ಶ್ರೀ ಕೃಷ್ಣನ ವಿಚಾರಧಾರೆಗಳು ಪ್ರೇರಣೆಯಾಗಲಿ:ರವಿ ಶಾಸ್ತ್ರಿ

ಮೈಸೂರು: ಮಹಾಭಾರತದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಜೀವನ ಸಾರವನ್ನು ತಿಳಿಸುತ್ತದೆ, ಶಿಷ್ಟರ ರಕ್ಷಣೆಗಾಗಿ ದುಷ್ಟರ ಸಂಹಾರ ಮಾಡಿದ ಶ್ರೀಕೃಷ್ಣನ ಬಾಲ್ಯದ ಲೀಲೆಗಳು ಮಕ್ಕಳಿಗೆ ಪ್ರೇರಣೆಯಾಗಿದೆ ಎಂದು ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ರವಿ ಶಾಸ್ತ್ರಿ ಹೇಳಿದರು.

ನಗರದ ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣ ದಾಮದಲ್ಲಿ ಶ್ರೀ ಕೃಷ್ಣ ಮಿತ್ರ ಮಂಡಳಿ ಮತ್ತು ಶ್ರೀ ಕೃಷ್ಣ ಟ್ರಸ್ಟ್ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ ಮಕ್ಕಳಿಗೆ ಕೃಷ್ಣ,ರಾಧಾ ವೇಷಭೂಷಣ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಮಹಾಭಾರತ, ರಾಮಾಯಣ ಹಾಗೂ ಇತಿಹಾಸ ಪುರುಷರ ಜೀವನ ಚರಿತ್ರೆಗಳನ್ನು ತಿಳಿಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಪೋಷಕರ ಜವಾಬ್ದಾರಿಯಾಗಿದೆ, ಕಲಿಕೆ ವೇಳೆ ಮಕ್ಕಳಿಗೆ ನೀತಿ ಪಾಠಗಳು ಹಾಗೂ ಶ್ರೀ ಕೃಷ್ಣ ಲೋಕಕಲ್ಯಾಣಕ್ಕಾಗಿ ಮಾಡಿದ ಸಾಧನೆಗಳ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.

ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಶ್ರೀ ಕೃಷ್ಣ ಮತ್ತು ರಾಧೆಯ ವೇಷಭೂಷಣ ಧರಿಸಿ ಭಾಗವಹಿಸಿದ್ದರು.

ಉತ್ತಮವಾಗಿ ಶ್ರೀ ಕೃಷ್ಣ,ರಾಧೆ ವೇಷಧರಿಸಿದ ಮಕ್ಕಳಿಗೆ ಬಹುಮಾನ ನೀಡಲಾಯಿತು, ಜತೆಗೆ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಶ್ರೀಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷ ಪ್ರವೀಣ್ ರಾವ್, ಉಪಾಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ರಾಘವೇಂದ್ರ, ಶ್ರೀವತ್ಸ, ಮುರಳಿ, ಮಂಗಳ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.

ಶ್ರೀ ಕೃಷ್ಣನ ವಿಚಾರಧಾರೆಗಳು ಪ್ರೇರಣೆಯಾಗಲಿ:ರವಿ ಶಾಸ್ತ್ರಿ Read More

ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಮೈಸೂರು: ಅಥರ್ವ ಲೈಫ್ ಸ್ಕಿಲ್ಸ್
ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಭಾರತದ ಧ್ವಜ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಬಿಡಿಸುವ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಒಟ್ಟು ನಾಲ್ಕು ವಿಭಾಗಗಳ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ಎಲ್ ಕೆ ಜಿ ವಿಭಾಗ:
ಮೊದಲ ಬಹುಮಾನ
ಸುದ್ದಿ ಮುಕ್ತಕ, ದ್ವಿತೀಯ ಈಶನ ಬಿ ಗೌಡ,

1ನೇ ತರಗತಿಯಿಂದ 3ನೇ ತರಗತಿಯ ವಿಭಾಗದ ಮೊದಲನೇ
ಬಹುಮಾನ ತನ್ವಿ ಎಸ್ ಪಿ, ದ್ವಿತೀಯ ವಿಶಾಲ್ ಆರ್ ಗೌಡ, ತೃತೀಯ ಆರ್ಣ ಎಂ ಎ,
4ನೇ ತರಗತಿಯಿಂದ 6ನೇ ತರಗತಿಯ ವಿಭಾಗದಲ್ಲಿ ಮೊದಲನೇ ಬಹುಮಾನ ಧೀರಜ್, ದ್ವಿತೀಯ ಬಹುಮಾನ ಅದ್ವೈತ ಜಿ, ತೃತೀಯ ಬಹುಮಾನ ವಿಪ್ರತ,
7ನೇ ತರಗತಿಯಿಂದ 8ನೇ ತರಗತಿ ವಿಭಾಗದಲ್ಲಿ ವಿಜೇತರಾದ ನಿತ್ಯಕ್ಲಿನ ಶಿಲ್ಪ ಅವರಿಗೆ ಬಹುಮಾನ ವಿತರಿಸಲಾಯಿತು.

ಎಲ್ಲಾ ಸ್ಪರ್ಧಾ‌‌ಳುಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಈ ವೇಳೆಅಥರ್ವ ಲೈಫ್ ಸ್ಕಿಲ್ಸ್
ಫೌಂಡೇಶನ್ ಅಧ್ಯಕ್ಷೆ ಪುಷ್ಪ ಅವರು ಮಾತನಾಡಿ,ದೇಶದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ನಮ್ಮ ಹಿರಿಯರು ಸ್ವಾತಂತ್ರ್ಯಕ್ಕಾಗಿ ಪಟ್ಟ ಕಷ್ಟ, ತ್ಯಾಗ ಮತ್ತು ಬಲಿದಾನ ಅರಿತಾಗ ದೇಶದ ಬಗ್ಗೆ ಪ್ರೀತಿ ಮೂಡುತ್ತದೆ ಎಂದು ಹೇಳಿದರು.

ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್,
ರುಕ್ಮಿಣಿ, ಮೇನಕ, ಲಾವಣ್ಯ, ಅನುಷಾ, ಸನತ್, ಚಾರುಲತಾ ಪ್ರಿಯಾಂಕ ಮತ್ತಿತರರು ಹಾಜರಿದ್ದರು.

ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ Read More

ಶಾಲಾ, ಕಾಲೇಜು ವ್ಯಾಪಿಯಲ್ಲಿ ತಂಬಾಕು ಮಾರಾಟ ಮಾಡಿದರೆ ಕಠಿಣ ಶಿಕ್ಷೆ: ಡಾ. ಪಿ ಶಿವರಾಜು

ಮೈಸೂರು: ಶಾಲಾ- ಕಾಲೇಜಿನ ಸುತ್ತ-ಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುವುದು ಕಂಡುಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜಿನ ಮಕ್ಕಳು ತಂಬಾಕು ಸೇವನೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.

ಸುತ್ತ,ಮುತ್ತ ಇರುವ ಪೆಟ್ಟಿ ಅಂಗಡಿಗಳು ಹಾಗೂ ವ್ಯಕ್ತಿಗಳು ಯಾರಿಗೂ ತಿಳಿಯದಂತೆ ಅವುಗಳನ್ನು ಮಕ್ಕಳಿಗೆ ಮಾರಾಟ ಮಾಡಿ ಮಕ್ಕಳನ್ನು ವ್ಯಸನಿಗಳನ್ನಾಗಿ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹೀಗೆ ಮಾರಾಟ ಮಾಡುವವರನ್ನು ಗುರುತಿಸಿ ಕಠಿಣ ಶಿಕ್ಷೆ ಹಾಗೂ ದಂಡವನ್ನು ವಿಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿವರಾಜು ಸೂಚಿಸಿದರು.

ಅಧಿಕಾರಿಗಳು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ತಂಬಾಕು ಸೇವನೆಯ ಸಂಬಂಧ ಕಾರ್ಯಕ್ರಮಗಳನ್ನು ರೂಪಿಸಿ ಮಕ್ಕಳಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಮಾಡುತ್ತಿರುವಂತಹ ಅಂಗಡಿಯ ಪರವಾನಗಿಯನ್ನು ರದ್ದು ಮಾಡಿ, ಅಂಗಡಿ ಮಾಲೀಕನಿಗೆ ದಂಡವನ್ನು ವಿಧಿಸಬೇಕು. ಸಾರ್ವಜನಿಕವಾಗಿ ತಂಬಾಕು ಸೇವನೆ ಮಾಡುವವರಿಗೂ ದಂಡ ಹಾಕಬೇಕು ಎಂದು ತಿಳಿಸಿದರು.

ಯಾವುದೇ ತಂಬಾಕು ಸಂಸ್ಥೆಗಳು ತಮ್ಮ ಬ್ರಾಂಡ್ ಹಾಗೂ ಥೀಮ್ ಗಳನ್ನು ಪ್ರಚಾರ ಮಾಡುವಂತಿಲ್ಲ, ಈಗಾಗಲೇ ಕೆಲವು ಶಾಪ್ ಗಳಲ್ಲಿ ತಂಬಾಕು ಸಂಬಂಧಿಸಿದ ಜಾಹೀರಾತುಗಳು ಏನಾದರೂ ಇದ್ದರೆ ಅವುಗಳನ್ನು ತಕ್ಷಣವೇ ತೆರವುಗಿಸುವಂತೆ ಅಂಗಡಿ ಅಥವಾ ಶಾಪ್ ಮಾಲೀಕನಿಗೆ ತಿಳಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಿ ಸಿ ಕುಮಾರಸ್ವಾಮಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸವಿತಾ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಶಾಲಾ, ಕಾಲೇಜು ವ್ಯಾಪಿಯಲ್ಲಿ ತಂಬಾಕು ಮಾರಾಟ ಮಾಡಿದರೆ ಕಠಿಣ ಶಿಕ್ಷೆ: ಡಾ. ಪಿ ಶಿವರಾಜು Read More

ತೃಪ್ತಿದಾಯಕ ಬದುಕಿಗೆ ಅಧ್ಯಾತ್ಮವೇ ಮೂಲ;ವಿದ್ವಾನ್ ಬಾಗೇವಾಡಿ ಆಚಾರ್ಯ

ಮೈಸೂರು: ತೃಪ್ತಿದಾಯಕ ಬದುಕಿಗೆ ಅಧ್ಯಾತ್ಮವೇ ಮೂಲ ಎಂದು ವಿದ್ವಾನ್ ಶ್ರೀ ಬಾಗೇವಾಡಿ ಆಚಾರ್ಯ ಅವರು ಹೇಳಿದರು.

ನಗರದ ಸಿಎಫ್‌ಟಿಆರ್‌ಐ ಪಕ್ಕದಲ್ಲಿರುವ ಶ್ರೀ ಉತ್ತರಾದಿ ಮಠದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಏರ್ಪಡಿಸಿದ್ದ ಪವಮಾನ, ನವಗ್ರಹ ಹೋಮ, ಪ್ರಾಣ ದೇವರಿಗೆ ಮಧು ಅಭಿಷೇಕ, ರೇಷ್ಮೆ ವಸ್ತ್ರ ಸೇವಾ ಕಾರ್ಯಕ್ರಮದ ನಂತರ ಅವರು ಮಾತನಾಡಿದರು.

ಪ್ರತಿಯೊಬ್ಬರು ಒತ್ತಡದ ಬದುಕಿನ ಜಂಜಾಟದ ನಡುವೆಯೂ ಅಧ್ಯಾತ್ಮದತ್ತ ಒಲವು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಮಠದ ವ್ಯವಸ್ಥಾಪಕ ಅನಿರುದ್ದಾಚಾರ್ಯ ಪಾಂಡುರಂಗಿ, ಮಾಜಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಅಚ್ಯುತ ಆಚಾರ್, ಪ್ರಮೋದ್ ಆಚಾರ್, ಕಾಂಗ್ರೆಸ್ ಯುವ ಮುಖಂಡರಾದ ಎನ್. ಎಂ ನವೀನ್ ಕುಮಾರ್,ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್,ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಎಸ್‌. ಬಿ ವಾಸುದೇವಮೂರ್ತಿ, ಜಯಂತ್, ವಿಕಾಶ್ ಶಾಸ್ತ್ರಿ‌ ಮತ್ತಿತರರು ಹಾಜರಿದ್ದರು.

ತೃಪ್ತಿದಾಯಕ ಬದುಕಿಗೆ ಅಧ್ಯಾತ್ಮವೇ ಮೂಲ;ವಿದ್ವಾನ್ ಬಾಗೇವಾಡಿ ಆಚಾರ್ಯ Read More

ದಸರಾ ಗಜಪಡೆಗೆ ತಾಲೀಮು ಪ್ರಾರಂಭ

ಮೈಸೂರು: ಈ ಬಾರಿಯ ದಸರಾದಲ್ಲಿ ಭಾಗವಹಿಸಲಿರುವ ಗಜಪಡೆಗೆ ಇಂದಿನಿಂದ ತಾಲಿಮು ಆರಂಭಿಸಲಾಗಿದೆ.

ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಅಭಿಮನ್ಯು ನೇತೃತ್ವದ ಗಜಪಡೆಗೆ ತಾಲೀಮು ಆರಂಭಿಸಲಾಗಿದ್ದು ಮೈಸೂರು ಅರಮನೆ ಆವರಣದಿಂದ ಬನ್ನಿಮಂಟಪದವರೆಗೂ ಆನೆಗಳು ಸಾಗಿ ಬಂದವು.

ಈ‌ ವೇಳೆ ಸಾರ್ವಜನಿಕರು ಆನೆಗಳನ್ನು ಕಂಡು ಫೋಟೋ ಕ್ಲಿಕ್ಕಿಸುತ್ತಿದ್ದು ಕಂಡುಬಂದಿತು.ಗಜಪಡೆ ಕಂಡು ಜನರು ಸಂಭ್ರಮಿಸಿದರು.

ಕ್ಯಾಪ್ಟನ್ ಅಭಿಮನ್ಯು, ವರಲಕ್ಷ್ಮಿ, ಭೀಮ, ಏಕಲವ್ಯ, ಲಕ್ಷ್ಮಿ, ರೋಹಿತ್, ಗೋಪಿ, ಕಂಜನ್, ಧನಂಜಯ ಆನೆಗಳು ಇಂದು ಬೆಳಿಗ್ಗೆ ಮೈಸೂರು ಅರಮನೆಯಿಂದ ಹೊರಟು ಕೆಆರ್ ಸರ್ಕಲ್, ಆಯುರ್ವೇದ ಆಸ್ಪತ್ರೆ ವೃತ್ತ, ನಂತರ ಬನ್ನಿಮಂಟಪವನ್ನು ತಲುಪಿದವು.

ಅರಮನೆಯಿಂದ 3.5 ಕಿಲೋಮೀಟರ್ ದೂರವಿರುವ ಬನ್ನಿಮಂಟಪಕ್ಕೆ ಗಜಪಡೆ ಸಾಗಿ, ನಂತರ ಅದೇ ಮಾರ್ಗವಾಗಿ ಅರಮನೆಗೆ ವಾಪಸ್ ಆದವು.

ಈ ಬಾರಿ ಗಜಪಡೆ ಮೇಲೆ ತೀವ್ರ ನಿಗಾ ಇಡುವ ನಿಟ್ಟಿನಲ್ಲಿ ಆಪ್ ಅನ್ನು ಸಿದ್ಧಪಡಿಸಲಾಗಿದ್ದು ಆನೆಗಳ ಚಲನ ವಲನ ಆರೋಗ್ಯ ಸ್ಥಿತಿ ಎಲ್ಲವನ್ನು ಆಪ್ ಮೂಲಕ ಗಮನಿಸಲಾಗುತ್ತದೆ.

ದಸರಾ ಆನೆಗಳು ಪ್ರತಿದಿನ ಯಾವ ಮಾರ್ಗದಲ್ಲಿ ತೆರಳಿತು ಹಾಗೂ ಅವುಗಳ ಇರುವಿಕೆ ಮತ್ತು ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆಹಾಕುವಂತಹ ಆಪ್ ಇದಾಗಿದೆ.

ದಸರಾ ಗಜಪಡೆಗೆ ತಾಲೀಮು ಪ್ರಾರಂಭ Read More

ದಸರಾ ಗಜಪಡೆಗೆ‌ ತೂಕ ಪರಿಶೀಲನೆ:ಅಭಿಮನ್ಯು ಬಲಭೀಮ

ಮೈಸೂರು:ನಾಡ ಹಬ್ಬ ದಸರಾ ಮಹೋತ್ಸವ ಪಾಲ್ಗೊಳ್ಳುತ್ತಿರುವ ದಸರಾ ಗಜಪಡೆಗೆ ಇಂದು ತೂಕ ಪರಿಶೀಲನೆ ಮಾಡಲಾಯಿತು.

ಆ. 21ರಂದು ಕಾಡಿನಿಂದ ನಾಡಿಗೆ ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳಿಗೆ ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಶ್ರೀನಿವಾಸ ವೇ ಬ್ರಿಡ್ಜ್‌ನಲ್ಲಿ ತೂಕ ಪರೀಕ್ಷೆ ನಡೆಯಿತು.

ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ಪದಾರ್ಥ ನೀಡಲಾಗುತ್ತದೆ.

ಬಳಿಕ ಜಂಬೂ ಸವಾರಿ ಮೆರವಣಿಗೆಗಾಗಿ ತಾಲೀಮು ನಡೆಯುತ್ತದೆ.

ಬೆಳಗ್ಗೆ ಸಂಜೆ ಎರಡು ಬಾರಿ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಯಲಿದೆ.

ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡುವುದೇ ತಾಲೀಮಿನ ಉದ್ದೇಶವಾಗಿದೆ.

ಮತ್ತಿಗೋಡು ಕ್ಯಾಂಪ್ ನಲ್ಲಿ‌ ಮಹೇಂದ್ರ, ಭೀಮ, ಏಕಲವ್ಯ ಆನೆಯನ್ನು ಪರಿಶೀಲಿಸುತ್ತಿರುವ ಡಿಸಿಎಫ್ ಶರಣಬಸಪ್ಪ‌ ಅವರು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳ ತೂಕದ ವಿವರ ನೀಡಿದರು.

ಅಭಿಮನ್ಯು: 5560 ಕೆಜಿ, ಭೀಮ : 4945 ಕೆಜಿ, ಏಕಲವ್ಯ : 4730 ಕೆಜಿ, ಕಂಜನ್ : 4515 ಕೆಜಿ, ಧನಂಜಯ : 5155 ಕೆಜಿ, ಲಕ್ಷ್ಮಿ : 2480 ಕೆಜಿ, ವರಲಕ್ಷ್ಮಿ : 3495 ಕೆಜಿ, ರೋಹಿತ : 3625 ಕೆಜಿ, ಗೋಪಿ : 4970 ಕೆಜಿ.

ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯು ನಂಬರ್ 1 ಆಗಿದ್ದು ತಾನು‌ ಬಲಭೀಮ ಎಂಬುದನ್ನು ಸಾಬೀತು ಪಡಿಸಿದ್ದಾನೆ.

ಆನೆಗಳ ಆರೋಗ್ಯದ ಬಗ್ಗೆ ತೀವ್ರ ನಿಗಾ ಹರಿಸಲಾಗಿದೆ. ಆನೆಗಳಿಗೆ‌ ಅವುಗಳ ತೂಕದ ಪ್ರಕಾರ ಪೌಷ್ಟಿಕ ಆಹಾರ ನೀಡಲಾಗುತ್ತದೆ.

ದಸರಾಗೂ ಮುನ್ನ ಮತ್ತೆ ಆನೆಗಳ ತೂಕ ಪರೀಕ್ಷೆ ಮಾಡುತ್ತೇವೆ,ಎಲ್ಲಾ ಆನೆಗಳ ಆರೋಗ್ಯ ಚೆನ್ನಾಗಿದೆ, ನಾಳೆಯಿಂದಲೇ ಗಜಪಡೆಗಳ ತಾಲೀಮು ಆರಂಭವಾಗಲಿದೆ ಎಂದು ಮೈಸೂರಿನಲ್ಲಿ ಡಿಸಿಎಫ್ ಡಾ. ಪ್ರಭುಗೌಡ ಅವರು ಮಾಧ್ಯಮದವರಿಗೆ ತಿಳಿಸಿದರು.

ದಸರಾ ಗಜಪಡೆಗೆ‌ ತೂಕ ಪರಿಶೀಲನೆ:ಅಭಿಮನ್ಯು ಬಲಭೀಮ Read More

ರಾಜ್ಯಪಾಲ ಸಿ ಎಚ್ ವಿಜಯಶಂಕರ್ ಗೆ ಶುಭ ಕೋರಿದ ತನ್ವೀರ್ ಸೇಠ್

ಮೈಸೂರು: ಮೈಸೂರಿನ ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಆಗಮಿಸಿದ ಮೇಘಾಲಯ ರಾಜ್ಯಪಾಲರಾದ ಸಿ. ಎಚ್ ವಿಜಯಶಂಕರ್ ರವರಿಗೆ ಮಾಜಿ ಸಚಿವರು ಹಾಗೂ ಶಾಸಕರಾದ ತನ್ವೀರ್ ಸೇಠ್ ಶುಭ ಕೋರಿದರು.

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಇಂದು ವಿಜಯಶಂಕರ್ ಅವರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು,ಹಾಗಾಗಿ ಆಶ್ರಮಕ್ಕೆ ಭೇಟಿ ನೀಡಿದ ಅವರನ್ನು ತನ್ವೀರ್ ಸೇಠ್ ಅವರು ಸ್ವಾಗತಿಸಿ ಹೂವಿನ ಹಾರ ಹಾಕಿ ಶುಭ‌ ಹಾರೈಸಿದರು.

ಈ ವೇಳೆ ಶಾಸಕರಾದ ಟಿ.ಎಸ್ ಶ್ರೀವತ್ಸ , ಬಿಜೆಪಿ ಹಿರಿಯ ಮುಖಂಡರಾದ ಮಾರುತಿ ರಾವ್ ಪವರ್ ,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಎಂ ಆರ್ ಬಾಲಕೃಷ್ಣ, ಶಂಕರ್ ನಾರಾಯಣ ಶಾಸ್ತ್ರಿ, ಹೊಯ್ಸಳ ಸಂಘದ ನಿರ್ದೇಶಕರಾದ ಪ್ರಶಾಂತ್ ಹಾಗೂ ಗಣಪತಿ ಸಚ್ಚಿದಾನಂದ ಆಶ್ರಮದ ಸಿದ್ದಾರ್ಥ, ರಾಜು ಸೇರಿದಂತೆ ಸ್ವಯಂಸೇವಕರು ಹಾಜರಿದ್ದರು.

ರಾಜ್ಯಪಾಲ ಸಿ ಎಚ್ ವಿಜಯಶಂಕರ್ ಗೆ ಶುಭ ಕೋರಿದ ತನ್ವೀರ್ ಸೇಠ್ Read More

ನಮ್ಮ ನಾಡಿನ ಹಿರಿಮೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತೇನೆ:ರಾಜ್ಯಪಾಲ ಸಿ.ಹೆಚ್ ವಿಜಯಶಂಕರ್

ಮೈಸೂರು,:ಮೇಘಾಲಯ ರಾಜ್ಯಪಾಲರಾದ ಸಿ.ಎಚ್.ವಿಜಯಶಂಕರ್ ಅವರನ್ನು ಶ್ರೀ ‌ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಕಿರಿಯ ಶ್ರೀಗಳಾದ ಶ್ರೀ ದತ್ತ‌ ವಿಜಯಾನಂದ ತೀರ್ಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಾಗರೀಕ ಅಭಿನಂದನಾ ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ. ಎಚ್ ವಿಜಯಶಂಕರ್ ಅವರು ನಾನು ಮುಕ್ತ ಮನಸ್ಸಿನಿಂದ ಸಾಂವಿಧಾನಿಕ ಹುದ್ದೆಯನ್ನು ನಿಭಾಯಿಸುತ್ತೇನೆ ನಮ್ಮ ನಾಡಿನ ಹಿರಿಮೆ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತೇನೆ ಎಂದು ಹೇಳಿದರು.

ನಾನು ರಾಜಪಾಲನಾಗಿರುವುದು ಮೇಘಾಲಯಕ್ಕೆ. ಅಲ್ಲಿ ಮಹಿಳೆಯರಿಗೆ ಅತ್ಯುನ್ನತ ಸ್ಥಾನವಿದೆ, ಮಹಿಳೆಯೇ ಮನೆಯ ಯಜಮಾನಿ, ಅಂತಹ ಉತ್ತಮವಾದ ಗೌರವ ಸ್ಥಾನ ಮಹಿಳೆಯರಿಗೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ರಾಜ್ಯದಿಂದ ಬೇರೆ ರಾಜ್ಯಗಳಲ್ಲಿ ರಾಜ್ಯಪಾಲರಾಗಿ ಹುದ್ದೆ ನಿಭಾಯಿಸಿದ ಮಹನೀಯರ ಮಾದರಿಯನ್ನು ಅನುಸರಿಸುತ್ತೇನೆ ಎಂದು ಎಸ್.ಎಂ ಕೃಷ್ಣ ಮತ್ತು ಮೈಸೂರಿನ ಮಹಾರಾಜರು ಮತ್ತಿತರರನ್ನು ವಿಜಯಶಂಕರ್ ಸ್ಮರಿಸಿದರು.

ರಾಜ್ಯಪಾಲ ಹುದ್ದೆ ಸಿಕ್ಕಿದ್ದಕ್ಕೆ ಕೃತಜ್ಞತೆ ಸಲ್ಲಿಸಲು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದೆ.ಆಗ ಅವರು ರಾಜ್ಯಪಾಲ ಹುದ್ದೆಯ ಘನತೆಯನ್ನು ಎತ್ತಿ ಹಿಡಿಯಬೇಕು,ರಾಜಭವನಕ್ಕೆ ಸೀಮಿತವಾಗದೆ,ಜನರ‌ ಮಧ್ಯೆ‌ ಬರಬೇಕು,ಅವರ ಸಮಸ್ಯೆ ಆಲಿಸಬೇಕು,ಬಾರ್ಡರ್ ಗಳಿಗೆ ಹೋಗಿ ಅಲ್ಲಿನ ಸಮಸ್ಯೆಗಳನ್ನು ನೋಡಿ ಪರಿಹರಿಸಬೇಕು ಎಂದು ಸಲಹೆ ನೀಡಿದ್ದಾರೆ ಎಂದು ಹೇಳಿದರು.

ನನಗೆ ಮೇಘಾಲಯ ರಾಜ್ಯಪಾಲ ಹುದ್ದೆ ಸಿಕ್ಕ ಕೂಡಲೇ ನನ್ನ ಶ್ರೀಮತಿಯವರು ನಿಮಗೆ ಈ ನಾಡಿನ ಋಣವನ್ನು ಇನ್ನೂ ತೀರಿಸಲು ಆಗಿಲ್ಲ ಶಾಸಕರಾದಿರಿ, ಸಚಿವರಾದಿರಿ, ವಿಧಾನ ಪರಿಷತ್ ಸದಸ್ಯರಾದಿರಿ ಆದರೆ ಯಾವುದೇ ಋಣವನ್ನು ನೀವು ತೀರಿಸಿಲ್ಲ ಈಗ ಮೇಘಾಲಯ ರಾಜ್ಯಪಾಲರಾಗಿದ್ದೀರಿ.ಅಲ್ಲಿನ ಋಣ ತೀರಿಸಿ ಋಣಮುಕ್ತರಾಗಿ ಬನ್ನಿ ಎಂದು ತಿಳಿಸಿದ್ದಾರೆ ಎಂದು ವೇದಿಕೆಯಲ್ಲಿ ತಮ್ಮ ಶ್ರೀಮತಿಯವರ ಆಶಯವನ್ನು ರಾಜ್ಯಪಾಲರು ತಿಳಿಸಿದರು.

ಶುದ್ಧ ಗಾಳಿ ಶುದ್ಧ ನೀರು,ಮೆಡಿಕಲ್ ಸೈನ್ಸ್ ಮತ್ತು ಧಾರ್ಮಿಕವಾಗಿ ನಮ್ಮ ದೇಶದಲ್ಲಿ ಮೇಘಾಲಯ ಮೊದಲ ಸ್ಥಾನದಲ್ಲಿದೆ ಎಂದು ಕೊಂಡಾಡಿದರು.

ಆಚಾರ ವಿಚಾರ ಎಲ್ಲದರಲ್ಲೂ ಮೇಘಾಲಯ ಮುಂದಿದೆ ನಮ್ಮ ರಾಜ್ಯದಿಂದ ವಿದ್ಯಾರ್ಥಿಗಳು ನಾಡಿನ ಜನರು ಮೇಘಾಲಯಕ್ಕೆ ಬರಬೇಕೆಂದು ಆಹ್ವಾನಿಸಿದರು.

ಮೇಘಾಲಯದಲ್ಲಿ ಮತ್ತೊಂದು ವಿಶೇಷವೆಂದರೆ ಅಲ್ಲಿ ಮನೆಯ ಮಗಳಿಗೆ ಪಿತ್ರಾರ್ಜಿತ ಆಸ್ತಿ ಹೋಗುತ್ತದೆ ಅಂತಹ ಒಂದು ಒಳ್ಳೆಯ ಕಾನೂನು ಅಲ್ಲಿರುವುದು ವಿಶೇಷ ಎಂದು ತಿಳಿಸಿದರು.

ನಮ್ಮ ನಾಡಿನ ಗೌರವಕ್ಕೆ ಚ್ಯುತಿ ತರುವಂತಹ ಕೆಲಸವನ್ನು ನಾನು ಮಾಡುವುದಿಲ್ಲ ನನಗೆ ಜನ್ಮ ಜನ್ಮದ ಪುಣ್ಯ ಅಲ್ಲಿನ ರಾಜ್ಯಪಾಲ ಹುದ್ದೆ ಸಿಕ್ಕಿದೆ, ನಮ್ಮ ನಾಡಿನ ಕೀರ್ತಿಯನ್ನು ಹೆಚ್ಚಿಸುತ್ತೇನೆ ನಮ್ಮ ನಾಡಿನ ಋಣವನ್ನು ತೀರಿಸುವಂತಹ ಕೆಲಸ ಮಾಡುತ್ತೇನೆ ಎಂದು ಸಿ ಎಚ್ ವಿಜಯಶಂಕರ್ ತಿಳಿಸಿದರು.

ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ,
ರಾಜ್ಯಪಾಲರ ಹುದ್ದೆ ಸುಲಭವಾದುದಲ್ಲ ಅದು ಜಟಿಲ, ಕೇವಲ ಸಹಿ ಹಾಕುವುದಲ್ಲ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತಾಗಬೇಕು ಎಂದು ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಹೇಳಿರುವುದು ನಿಜ. ಅದರಂತೆ ಸಾಂವಿಧಾನಿಕ ಹುದ್ದೆಯನ್ನು ಚೆನ್ನಾಗಿ ನಿಭಾಯಿಸಿ ಮೈಸೂರಿಗೆ ಮತ್ತು ಕರ್ನಾಟಕಕ್ಕೆ ಇನ್ನೂ ಹೆಚ್ಚು ಒಳ್ಳೆಯ ಹೆಸರನ್ನು ತರುವಂತಾಗಲಿ ಎಂದು ಹಾರೈಸಿದರು.

ರಾಜ್ಯಪಾಲರಾಗಿ ರಾಜಭವನ ಪ್ರವೇಶಿಸಿದ ಕೂಡಲೇ ರಾಜಭವನದಲ್ಲಿ ಇನ್ನು ಮುಂದೆ ಮಧ್ಯ,ಮಾಂಸ ಸೇವನೆ ಇರುವುದಿಲ್ಲ ಎಂದು ವಿಜಯಶಂಕರ್ ಅವರು ಹೇಳಿ ಅದನ್ನು ಆಚರಣೆಗೆ ತರುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.ಆದರೆ ಆಹಾರ ಪದ್ಧತಿ ಅವರವರ ನಂಬಿಕೆಗೆ ಬಿಟ್ಟದ್ದು ಆದರೆ ಅವರ ಪದ್ಧತಿಯನ್ನು ಇಂಪ್ಲಿಮೆಂಟ್ ಮಾಡುತ್ತಿರುವುದು ಅವರ ಧೈರ್ಯಕ್ಕೆ ಮೆಚ್ಚುಗೆ ಇರಬೇಕು ಎಂದು ಶ್ರೀಗಳು ಹೇಳಿದರು.

ವಿಜಯಶಂಕರ್ ಅವರು 1990 ರಿಂದ ನಮ್ಮ ಆಶ್ರಮಕ್ಕೆ ಬರುತ್ತಿದ್ದಾರೆ ಈಗ ಅವರು ರಾಜ್ಯಪಾಲರಾಗಿರುವುದು ನಮ್ಮ ಆಶ್ರಮದವರೇ ರಾಜ್ಯಪಾಲರಾಗಿದ್ದಾರೇನೊ ಎನಿಸುತ್ತಿದೆ,ಅತ್ಯಂತ ಸಂತಸವಾಗುತ್ತಿದೆ ಅವರಿಗೆ ನಮ್ಮ ಆಶ್ರಮದಲ್ಲಿಯೇ ನಾಗರಿಕ ಅಭಿನಂದನೆ ಮಾಡುತ್ತಿರುವುದು ನಿಜಕ್ಕೂ ಒಳ್ಳೆಯ ಕಾರ್ಯ,ನಮ್ಮ ಗಣಪತಿ ಸಚ್ಚುದಾನಂದ ಸ್ವಾಮೀಜಿಯವರ ಆಶಯವೂ ಇದೇ ಆಗಿತ್ತು, ಈ ಕಾರ್ಯವನ್ನು ಎಲ್ಲರೂ ಅಚ್ಚುಕಟ್ಟಾಗಿ ನಡೆಸಿ ಕೊಟ್ಟಿದ್ದಾರೆ ಎಂದು ಮೆಚ್ಚುಗೆ‌ ವ್ಯಕ್ತಪಡಿಸಿದರು.

ನಾವು ಮಾಡುವ ಒಳ್ಳೆಯ ಕೆಲಸಕ್ಕೆ ಭಗವಂತನ ಅನುಗ್ರಹ ಇದ್ದೇ ಇರುತ್ತದೆ ಎಂಬುದಕ್ಕೆ ವಿಜಯಶಂಕರ್ ಉದಾಹರಣೆಯಾಗಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ಸನ್ಮಾನ ಸಮಾರಂಭಕ್ಕೂ ಮೊದಲು ಸಿ.ಎಚ್.ವಿಜಯಶಂಕರ್ ಅವರು ಅವಧೂತ ದತ್ತಪೀಠದ ಆವರಣದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಹಾಗೂ ಕಾರ್ಯಸಿದ್ದಿ ಆಂಜನೇಯಸ್ವಾಮಿ ದೇವಾಲಯ,ಶ್ರೀದತ್ತ ಸನ್ನಿಧಿಗೆ ಭೇಟಿ ನೀಡಿ ದೇವರುಗಳ‌ ದರ್ಶನ ಪಡೆದುಕೊಂಡರು.

ಬಿಜೆಪಿ ಮುಖಂಡ,ಮಾಜಿ ಶಾಸಕ ಮಾರುತಿರಾವ್ ಪವಾರ್ ಗಣ್ಯರಿಗೆ ಸ್ವಾಗತ ಕೋರಿದರು.ಮಾಜಿ‌ ಶಾಸಕ ವೈ.ಎಸ್.ವಿ ದತ್ತ‌ ಅಭಿನಂದನಾ ನುಡಿ ಆಡಿದರು.

ಕಾರ್ಯಕ್ರಮದಲ್ಲಿ ಖ್ಯಾತ ಹಿರಿಯ ಸಾಹಿತಿ,ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ‌ ಎಸ್.ಎಲ್.ಭೈರಪ್ಪ,
ಮತ್ತೊಬ್ಬ ಹಿರಿಯ ಸಾಹಿತಿ ಪ್ರಧಾನ್ ಗುರುದತ್ತ, ಶಾಸಕರಾದ ಶ್ರೀವತ್ಸ,ತನ್ವೀರ್‌ಸೇಠ್,ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್,ಗೋಪಾಲಗೌಡ ಆಸ್ಪತ್ರೆಯ ಡಾ.ಶೃಶೃತ್ ಗೌಡ
ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ನಮ್ಮ ನಾಡಿನ ಹಿರಿಮೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತೇನೆ:ರಾಜ್ಯಪಾಲ ಸಿ.ಹೆಚ್ ವಿಜಯಶಂಕರ್ Read More

ಕನ್ನಡ ಭಾಷೆ, ಬೆಳವಣಿಗೆ,ಸಮಾಜ ಸುಧಾರಣೆಗೆ ಬಸವಣ್ಣ ನವರ ವಚನಗಳು ಜೀವತುಂಬಿದೆ:ಗಿರೀಶ್

ಮೈಸೂರು:ಕನ್ನಡ ಭಾಷೆ,ಬೆಳವಣಿಗೆ,
ಸಮಾಜ ಸುಧಾರಣೆಗೆ ಬಸವಣ್ಣ ನವರ ವಚನಗಳು ಜೀವತುಂಬಿದೆ ಎಂದು ಜೀವಧಾರ ರಕ್ತನಿಧಿ ಕೇಂದ್ರದ ಗಿರೀಶ್
ತಿಳಿಸಿದರು.

ಮೈಸೂರು ದಸರಾ ವಸ್ತುಪ್ರದರ್ಶನದ ಕರ್ನಾಟಕ ಸಂಭ್ರಮ50 ಸಾಂಸ್ಕೃತಿಕ ವೇದಿಕೆಯಲ್ಲಿ ಕರ್ನಾಟಕ‌ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ರವರ ವಚನಗಾಯನ ಹಾಗೂ ನೃತ್ಯರೂಪಕ ಕಾರ್ಯಕ್ರಮವನ್ನ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಬದಲಾವಣೆಗಾಗಿ ಅಸಮಾನತೆ ಹೋಗಬೇಕು, ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂಬುದು ಬಸವಣ್ಣ ರವರ ಸಂಕಲ್ಪವಾಗಿತ್ತು.

ಬಸವಣ್ಣರವರು ಆಡು ಮಾತಿನಲ್ಲೇ ಜನರಿಗೆ ಅರ್ಥವಾಗುವ ರೀತಿಯಲ್ಲಿ ವಚನ ಸಾಹಿತ್ಯ ರಚಿಸಿ ಕನ್ನಡಭಾಷೆಯ ಬೆಳವಣಿಗೆಗೆ ಶ್ರಮಿಸಿ ವಿಶ್ವಗುರುವಾದರು, ಸಮಾಜದಲ್ಲಿ ಇರುವ ಅಂಕುಡೊಂಕು ತಾರತಮ್ಯಗಳನ್ನ ಸರಿಪಡಿಸಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದರು ಎಂದು ತಿಳಿಸಿದರು.

ಬಸವಣ್ಣರವರು 12ನೇ ಶತಮಾನದಲ್ಲೆ ಅನುಭವ ಮಂಟಪ ಸ್ಥಾಪನೆ ಮಾಡಿ ಜನಪರ ಆಡಳಿತ ನಿರ್ದೇಶಿಸಿದ್ದರು,ಬಸವಣ್ಣ ನವರು ಒಂದು ಜಾತಿಗೆ ಒಂದು ಪ್ರದೇಶಕ್ಕೆ ಸೀಮಿತರಲ್ಲ ಅವರು ಇಡೀ ವಿಶ್ವಕ್ಕೆ ಗುರುವಾಗಿದ್ದಾರೆ ಎಂದು ಗಿರೀಶ್ ತಿಳಿಸಿದರು.

ಇದೇ ಸಂಧರ್ಭದಲ್ಲಿ ವಿಶ್ವಗುರು ಬಸವಣ್ಣ ಪ್ರಶಸ್ತಿಗೆ ಭಾಜನರಾದ , ಮಹದೇವಪ್ರಸಾದ್, ಕಂಡೇಶ್, ಮಲ್ಲಿಗೆ ವೀರೇಶ್, ಸರ್ವಮಂಗಳ, ಪುಷ್ಪಲತಾ ರವರನ್ನ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಕರ್ನಾಟಕ ಸಂಭ್ರಮ ವ್ಯವಸ್ಥಾಪಕ ಕೃಷ್ಣ, ಕರ್ನಾಟಕ ಸುಗಮಸಂಗೀತ ಪರಿಷತ್ ಅಧ್ಯಕ್ಷ ಡಾ. ನಾಗರಾಜ ವಿ ಭೈರಿ, ನಿರೂಪಕ ಅಜಯ್ ಶಾಸ್ತ್ರಿ, ಬೆಟ್ಟೆಗೌಡ, ಗಾಯಕ ಅಮ್ಮರಾಮಚಂದ್ರ, ಮಹಲಿಂಗು, ಸಿರಿಬಾಲು, ಸದಾಶಿವ ಮತ್ತಿತರರು ಹಾಜರಿದ್ದರು.

ಕನ್ನಡ ಭಾಷೆ, ಬೆಳವಣಿಗೆ,ಸಮಾಜ ಸುಧಾರಣೆಗೆ ಬಸವಣ್ಣ ನವರ ವಚನಗಳು ಜೀವತುಂಬಿದೆ:ಗಿರೀಶ್ Read More

ದಸರಾ ಕಳೆಗಟ್ಟುವಾಗಲೇ ಸ್ಫೋಟಕಗಳು ಪತ್ತೆ:ಮೈಸೂರಿನಲ್ಲಿ ಆತಂಕ

ಮೈಸೂರು, ಆ.23: ನಾಡ ಹಬ್ಬ ದಸರಾ ಮಹೋತ್ಸವ ಕಳೆಗಟ್ಟಲಾರಂಭಿಸಿರುವಾಗಲೇ ಮೈಸೂರಿನಲ್ಲಿ ಭಾರಿ ಸ್ಫೋಟಕ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನ ಕೆಂಪಯ್ಯನಹುಂಡಿ ಸಮೀಪದ ಹೋಟೆಲ್ ನಲ್ಲಿ ಸ್ಫೋಟಕಗಳು ಪತ್ತೆಯಾಗಿವೆ.

ದುಷ್ಕರ್ಮಿಗಳು ನೀಲಿ ಬಣ್ಣದ ಬ್ಯಾಗ್ ನಲ್ಲಿ ಸ್ಫೋಟಕ ವಸ್ತುಗಳನ್ನು ಇಟ್ಟು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸ್ಫೋಟಕ ವಸ್ತುಗಳನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಪೊಲೀಸ್ ಸಿಬ್ಬಂದಿ ಧಾವಿಸಿ ಸ್ಫೋಟಕಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

ಟ್ಯೂಬ್ ಆಕಾರದಲ್ಲಿರುವ 9 ಸ್ಫೋಟಕಗಳು ಹಾಗೂ ಒಂದು ನಾಡ ಬಾಂಬ್ ಆಕಾರದ ವಸ್ತು ಪತ್ತೆಯಾಗಿದೆ.

ವಿಶ್ವ ವಿಖ್ಯಾತ ದಸರಾ ಮಹೋತ್ಸವ ಕಳೆಗಟ್ಟಲಾರಂಭವಾದ ಹೊತ್ತಲ್ಲೇ ಸ್ಫೋಟಕ ಪತ್ತೆಯಾಗಿರುವುದು ಮೈಸೂರಿಗರಲ್ಲಿ ಆತಂಕ ಸೃಷ್ಟಿಸಿದೆ.

ದಸರಾ ಕಳೆಗಟ್ಟುವಾಗಲೇ ಸ್ಫೋಟಕಗಳು ಪತ್ತೆ:ಮೈಸೂರಿನಲ್ಲಿ ಆತಂಕ Read More