ನವದೆಹಲಿ: ಬೆಳಗಾವಿಯ ಸುವರ್ಣಸೌಧದಲ್ಲಿಯೇ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಮೇಲೆ ನಡೆದಿರುವ ಹಲ್ಲೆ ಯತ್ನ ಹೇಯ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಖಂಡಿಸಿದ್ದಾರೆ.
ಸಚಿವೆ ಬಗ್ಗೆ ಸಿ.ಟಿ.ರವಿ ಅವರು ಅಶ್ಲೀಲ ಪದ ಬಳಸಿದ್ದರೆ ಅದನ್ನು ನಾನು ಸಮರ್ಥಿಸುವುದಿಲ್ಲ, ಅದಕ್ಕೆ ಪ್ರತಿಯಾಗಿ ಸಚಿವೆ ವರ್ತಿಸಿದ ರೀತಿ, ಅವರ ಬೆಂಬಲಿಗರ ಗೂಂಡಾಗಿರಿ ಅತಿರೇಖ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ ಎನ್ನುವುದು ನನ್ನ ಅನುಮಾನ. ಪ್ರತಿಪಕ್ಷ ನಾಯಕರಿಗೇ ರಕ್ಷಣೆ ಇಲ್ಲ ಎಂದ ಮೇಲೆ ವಿಧಾನಮಂಡಲದಲ್ಲಿ ಯಾರ ಭಾವಚಿತ್ರ ಹಿಡಿದರೇನು ಫಲ ಎಂದು ಪ್ರಶ್ನಿಸಿದರು.
ಎಲ್ಲದ್ದಕ್ಕೂ ಡಾ.ಅಂಬೇಡ್ಕರ್ ಅವರ ಸಂವಿಧಾನದಡಿಯಲ್ಲಿ ರೂಪಿತವಾದ ಕಾನೂನಿದೆ, ಸಭಾಪತಿಗಳೂ ರೂಲಿಂಗ್ ನೀಡಿದ್ದಾರೆ, ಆ ನಂತರವೂ ನಡೆಯುತ್ತಿರುವ ಘಟನಾವಳಿಗಳು, ಸಭಾಪತಿಗಳನ್ನೇ ನಿಂದಿಸುವ ಕೆಟ್ಟ ನಡವಳಿಕೆಗಳು ಆಘಾತಕಾರಿ ಎಂದು ತಿಳಿಸಿದ್ದಾರೆ.
ಮೀಸಲಾತಿಗಾಗಿ ಪಂಚಮಸಾಲಿ ಮುಖಂಡರು ಸುವರ್ಣಸೌಧದ ಮುಂದೆ ಪ್ರತಿಭಟಿಸಿದ್ದಕ್ಕೆ ಪೊಲೀಸರಿಂದ ಲಾಠಿಚಾರ್ಜ್ ಮಾಡಿಸಿ ಕಾಂಗ್ರೆಸ್ ಸರ್ಕಾರ ಪೌರುಷ ಮೆರೆದಿತ್ತು. ಅಂದು ಪೊಲೀಸರ ಪ್ರತಾಪ ಹೇಳತೀರದು,ಗೇಟಿನಲ್ಲಿಯೇ ತಡೆದು ಆ ಪಂಚಮಸಾಲಿ ಜನರಿಗೆ ರಕ್ತ ಬರುವಂತೆ ಲಾಠಿ ಬೀಸಿದ ಪೊಲೀಸರೇ, ಈ ಗೂಂಡಾಗಳು ಸುವರ್ಣಸೌಧದೊಳಕ್ಕೆ ಹೇಗೆ ಬಂದರು ಅಥವಾ ಇದರಲ್ಲೂ ಷಡ್ಯಂತ್ರ ಇದೆಯೇ ಎಂದು ಕುಮಾರಸ್ವಾಮಿ ವ್ಯಂಗ್ಯ ವಾಗಿ ಪ್ರಶ್ನಿಸಿದ್ದಾರೆ.
ಸದನದ ಕಾರಿಡಾರಿನಲ್ಲಿಯೇ ಆ ಗೂಂಡಾಗಳು ಶಾಸಕರನ್ನು ಅಟ್ಟಾಡಿಸುತ್ತಾರೆ, ಕೊಲೆಗೆತ್ನಿಸುತ್ತಾರೆ, ಮಾರ್ಷಲ್’ಗಳನ್ನು ಕೆಳಕ್ಕೆ ಕೆಡವಿ ಕ್ರಿಮಿನಲ್ ಪ್ರವೃತ್ತಿ ಮೆರೆಯುತ್ತಾರೆಂದರೆ ಬಂಡೆ ಬೆಂಬಲವಿದೆ ಎಂದೇ ಅರ್ಥ ಎಂದು ಮಾರ್ಮಿಕವಾಗಿ ನುಡಿದರು.
ಸುವರ್ಣಸೌಧಕ್ಕೆ ನುಗ್ಗಿದ ಗೂಂಡಾಗಳನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ರೌಡಿಪಟ್ಟಿ ತೆರೆಯಬೇಕು ಸಮಾಜದ ಶಾಂತಿಗೆ ಬೆದರಿಕೆಯಾಗಿರುವ ಆ ಕಿಡಿಗೇಡಿಗಳನ್ನು ಸುವರ್ಣಸೌಧ, ವಿಧಾನಸೌಧದಿಂದ ಶಾಶ್ವತವಾಗಿ ನಿರ್ಬಂಧಿಸಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.