಮವಾರ ಮಧ್ಯಾಹ್ನ 2.20ಕ್ಕೆ ಹೊರಟು ಮಂಗಳವಾರ ಬೆಳಗ್ಗೆ 10.45 ಕ್ಕೆ ತಿರುನಲ್ವೆಲಿಗೆ ತಲುಪಲಿದೆ.

ಈ ರೈಲು ಎರಡು ಮಾರ್ಗಗಳಲ್ಲಿ ಕಲ್ಲಿದೈಕುರ್ಚಿ, ಅಂಬಾಸಮುದ್ರಂ, ಕಿಜಕಡೈಯಂ, ಪವೂರುಚತ್ರಂ, ತೆಂಕಾಸಿ ಜಂಕ್ಷನ್, ಕಡಯನಲ್ಲೂರು, ಶಂಕರನ್ಕೊವಿಲ್, ರಾಜಪಾಳಯಂ, ಶ್ರೀವಿಲ್ಲಿಪುತ್ತೂರು, ಶಿವಕಾಶಿ, ವಿರುದುನಗರ ಜಂಕ್ಷನ್, ಮದುರೈ ಜಂಕ್ಷನ್, ಕೊಡೈಕೆನಾಲ್ ರಸ್ತೆ, ದಿಂಡಿಗಲ್ ಜಂಕ್ಷನ್, ಕರೂರ್ ಜಂಕ್ಷನ್, ನಮಕ್ಕಲ್, ಸೇಲಂ ಜಂಕ್ಷನ್, ಕುಪ್ಪಂ, ಬಂಗಾರಪೇಟೆ ಜಂಕ್ಷನ್, ಕೃಷ್ಣರಾಜಪುರಂ, ಎಸ್‌ಎಂವಿಟಿ ಬೆಂಗಳೂರು, ಚಿಕ್ಕಬಾಣವರ, ತುಮಕೂರು, ಅರಸೀಕೆರೆ, ಬೀರೂರು, ತರೀಕೆರೆ ಮತ್ತು ಭದ್ರಾವತಿ ನಿಲ್ದಾಣಗಳಲ್ಲಿ ನೀಲುಗಡೆಗೊಳ್ಳಲಿದೆ.ಈ ವಿಶೇಷ ರೈಲು ಒಟ್ಟು 18 ಬೋಗಿಗಳನ್ನು ಹೊಂದಿದೆ.

ಟು ಟೈರ್‌ ಎಸಿ 1, ತ್ರಿ ಟೈರ್‌ ಎಸಿ 2, ಸ್ಲೀಪರ್‌ 9, ಜನರಲ್‌ 4, ಸಿಟ್ಟಿಂಗ್‌ ಕಮ್‌ ಲಗೇಜ್‌ ಕೋಚ್‌- 2 ಬೋಗಿಗಳನ್ನು ಹೊಂದಿರುತ್ತದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕರು ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಮಾಹಿತಿ ನೀಡಿದ್ದಾರೆ.

ತಿರುನೆಲ್ವೆಲಿ-ಶಿವಮೊಗ್ಗ ಮಧ್ಯೆ ವಿಶೇಷ ರೈಲು Read More

ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಘಸ್ಫೋಟ:40 ಮಂದಿ ಸಾ*ವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಚಶೋತಿ ಪ್ರದೇಶದಲ್ಲಿ ಗುರುವಾರ ಸಂಭವಿಸಿದ ಮೇಘಸ್ಫೋಟದಿಂದ ಪ್ರವಾಹ ಉಂಟಾಗಿ 40 ಮೃತಪಟ್ಟಂತಾಗಿದೆ

ಈವರೆಗೆ ಇಬ್ಬರು ಸಿಐಎಸ್ಎಫ್ ಜವಾನರು ಸೇರಿ ಒಟ್ಟು 40 ಮಂದಿ ಸಾವನ್ನಪ್ಪಿದ್ದರೆ, 120ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 220 ಮಂದಿ ನಾಪತ್ತೆಯಾಗಿದ್ದು ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.

ಕಿಶ್ತ್ವಾರದ ಚಶೋತಿಯಲ್ಲಿರುವ ಮಚೈಲ್ ಮಾತಾ ಯಾತ್ರೆಯ ಮಾರ್ಗದಲ್ಲಿ ಈ ದುರಂತ ಸಂಭವಿಸಿದ್ದು, ಭಕ್ತರು ತೀರ್ಥಯಾತ್ರೆ ಕೈಗೊಳ್ಳುವ ಹಾದಿ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ರಕ್ಷಣಾ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಯಾತ್ರಿಕರನ್ನ ಸ್ಥಳಾಂತರ ಮಾಡಲಾಗುತ್ತಿದೆ.

ಮೇಘಸ್ಫೋಟವಾದ ಪ್ರದೇಶಕ್ಕೆ ಎರಡು ತಂಡಗಳನ್ನು ರವಾನಿಸಲಾಗಿದೆ ಎಂದು ಎನ್‌ಡಿಆರ್‌ಎಫ್‌ ತಿಳಿಸಿದೆ.

ಈ‌ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಉಧಂಪುರ್‌ ಸಂಸದರೂ ಆಗಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾತನಾಡಿ, ಮೇಘಸ್ಫೋಟವು ಭಾರೀ ಪ್ರಮಾಣದಲ್ಲಿ ಸಂಭವಿಸಿದೆ, ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುವುದು. ವೈದ್ಯಕೀಯ ಚಿಕಿತ್ಸೆಗಾಗಿ ಆಡಳಿತವು ಹೆಲಿ-ರಕ್ಷಣಾ ವ್ಯವಸ್ಥೆಗಳನ್ನು ಸಹ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದು
ದುರಂತ ನೆನೆದು ಮೃತರಿಗೆ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್‌ ಅಬ್ದುಲ್ಲಾ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಕಿಶ್ತ್ವಾರ್‌ನಲ್ಲಿ ಮೇಘಸ್ಫೋಟದಿಂದ ಉಂಟಾದ ದುರಂತದ ಹಿನ್ನೆಲೆಯಲ್ಲಿ, ನಾಳೆ ಸಂಜೆ ʻಅಟ್ ಹೋಮ್ʼ ಟೀ ಪಾರ್ಟಿಯನ್ನ ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ.

ಬೆಳಗಿನ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ರದ್ದು ಮಾಡಲು ನಿರ್ಧರಿಸಿದ್ದು, ಔಪಚಾರಿಕ ಕಾರ್ಯಕ್ರಮಗಳನ್ನು ಮಾತ್ರ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಘಸ್ಫೋಟ:40 ಮಂದಿ ಸಾ*ವು Read More

ಸುಪ್ರೀಂ ಮಹತ್ವದ ಆದೇಶ:ನಟ ದರ್ಶನ್‌,ಪವಿತ್ರ ಗೌಡ ಜಾಮೀನು ರದ್ದು

ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ಏಳು ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿ ಶಾಕ್ ನೀಡಿದೆ.

ಗುರುವಾರ ಈ ಕೇಸ್‌ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್.ಮಹಾದೇವನ್ ಅವರಿದ್ದ ಪೀಠವು ಈ ಮಹತ್ವದ ಆದೇಶ ನೀಡಿತು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ಇತರೆ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ 2024 ಡಿಸೆಂಬರ್‌ನಲ್ಲಿ ಜಾಮೀನು ನೀಡಿತ್ತು.

ಹೈಕೋರ್ಟ್‌ ಆದೇಶವನ್ನು ಪ್ರಶ್ನೆ ಮಾಡಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಈ ಕುರಿತು ಇತ್ತೀಚೆಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಜಾಮೀನು ನೀಡಿದ ನಡೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಎಲ್ಲಾ ಪ್ರಕರಣದಲ್ಲಿಯೂ ಇದೇ ರೀತಿ ಕೊಲೆ ಅಪರಾಧಿಗೆ ಜಾಮೀನು ನೀಡಬಹುದೆ ಎಂದು ಕಟುವಾಗಿ ಪ್ರಶ್ನೆ ಮಾಡಿತ್ತು.

ಆರೋಪಿಗಳಾದ ದರ್ಶನ್‌ ತೂಗುದೀಪ,
ಪವಿತ್ರಾ ಗೌಡ,ಆರ್‌ ನಾಗರಾಜು,ಎಂ ಲಕ್ಷ್ಮಣ್,ಅನು ಕುಮಾರ್‌ ಅಲಿಯಾಸ್‌ ಅನು,ಜಗದೀಶ್‌ ಅಲಿಯಾಸ್‌ ಜಗ್ಗ
ಪ್ರದೋಷ್‌ ರಾವ್‌ ಅವರುಗಳು ಮತ್ತೆ ಜೈಲು ಸೇರಬೇಕಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ,ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ಹಿಂಪಡೆಯಲಾಗಿದೆ ಎಂದು ಸುಪ್ರೀಂ ಸ್ಪಷ್ಟವಾಗಿ ತಿಳಿಸಿದೆ.

ಜಾಮೀನು ಮಂಜೂರು ವಿಚಾರಣೆಯ ಮೇಲೆ ಪರಿಣಾಮ ಬೀರುತ್ತದೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು,
ಆರೋಪಿ ಎಷ್ಟೇ ದೊಡ್ಡವರಾಗಿರಲಿ, ಅವರು ಕಾನೂನಿಗಿಂತ ದೊಡ್ಡವರಲ್ಲ, ಯಾರೂ ಕಾನೂನಿಗಿಂತ ಮೇಲಿಲ್ಲ, ಯಾರೂ ಕಾನೂನಿಗಿಂತ ಕೆಳಗಿಲ್ಲ. ನಾವು ಕಾನೂನನ್ನು ಪಾಲಿಸುವಾಗ ಯಾರ ಅನುಮತಿಯನ್ನೂ ಕೇಳುವುದಿಲ್ಲ,ಎಲ್ಲಾ ಸಮಯದಲ್ಲೂ ಕಾನೂನನ್ನು ಕಾಪಾಡುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದೆ.

ನಟ ದರ್ಶನ್ ಗೆ ಐಶಾರಾಮಿ ಟ್ರೀಟ್‌ಮೆಂಟ್‌ ಬಗ್ಗೆಯೂ ಸುಪ್ರೀಂ ಕಿಡಿಕಾರಿದೆ.
ಒಂದು ವೇಳೆ ಆರೋಪಿಗಳಿಗೆ ಜೈಲಿನಲ್ಲೇ‌ ರಾಜಾತೀತ್ಯ ನೀಡಲಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದರೆ, ನಾವು ತೆಗೆದುಕೊಳ್ಳುವ ಮೊದಲ ಹೆಜ್ಜೆ ಜೈಲಿನ ಅಧೀಕ್ಷಕರು ಮತ್ತು ಸಂಬಂಧಪಟ್ಟ ಇತರ ಎಲ್ಲಾ ಅಧಿಕಾರಿಗಳನ್ನು ಅಮಾನತುಗೊಳಿಸುವುದು ಎಂದು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರು ಕಠಿಣವಾಗಿ ಎಚ್ಚರಿಸಿದ್ದಾರೆ.

ದರ್ಶನ್ ಸೇರಿ ಇತರ ಆರೋಪಗಳನ್ನು ವಶಕ್ಕೆ ಪಡೆಯುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ,ಜತೆಗೆ ಯಾವ ಜೈಲು ಎಂಬುದನ್ನೂ ನಿರ್ಧರಿಸಿದೆ.ಹಾಗಾಗಿ ಯಾವ ಕ್ಷಣದಲ್ಲಾದರೂ ದರ್ಶನ್,ಪವಿತ್ರ ಗೌಡ ಮತ್ತಿತರರನ್ನು ಪೊಲೀಸರು ವಶಕ್ಕೆ ಪಡೆಯಬಹುದು.

ಸುಪ್ರೀಂ ಮಹತ್ವದ ಆದೇಶ:ನಟ ದರ್ಶನ್‌,ಪವಿತ್ರ ಗೌಡ ಜಾಮೀನು ರದ್ದು Read More

ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ನವದೆಹಲಿ: ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧಂಕರ್ ಕೊಲೆ ಪ್ರಕರಣದ ಆರೋಪಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ರದ್ದುಗೊಳಿಸಿದ್ದಲ್ಲದೆ ಒಂದು ವಾರದೊಳಗೆ ಶರಣಾಗುವಂತೆ ಸುಶೀಲ್ ಕುಮಾರ್ ಗೆ ತಾಕೀತು ಮಾಡಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.

ಮಾರ್ಚ್ 4 ರಂದು ಸುಶೀಲ್ ಕುಮಾರ್​ಗೆ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್​​​ ನ್ಯಾಯಪೀಠ ರದ್ದುಗೊಳಿಸಿದೆ.

ಸುಶೀಲ್ ಕುಮಾರ್​ಗೆ ನೀಡಿದ್ದ ಜಾಮೀನು ಪ್ರಶ್ನಿಸಿ ಸಾಗರ್ ಅವರ ತಂದೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕರೋಲ್ ಮಾನ್ಯ ಮಾಡಿದ್ದಾರೆ.

2021 ಮೇ 4 ರಂದು ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧಂಕರ್(27) ಮೃತಪಟ್ಟಿದ್ದರು.

ಈ ಪ್ರಕರಣದ ಸಂಬಂಧ ಸುಶೀಲ್​ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಮೂರೂವರೆ ವರ್ಷಗಳ ಕಾಲ ಬಂಧನದಲ್ಲಿದ್ದ ನಂತರ ಈ ವರ್ಷದ ಮಾರ್ಚ್​ನಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ವಿಚಾರಣೆ ಆರಂಭವಾದ ಮೂರು ವರ್ಷಗಳಲ್ಲಿ 186 ಪ್ರಾಸಿಕ್ಯೂಷನ್ ಸಾಕ್ಷಿಗಳಲ್ಲಿ ಕೇವಲ 30 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ ಎಂದು ಗಮನಿಸಿದ ದೆಹಲಿ ಹೈಕೋರ್ಟ್ ಸುಶೀಲ್​ ಕುಮಾರ್‌ಗೆ ಜಾಮೀನು ನೀಡಿತ್ತು.

ಆದರೆ ಸುಶೀಲ್​ ಕುಮಾರ್‌ಗೆ ನೀಡಿದ ಜಾಮೀನನ್ನು ಪ್ರಶ್ನಿಸಿ ಸಾಗರ್ ಧಂಕರ್ ತಂದೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಶೀಲ್​ ಕುಮಾರ್ ಮಧ್ಯಂತರ ಜಾಮೀನಿನ ಮೇಲೆ ಹೊರ ಬಂದಾಗ, ಅವರು ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ್ದರು ಎಂದು ವಾದ ಮಂಡಿಸಲಾಯಿತು.

ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ಸಾಗರ್​ ಮೇಲೆ ಹಲ್ಲೆ: ಛತ್ರಸಾಲ್ ಕ್ರೀಡಾಂಗಣದ ಪಾರ್ಕಿಂಗ್ ಸ್ಥಳದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಧಂಕರ್ ಮತ್ತು ಅವರ ಇಬ್ಬರು ಸ್ನೇಹಿತರಾದ ಸೋನು ಮತ್ತು ಅಮಿತ್ ಕುಮಾರ್ ಮೇಲೆ ಸುಶೀಲ್​ ಕುಮಾರ್ ಮತ್ತು ಸಹಚರರು ಹಲ್ಲೆ ನಡೆಸಿದ್ದರೆಂದು ಆರೋಪಿಸಲಾಗಿತ್ತು

ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು Read More

ಕಂದಕಕ್ಕೆ ಉರುಳಿದ ಸಿ ಆರ್ ಪಿ ಎಫ್ ವಾಹನ:ಮೂವರು ಯೋಧರು ಸಾವು

ಜಮ್ಮು: ಕೇಂದ್ರ ಮೀಸಲು ಪೊಲೀಸ್​ ಪಡೆ ಸಿಬ್ಬಂದಿಗಳಿದ್ದ ವಾಹನ ಕಂದಕಕ್ಕೆ ಉರುಳಿ ಮೂವರು ಯೋಧರು ಮೃತಪಟ್ಟ ಘಟನೆ
ಜಮ್ಮು ಮತ್ತು ಕಾಶ್ಮೀರದ ಉಧಂಪುರ್​​ ಜಿಲ್ಲೆಯ ನಲ್ಹಾದಲ್ಲಿ ನಡೆದಿದೆ.

ಈ ಘಟನೆಯಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು,ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಡ್ವಾ ಪ್ರದೇಶದಲ್ಲಿ ಬೆಳಗ್ಗೆ ಸುಮಾರು 10.30ಕ್ಕೆ ಅಪಘಾತ ಸಂಭವಿಸಿದೆ. 23 ಮಂದಿ ಸಿಆರ್​ಪಿಎಫ್​ ಯೋಧರು ಬಸಂತ್​ ಘರ್​ನಿಂದ ವಾಪಸಾಗುತ್ತಿದ್ದರು.

ಜಮ್ಮು ಮತ್ತು ಕಾಶ್ಮೀರದವರೇ ಆಗಿರುವ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್, ಉಧಂಪುರ​​ ಜಿಲ್ಲಾಧಿಕಾರಿಯಿಂದ ಈ ಬಗ್ಗೆ ಮಾಹಿತಿ ಪಡೆದಿದ್ದು, ಗಾಯಗೊಂಡ ಯೋಧರಿಗೆ ಎಲ್ಲ ರೀತಿಯ ಸಹಾಯ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಂದಕಕ್ಕೆ ಉರುಳಿದ ಸಿ ಆರ್ ಪಿ ಎಫ್ ವಾಹನ:ಮೂವರು ಯೋಧರು ಸಾವು Read More

ಮೈಸೂರು-ತಿರುಪತಿಗೆ ಹೆಚ್ಚುವರಿ ರೈಲು ಸೇವೆ: ಕೇಂದ್ರ ಸಚಿವರಲ್ಲಿ ಯದುವೀರ್‌ ಮನವಿ

ಮೈಸೂರು: ಖ್ಯಾತ ಧಾರ್ಮಿಕ ಕ್ಷೇತ್ರ ತಿರುಪತಿಗೆ ಮೈಸೂರು, ಮಂಡ್ಯ, ಚಾಮರಾಜನಗರದಿಂದ ಅತಿ ಹೆಚ್ಚು ಭಕ್ತರು ಪ್ರಯಾಣಿಸುತ್ತಿರುವುದರಿಂದ ಹೆಚ್ಚುವರಿ ರೈಲು ಸೇವೆ ಒದಗಿಸಬೇಕು ಎಂದು ಕೇಂದ್ರ ಸಚಿವ ಅಶ್ವಿನ್‌ ವೈಷ್ಣವ್‌ ಅವರಿಗೆ ಸಂಸದ
ಯದುವೀರ್ ಒಡೆಯರ್ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿ ತಿರುಪತಿ-ಬೆಂಗಳೂರು ನಡುವಿನ ವಂದೇಭಾರತ್‌ ರೈಲನ್ನು ಮೈಸೂರಿನವರೆಗೆ ವಿಸ್ತರಣೆ ಮಾಡಬೇಕು ಎಂದು ಯದುವೀರ್ ಒಡೆಯರ್ ಮನವಿ ಸಲ್ಲಿಸಿದ್ದಾರೆ.

ನಂತರ‌ ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ಯದುವೀರ್ ಒಡೆಯರ್,
ಆಂಧ್ರಪ್ರದೇಶದ ತಿರುಪತಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ತಿರುಪತಿಗೆ ನಿರಂತರವಾಗಿ ಭೇಟಿ ನೀಡುತ್ತಿರುತ್ತಾರೆ. ಭಕ್ತರ ದೀರ್ಘಕಾಲದ ಬೇಡಿಕೆಯಂತೆ ತಿರುಪತಿ-ಬೆಂಗಳೂರು ವಂದೇ ಭಾರತ್‌ ರೈಲು ಸಂಚಾರವನ್ನು ಮೈಸೂರಿನವರೆಗೆ ವಿಸ್ತರಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ, ಅಸ್ತಿತ್ವದಲ್ಲಿರುವ ರೈಲು ಸೇವೆಗಳು ವಿರಳವಾಗಿವೆ. ಕೆಲವು ದೀರ್ಘ ಪ್ರಯಾಣದ ಅವಧಿಯದ್ದಾಗಿದೆ. ಇದರಿಂದ ಹಿರಿಯ ನಾಗರಿಕರು, ಭಕ್ತರು ಮತ್ತು ಪ್ರವಾಸಿಗರಿಗೆ ಅನಾನುಕೂಲವಾಗುತ್ತಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.

ಮೈಸೂರು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಲಭ್ಯತೆ ಮತ್ತು ನಿರ್ವಹಣಾ ಸೌಲಭ್ಯಗಳನ್ನು ಪರಿಗಣಿಸಿ, ಮೈಸೂರು – ರೇಣಿಗುಂಟ/ತಿರುಪತಿ – ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಆರಂಭಿಸಬಹುದಾಗಿದೆ. ಈ ನಿಟ್ಟಿನಲ್ಲಿ, ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ವಿಸ್ತರಿಸಬೇಕೆಂದು ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಯದುವೀರ್‌ ತಿಳಿಸಿದ್ದಾರೆ.

ಈ ಅತಿ ವೇಗದ, ಆಧುನಿಕ ರೈಲು ಸೇವೆಯು ಸಾವಿರಾರು ಪ್ರಯಾಣಿಕರಿಗೆ ಸುರಕ್ಷಿತ, ಆರಾಮದಾಯಕ ಮತ್ತು ಉತ್ತಮ ಪ್ರಯಾಣ ಆಯ್ಕೆಯನ್ನು ಒದಗಿಸುತ್ತದೆ. ಇದರಿಂದ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದು ವಿವರಿಸಿದ್ದಾರೆ.

ಮನವಿ ಪತ್ರವನ್ನು ಸ್ವೀಕರಿಸಿದ ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಅವರು ಅತಿ ಶೀಘ್ರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಂಸದ ಯದುವೀರ್‌ ಒಡೆಯರ್‌ ಮಾಹಿತಿ ನೀಡಿದ್ದಾರೆ.

ರೈಲ್ವೆ ಸಚಿವರಿಗೆ ಕೃತಜ್ಞತೆ
ಮೈಸೂರು-ಚಾಮರಾಜನಗರ ರೈಲು ಮಾರ್ಗದ ವಿದ್ಯುದೀಕರಣವನ್ನು ತ್ವರಿತಗೊಳಿಸುವಲ್ಲಿ ರೈಲ್ವೆ ಸಚಿವರು ನೀಡಿದ ಬೆಂಬಲಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ, ಇದು ಈಗ ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆಗೆ ದಾರಿ ಮಾಡಿಕೊಡುವ ನಿರ್ಣಾಯಕ ಹೆಜ್ಜೆಯಾಗಿದೆ. ಅವರ ಸಕಾಲಿಕ ನಡೆಯು ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಸಂಸದರು ತಿಳಿಸಿದ್ದಾರೆ.

ತಮಿಳುನಾಡಿನ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ರಾಮೇಶ್ವರಂಗೆ ಮೈಸೂರಿನಿಂದ ಇದುವರೆಗೆ ಯಾವುದೇ ನೇರ ರೈಲು ಸಂಪರ್ಕ ಇಲ್ಲ. ಇದರಿಂದ ಮೈಸೂರು ಭಾಗದ ಜನರಿಗೆ ಈ ತೀರ್ಥ ಕ್ಷೇತ್ರಕ್ಕೆ ತೆರಳಲು ಅನನುಕೂಲವಾಗುತ್ತಿದೆ. ಈ ನಿಟ್ಟಿನಲ್ಲಿ ಮೈಸೂರು-ರಾಮೇಶ್ವರಂ ನಡುವೆ ರೈಲು ಸಂಚಾರ ಆರಂಭಿಸಬೇಕೆಂದು ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಮನವಿ ಮಾಡಲಾಗಿದೆ ಎಂದು ಯದುವೀರ್‌ ಒಡೆಯರ್ ಮಾಹಿತಿ ನೀಡಿದ್ದಾರೆ.

ಮೈಸೂರು-ತಿರುಪತಿಗೆ ಹೆಚ್ಚುವರಿ ರೈಲು ಸೇವೆ: ಕೇಂದ್ರ ಸಚಿವರಲ್ಲಿ ಯದುವೀರ್‌ ಮನವಿ Read More

ಉತ್ತರಾಖಂಡದಲ್ಲಿ ಮೇಘಸ್ಫೋಟ:ಕೊಚ್ಚಿ ಹೋದ ಊರು

ಉತ್ತರಾಖಂಡ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಮೇಘಸ್ಫೋಟದಿಂದ ದಿಢೀರ್ ಪ್ರವಾಹ ಸುನಾಮಿಯಂತೆ ಅಪ್ಪಳಿಸಿ ಒಂದು ಊರೇ ಕೊಚ್ಚಿಹೋಗಿದೆ.

ಭಾರೀ ಮಳೆ ಹಾಗೂ ಏಕಾಏಕಿ ಮೇಘ ಸ್ಪೋಟವಾಗಿ ಪ್ರವಾಹದ ಅಲೆ ರಕ್ಕಸನಂತೆ ಅಪ್ಪಳಿಸಿ ಮನೆಗಳನ್ನು ತನ್ನೊಡನೆ ಎಳೆದೊಯ್ದಿದೆ.ಇದರಿಂದಾಗಿ ಏನಾಗುತ್ತಿದೆ ಎಂಬ ಅರಿವಾಗುವ ಮುನ್ನ ಹಲವಾರು ಮಂದಿ ಕಾಣೆಯಾಗಿದ್ದಾರೆ.

ಭಾರಿ ಮಳೆಯಿಂದಾಗಿ ನದಿಗಳ ನೀರಿನ ಮಟ್ಟ ಹೆಚ್ಚಾಗಿದ್ದು, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಸಾರ್ವಜನಿಕರು ನದಿಗಳ ಬಳಿ ಸೆಲ್ಫಿ ತೆಗೆದುಕೊಳ್ಳಲು, ರೀಲ್ಸ್‌ ಮಾಡಲು ಹೋಗಬಾರದೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ದಿಢೀರ್ ಪ್ರವಾಹ ಸಂಬಂಧ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರತಿಕ್ರಿಯಿಸಿದ್ದು, ಈ ಸುದ್ದಿ ಅತ್ಯಂತ ದುಃಖಕರ ಎಂದಿದ್ದಾರೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಜಿಲ್ಲಾಡಳಿತ ಸೇರಿದಂತೆ ಇತರೆ ತಂಡಗಳು ದಮರೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಧಾಮಿ ತಿಳಿಸಿದ್ದಾರೆ.

ಉತ್ತರಾಖಂಡದಲ್ಲಿ ಮೇಘಸ್ಫೋಟ:ಕೊಚ್ಚಿ ಹೋದ ಊರು Read More