ಬೆಳಗಾವಿ:ಚಿಂತಕರ ಚಾವಡಿ, ಹಿರಿಯರ ಸದನ ಎನ್ನಿಸಿಕೊಂಡ ಸ್ಥಳದಲ್ಲೇ ಸಿ. ಟಿ. ರವಿ ಅವರು ತೀರಾ ಅಸಹ್ಯ ಭಂಗಿಯಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದು ನನಗೆ ತೀವ್ರ ನೋವು ತಂದಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಭಾವುಕರಾಗಿ ನುಡಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನೋವಿನಿಂದಲೇ ಮಾತು ಪ್ರಾರಂಭಿಸಿದ ಸಚಿವೆ, ಡಾ. ಬಿ. ಆರ್. ಅಂಬೇಡ್ಕರ್ ಅವರ ಕುರಿತು ಬಿಜೆಪಿಯ ಕೇಂದ್ರದ ನಾಯಕರು ಆಡಿದ ಮಾತಿಗೆ ಸದನದಲ್ಲಿ ನಾವು ಕಾಂಗ್ರೆಸ್ ಶಾಸಕರು ಆಕ್ಷೇಪಣೆಯ ಪ್ರತಿಭಟನೆ ಸಲ್ಲಿಸಿ ಶಿಸ್ತುಬದ್ಧವಾಗಿ ನಡೆದುಕೊಂಡಿದ್ದೆವು.
ಆದರೆ ಸಿ. ಟಿ. ರವಿ ಅವರು ತೀರಾ ಕಳಪೆ ಮಟ್ಟದ, ನಾಗರಿಕ ಸಮಾಜ ಸಹಿಸಿಕೊಳ್ಳದ, ವೈಯಕ್ತಿಕವಾಗಿ ಇನ್ನೊಬ್ಬರ ಚಾರಿತ್ರ್ಯ ಹರಣ ಮಾಡುವ ಹೇಳಿಕೆ ಸದನದಲ್ಲಿ ನೀಡಿದ್ದು ಸಾಮಾಜಿಕವಾಗಿ ಹಾಗೂ ಕಾನೂನಾತ್ಮಕವಾಗಿ ಅಪರಾಧವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ರಾಷ್ಟ್ರೀಯ ವರಿಷ್ಠರಾದ ರಾಹುಲ್ ಗಾಂಧಿ ಅವರ ಬಗ್ಗೆ ಸಿ. ಟಿ. ರವಿ ಅವರು ಡ್ರಗ್ ಅ್ಯಡಿಕ್ಟ್ ಎಂದು ಆಕ್ಷೇಪಾರ್ಹವಾಗಿ ಮಾತನಾಡಿದ್ದಕ್ಕೆ ಪ್ರತಿಯಾಗಿ ನೀವು ರಸ್ತೆ ಅಪಘಾತ ಮಾಡಿದ್ದೀರಿ ನೀವು ಕೊಲೆಗಡುಕರು ಅಲ್ಲವೇ ಎಂದು ನಾನು ತಿರುಗೇಟು ಕೊಟ್ಟಿದ್ದೆ. ರಾಜಕೀಯವನ್ನು ರಾಜಕೀಯವಾಗಿ ಎದುರಿಸಬೇಕಾಗಿದ್ದ ಸಿ. ಟಿ. ರವಿ ಅವರು ಚಾರಿತ್ರ್ಯ ಹರಣ, ವೈಯಕ್ತಿಕ ಗೌರವಕ್ಕೆ ಧಕ್ಕೆ ಹಾಗೂ ಮಹಿಳಾ ಸಮಾಜಕ್ಕೆ ಅವಹೇಳನ ಮಾಡಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಆಕ್ಷೇಪಿಸಿದರು.