ಜಾತಿ ಜನಗಣತಿಗೆ ಕೈಜೋಡಿಸಿ:ಬಿ. ಸುಬ್ರಹ್ಮಣ್ಯ ಮನವಿ

Spread the love

ಮೈಸೂರು: ರಾಜ್ಯ ಸರ್ಕಾರ ಕೈಗೊಂಡಿರುವ ಹಿಂದುಳಿದ ವರ್ಗಗಳ ಸಮುದಾಯದ ಜಾತಿಜನಗಣತಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಸಮುದಾಯದವರು ಕೈ ಜೋಡಿಸಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಮನವಿ ಮಾಡಿದರು.

ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ಕೈಗೊಂಡಿರುವ ಜಾತಿ ಜನಗಣತಿ ಹಾಗೂ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ
ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಕನಕ ಸಮುದಾಯ ಭವನದಲ್ಲಿ ಮಾಜಿ ರಾಜ್ಯಾಧ್ಯಕ್ಷ ಬಿ. ಸುಬ್ರಹ್ಮಣ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿ. ಸುಬ್ರಹ್ಮಣ್ಯ ಅವರು, ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಸಮುದಾಯದ ಜಾತಿಜನಗಣತಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದೆ. ಈ ಸಮೀಕ್ಷೆಯಲ್ಲಿ ಸಮುದಾಯದ ಪ್ರತಿಯೊಬ್ಬರು ಕೂಡ ಭಾಗವಹಿಸುವ ಮೂಲಕ ತಮ್ಮ ಜಾತಿ ಹಾಗೂ ಜನಸಂಖ್ಯೆಯನ್ನ ನೋಂದಣಿ ಮಾಡಿಸಿಕೊಳ್ಳಬೇಕು. ಅಲ್ಲದೇ ಕುರುಬ ಸಮುದಾಯದ ಜನ ಜಾತಿ ಕಾಲಂ ನಲ್ಲಿ ಕುರುಬ ಸಮಾಜ ಎಂದೇ ಬರೆಸಬೇಕು ಎಂದು ಮನವಿ ಮಾಡಿದರು.

ಶೋಷಿತ ಸಮುದಾಯದ ಸಂಚಾಲಕರಾದ ರಾಮಚಂದ್ರಪ್ಪ ಮಾತನಾಡಿ ಸಮೀಕ್ಷೆಗೆ ಹಲವರು ವಿರೋಧ ಮಾಡಬಹುದು. ಆದರೆ ಹಿಂದುಳಿದ ಸಮುದಾಯಗಳಿಗೆ ಈ ಸಮೀಕ್ಷೆಯಿಂದ ಒಳಿತಾಗಲಿದೆ. ಹಾಗಾಗಿ ಗಣತಿಗೆ ಬರುವ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಸೋಮಶೇಖರ್ ಮಾತನಾಡಿ ಪ್ರತಿಯೊಂದು ಗ್ರಾಮದಲ್ಲಿರುವ ಕುರುಬ ಸಮುದಾಯದ ಕುಟುಂಬಗಳು ಈ ಸಮೀಕ್ಷೆಗೆ ಸಹಕಾರ ಕೊಡಬೇಕು. ಯುವ ಸಮೂಹದ ಜನ ಕೂಡ ಇದಕ್ಕೆ ಕೈಜೋಡಿಸಿ ನಮ್ಮ ಸಮುದಾಯದ ಜನರನ್ನ ಜಾಗೃತರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

ಮೈಸೂರು ನಗರ ಮತ್ತು ಗ್ರಾಮಾಂತರ ಭಾಗದ ಮುಖಂಡರು, ಸಮುದಾಯದ ಹಿರಿಯ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಣ್ಣ, ಖಜಾಂಜಿ ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಶಿವಪ್ಪ ಕೋಟೆ, ಸಮಾಜದ ಮುಖಂಡರುಗಳಾದ ಅಮಿತ್, ಚಿಕ್ಕಣ್ಣ, ದೊಳ್ಳೇಗೌಡ, ರಂಗರಾಜು, ಬಸವರಾಜು, ರವಿ, ರಾಮಕೃಷ್ಣಪ್ಪ, ರೇಖಾ, ಚಾಯ, ರಾಜೇಶ್ವರಿ, ತಾಲೂಕು ಅಧ್ಯಕ್ಷರುಗಳಾದ, ಕುನ್ನೆಗೌಡ, ಆನಂದ್, ಕೆಂಪಣ್ಣ,ಮಹೇಶ್, ಸುನಿಲ್, ಬಸವರಾಜ್ ಸೇರಿದಂತೆ ಮೈಸೂರು ಜಿಲ್ಲಾ ಮತ್ತು ತಾಲ್ಲೂಕು ಕುರುಬ ಸಂಘದ ಪದಾಧಿಕಾರಿಗಳು, ಸಮಾಜದ ಯುವಕರು ಕನಕದಾಸ ಹಾಗೂ ರಾಯಣ್ಣ ಸಂಘದ ಸದಸ್ಯರು,ಮುಖಂಡರುಗಳು ಉಪಸ್ಥಿತರಿದ್ದರು.