ಮರುಕಳಿಸಿದ ಮರಳು ಮಾಫಿಯಾ:೪ ಕೋಟಿ ಮೌಲ್ಯದ ಮರಳು ಸೀಸ್

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ವಿಶಾಲವಾಗಿ ಹರಿಯುವ ಕೃಷ್ಣಾನದಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ಮರಳು ಮಾಫಿಯಾ ಗರಿಗೆದರಿದೆ.

ಕೃಷ್ಣಾನದಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದ್ದಂತೆ
ಅನಧಿಕೃತ ಮರಳು ಗಣಿಗಾರಿಕೆ ಅವ್ಯಾಹತವಾಗಿ ಎಗ್ಗಿಲ್ಲದೆ ನಡೆಯುತ್ತಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ವಿರೇಶ ಶಾಂತಪ್ಪ ಅವರು ನೀಡಿದ ದೂರಿನ ಅನ್ವಯ ವಿವಿದ ಇಲಾಖೆಗಳ ಅಧಿಕಾರಿಗಳ ತಂಡ, ಪೊಲೀಸರು ದಿಢೀರ್ ದಾಳಿ ಮಾಡಿ 4 ಕೋಟಿ ರೂ. ಮೌಲ್ಯದ ಮರಳು ಸೀಸ್ ಮಾಡಿದ್ದಾರೆ.

ತಾಲ್ಲೂಕಿನ ಮುಷ್ಟಳ್ಳಿ, ಚೌಡೇಶ್ವರಿಹಾಳ ಮತ್ತಿತರ ನದಿ ತೀರದ ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿದ ಮರಳನ್ನು ವಶಪಡಿಸಿಕೊಂಡು, ಆ ಜಮೀನಿನ ಮಾಲೀಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಜತೆಗೆ 7 ಹಿಟಾಚಿ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಚಾಲಕ ಹಾಗೂ ಮಾಲಿಕರ ವಿರುದ್ಧ ಸುರಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹಲವಾರು ವರ್ಷಗಳಿಂದ ಹಿಂಗಾರು ಸಮಯದಲ್ಲಿ ನೈಸರ್ಗಿಕವಾಗಿ ಅಪಾರ ಪ್ರಮಾಣದ ಮರಳು ಕೃಷ್ಣಾ ನದಿಯ ೨ ದಂಡೆಗಳಲ್ಲಿ ಸಂಗ್ರಹವಾಗಿರುತ್ತದೆ, ಅದನ್ನು ತೆಗೆಯಲು ರಾಜ್ಯ ಸರ್ಕಾರ ಹಲವು ನಿಯಮಗಳನ್ನು ಜಾರಿಗೆ ತಂದರೂ ಸ್ಥಳೀಯ ಶಾಸಕ ಮತ್ತು ಅವರ ಸಹೋದರರು, ಹಿಂಬಾಲಕರು ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮ ಮರಳು ಸಾಗಾಣಿಕೆ ಮಾಡಿ, ಸರ್ಕಾರಕ್ಕೆ ಕೊಟ್ಯಾಂತರ ರೂ. ಹಣ ವಂಚಿಸಿದ್ದಾರೆ.

ಇಂತವರ ಬಗ್ಗೆ ಕ್ರಮ ಯಾವಾಗ ಎಂದು ಜನತೆ ಪ್ರಶ್ನಿಸಿದ್ದಾರೆ.

ಮರುಕಳಿಸಿದ ಮರಳು ಮಾಫಿಯಾ:೪ ಕೋಟಿ ಮೌಲ್ಯದ ಮರಳು ಸೀಸ್ Read More

ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 2. 53 ಕೋಟಿ ಸಂಗ್ರಹ

ಹನೂರು: ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 2 ಕೋಟಿ 53 ಲಕ್ಷ ರೂ ಸಂಗ್ರಹವಾಗಿದೆ.

ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಶ್ರೀ ಸಾಲೂರು ಬೃಹನ್ಮಠಾಧ್ಯಕ್ಷರಾದ ಶಾಂತಮಲ್ಲಿಕಾರ್ಜುನ ಸ್ವಾಮಿಗಳವರ ದಿವ್ಯಸಾನಿದ್ಯದಲ್ಲಿ ಕಾರ್ಯದರ್ಶಿ ರಘು, ಎ. ಅವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.

28 ದಿನಗಳಲ್ಲಿ ಒಟ್ಟು ಮೊತ್ತ ರೂ.2,53,98,859.00ಗಳು (ಹುಂಡಿ ಮತ್ತು ಇ-ಹುಂಡಿ ಸೇರಿ) ಹಾಗೂ ಚಿನ್ನ 25 ಗ್ರಾಂ, ಬೆಳ್ಳಿ 01 ಕೆ.ಜಿ 253 ಗ್ರಾಂ ಹುಂಡಿಯಲ್ಲಿ ದೊರೆತಿದೆ.
ಕಾರ್ತಿಕ ಮಾಸ, ಭಾನುವಾರ, ರಜಾ ದಿನಗಳು ಸೇರಿದಂತೆ ವಿಶೇಷ ದಿನಗಳಲ್ಲಿ ಕೂಡ ಭಕ್ತರ ಸಂಖ್ಯೆ ಗಣನೀಯವಾಗಿತ್ತು.

ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಭಾಗ್ಯಮ್ಮ, ಕುಪ್ಯಾ , ಮರಿಸ್ವಾಮಿ, ಕಾಗಲವಾಡಿ, ಮಹದೇವಪ್ಪ ಕೀಳನಪುರ, ಕುಮಾರ ವಿಜಯ, ರಾವಂದೂರು, ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕ ಪತ್ರ ಸಲಹೆಗಾರರಾದ ಮಹದೇವು, ಉಪ ಕಾರ್ಯದರ್ಶಿ ಚಂದ್ರಶೇಖರ.ಜಿ.ಎಲ್, ಲೆಕ್ಕಧೀಕ್ಷಕರಾದ ಗುರುಮಲ್ಲಯ್ಯ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಭಾರತಿ, ಬೆರಳಚ್ಚುಗಾರರು ಹಾಗೂ ಪ್ರಾಧಿಕಾರದ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಪ್ ಬರೋಡ ಮುಖ್ಯ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಜರಿದ್ದರು.

ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 2. 53 ಕೋಟಿ ಸಂಗ್ರಹ Read More

ಮಕ್ಕಳ ಶೈಕ್ಷಣಿಕ,ಸಾಂಸ್ಕೃತಿಕ ಚಟುವಟಿಕೆಗೆ ಪ್ರೋತ್ಸಾಹ ಅಗತ್ಯ-ಮಲ್ಲಿಕಾರ್ಜುನ ಸ್ವಾಮಿ

ಮೈಸೂರು: ಮಕ್ಕಳು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಅಭಿವೃದ್ಧಿಯಾಗಲು ಪ್ರೋತ್ಸಾಹ ಅಗತ್ಯ
ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ. ಎನ್ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.

ಮಕ್ಕಳ ಮನಸ್ಸು ಸೂಕ್ಷ್ಮವಾಗಿದ್ದು ಮನಸ್ಸು ಸುಂದರ ಹಾಗೂ ಮೃದು ಹಾಗಾಗಿ ಗೆಲುವಿನ ಹಾದಿಯಲ್ಲಿ ಸಾಗುವ ರೀತಿ ಅವರಿಗೆ ಸ್ವತಂತ್ರ್ಯ ನೀಡಬೇಕು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕರ್ನಾಟಕ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮoದಿರದಲ್ಲಿ ಆಯೋಜಿಸಿದ್ದ, ಕಲಾ ಪ್ರತಿಭೋತ್ಸವ 2025-26 ಬಾಲ ಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವ ಪ್ರತಿಭೆಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಾಲಕರು ತಮ್ಮ ಮಕ್ಕಳ ಬಗ್ಗೆ ಮತ್ತು ಅವರ ಜ್ಞಾನ ತಿಳುವಳಿಕೆ ಮಟ್ಟ ಇವುಗಳ ಬಗ್ಗೆ ಯಾವಾಗಲೂ ಸಕಾರಾತ್ಮಕ ಭಾವನೆ ಹಾಗೂ ಒಳ್ಳೆಯ ದೃಷ್ಟಿಕೋನ ಹೊಂದಿರಬೇಕು ಎಂದು ಸಲಹೆ ನೀಡಿದರು.
ಶಾಲೆ ಹಾಗೂ ಮನೆ ಎರಡರಲ್ಲೂ ಮಗುವನ್ನು ಪ್ರೋತ್ಸಾಹಿಸಿದರೆ ಮಕ್ಕಳು ಸಮರ್ಥ ಪ್ರಜೆಯಾಗಿ ಹೊರಹೊಮ್ಮುತ್ತಾರೆ. ಮಕ್ಕಳು ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲುವ ಮನೋಸ್ಥೈರ್ಯ ತುಂಬುವುದು ಪೋಷಕರ ಕರ್ತವ್ಯವಾಗಿದೆ ಎಂದು ಹೇಳಿದರು.

ಪೋಷಕರು ಮಕ್ಕಳಿಗೆ ಸ್ವಾತಂತ್ರ್ಯ ನೀಡುವುದರ ಜತೆಗೆ ಕೆಲವು ನಿಯಂತ್ರಣವನ್ನೂ ಹಾಕಬೇಕು. ಮಕ್ಕಳು ತಮ್ಮ ವ್ಯಕ್ತಿತ್ವದ ನಿರ್ಮಾಣದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಇದಕ್ಕೆ ಪೂರಕವಾಗಿ ಮಕ್ಕಳೂ ಸಹ ತಮ್ಮ ಓದಿನ ಬಗ್ಗೆ ಗಮನ ನೀಡಬೇಕು. ಉತ್ತಮ ವಿಚಾರಗಳನ್ನು ಆಸಕ್ತಿಯಿಂದ ಕಲಿಯಬೇಕು ಎಂದು ಮಲ್ಲಿಕಾರ್ಜುನ ಸ್ವಾಮಿ ತಿಳಿಹೇಳಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಿ. ಉದಯ್ ಕುಮಾರ್ ಅವರು ಮಾತನಾಡಿ ಮಕ್ಕಳೊಂದಿಗೆ ಸಂವಾದ ನಡೆಸಬೇಕು, ಅವರಲ್ಲಿ ಪಠ್ಯದ ಕುರಿತು ಆಸಕ್ತಿ ಹೆಚ್ಚಿಸಬೇಕು ಅವರ ಮನಸ್ಸನ್ನು ತಮ್ಮ ಬೋಧನೆಯತ್ತ ತಿರುಗಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ ಸುದರ್ಶನ್, ತೀರ್ಪುಗಾರರಾದ ಶ್ರೀವಾಣಿ, ಲಕ್ಷ್ಮಿ, ರಮ್ಯಾ, ಅನಿತಾ, ಆನಂದ್ ಕುಮಾರ್, ರಮೇಶ್ ಚಂದ್ರ, ಎ ಪಿ ಚಂದ್ರಶೇಖರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಮಕ್ಕಳ ಶೈಕ್ಷಣಿಕ,ಸಾಂಸ್ಕೃತಿಕ ಚಟುವಟಿಕೆಗೆ ಪ್ರೋತ್ಸಾಹ ಅಗತ್ಯ-ಮಲ್ಲಿಕಾರ್ಜುನ ಸ್ವಾಮಿ Read More

ಅಜೀಜ್ ಸೇಟ್ ರ ಹೆಸರಿನ ನಾಮಫಲಕಕ್ಕೆ ಮಸಿ:ತೇಜಸ್ವಿ ಖಂಡನೆ

ಮೈಸೂರು: ಮಾಜಿ ಸಚಿವ ದಿವಂಗತ
ಅಜೀಜ್ ಸೇಟ್ ಅವರ ಹೆಸರಿನ ನಾಮಫಲಕಕ್ಕೆ ಮಸಿ ಬಳಿದಿರುವುದು ಸರಿಯಲ್ಲ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಖಂಡಿಸಿದ್ದಾರೆ.

ಅಜೀಜ್ ಸೇಠ್ ಅವರ ಕೊಡುಗೆ ಮೈಸೂರಿಗೆ ಅಪಾರ, ಅವರಿಗೆ ಅಪಮಾನ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಅಜೀಜ್ ಸೇಟ್ ಅವರು ಮೈಸೂರಿನ ಪ್ರಭಾವಿ ರಾಜಕಾರಣಿ ಯಾಗಿದ್ದರು, ಅಜೀಜ್ ಅವರು ಮೈಸೂರು ಜಿಲ್ಲೆಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಅಂತವರ ಇತಿಹಾಸ ಅರಿಯದೆ ಅವರ ಹೆಸರಿರುವ ವೃತ್ತಕ್ಕೆ ಕಪ್ಪು ಮಸಿ ಬಳಿದಿರುವುದು ಬೇಸರ ತಂದಿದೆ ಎಂದು ತೇಜಸ್ವಿ ತಿಳಿಸಿದ್ದಾರೆ.

ಅಜೀಜ್ ಸೇಟ್ ಅವರು ದೇವರಾಜ ಅರಸು ಅವರ ಆತ್ಮೀಯರಾಗಿದ್ದರು ಮತ್ತು ಅವರ ಸಂಪುಟದಲ್ಲಿ ಕಾರ್ಮಿಕ,ಕಂದಾಯ, ವಕ್ಫ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಅವರು ಕರ್ನಾಟಕ ರಾಜ್ಯದ ಪ್ರಥಮ ಎಂ ಎಲ್ ಸಿ ಆಗಿದ್ದರು ಅಲ್ಲದೆ ಕನ್ನಡ ಹೋರಾಟಗಾರರ ಮೇಲೆ ಅಪಾರ ಪ್ರೀತಿ ಹೊಂದಿದ್ದ ಏಕೈಕ ಮುಸ್ಲಿಂ ನಾಯಕ ಯಾರಾದರೂ ಇದ್ದರೆ ಅದು ಅಜೀಜ್ ಸೇಟ್ ಅವರು ಎಂದು ತೇಜಸ್ವಿ ನಾಗಲಿಂಗಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ಅಜೀಜ್ ಸೇಟ್ ಅವರ ಇತಿಹಾಸ ತಿಳಿಯದೆ ಅವರ ಹೆಸರಿರುವ ಕಂಬಕ್ಕೆ ಯಾರೊ ಮಸಿ ಬಳಿದಿರುವುದು ಮನಸ್ಸಿಗೆ ನೋವುಂಟು ಮಾಡಿದೆ ಈ ಘಟನೆಯಿಂದಾಗಿ ಅವರ ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ಕನ್ನಡಪರ ಹೋರಾಟಗಾರನಾಗಿ ವೈಯಕ್ತಿಕ ವಾಗಿ ವಿಷಾಧ ವ್ಯಕ್ತಪಡಿಸುತ್ತೇನೆ ಎಂದು ತೇಜಸ್ವಿ ತಿಳಿಸಿದ್ದಾರೆ.

ಅಜೀಜ್ ಸೇಟ್ ಅಂತಹ ಶ್ರೇಷ್ಠ ರಾಜಕಾರಣಿ ನರಸಿಂಹ ರಾಜ ಕ್ಷೇತ್ರದಿಂದ ಸುದಿರ್ಘ ವಾಗಿ ಜನರಿಂದ ಆಯ್ಕೆಯಾದ ರಾಜಕಾರಣಿ,ಅವರು ಮೈಸೂರಿನವರು ಎಂದು ಹೇಳಲು ಹೆಮ್ಮೆ ಪಡುವ ವಿಷಯ ಎಂದಿದ್ದಾರೆ.

ಪೋಲಿಸ್ ಇಲಾಖೆ ಇಂತಹ ಮಹಾನೀಯರ ವೃತ್ತಿಗಳಲ್ಲಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದ್ದಾರೆ..

ಅಜೀಜ್ ಸೇಟ್ ರ ಹೆಸರಿನ ನಾಮಫಲಕಕ್ಕೆ ಮಸಿ:ತೇಜಸ್ವಿ ಖಂಡನೆ Read More

ಶ್ರೀ ಶಾರದಾದೇವಿ ಜಯಂತಿ: ವೃದ್ಧಾಶ್ರಮದಲ್ಲಿ ಸೇವಾ ಕಾರ್ಯ

ಮೈಸೂರು: ಮೈಸೂರಿನ ಸರಸ್ವತಿಪುರಂ ನಲ್ಲಿರುವ ಸಾನಿಧ್ಯ ವೃದ್ಧಾಶ್ರಮದಲ್ಲಿ
ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ
ವೃದ್ಧರಿಗೆ ಹೊದಿಕೆ ವಿತರಿಸುವ ಮೂಲಕ ಮಾತಾ ಶ್ರೀ ಶಾರದಾದೇವಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ವೇಳೆ ಕಲ್ಪವೃಕ್ಷ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಪೂಜಾರಿ ಮಾತನಾಡಿ,ತಮ್ಮ ಸಾಧನೆ, ತ್ಯಾಗ ಮತ್ತು ಪರಿಶ್ರಮದಿಂದ ಶ್ರೀ ರಾಮಕೃಷ್ಣ ಪರಮಹಂಸರು ಹಾಗೂ ವೀರಸನ್ಯಾಸಿ ಸ್ವಾಮಿ ವಿವೇಕಾನಂದರನ್ನು ಆಧ್ಯಾತ್ಮಿಕವಾಗಿ ಬೆಳೆಸಿದ ಮಹಾನ್‌ ಶಕ್ತಿ ಶ್ರೀ ಶಾರದಾದೇವಿಯವರು ಎಂದು ಬಣ್ಣಿಸಿದರು.

ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಪರಿಷತ್ ಅಧ್ಯಕ್ಷರಾದ ಕಡಕೋಳ ಜಗದೀಶ್ ಮಾತನಾಡಿ,ವಿವೇಕಾನಂದನಗರ, ರಾಮಕೃಷ್ಣನಗರದ ವೃತ್ತಗಳಲ್ಲಿರುವಂತೆ ಶಾರದಾದೇವಿನಗರದಲ್ಲಿಯೂ ಶಾರದಾಮಾತೆಯ ಪ್ರತಿಮೆ ನಿರ್ಮಾಣವಾಗಬೇಕು ಈ ಮೂಲಕ ಮೂವರು ಮಹನೀಯರ ಕೊಡುಗೆಯನ್ನು ಶಾಶ್ವತವಾಗಿ ನೆನೆಯುವ ಕೆಲಸವಾಗುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ,ಸುಚೇಂದ್ರ,ಶಂಕ್ರಪ್ಪ ಪವಾರ್, ರಂಗಪ್ಪ ತಮ್ಮನ ಮರಡಿ, ರಾಜು ನಾಯಕ್ ಅರಿಕೇರಿ,ಸಾನಿಧ್ಯ ವೃದ್ಧಾಶ್ರಮದ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.

ಶ್ರೀ ಶಾರದಾದೇವಿ ಜಯಂತಿ: ವೃದ್ಧಾಶ್ರಮದಲ್ಲಿ ಸೇವಾ ಕಾರ್ಯ Read More

ಹನುಮಾನ್ ಜಯಂತಿ: ದೇವರಾಜ ಅರಸು ರಸ್ತೆಯಲ್ಲಿ ಅನ್ನದಾನ

ಮೈಸೂರು: ಹನುಮಾನ್ ಜಯಂತಿ ಅಂಗವಾಗಿ ಮೈಸೂರಿನ ದೇವರಾಜ ಅರಸು
ರಸ್ತೆಯಲ್ಲಿರುವ ಜಯದೇವ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಶಾಸಕ ಹರೀಶ್ ಗೌಡ ಮತ್ತು ಅವರ ಪತ್ನಿ ಗೌರಿ ಅವರು ಪೂಜೆಯಲ್ಲಿ ಭಾಗಿಯಾಗಿ
ಆಂಜನೇಯ ಸ್ವಾಮಿಯ
ಆಶೀರ್ವಾದ ಪಡೆದರು.

ನಂತರ ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು.
ಈ ವೇಳೆ ರಾಮರಾಜ,
ಕಿಶನ್ ಹರೀಶ್ ಗೌಡ, ಪುರುಷೋತ್ತಮ್, ನವೀನ್, ಕನಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವಿಚಂದ್ರ ಹಾಗೂ ಮತ್ತಿತರರು ಹಾಜರಿದ್ದರು.

ಹನುಮಾನ್ ಜಯಂತಿ: ದೇವರಾಜ ಅರಸು ರಸ್ತೆಯಲ್ಲಿ ಅನ್ನದಾನ Read More

ಕನ್ನಡ ನಾಮಫಲಕ:ಕನ್ನಡ ಹೋರಾಟಗಾರರ ತುರ್ತು ಸಭೆ ಕರೆಯಲು ತೇಜಸ್ವಿ ಆಗ್ರಹ

ಮೈಸೂರು: ಕನ್ನಡ ನಾಮಫಲಕ ವಿಷಯವಾಗಿ ಮೈಸೂರು ನಗರ ಪೋಲಿಸ್ ಆಯುಕ್ತರು ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ಕನ್ನಡ ಹೋರಾಟಗಾರರ ತುರ್ತು ಸಭೆ ನಡೆಸುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ.

ಮೈಸೂರು ನಗರ ವ್ಯಾಪ್ತಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಈಗಾಗಲೇ ಸರ್ಕಾರ ಆದೇಶ ನೀಡಿದ್ದರೂ ಸಹ ಕೆಲವರು ಮೈಸೂರು ನಗರದ ನಾನಾ ಭಾಗಗಳಲ್ಲಿ ಆಂಗ್ಲ ಭಾಷೆಯಲ್ಲಿ ಮತ್ತು ಬೇರೆ ಬೇರೆ ಭಾಷೆಗಳಲ್ಲಿ ನಾಮಫಲಕ ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನು ಖಂಡಿಸಿ ಕನ್ನಡ ಹೋರಾಟಗಾರರು ಮೈಸೂರಿನ ಕೆಲವು ಭಾಗಗಳಲ್ಲಿ ನಾಮಫಲಕಗಳನ್ನು ತೆರವು ಗೊಳಿಸುವ ಮತ್ತು ಮಸಿ ಬಳಿಯುವ ಅಭಿಯಾನ ಕಾರ್ಯಗಳನ್ನು ಆರಂಭಿಸಿದ್ದಾರೆ,
ಈ ಸಂದರ್ಭದಲ್ಲಿ ಅಂಗಡಿಗಳ ಮಾಲಿಕರಿಗು ಮತ್ತು ಹೋರಾಟಗಾರರ ನಡುವೆ ವಾಗ್ವಾದ ಉಂಟಗುತ್ತಿರುವುದು ಕಂಡುಬರುತ್ತಿದೆ.
ಆದ್ದರಿಂದ ಪೋಲಿಸ್ ಆಯುಕ್ತರು ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ತುರ್ತಾಗಿ ಕನ್ನಡ ಹೋರಾಟಗಾರರ ಸಭೆ ನಡೆಸಬೇಕು.

ಈಗಾಗಲೇ ಕನ್ನಡ ನಾಮಫಲಕ ವಿಷಯವಾಗಿ ಕಾವೇರಿರುವ ಮೈಸೂರು ನಗರವನ್ನು ಶಾಂತಿ ಗೊಳಿಸುವ ನಿಟ್ಟಿನಲ್ಲಿ ಕನ್ನಡ ಹೋರಾಟಗಾರರ ಸಭೆ ನಡೆಸಿ ಅಹವಾಲು ಸ್ವೀಕಾರ ಮಾಡಬೇಕು ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಮೈಸೂರು ನಗರ ಪೋಲಿಸ್ ಆಯುಕ್ತರಿಗೆ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನು ಒತ್ತಾಯಿಸಿದ್ದಾರೆ.

ಕನ್ನಡ ನಾಮಫಲಕ:ಕನ್ನಡ ಹೋರಾಟಗಾರರ ತುರ್ತು ಸಭೆ ಕರೆಯಲು ತೇಜಸ್ವಿ ಆಗ್ರಹ Read More

ದಿನೇಶ್‌ ಕುಮಾರ್‌ ಲೋಕಾಯುಕ್ತ ಪೊಲೀಸರ ಕಸ್ಟಡಿಗೆ

ಮೈಸೂರು: ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಅವರನ್ನು ಹೆಚ್ಚಿನ ವಿಚಾರಣೆಗೆ ಲೋಕಾಯುಕ್ತ ಪೊಲೀಸರ ಕಸ್ಟಡಿಗೆ ನೀಡಲು ಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಮೈಸೂರು ಲೋಕಾಯುಕ್ತ ಪೊಲೀಸರು, ಬೆಂಗಳೂರಿನಲ್ಲಿರುವ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಮುಡಾ ಹಗರಣದ ಹೆಚ್ಚಿನ ವಿಚಾರಣೆಗೆ ಮಾಜಿ ಆಯುಕ್ತ, ಹಾಲಿ ಜೈಲು ಶಿಕ್ಷೆಗೆ ಒಳಪಟ್ಟಿರುವ ದಿನೇಶ್‌ ಕುಮಾರ್‌ ಅವರನ್ನು ಕಸ್ಟಡಿಗೆ ನೀಡುವಂತೆ ಕೋರ್ಟ್‌ ಗೆ ಅರ್ಜಿ ಸಲ್ಲಿಸಿ ಕೋರಲಾಗಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಮೈಸೂರು ಲೋಕಾಯುಕ್ತ ಪೊಲೀಸರ ಅರ್ಜಿ ಪುರಸ್ಕರಿಸಿ ಡಿ. 12 ರಂದು ಕಸ್ಟಡಿಗೆ ನೀಡುವಂತೆ ಆದೇಶಿಸಿದೆ.

ದಿನೇಶ್‌ ಕುಮಾರ್‌ ಲೋಕಾಯುಕ್ತ ಪೊಲೀಸರ ಕಸ್ಟಡಿಗೆ Read More

ಡೆವಿಲ್ ಚಿತ್ರದ ಯಶಸ್ಸಿಗಾಗಿ ಕುಂಬಳಕಾಯಿ ದೃಷ್ಟಿ ತೆಗೆದು ಪ್ರಾರ್ಥಿಸಿದ ಅಭಿಮಾನಿಗಳು

ಮೈಸೂರು: ಮೈಸೂರಿನ ಲಲಿತಾ ಮಹಲ್ ರಸ್ತೆ, ಶ್ರೀ ತೂಗುದೀಪ್ ಶ್ರೀನಿವಾಸ್ ವೃತ್ತದಲ್ಲಿ ವಿಶಿಷ್ಟ ವಾತಾವರಣ ನಿರ್ಮಾಣವಾಗಿತ್ತು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಚಿತ್ರ ‘ಡೆವಿಲ್’ ಯಶಸ್ವಿಯಾಗಲಿ ಎಂಬ ಹಾರೈಕೆಯೊಂದಿಗೆ ಅಭಿಮಾನಿಗಳು ಬೃಹತ್ ಗಾತ್ರದ ಫ್ಲೆಕ್ಸ್ ಅಳವಡಿಸಿ, ಅದರ ಮುಂದೆ ತಾಯಿ ಚಾಮುಂಡೇಶ್ವರಿ ಭಾವಚಿತ್ರ ಇಟ್ಟು ವಿಶೇಷ ಪೂಜೆ ನೆರವೇರಿಸಿದರು.

ಅಭಿಮಾನಿಗಳು ಕಟೌಟ್ ಮುಂದೆ ಕುಂಬಳಕಾಯಿಯಲ್ಲಿ ದೃಷ್ಟಿ ತೆಗೆದು, ಹಾಲು-ಅಕ್ಷತೆ ನೀಡಿ, ಚಿತ್ರಕ್ಕೆ ಅಡಚಣೆಗಳಿಲ್ಲದೆ ಯಶಸ್ವಿಯಾಗಲಿ, ತಂಡ ಸುಗಮ ಪಯಣ ಕಂಡು ಜನ ಮೆಚ್ಚುಗೆಯನ್ನು ಗಳಿಸಲಿ ಎಂಬ ಸಂಕಲ್ಪ ಮಾಡಲಾಯಿತು.

ಹೂವಿನ ಹಾರಹಾಕಿ ಅಭಿಮಾನಿಗಳ ಘೋಷಣೆಯ ನಡುವೆ
ಡೆವಿಲ್ ಗೆಲ್ಲುವುದು ಪಕ್ಕ,
ದರ್ಶನ್ ಮತ್ತೊಮ್ಮೆ ಸಿನಿಮಾ ರಂಗದಲ್ಲಿ ಗರ್ಜಿಸಲಿ,ಎಂಬ ಘೋಷಣೆಗಳು ಮೊಳಗಿದವು.

ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರದ ಯಶಸ್ಸಿಗಾಗಿ ಮಾಡಿದ ಈ ಭಕ್ತಿಪರ ಕಾರ್ಯಕ್ರಮ ಅಭಿಮಾನಿಗಳ ನಿಷ್ಠೆ, ಭಾವ ಮತ್ತು ಸಿನಿಮಾ ಪ್ರೇಮಕ್ಕೆ ಸಾಕ್ಷಿಯಾಯಿತು.

ಕಾರ್ಯಕ್ರಮದಲ್ಲಿ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ, ಜಿ. ರಾಘವೇಂದ್ರ, ರವಿಕುಮಾರ್, ಬನ್ನೂರು ಚಂದನ್, ಹರೀಶ್ ನಾಯ್ಡು, ಎಸ್.ಎನ್. ರಾಜೇಶ್, ರಾಕೇಶ್, ಮಣಿ ದಚ್ಚು, ನವೀನ್ ಹಾಗೂ ಹಲವಾರು ಅಭಿಮಾನಿಗಳು ಪಾಲ್ಗೊಂಡಿದ್ದರು.

ಡೆವಿಲ್ ಚಿತ್ರದ ಯಶಸ್ಸಿಗಾಗಿ ಕುಂಬಳಕಾಯಿ ದೃಷ್ಟಿ ತೆಗೆದು ಪ್ರಾರ್ಥಿಸಿದ ಅಭಿಮಾನಿಗಳು Read More

ಡಿ.13 ಮೈಸೂರು ಹನುಮ ಹಬ್ಬ: ಪೋಸ್ಟರ್ ಬಿಡುಗಡೆಗೊಳಿಸಿದ ಸಾ.ರಾ. ಮಹೇಶ್

ಮೈಸೂರು: ಮೈಸೂರು ಹನುಮ ಹಬ್ಬವು ಡಿ.13 ರಂದು ನಡೆಯಲಿದ್ದು,ಹಬ್ಬದ
ಪೋಸ್ಟರ್ ಗಳನ್ನು ಮಾಜಿ ಸಚಿವ ಸಾ.ರಾ.ಮಹೇಶ್ ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಸಾ.ರಾ.ಮಹೇಶ್, ಡಿ.13 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮೈಸೂರು ಹನುಮ ಹಬ್ಬದ ಬೃಹತ್ ಮೆರವಣಿಗೆ ಪಕ್ಷಾತೀತವಾಗಿ ನಡೆಯಲಿದೆ ಎಂದು ತಿಳಿಸಿದರು.

ಎಲ್ಲಾ ಹನುಮ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶೋಭಾ ಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ನಾನು ಬರುವೆ ನೀವು ಬನ್ನಿ ನಿಮ್ಮವರನ್ನು ಕರೆ ತರುವ ಮೂಲಕ ಹನುಮನ ಕೃಪೆಗೆ ಪಾತ್ರರಾಗಿ ಎಂದು ಹನುಮ ಭಕ್ತರಿಗೆ ಸಾ.ರಾ.ಮಹೇಶ್ ಕರೆ ನೀಡಿದರು.

ಈ ಸಂದರ್ಭದಲ್ಲಿ ಹನುಮ ಭಕ್ತರಾದ ಸಂಜಯ್, ಸಂತೋಷ್ (ಶಂಭು),ಎಸ್ ಪ್ರಕಾಶ್ ಪ್ರಿಯಾದರ್ಶನ್,ಕೆ. ಚಂದ್ರು ಗೌಡ, ಹೇಮಂತ್ ಗೌಡ,ಜೀವನ್, ನವೀನ್, ರಂಜನ ಮತ್ತಿತರ ಹನುಮ ಭಕ್ತರು ಹಾಜರಿದ್ದರು.

ಡಿ.13 ಮೈಸೂರು ಹನುಮ ಹಬ್ಬ: ಪೋಸ್ಟರ್ ಬಿಡುಗಡೆಗೊಳಿಸಿದ ಸಾ.ರಾ. ಮಹೇಶ್ Read More