ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಾಲ್ಕೈದು ದಿನದ ಹಿಂದೆ ಕೆಎಸ್ ಆರ್ ಟಿಸಿ ಬಸ್ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ದುಃಖಕರ ಸಂಗತಿ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಚಾಲಕನ ನಿರ್ಲಕ್ಷ್ಯದಿಂದ ಸಂಭವಿಸಿದ ಈ ಅಪಘಾತದಲ್ಲಿ ಅನೇಕ ಜನರಿಗೆ ಗಾಯಗಳಾಗಿದ್ದು ಒಬ್ಬ ವ್ಯಕ್ತಿ ಕೂಡಾ ಮೃತಪಟ್ಟಿದ್ದಾರೆ.

ರಾಜ್ಯ ಸರ್ಕಾರ ಅಥವಾ ಜಿಲ್ಲಾಡಳಿತ ಈ ವರೆಗೆ ಗಾಯಾಳುಗಳಿಗೆ ಯಾವುದೇ ರೀತಿಯ ಚಿಕಿತ್ಸಾ ವೆಚ್ಚವನ್ನು ನೀಡಿಲ್ಲ ಮತ್ತು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರವನ್ನು ಘೋಷಿಸಿಲ್ಲ ಎಂದು ತೇಜಸ್ವಿ ಗಂಭೀರ ಆರೋಪ ಮಾಡಿದ್ದಾರೆ.
ಕೂಡಲೇ ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರಿಗೆ ಒಂದು ಲಕ್ಷ ರೂಪಾಯಿ ಚಿಕಿತ್ಸಾ ವೆಚ್ಚವನ್ನು ನೀಡಬೇಕು ಮತ್ತು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ತೇಜಸ್ವಿ ನಾಗಲಿಂಗಸ್ವಾಮಿ ಒತ್ತಾಯಿಸಿದ್ದಾರೆ
ಹಾಸನ ಗಣೇಶೋತ್ಸವ ಮೆರವಣಿಗೆಯಲ್ಲಿ ಖಾಸಗಿ ಟ್ರಕ್ ಅಪಘಾತದಲ್ಲಿ ಅನೇಕ ಜನ ಮೃತಪಟ್ಟಿದ್ದರು. ಅಂತವರಿಗೆ ಸರ್ಕಾರ ಮತ್ತು ಅಲ್ಲಿನ ಜನಪ್ರತಿನಿಧಿಗಳು ಸ್ಥಳಕ್ಕೆ ತೆರಳಿ ಪರಿಹಾರ ಹಣವನ್ನು ಘೋಷಣೆ ಮಾಡಿದ್ದರು,ಅದೂ ಒಳ್ಳೆಯದೆ. ಆದರೆ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸರ್ಕಾರದ್ದೇ ಬಸ್ ಅಪಘಾತ ಮಾಡಿದ್ದರೂ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಈ ವರೆಗೂ ಪರಿಹಾರ ನೀಡದೆ ಇರುವುದು ಸರಿಯಲ್ಲ ಎಂದು ತೇಜಸ್ವಿ ನಾಗಲಿಂಗಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಇನ್ನಾದರೂ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ತೇಜಸ್ವಿ ನಾಗಲಿಂಗಸ್ವಾಮಿ ರಾಜ್ಯ ಸರ್ಕಾರ ಮತ್ತು ಮೈಸೂರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಬೆಟ್ಟದಲ್ಲಿ ನಡೆದ ಬಸ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಪುತ್ರ ರಾಜೇಂದ್ರ ಅವರು ವಕೀಲರೂ ಆಗಿದ್ದು,ಬಸ್ ಅಪಘಾತ ಮಾಡಿದ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಜತೆ ಮಾತನಾಡಿದ ಅವರು, ನಮ್ಮ ತಂದೆಯ ದೇಹ ಅಪಘಾತವಾದ ಮರುದಿನ ಪತ್ತೆಯಾಗಿದೆ.ಅಲ್ಲಿಯ ತನಕ ಅವರ ದೇಹವನ್ನು ಹುಡುಕುವ ಕೆಲಸವನ್ನೂ ಮಾಡಿರಲಿಲ್ಲ ಎಂದು ನೊಂದು ನುಡಿದರು.
ಇದು ಅತ್ಯಂತ ನಿರ್ಲಕ್ಷ್ಯ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.ತಕ್ಷಣ ನಿರ್ಲಕ್ಷ್ಯ ವಹಿಸಿದವರೆಲ್ಲರ ವಿರುದ್ಧ ಕ್ರಮ ಜರುಗಿಸಲೇಬೇಕೆಂದು ಅವರು ಆಗ್ರಹಿಸಿದ್ದಾರೆ.