ರಾಯಚೂರು: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಅಂತ ಹಿರಿಯ ಸಚಿವರುಗಳು ಹೇಳಿದ್ದು, ಮುಖ್ಯಮಂತ್ರಿ ಅವರು ಕೂಡ ಸೂಚ್ಯವಾಗಿ ತಿಳಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಹುಶಃ ಡಿಸೆಂಬರ್ನಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದು ತಿಳಿಸಿದರು.
ಬಿಹಾರಕ್ಕೆ ಯಾರ‍್ಯಾರು ಎಷ್ಟೆಷ್ಟು ಕೊಡಬೇಕು ಅಂತ ನಿರ್ಧರಿಸಲು ಸಿಎಂ ಸಚಿವರ ಔತಣಕೂಟ ಕರೆದಿದ್ದಾರೆ ಎಂಬ ವಿಪಕ್ಷ ನಾಯಕ ಆರ್. ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ನಡೆಯೋದು ಅವರಿಗೆ ಹೇಗ್ರಿ ಗೊತ್ತಾಗುತ್ತೆ ಅವರು ಏನಾದ್ರು ಹೇಳ್ತಾರೆ, ಅವರು ಹೇಳೋದೆಲ್ಲಾ ನಿಜ ಆಗಿಬಿಡುತ್ರಾ ಎಂದು ಕಾರವಾಗಿ ಪ್ರಶ್ನಿಸಿದರು.
ಸಿಎಂ ಅವರು ಆಗಾಗ್ಗೆ ಔತಣಕೂಟ ಆಯೋಜಿಸುತ್ತಿರುತ್ತಾರೆ. ಎಷ್ಟೋ ಬಾರಿ ಸಿ ಎಲ್ ಪಿ ಮೀಟಿಂಗ್ ವೇಳೆ ಕರೆದಿದ್ದಾರೆ, ಮನೆಗೂ ಕರೆದಿದ್ದಾರೆ. ಶಾಸಕರು, ಸಚಿವರನ್ನು ಕರೆದಿದ್ದಾರೆ. ಅದರಲ್ಲಿ ಬಿಹಾರ ಚುನಾವಣೆ ಕೂಡ ಚರ್ಚೆ ಆಗಬಹುದು. ಅದರ ಅರ್ಥ ದುಡ್ಡಿನ ವಿಚಾರ ಅಂತಾನಾ, ಪ್ರಸ್ತುತ ರಾಜಕೀಯ ಪರಿಸ್ಥಿತಿ ಏನಿದೆ ಹಾಗೂ ಅವರವರ ಇಲಾಖೆಗಳು ಹೇಗೆ ನಡೀತಿವೆ. ಸಮಸ್ಯೆ ಇದೆಯಾ ಅನ್ನೋದನ್ನು ಕೇಳಿ, ಬಿಹಾರ ಎಲೆಕ್ಷನ್ ಬಗ್ಗೆಯೂ ಮಾತನಾಡಿರಬಹುದು ಎಂದು ಹೇಳಿದರು.
ನವೆಂಬರ್ ತಿಂಗಳ ನಂತರ ರಾಜ್ಯದಲ್ಲಿ ರಾಜಕೀಯ ಕ್ರಾಂತಿಯಾಗಿ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂಬ ಶಾಸಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನಿಜವಾಗಿ ಏನು ಮಾತುಕತೆ ನಡೆದಿದೆ ಎಂಬುದು ಯಾರಿಗೂ ತಿಳಿದಿಲ್ಲ. ಎಲ್ಲರೂ ಊಹಾಪೋಹದ ಆಧಾರದಲ್ಲಿ ಹೇಳುತ್ತಾರೆ. ನನಗೆ ಗೊತ್ತಿರೋ ಹಾಗೆ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಆಗಿಲ್ಲ. ಮುಖ್ಯಮಂತ್ರಿ ಪದವಿಗೆ ಅರ್ಹರು ಇರೋರು ನಮ್ಮ ಪಕ್ಷದಲ್ಲಿ ಬಹಳಷ್ಟು ಜನ ಇದ್ದಾರೆ. ಹೀಗಾಗಿ ಆಗಾಗ ಕ್ಲೇಮ್ ಮಾಡುತ್ತಾರೆ, ಅದರಲ್ಲೇನು ತಪ್ಪಿಲ್ಲ ಎಂದು ಹೇಳಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ನಿಮ್ಮ ಮೇಲೆ ಕಮಿಷನ್ ಆರೋಪ ಮಾಡಿದ್ದಾರಲ್ಲಾ ಎಂಬ ಪ್ರಶ್ನಿಗೆ ಈ ಪ್ರತಾಪ್ ಸಿಂಹ ಯಾರ್ರೀ, ಆತ ರಾಜಕೀಯದಲ್ಲಿ ಪ್ರಸಿದ್ಧಿ ಆಗಿರಬೇಕು. ಹಾಗಾಗಿ, ಸುಮ್ನೆ ಸಾಕ್ಷಿ, ಆಧಾರ ಇಲ್ಲದೆ ಆರೋಪ ಮಾಡ್ತಾರೆ. ಅವರ ಆರೋಪ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ, ಅವರ ಪಕ್ಷವೇ ಅವರನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ನಾವ್ಯಾಕೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಡಾ.ಯತೀಂದ್ರ ಟಾಂಗ್ ನೀಡಿದರು.