ಜಾತಿ ಗಣತಿ: ಶಿಕ್ಷಕರಿಗೆ ಸರಿಯಾದ ಮಾಹಿತಿ ನೀಡದ ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟನೆ

Spread the love

ಮೈಸೂರು: ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಜಾತಿ ಗಣತಿಗೆ ಅನಾರೋಗ್ಯ ಪೀಡಿತ ಅಮಾಯಕ ಶಿಕ್ಷಕರನ್ನು ನಿಯೋಜಿಸಿ, ಜಾತಿ ಗಣತಿಗೆ ಸರಿಯಾದ ಮಾಹಿತಿ ನೀಡದೆ, ಶಿಕ್ಷೆ ನೀಡುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ‌ ಸೇನಾಪಡೆ ಸದಸ್ಯರು
ಪ್ರತಿಭಟನೆ ನಡಿಸಿದರು.

ಸರ್ಕಾರ ಮನೆಗಳ ಜನಗಣತಿಯ ಪಟ್ಟಿಗಳನ್ನು ಶಿಕ್ಷಕರಿಗೆ ಸರಿಯಾಗಿ ನೀಡದೆ, ಆ ಮನೆಗಳ ಲೋಕೇಶನ್ ತಲುಪುವುದು ಶಿಕ್ಷಕರಿಗೆ ಕಷ್ಟಕರವಾಗಿದೆ. ಮನೆ ಮುಂದೆ ಹಿಂದುಳಿದ ವರ್ಗಗಳ ಆಯೋಗದಿಂದ ಅಂಟಿಸಿರುವ ಯು ಎಚ್ ಐ ಡಿ ಸ್ಟಿಕ್ಕರ್ ಐಡಿ ನಂಬರ್, ಹಳ್ಳಿಗಳಲ್ಲಿ ಬೇರೆ ಬೇರೆ ಜಾಗಗಳಲ್ಲಿ ತೋರಿಸುತ್ತಿರುವುದು ಶಿಕ್ಷಕರಿಗೆ ತೀವ್ರ ತೊಂದರೆಯಾಗಿದೆ ಎಂದು ಪ್ರತಿಭಟನೆ ವೇಳೆ‌ ಕರ್ನಾಟಕ‌ ಸೇನಾಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಬೇಸರ ವ್ಯಕ್ತಪಡಿಸಿದರು.

ಈ ಜನಗಣತಿಯನ್ನು ಸರ್ಕಾರದ ಆನ್ ಲೈನ್ ಆಪ್ ನಲ್ಲಿ ಮಾಡುತ್ತಿರುವುದರಿಂದ ನೆಟ್ವರ್ಕ್ ಹಾಗೂ ಸರ್ವರ್ ಸಮಸ್ಯೆ ಕಾಡುತ್ತಿದೆ. ಜೊತೆಗೆ ಗಣತಿದಾರರ ಹಾಗೂ ಮನೆ ಮಾಲೀಕರ ಒಟಿಪಿ ಗಳು ಸರಿಯಾಗಿ ಬರುತ್ತಿಲ್ಲ, ಅಪ್ಲೋಡ್ ಆಗುತ್ತಿಲ್ಲ. ಜೊತೆಗೆ ಪ್ರತಿಯೊಂದು ಮನೆಯ ಸಮೀಕ್ಷೆಗೆ 60 ಪ್ರಶ್ನೆಗಳನ್ನು ಸರ್ಕಾರ ಕೇಳುತ್ತಿರುವುದು ಅತ್ಯಂತ ಖಂಡನೀಯ ಎಂದು ಹೇಳಿದರು.

ಶಿಕ್ಷಕರಿಗೆ ಅವರು ಕೆಲಸ ಮಾಡುವ ಸ್ಥಳದಿಂದ, ಮತ್ತೊಂದು ದೂರದ ಸ್ಥಳಕ್ಕೆ ಸಮೀಕ್ಷೆಗೆ ಆಯೋಜನೆ ಮಾಡಿರುವುದು ಸರಿಯಲ್ಲ, ಜೊತೆಗೆ ಆಪ್ ನಲ್ಲಿ 60 ಪ್ರಶ್ನೆಗಳಿಗೆ ಸುಮಾರು 1 ಗಂಟೆಗಳ ಕಾಲ ಮಾಹಿತಿ ತುಂಬಿದ ನಂತರ, ದೃಢೀಕರಣ ಅಪ್ಲೋಡ್ ನಾಟ್ ಸಕ್ಸಸ್ ಆದರೆ ಮತ್ತೆ 1 ಗಂಟೆ ಪುನಃ ಸಮಯ ಬೇಕಾಗುತ್ತದೆ ಹಾಗಾಗಿ ಒಂದು ದಿನಕ್ಕೆ ಗರಿಷ್ಟ ಎರಡು ಮೂರು ಮನೆ ಸಮೀಕ್ಷೆ ಮಾಡುವುದೂ ಕಷ್ಟವಾಗುತ್ತದೆ.

ದೈಹಿಕ ನ್ಯೂನತೆಹುಳ್ಳ, ಅನಾರೋಗ್ಯ ಮತ್ತು ವಯಸ್ಸಾದ ಶಿಕ್ಷಕರಿಗೆ ದೂರದ ಊರಿಗೆ ಸಮೀಕ್ಷೆಗೆ ಹೋಗಲು ತೊಂದರೆಯಾಗುತ್ತಿದೆ. ಇಂತಹ ಅನಾರೋಗ್ಯವುಳ್ಳವರು, ವೈದ್ಯಕೀಯ ಸರ್ಟಿಫಿಕೇಟ್ ನೀಡಿದರೂ, ಸರ್ಕಾರ ವಿನಾಯತಿ ನೀಡದಿರುವುದು ಸರಿಯಲ್ಲ, ಸಮೀಕ್ಷೆಯಲ್ಲಿ ಪಾಲ್ಗೊಳ್ಳದೆ ಇರುವ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿಗಳು ಹೇಳುತ್ತಿರುವುದು ಅವರಿಂದ ಬಲವಂತವಾಗಿ ಕೆಲಸ ಮಾಡಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.

ಈಗಾಗಲೇ ರಾಜ್ಯ ಸರ್ಕಾರ ಸುಮಾರು 200 ಕೋಟಿ ವ್ಯಯ ಮಾಡಿ ಕಾಂತರಾಜು ವರದಿಯನ್ನು ರೂಪಿಸಿ, ಅದನ್ನು ಕಸದ ಬುಟ್ಟಿಗೆ ಎಸೆದು, ಈಗ ಮತ್ತೆ ಸುಮಾರು 460 ಕೋಟಿ ರೂ ವೆಚ್ಚ ಮಾಡಿ, ಜನಗಣತಿ ಮಾಡಿಸಲು ಹೋಗಿ ನಮ್ಮ ತೆರಿಗೆ ಹಣವನ್ನು ಲೂಟಿ ಮಾಡಲು ಹೊರಟಿದೆ ಎಂದು ತೇಜೇಶ್ ಆರೋಪಿಸಿದರು.

ರಾಜ್ಯ ಸರ್ಕಾರ ಕೂಡಲೇ ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ, ಆನ್ಲೈನ್ ಆಪ್ ಬದಲು, ಬುಕ್ಲೆಟ್ ಅಥವಾ ಮ್ಯಾನ್ಯುಯಲ್ ಅಪ್ಲಿಕೇಶನ್ ನಲ್ಲಿ ಗಣತಿ ಮಾಡಲಿ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ವೈದ್ಯಕೀಯ ಸರ್ಟಿಫಿಕೇಟ್ ನೀಡಿದವರಿಗೆ ಈ ಜಾತಿಗಣತಿಯಿಂದ ರಿಯಾಯಿತಿ ನೀಡಬೇಕೆಂದು ಒತ್ತಾಯಿಸಿದರು.

ಗೋಲ್ಡನ್ ಸುರೇಶ್, ಪ್ರಜೀಶ್, ಪ್ರಭುಶಂಕರ, ಕೃಷ್ಣಪ್ಪ, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ ನೇಹಾ, ಭಾಗ್ಯಮ್ಮ, ಕೃಷ್ಣೆಗೌಡ, ಹೊನ್ನೇಗೌಡ, ಹನುಮಂತಯ್ಯ, ತಾಯೂರು ಗಣೇಶ್, ಎಳನೀರು ರಾಮಣ್ಣ, ಬಸವರಾಜು, ಕುಮಾರ್ ಗೌಡ, ಸುನೀಲ್ ಅಗರವಾಲ್, ಆನಂದ್ ಗೌಡ, ಡಾ. ಶಾಂತರಾಜೇ ಅರಸ್, ರಾಧಾಕೃಷ್ಣ, ರಾಜುಗೌಡ, ರಘು ಅರಸ್, ಮೂರ್ತಿ ಲಿಂಗಯ್ಯ, ಗಣೇಶ್ ಪ್ರಸಾದ್, ದರ್ಶನ್ ಗೌಡ, ರವಿ ನಾಯಕ್, ರವೀಶ್, ಮಹಾದೇವಸ್ವಾಮಿ, ಚಂದ್ರಶೇಖರ್, ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.