ಮೈಸೂರು: ಮೈಸೂರಿನ ನಾರಾಯಣ ಆಸ್ಪತ್ರೆಯು 50ಕ್ಕೂ ಹೆಚ್ಚು ಸೈಟೊರಿಡಕ್ಟಿವ್ ಸರ್ಜರಿ (ಸಿಆರ್‌ಎಸ್) ಮತ್ತು ಹೈಪರ್‌ಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕೀಮೋಥೆರಪಿ (ಹೈಪೆಕ್) ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅತ್ಯುತ್ಕೃಷ್ಟ ಆಸ್ಪತ್ರೆಯಾಗಿ ಮೂಡಿ ಬಂದಿದೆ.
ಈ ಸಾಧನೆ ಮಾಡುವ ಮೂಲಕ ನಾರಾಯಣ ಆಸ್ಪತ್ರೆಯು ಮೈಸೂರು ವಲಯದಲ್ಲಿ ಈ ಸಂಕೀರ್ಣ ಚಿಕಿತ್ಸೆಯನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸುವ ಮೊದಲ ಮತ್ತು ಏಕೈಕ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಅಲ್ಲದೆ ಪೆರಿಟೋನಿಯಲ್ ಸರ್ಫೇಸ್ ಮ್ಯಾಲಿಗ್ನನ್ಸೀಸ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಉತ್ಕೃಷ್ಟ ಚಿಕಿತ್ಸಾ ಕೇಂದ್ರವಾಗಿ ರೂಪುಗೊಂಡಿದೆ.
ಪ್ರಖ್ಯಾತ ವೈದ್ಯರಾದ ಡಾ. ಸುಹಾಸ್ ಕೆ. ಆರ್. ಮತ್ತು ಡಾ. ಲೋಕೇಶ ಎಚ್. ಎಂ. ಅವರ ನೇತೃತ್ವದಲ್ಲಿ ನಾರಾಯಣ ಆಸ್ಪತ್ರೆಯು ಸಂಕೀರ್ಣ ಹಂತದ ಕ್ಯಾನ್ಸರ್ ಗಳಿಗೆ ಅದರಲ್ಲೂ ವಿಶೇಷವಾಗಿ ಪೆರಿಟೋನಿಯಲ್ ವರೆಗೆ ಹರಡಿರುವ ಅಂಡಾಶಯ ಕ್ಯಾನ್ಸರ್ ಪ್ರಕರಣಗಳಿಗೆ ಅತ್ಯಾಧುನಿಕ ಚಿಕಿತ್ಸೆ ಒದಗಿಸುತ್ತಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ಸುಹಾಸ್ ಕೆ.ಆರ್. ಅವರು, “ಪೆರಿಟೋನಿಯಲ್ ಸರ್ಫೇಸ್ ಮ್ಯಾಲಿಗ್ನನ್ಸೀಸ್ ಕ್ಯಾನ್ಸರ್ ಪ್ರಕರಣಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಸಿಆರ್‌ಎಸ್ ಮತ್ತು ಹೈಪೆಕ್ ಶಸ್ತ್ರಚಿಕಿತ್ಸಾ ವಿಧಾನಗಳು ಬಹಳ ನೆರವಾಗಿವೆ. ಈ ನವೀನ ಶಸ್ತ್ರಚಿಕಿತ್ಸಾ ತಂತ್ರಗಳು ಮತ್ತು ಉತ್ತಮ ಆರೈಕೆಯ ಮೂಲಕ ನಮ್ಮ ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಮತ್ತೋರ್ವ ಸರ್ಜಿಕಲ್ ಆಂಕಾಲಜಿಸ್ಟ್ ಡಾ. ಲೋಕೇಶ ಎಚ್.ಎಂ. ಅವರು ಮಾತನಾಡಿ, ಈ ಸಾಧನೆಯು ನಮ್ಮ ತಂಡದ ಕಠಿಣ ಪರಿಶ್ರಮ ಮತ್ತು ರೋಗಿಗಳು ನಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ. ಪೆರಿಟೋನಿಯಲ್ ಮ್ಯಾಲಿಗ್ನನ್ಸೀಸ್ ಕ್ಯಾನ್ಸರ್ ಗೆ ಉತ್ತಮ ಚಿಕಿತ್ಸೆ ಒದಗಿಸಲು ನಾವು ಸದಾ ಬದ್ಧರಾಗಿದ್ದೇವೆ ಎಂದು ತಿಳಿಸಿದರು
ಈ ಶಸ್ತ್ರಚಿಕಿತ್ಸೆಯು ಬಹಳ ಸವಾಲಿನದ್ದಾಗಿದೆ. ಪ್ರತೀ ಶಸ್ತ್ರಚಿಕಿತ್ಸೆಯು 8-12 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ಸಂಕೀರ್ಣ ಚಿಕಿತ್ಸೆಯಾದ್ದರಿಂದ ಬಹು ಶಸ್ತ್ರಚಿಕಿತ್ಸಕರು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆ ಇರುತ್ತದೆ ಎಂದು ಹೇಳಿದರು.
ಕರ್ನಾಟಕದ ಇತರ ಆಸ್ಪತ್ರೆಗಳಿಗಿಂತ ಅತಿ ಹೆಚ್ಚು ಸಿಆರ್‌ಎಸ್ ಹೈಪೆಕ್ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ ಸಾಧನೆ ಮಾಡುವ ಮೂಲಕ ಮೈಸೂರಿನ ನಾರಾಯಣ ಆಸ್ಪತ್ರೆಯು ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆ ಒದಗಿಸುವ ವಿಚಾರದಲ್ಲಿ ಮುಂಚೂಣಿಯಲ್ಲಿದೆ.
ಈ ಶಸ್ತ್ರಚಿಕಿತ್ಸೆಯ ವೆಚ್ಚವು ಸಾಮಾನ್ಯವಾಗಿ ಬಹುತೇಕ ಎಲ್ಲಾ ವಿಮಾ ಯೋಜನೆಗಳು ಕವರೇಜ್ ನೀಡುತ್ತವೆ ಎಂದು ಮಾಹಿತಿ ನೀಡಿದರು.