ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಶೂನ್ಯ : ಬಸವರಾಜ ಬೊಮ್ಮಾಯಿ ಟೀಕೆ

Spread the love

ಹುಬ್ಬಳ್ಳಿ,ಮಾ.8: ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಯಾವುದೇ ಕ್ರಮ ಕೈಗೊಳ್ಳದ ಕೇವಲ ಬೆಂಗಳೂರು ಮೈಸೂರು ಭಾಗಕ್ಕೆ ಸೀಮಿತವಾದ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗಕ್ಕೆ5 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ, ಆದರೆ ಖರ್ಚು ಮಾಡಿಲ್ಲ‌, ಎಸ್‌ ಸಿ ಪಿ ಟಿಎಸ್ ಪಿ ಹಣವನ್ನೂ ಖರ್ಚು ಮಾಡುವುದಿಲ್ಲ. ಕಳೆದ ವರ್ಷ ಆದಾಯ ಸಂಗ್ರಹದಲ್ಲಿ 10 ಸಾವಿರ ಕೋಟಿ ಕಡಿಮೆ ಸಂಗ್ರಹ ಮಾಡಿದ್ದಾರೆ. ಬಂಡವಾಳ ವೆಚ್ಚ ಕೂಡ ಕಡಿಮೆ ಮಾಡಿದ್ದಾರೆ ಎಂದು ಟೀಕಿಸಿದರು.

ಈ ವರ್ಷ ಹಣಕಾಸಿನ ಪರಿಸ್ಥಿತಿ ಸುಧಾರಿಸುವ ಯಾವುದೇ ದಿಟ್ಟ ಕ್ರಮ ಇಲ್ಲ. ಹೀಗಾಗಿ ಹೆಚ್ಚಿನ ಸಾಲ ತೆಗೆದುಕೊಳ್ಳುವುದೇ ಇವರ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು.

ಈ ಬಜೆಟ್ ಕರ್ನಾಟಕವನ್ನು ಇನ್ನಷ್ಟು ಸಾಲದ ಕೂಪಕ್ಕೆ ನೂಕಿದೆ, ಹಾಗಾಗಿ ಇದೊಂದು ಜನ ವಿರೋಧಿ ಮತ್ತು ಅಭಿವೃದ್ಧಿ ವಿರೋಧಿ ಬಜೆಟ್ ಇದಾಗಿದೆ ಎಂದು ಆರೋಪಿಸಿದರು.

ಕಿತ್ತೂರು ಕರ್ನಾಟಕ ಭಾಗಕ್ಕೆ ಶೂನ್ಯ ಕೊಡುಗೆ ನೀಡಿದ್ದು, ಇದು ಬೆಂಗಳೂರು ಮೈಸೂರು ಭಾಗಕ್ಕೆ ಸೀಮಿತವಾದ ಬಜೆಟ್ ಎಂದು ಬಸವರಾಜ ಬೊಮ್ಮಾಯಿ ದೂರಿದರು.