ಬೆಂಗಳೂರು: ತಿರುಪತಿಯಲ್ಲಿ ಪ್ರಸಾದವಾಗಿ ನೀಡಿದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವರದಿಯ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ಕ್ಷಮೆ ಕೋರಿ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಸೆ.22 ರಿಂದ 11 ದಿನದ ಪ್ರಾಯಶ್ಚಿತ ದೀಕ್ಷೆ ಕೈಗೊಂಡಿದ್ದಾರೆ.
ತಿರುಪತಿ ಲಡ್ಡು ವಿವಾದದ ಬಗ್ಗೆ ಎಕ್ಸ್‌ನಲ್ಲಿ ಪವನ್ ಕಲ್ಯಾಣ್ ಪ್ರತಿಕ್ರಿಯಿಸಿ, ತಿರುಪತಿ ಲಡ್ಡು ಅಂದರೆ ಅಮೃತಕ್ಕೆ ಸಮನಾಗಿ ನೋಡುತ್ತೇವೆ,ಈ ಲಡ್ಡು ಪ್ರಸಾದ ಅಶುದ್ಧವಾಗಿದೆ,ಈ ಪಾಪವನ್ನು ಆರಂಭದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗದಿರುವುದು ಹಿಂದೂ ಜನಾಂಗಕ್ಕೆ ಕಳಂಕ ಎಂದು ಪಶ್ಚಾತ್ತಾಪ ಪಟ್ಟಿದ್ದಾರೆ.
ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬೆರಸಿರುವುದು ಗೊತ್ತಾದಾಗ ಬೆಚ್ಚಿಬಿದ್ದೆ. ತಪ್ಪಿತಸ್ಥ ಎಂಬ ಭಾವನೆ, ಜನರ ಹಿತಕ್ಕಾಗಿ ಹೋರಾಟ ನಡೆಸುತ್ತಿರುವ ನನಗೆ ಆರಂಭದಲ್ಲಿ ಇಂತಹ ತೊಂದರೆಗಳು ಗಮನಕ್ಕೆ ಬಾರದಿರುವುದು ನೋವು ತಂದಿದೆ. ಸನಾತನ ಧರ್ಮವನ್ನು ನಂಬಿ ಆಚರಿಸುವ ಎಲ್ಲರೂ ಇದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಅದರ ಭಾಗವಾಗಿ ನಾನು ಪ್ರಾಯಶ್ಚಿತ್ತ ದೀಕ್ಷೆಯನ್ನು ಮಾಡುವ ಸಂಕಲ್ಪವನ್ನು ಕೈಗೊಂಡಿದ್ದೇನೆ.ಸೆಪ್ಟೆಂಬರ್ 22 ಭಾನುವಾರ ಬೆಳಗ್ಗೆ ಗುಂಟೂರು ಜಿಲ್ಲೆಯ ನಂಬೂರಿನಲ್ಲಿ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೀಕ್ಷೆಯನ್ನು ಕೈಗೊಳ್ಳುತ್ತಿದ್ದೇನೆ. ಇಂದಿನಿಂದ 11 ದಿನಗಳ ಕಾಲ ದೀಕ್ಷೆಯನ್ನು ಮಾಡುತ್ತೇನೆ. ಬಳಿಕ ತಿರುಮಲಕ್ಕೆ ಭೇಟಿ ನೀಡುತ್ತೇನೆ ಎಂದು ತಿಳಿಸಿದ್ದಾರೆ
ಹಿಂದೂಧರ್ಮವನ್ನು ಅದರ ಸಂಸ್ಕೃತಿಯನ್ನು ಉದ್ದರಿಸಬೇಕಾದ ಕಾಲವಿದು, ನಮ್ಮ ಧರ್ಮವನ್ನು ನಾವು ಕಾಪಾಡಿಕೊಳ್ಳೋಣ ಎಂದು ಪವನ್ ಕಲ್ಯಾಣ್ ಕರೆ ನೀಡಿದ್ದಾರೆ.
ಸನಾತನ ಧರ್ಮದ ಮೇಲೆ ದಾಳಿ ನಡೆಸಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದೂ ಹೇಳಿದ್ದಾರೆ.
ಅಯೋಧ್ಯೆ: ಲಡ್ಡು ಪ್ರಸಾದವನ್ನ ಕಲಬೆರಕೆ ತುಪ್ಪ ಹಾಗೂ ಪ್ರಾಣಿಯ ಕೊಬ್ಬಿನ ಮಿಶ್ರಣದಿಂದ ತಯಾರಿಸಿದ್ದಾರೆ ಇದು ಮಹಾ ಅಪಚಾರ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ ಬೇಸರ ಪಟ್ಟಿದ್ದಾರೆ.
ಅಯೋಧ್ಯೆಯಲ್ಲಿ ತಿರುಪತಿ ಲಡ್ಡು ವಿವಾದದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸಾದದಲ್ಲಿ ಮೀನಿನ ಎಣ್ಣೆ, ಹಂದಿಯ ಕೊಬ್ಬು, ಹಸುವಿನ ಕೊಬ್ಬು ಬಳಸಿದ್ದಾರೆ, ಇದು ಹಿಂದೂ ಸಮಾಜಕ್ಕೆ ಬಗೆದಿರುವ ದೊಡ್ಡ ಅಪಚಾರ ಜತೆಗೆ ಇದು ದೇವರಿಗೂ ಬಗೆದಿರುವ ಅಪಚಾರ. ಸರ್ಕಾರವೇ ಈ ಕೃತ್ಯ ನಡೆಸಿದೆ ಎಂದು ಖಂಡಿಸಿದರು.
ತಿರುಪತಿಯ ಶ್ರೀನಿವಾಸ ದೇವರು, ಗೋವಿನ ರಕ್ಷಣೆಗೆ ಅವತರಿಸಿದವ,ಅಂತಹ ಶ್ರೀನಿವಾಸ ದೇವರಿಗೆ ಹಸುವಿನ ಕೊಬ್ಬಿನ ಪ್ರಸಾದ ನೀಡಿದ್ದೀರಿ. ಇದು ಬಹುದೊಡ್ಡ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲಿನ ಹಲ್ಲೆ ಇದಾಗಿದೆ, ಉಪಯೋಗಕ್ಕೆ ಅನರ್ಹವಾದ ತುಪ್ಪವನ್ನು ದೇವಾಲಯಕ್ಕೆ ಬಳಸಿದ್ದಾರೆ ಇಂತಹ ತುಪ್ಪ ತಯಾರಿಸುವ ಅಡ್ಡಗಳನ್ನು ಕಂಡುಹಿಡಿದು ತನಿಖೆ ನಡೆಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.
ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಸರ್ಕಾರದ ಹಿಡಿತದಲ್ಲಿ ಇರಬಾರದು,ಇವು ಹಿಂದೂ ಸಮಾಜದ ಕೈಯಲ್ಲಿರಬೇಕು, ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೀಗೆಯೇ ಹೇಳಿದೆ. ತಡ ಮಾಡದೆ ಸರ್ಕಾರದ ಸ್ವಾಧೀನದಿಂದ ದೇಗುಲ ಮುಕ್ತಗೊಳಿಸಿ, ಹಿಂದೂಗಳ ಸಂಸ್ಥೆಗೆ ತಿರುಪತಿ ದೇವಾಲಯದ ಆಡಳಿತ ನೀಡಿ ಎಂದು ವಿಶ್ವಪ್ರಸನ್ನ ಶ್ರೀ ಆಗ್ರಹಿಸಿದರು.
ವಿಜಯಪುರ: ಜಗನ್ ಮೋಹನ್ ರೆಡ್ಡಿ ಅವರು ಸಿಎಂ ಆದ ನಂತರ ಇಡೀ ಪ್ರಪಂಚಕ್ಕೆ ಮಾಡಿದ್ದು ಮೋಸ,ಅವರನ್ನು ಬಂಧಿಸುವ ಕೆಲಸವಾಗಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮದೊಂದಿಗೆ ತಿರುಪತಿ ಲಡ್ಡುವಿನಲ್ಲಿ ಪ್ರಾಣಿಕೊಬ್ಬು ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿದೇಶಿ ಕ್ರಿಸ್ಚಿಯನ್ ಮಷಿನರಿಗಳಿಂದ ಈ ತರಹ ನಡೆದಿದೆ. ಹಿಂದುತ್ವ ಪ್ರತಿಪಾದಕರಿಗೆ, ಹಿಂದೂಗಳ ಶ್ರದ್ಧೆಗೆ ಭಂಗ ತರುವ ಕೆಲಸ ಮಾಡಿದ್ದಾರೆ. ಈಗಲೂ ನಾವು ಮಾಡಿಲ್ಲ ಎಂದು ಹೇಳುತ್ತಾರೆ. ಲ್ಯಾಬ್ ರಿಪೋರ್ಟ್ ಬಗ್ಗೆ ಇವರಿಗೆ ನಂಬಿಕೆ ಇಲ್ಲವಾ ಎಂದು ಪ್ರಶ್ನಿಸಿದರು.
ನಮ್ಮ ಶ್ರದ್ಧೆ ಹಾಗೂ ಶ್ರದ್ಧಾಕೇಂದ್ರಕ್ಕೆ ಅಪಮಾನ ಮಾಡುವವರಿಗೆ ತಕ್ಕ ಶಿಕ್ಷೆ ಆಗಬೇಕು, ಇದರಲ್ಲಿ ವಿದೇಶಿ ಸಂಚಿದೆ, ಈ ಪ್ರಕರಣ ಸಿಬಿಐಗೆ ತನಿಖೆಗೆ ಕೊಡಬೇಕು ಎಂದು ಒತ್ತಾಯಿಸಿದರು.
ದೇವರ ದಯೆಯಿಂದ ಇಡೀ ದೇಶದ ಎಲ್ಲ ಪಕ್ಷದ ನಾಯಕರು ಇದನ್ನು ಖಂಡಿಸಿದ್ದಾರೆ. ಇದು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ, ತಿರುಪತಿ ತಿಮ್ಮಪ್ಪನ ಬಗ್ಗೆ ಇರುವ ಶ್ರದ್ಧೆಯಿಂದ ಎಲ್ಲರೂ ಇದನ್ನು ಖಂಡಿಸಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.
ಹರಿದ್ವಾರ: ಉತ್ತರ ಭಾರತದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿಯೇ ರಾಜ್ಯದ ಕಾವೇರಿ ನದಿಗೆ ಕಾವೇರಿ ಆರತಿ ನಡೆಸಲು ಸರ್ಕಾರ ಮುಂದಾಗಿದೆ.
ಈ ಬಗ್ಗೆ ಅಧ್ಯಯನ ನಡೆಸಲು ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಹರಿದ್ವಾರ ಮತ್ತು ವಾರಾಣಾಸಿಗೆ ಭೇಟಿ ನೀಡಿದೆ.
ಶುಕ್ರವಾರ ಹರಿದ್ವಾರಕ್ಕೆ ತೆರಳಿರುವ ನಿಯೋಗ ವಿಶೇಷ ಗಂಗಾರತಿಯಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿ, ಆರತಿ ಮೇಲುಸ್ತುವಾರಿ ನೋಡಿಕೊಳ್ಳುವ ಹಿಂದೂ ಸಭಾ ಜೊತೆ ಮಾತುಕತೆ ನಡೆಸಿ,ಅಗತ್ಯ ಮಾಹಿತಿ ಪಡೆದುಕೊಂಡರು.
ನಂತರ ಸಚಿವ ಚಲುವರಾಯಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ,ಕಾವೇರಿ ಆರತಿಗೆ ಎರಡು, ಮೂರು ಸ್ಥಳಗಳನ್ನು ಗುರುತಿಸಲಾಗಿದೆ, ಅಂತಿಮಗೊಂಡ ಸ್ಥಳದಲ್ಲಿ ಆರತಿಗಾಗಿ ಸೋಪಾನೆಕಟ್ಟೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಹರಿದ್ವಾರದಲ್ಲಿ ನಿತ್ಯ ಗಂಗಾ ಆರತಿ ನಡೆಯುತ್ತಿದೆ. ರಾಜ್ಯದಲ್ಲಿ ವಾರದಲ್ಲಿ ಎರಡು ಅಥವಾ ಮೂರು ದಿನ ಆರತಿ ಮಾಡಬೇಕೆ ಅಥವಾ ಪ್ರತಿದಿನ ಆರತಿ ನಡೆಸಬೇಕೇ ಎಂಬುದರ ಬಗ್ಗೆ ಸಮಿತಿ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಹೇಳಿದರು.
ಆರಂಭದಲ್ಲಿ ಹರಿದ್ವಾರ ಮತ್ತು ವಾರಾಣಸಿಯ ಸಾಧು, ಸಂತರನ್ನು ಆಹ್ವಾನಿಸಿ ಅವರಿಂದ ಕಾವೇರಿ ಆರತಿ ನಡೆಸಲಾಗುತ್ತದೆ. ಬಳಿಕ ಅವರಿಂದಲೇ ಸ್ಥಳೀಯ ವೈದಿಕರಿಗೆ ತರಬೇತಿ ಕೊಡಿಸಿ ಕಾವೇರಿ ಆರತಿ ಮುಂದುವರಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಹರಿದ್ವಾರದ ಗಂಗಾ ಮಹಾಸಭಾದ ಸಮಿತಿಯ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಗಂಗಾ ಆರತಿ ಇತಿಹಾಸದ ಬಗ್ಗೆ ಮಾಹಿತಿ ನೀಡಿ ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು..
ಭಾನುವಾರ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವುದರ ಜೊತೆಗೆ ಘಾಟ್‌ನಲ್ಲಿ ಸಂಚರಿಸಿ, ಅಲ್ಲಿನ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಚಲುವರಸಯಸ್ವಾಮಿ ವಿವರಿಸಿದರು.
ಸುಮಾರು 5 ಕೋಟಿ ರೂ.ವೆಚ್ಚದಲ್ಲಿ ಕಾವೇರಿಗೆ ಆರತಿ ಯೋಜನೆ ರೂಪಿಸಲಾಗುತ್ತಿದ್ದು, ಅಧ್ಯಯನ ನಡೆಸಲು ಚಾಮರಾಜನಗರ, ಮೈಸೂರು, ಮಂಡ್ಯ, ಮಡಿಕೇರಿ ಭಾಗದ ಶಾಸಕರ ಸಮಿತಿಯನ್ನು ರಚಿಸಲಾಗಿದೆ.
ಚಿತ್ರನಟ ಹಾಗೂ ಸಂಗೀತ ನಿರ್ದೇಶಕ ಸಾಧುಕೋಕಿಲ ಅವರು ಕೂಡಾ ಸಮಿತಿಯಲಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಸೂಚನೆಯಂತೆ ಕಾವೇರಿ ಆರತಿ ಕುರಿತು ವಿಶೇಷ ಹಾಡು ರಚಿಸಲಿದ್ಧಾರೆ ಎಂದು ತಿಳಿದುಬಂದಿದೆ.
ಮೈಸೂರು: ನಮ್ಮ ದೇಶದ ಒಕ್ಕೂಟ ವ್ಯವಸ್ಥೆ ಎಂಬುದನ್ನು ಮರೆತಿರುವ ಕೇಂದ್ರ ಸರ್ಕಾರ ಈಗ ಒಂದು ದೇಶ ಒಂದು ಚುನಾವಣೆಯನ್ನು ಮಾಡಲು ಹೊರಟಿದೆ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಖಂಡಿಸಿದ್ದಾರೆ.
ನೆಲ ಜಲ ಮತ್ತು ಭಾಷೆ ವಿಷಯದಲ್ಲಿ ಸಾಕಷ್ಟು ವೈವಿಧ್ಯಮಯ ಸನ್ನಿವೇಶವನ್ನು ಹೊಂದಿರುವ ರಾಜ್ಯಗಳು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡನೆ ಆದ ಮೇಲೆ ಒಕ್ಕೂಟ ವ್ಯವಸ್ಥೆಯ ಭಾಗವಾಗಿ ತಮ್ಮದೇ ಆದ ಕೆಲವೊಂದು ಅಧಿಕಾರವನ್ನು ಪಡೆದಿವೆ.
ರಾಜ್ಯಗಳಿಗೆ ಇರುವಂತಹ ಚುನಾವಣಾ ವ್ಯಾಪ್ತಿಯನ್ನು ಬದಲಿಸುವಂತಹ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರ ರಾಜ್ಯದ ಅಸ್ತಿತ್ವವನ್ನು ವಿಪರೀತವಾಗಿ ಅವಮಾನಿಸುತ್ತಿದೆ ಎಂದು ಪ್ರಕಟಣೆಯಲ್ಲಿ ಸಚಿವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಚುನಾವಣಾ ವ್ಯವಸ್ಥೆಯಲ್ಲಿ ಅಕ್ರಮಗಳು ನಿಲ್ಲಬೇಕಾದರೆ, ಆಯಾ ರಾಜ್ಯಗಳೇ ಚುನಾವಣಾ ವ್ಯವಸ್ಥೆ ನಡೆಯಲು ಹಣಕಾಸನ್ನು ಒದಗಿಸಬೇಕು, ಆಗ ಮಾತ್ರ ಚುನಾವಣಾ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ತರಬಹುದು.
ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಯೋಚಿಸಬೇಕೇ ವಿನಃ, ಒಂದು ದೇಶ ಒಂದು ಚುನಾವಣೆ ಎಂಬುದಾಗಿ ಅಲ್ಲ ಎಂದು ತಿಳಿಸಿದ್ದಾರೆ.
ಕಳೆದ ಬಾರಿ ಸೋಲುವ ಭಯದಿಂದ ಲೋಕಸಭೆ ಚುನಾವಣೆಯನ್ನೇ ಏಳು ಹಂತದಲ್ಲಿ ನಡೆಸಿದ ಇವರು, ಜಮ್ಮು ಮತ್ತು ಕಾಶ್ಮೀರ ಚುನಾವಣೆಯನ್ನು ಒಟ್ಟಾಗಿ ನಡೆಸಿದರೆ ಎಲ್ಲಿ ಅದರ ಮೇಲಿನ ನಿಯಂತ್ರಣ ಕೈತಪ್ಪುವುದೋ ಎಂದು ಹೆದರಿ ಪ್ರತ್ಯೇಕವಾಗಿ ಈ ರಾಜ್ಯಗಳ ಚುನಾವಣೆ ನಡೆಸುತ್ತಿದ್ದಾರೆ.
ಇಂತವರು ಒಂದು ದೇಶ ಒಂದು ಚುನಾವಣೆ ಎನ್ನುವುದು ಒಂದು ಹಾಸ್ಯಾಸ್ಪದ ಸಂಗತಿಯಾಗಿದ್ದು, ಸ್ಪಷ್ಟತೆ ಇಲ್ಲದ ಮತ್ತು ರಾಜ್ಯ ವಿರೋಧಿ ಆಗಿರುವ ಇವರ ಧೋರಣೆಯ ಬಗ್ಗೆ ದೇಶದ ವಿಪಕ್ಷಗಳು ಗಂಭೀರವಾಗಿ ಹೋರಾಟ ಮಾಡುವಂತಾಗಬೇಕು ಮತ್ತು ಸ್ಟೇಟ್ ಫಂಡಿಂಗ್ ಮೂಲಕ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಎಲ್ಲರೂ ಒತ್ತಾಯಿಸಬೇಕು ಎಂದು ಸಚಿವ ಮಹದೇವಪ್ಪ ಕರೆ ನೀಡಿದ್ದಾರೆ.
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದೆ ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ರೇಷ್ಮೆ ಉದ್ಯಮ ದೇಶದ ಜಿ ಡಿಪಿ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಶುಕ್ರವಾರ ಕೇಂದ್ರ ರೇಷ್ಮೆ ಮಂಡಳಿ ವತಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ಕೇಂದ್ರ ರೇಷ್ಮೆ ಮಂಡಳಿಯ ಪ್ಲಾಟಿನಮ್ ಜುಬಿಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ 27 ರಾಜ್ಯಗಳ ರೈತರು ತಮ್ಮನ್ನು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಕೂಡಾ ರೇಷ್ಮೆ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಮೈಸೂರು ಭಾಗದಲ್ಲಿ ಅಭಿವೃದ್ಧಿ ಹೊಂದಲು ಮೈಸೂರು ಅರಸರ ಕೊಡುಗೆ ಹೆಚ್ಚು ಎಂದು ತಿಳಿಸಿದರು.
ಚೀನಾದಲ್ಲಿ ಹೆಚ್ಚು ರೇಷ್ಮೆ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತವು ರೇಷ್ಮೆ ಬೆಳೆಯಲ್ಲಿ ಪ್ರಥಮ ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು 1.52 ಲಕ್ಷ ಕೋಟಿ ಹಣವನ್ನು ಕೃಷಿ ಕ್ಷೇತ್ರಕ್ಕೆ ನೀಡುತ್ತಿದೆ. ಪ್ರತಿ ಕ್ಯಾಬಿನೆಟ್ ಸಭೆಯಲ್ಲಿ ರೈತರ ಅಭಿವೃದ್ಧಿಗೆ ಸಂಬಂದಿಸಿದ ಚರ್ಚೆಗಳು ನಡೆಯುತ್ತವೆ. ರೈತರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ,ಅದಕ್ಕಾಗಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ರೈತರು ಆತ್ಮ ವಿಶ್ವಾಸದಿಂದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಶ್ಯಾಮ್ ಪ್ರಕಾಶ್ ಮುಖರ್ಜಿ ಅವರ ದೂರ ದೃಷ್ಟಿಯಿಂದ ಕೇಂದ್ರೀಯ ರೇಷ್ಮೆ ಮಂಡಳಿ ಪ್ರಾರಂಭವಾಯಿತು. ಈ ಮಂಡಳಿಯ ಪ್ರಾರಂಭದಿಂದ ರೇಷ್ಮೆ ಬೆಲೆಯಲ್ಲಿ ಹಲವು ಆವಿಷ್ಕಾರ ಆಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಜವಳಿ ಖಾತೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಮಾತನಾಡಿ ಮೈಸೂರಿನ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿಗೆ ರೇಷ್ಮೆಯನ್ನು ಪರಿಚಯಿಸಿದರು. ಮೈಸೂರು ರೇಷ್ಮೆ ಸೀರೆಗಳು ಇಂದು ವಿಶ್ವ ಪ್ರಸಿದ್ಧಿಯನ್ನು ಪಡೆದಿವೆ. ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು ರೇಷ್ಮೆ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಚೈನಾದ ರೇಷ್ಮೆ ಯಿಂದ ಭಾರತದ ರೇಷ್ಮೆ ಗೆ ಬೆಲೆ ಕಡಿಮೆ ಇದೆ. ಆದರೆ ಮುಂದಿನ ದಿನಗಳಲ್ಲಿ ಚೈನಾದ ರೇಷ್ಮೆ ಕಡಿಮೆ ಆಗುತ್ತದೆ ಅಲ್ಲಿ ಕೆಲಸಗಾರರ ಕೊರತೆ ಉಂಟಾಗುತ್ತಿದೆ. ಇದರಿಂದ ಭಾರತದ ರೇಷ್ಮೆಗೆ ಉತ್ತಮ ಬೆಲೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೇಷ್ಮೆ ಬೆಳೆಯನ್ನು ಬೆಳೆಯುವುದರಿಂದ ರೈತರು ಉತ್ತಮ ಆದಾಯ ಗಳಿಸಬಹುದಾಗಿದೆ. ದೇಶದ ರೇಷ್ಮೆ ಬೆಳೆಗಾರರ ಹಿತ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಗಿರಿರಾಜ್ ಸಿಂಗ್ ಭರವಸೆ ನೀಡಿದರು.
ಕೇಂದ್ರ ಜವಳಿ ರಾಜ್ಯ ಸಚಿವರಾದ ಪವಿತ್ರ ಮಾರ್ಗರೇಟ್ ಕನ್ನಡ ಭಾಷೆಯು ಹೆಚ್ಚು ಶ್ರೀಮಂತವಾದ ಬಾಷೆಯಾಗಿದೆ. ರೇಷ್ಮೆ ಬೆಳೆಯು ಅಬಿವೃದ್ದಿ ಹೊಂದಲು 1949 ರಿಂದ ರೇಷ್ಮೆ ಮಂಡಳಿಯ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ, ಇದು ಗ್ರಾಮೀಣ ಜನರ ಹಾಗೂ ಮಹಿಳೆಯರ ನೆಚ್ಚಿನ ಬೆಳೆಯಾಗಿದೆ. ಇದರಿಂದ ಗ್ರಾಮಿಣ ಜನರ ಆದಾಯವನ್ನು ಹೆಚ್ಚಿಸುತ್ತಿದೆ ಎಂದು ತಿಳಿಸಿದರು.
ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆಯ ಸಚಿವರಾದ ಕೆ ವೆಂಕಟೇಶ್ ಅವರು ಮಾತನಾಡಿ ರೇಷ್ಮೆ ಕರ್ನಾಟಕ ರಾಜ್ಯದಲ್ಲಿ ಪ್ರತಿಷ್ಠಿತ ಬೆಳೆಯಾಗಿದೆ. ಕೇಂದ್ರ ಸರಕಾರದಿಂದ ರೇಷ್ಮೆ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ರೇಷ್ಮೆ ಬೆಳೆಗಾರರಿಗೆ ಅನುಕೂಲಕರವಾದ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು ಎಂದು ಮನವಿ ಮಾಡಿದರು.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ ಮೈಸೂರಿಗೂ ರೇಷ್ಮೆ ಗೂ ಅವಿನಾಭಾವ ಸಂಬಂಧ ಇದೆ. ವಿಜಯನಗರ ಅರಸರ ಕಾಲದಿಂದ ರೇಷ್ಮೆ ಇಲ್ಲಿ ಪ್ರಚಲಿತದಲ್ಲಿ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರೇಷ್ಮೆ ಬೆಳೆಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ರೇಷ್ಮೆ ಬೆಳೆಗೆ ಪ್ರೋತ್ಸಾಹ ನೀಡಲು ಎಲ್ಲಾ ರೀತಿಯ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯರಾದ ಡಾ. ಕೆ ಸುಧಾಕರ್ ಮಾತನಾಡಿ ಶಿಡ್ಲಘಟ್ಟದಲ್ಲಿ ಹೈಟೆಕ್ ಮಾರುಕಟ್ಟೆಯನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಜವಳಿ ಇಲಾಖೆಯ ಕಾರ್ಯದರ್ಶಿ ರಚನಾ ಷಾ,ರಾಜ್ಯ ಸಭಾ ಸದಸ್ಯ ನಾರಾಯಣ್ ಕೊರಗಪ್ಪ,ಶಾಸಕ ಜಿ. ಟಿ ದೇವೇಗೌಡ,ರೇಷ್ಮೆ ಇಲಾಖೆ ಆಯುಕ್ತ ರಾಜೇಶ್ ಗೌಡ, ಕೇಂದ್ರ ಜವಳಿ ಇಲಾಖೆಯ ಜಂಟಿ ಕಾರ್ಯದರ್ಶಿ ಪ್ರಜಕ್ತ ಎಲ್ ವರ್ಮ ಮತ್ತಿತರ ಅಧಿಕಾರಿಗಳು,ರೈತರು ಉಪಸ್ಥಿತರಿದ್ದರು.
ಅಮರಾವತಿ: ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರದಲ್ಲಿ ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಹಾಲಿ ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.
ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನವು ಪ್ರಸಾದವಾಗಿ ನೀಡುವ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಹೇಳಿ ಎಲ್ಲರ ಗಮನ ಸೆಳೆದಿದ್ದಾರೆ.
ಕಳೆದ 5 ವರ್ಷಗಳಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕರು ತಿರುಮಲದ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ. ಅವರು ಅನ್ನದಾನ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿದ್ದಾರೆ. ಪವಿತ್ರ ತಿರುಮಲ ಲಡ್ಡುವನ್ನು ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಿ ಕಲುಷಿತಗೊಳಿಸಿದ್ದಾರೆ ಚಂದ್ರಬಾಬು ನಾಯ್ಡು ಕಿಡಿಕಾರಿದ್ದಾರೆ.
ಆದರೆ, ಸಿಎಂ ನಾಯ್ಡು ಆರೋಪವನ್ನು ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಪಕ್ಷವು ತಳ್ಳಿಹಾಕಿದೆ,ಅಲ್ಲದೆ ಇದು ದುರುದ್ದೇಶಪೂರಿತವಾಗಿದೆ ಎಂದು ಟೀಕಿಸಿದೆ.
ಚಂದ್ರಬಾಬು ನಾಯ್ಡು ಅವರು ತಿರುಮಲದ ಪಾವಿತ್ರ್ಯತೆ ಮತ್ತು ಕೋಟ್ಯಂತರ ಹಿಂದೂಗಳ ನಂಬಿಕೆಯನ್ನು ತೀವ್ರವಾಗಿ ಹಾಳು ಮಾಡಿದ್ದಾರೆ. ತಿರುಮಲ ಪ್ರಸಾದದ ಬಗ್ಗೆ ಅವರ ಹೇಳಿಕೆಗಳು ಅತ್ಯಂತ ದುರುದ್ದೇಶಪೂರಿತವಾಗಿವೆ ಎಂದು ರಾಜ್ಯಸಭಾ ಸಂಸದ ವೈವಿ ಸುಬ್ಬಾ ರೆಡ್ಡಿ ಕೂಡಾ ಖಂಡಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಚಂದ್ರಬಾಬು ನಾಯ್ಡು ಯಾವ ಮಟ್ಟಕ್ಕೂ ಇಳಿಯುತ್ತಾರೆ ಎಂಬುದು ಮತ್ತೆ ಸಾಬೀತಾಗಿದೆ. ಭಕ್ತರ ನಂಬಿಕೆ ಗಟ್ಟಿಗೊಳಿಸಲು ನಾನು ಕುಟುಂಬ ಸಮೇತ ತಿರುಮಲ ಪ್ರಸಾದದ ವಿಚಾರವಾಗಿ ಪರಮಾತ್ಮನ ಮುಂದೆ ಪ್ರಮಾಣ ವಚನ ಸ್ವೀಕರಿಸಲು ಸಿದ್ಧ. ಚಂದ್ರಬಾಬು ನಾಯ್ಡು ತಮ್ಮ ಕುಟುಂಬದೊಂದಿಗೆ ಅದೇ ರೀತಿ ಮಾಡಲು ಸಿದ್ಧರಿದ್ದಾರೆಯೇ ಎಂದು ಸುಬ್ಬಾ ರೆಡ್ಡಿ ಸವಾಲು ಕೂಡಾ ಹಾಕಿದ್ದಾರೆ.
ಈ ಸವಾಲಿಗೆ ಸಿಎಂ ಚಂದ್ರಬಾಬು ನಾಯ್ಡು ಏನು ಹೇಳುವರೊ ಕಾದುನೋಡಬೇಕಿದೆ.
ಹೈದರಾಬಾದ್: ತೆಲುಗು, ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ಜಾನಿ ಮಾಸ್ಟರ್ ಜಾನಿ ಮಾಸ್ಟರ್‌ನನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸಹ ಕೊರಿಯೋಗ್ರಾಫರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮೇಲೆ ಜಾನಿ ಮಾಸ್ಟರ್‌ನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅವರ ಜೊತೆ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು ರಾಯದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆತ ತನ್ನ ಮೇಲೆ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿ ದೈಹಿಕ ಹಲ್ಲೆ ನಡೆಸಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದರು.
ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಈಗ ಜಾನಿ ಮಾಸ್ಟರ್ ನನ್ನು ಬಂಧಿಸಿದ್ದಾರೆ. ಈಗ ಈ ಪ್ರಕರಣವನ್ನು ನರಸಿಂಗಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಧಿ ಡ್ಯಾನ್ಸ್ ಶೋ ಮೂಲಕ ಪರಿಚಯವಾದ ಜಾನಿ ಮಾಸ್ಟರ್ ಈಗ ಟಾಲಿವುಡ್‌ನಲ್ಲಿ ಸ್ಟಾರ್ ಕೊರಿಯೋಗ್ರಾಫರ್ ಆಗಿ ಹೆಸರು ಮಾಡಿದ್ದಾರೆ.
ಟಾಲಿವುಡ್ ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳಿಗೂ ಅವರು ಕೊರಿಯೋಗ್ರಫಿ ಮಾಡಿದ್ದಾರೆ. ಆದರೆ ಅವರ ಮೇಲಿನ ಆರೋಪ,ಬಂಧನ ತೆಲುಗು ಸಿನಿ ರಂಗದಲ್ಲಿ ಸಂಚಲನ ಮೂಡಿಸಿದೆ.
ಬೆಂಗಳೂರು: ಒಂದು ದೇಶ ಒಂದು ಚುನಾವಣೆಯಿಂದ ಅನಗತ್ಯ ವೆಚ್ಚ ಉಳಿಯಲಿದೆ,ಇದನ್ನು ಸ್ವಾಗತಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಬಹಳ ಹಿಂದೆಯೇ ಈ ತೀರ್ಮಾನ ಮಾಡಬೇಕಿತ್ತು, ಈಗಲಾದರೂ ಈ ನಿರ್ಧಾರ ಮಾಡಲಾಗಿದೆ ಅದಕ್ಕೆ ಖುಷಿ ಇದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಒಂದು ದೇಶ ಒಂದು ಚುನಾವಣೆಗೆ ಕೇಂದ್ರದಿಂದ ಒಪ್ಪಿಗೆ ಸಿಕ್ಕಿದೆ. ಮುಂದಿನ ಅಧಿವೇಶನದಲ್ಲಿ ಇದರ ಮಸೂದೆ ಮಂಡನೆ ಆಗಲಿದೆ. ಕೇಂದ್ರ ಸರ್ಕಾರದ ನಡೆ ಸ್ವಾಗತಾರ್ಹವಾಗಿದೆ,ಇದರಿಂದ ಕೋಟ್ಯಂತರ ಹಣ ಉಳಿತಾಯ ಆಗಲಿದೆ ಎಂದು ಅಭಿಪ್ರಾಯ ಪಟ್ಟರು.
ವಿಪಕ್ಷಗಳು ಒಂದು ದೇಶ ಒಂದು ಚುನಾವಣೆಗೆ ವಿರೋಧ ಮಾಡುತ್ತಿವೆ, ವಿಪಕ್ಷಗಳಿಗೆ ಮೋದಿಯವರ ಭಯ ಇದೆ. ಮತ್ತೆ ಮೋದಿಯವರೇ ಗೆದ್ದು ಬರುತ್ತಾರೆ ಎಂಬ ಭಯ ಅವರಿಗೆ ಎಂದು ಅಶೋಕ್ ವ್ಯಂಗ್ಯವಾಡಿದರು.