ವೈಶಾಖ ಹುಣ್ಣಿಮೆಯಲ್ಲಿ ಬುದ್ಧನ ಸ್ಮರಣೆ:ಮಹಾಬೋಧಿ ಲುಂಬಿನಿ ಬುದ್ಧ ವಿಹಾರದಲ್ಲಿಉಪೇಖ್ಖ ಸ್ತೂಪ ಉದ್ಘಾಟನೆ

Spread the love

ಮೈಸೂರು: ವೈಶಾಖ ಹುಣ್ಣಿಮೆಯ ದಿನ
ಭಗವಾನ್ ಬುದ್ಧ ಮಹಾಪರಿನಿಬ್ಬಾಣ ವನ್ನು ಸಾಧಿಸಿ ತನ್ನ ಅಂತಿಮ ನಿರ್ವಾಣ ಸ್ಥಿತಿಯನ್ನು ಪ್ರವೇಶಿಸಿದನು.ಹಾಗಾಗಿ‌ ಈ ಹುಣ್ಣಿಮೆಯ ದಿನವನ್ನು ಬುದ್ಧನ ಸ್ಮರಣೆಯಲ್ಲಿ ಬೌದ್ಧ ಧರ್ಮೀಯರು ನಾನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.

ಅದೇ ರೀತಿ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ನೆರೆಗ್ಯಾತನಹಳ್ಳಿ ,ಕಿರುಗಾವಲು ರಸ್ತೆಯಲ್ಲಿರುವ ಮಹಾಬೋಧಿ ಲುಂಬಿನಿ ಬುದ್ಧ ವಿಹಾರದಲ್ಲೂ ವಿಶೇಷ ಕಾರ್ಯಕ್ರಮಗಳು ಜರುಗಿದವು.

ನ.15 ರಂದು‌ ಈ ಬುದ್ಧ ‌ವಿಹಾರದಲ್ಲಿ ಭಗವಾನ್ ಬುದ್ದರ ಪವಿತ್ರ ಶರೀರ ಧಾತುವಿನ
ಪ್ರತಿಷ್ಠಾಪನೆ ಮತ್ತು ಮಹಾ ಬೋಧಿ ಉಪೇಖ್ಖ ಸ್ತೂಪದ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನೆರವೇರಿತು.

ಈ ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ಮಹಾ ಬೋಧಿ ಸೊಸೈಟಿ ಅಧ್ಯಕ್ಷರಾದ ಪೂಜ್ಯ ಕಸ್ಸಪ ಮಹಾಥೇರಾ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀಲಂಕಾ ವಿನಯಾಲಂಕಾರಮಯ ಪೂಜ್ಯ ಆನಂದ‌ಥೇರೋ ಪಾಲ್ಗೊಂಡಿದ್ದರು.

ಅಂದು ಬೆಳಿಗ್ಗೆ ಬೌದ್ಧ ಬಿಕ್ಖುಗಳು,ಬೌದ್ಧ ಧರ್ಮೀಯರು, ಅಭಿಮಾನಿಗಳು ಸಾರ್ವಜನಿಕರು, ಜೆಡಿಎಸ್ ಕಾರ್ಯಾಧ್ಯಕ್ಷ ಎಸ್.ಪ್ರಕಾಶ್ ಪ್ರಿಯದರ್ಶನ್ ಮತ್ತಿತರರ ಸಮ್ಮುಖದಲ್ಲಿ ಭಗವಾನ್ ಬುದ್ಧರ ಪವಿತ್ರ ಧಾತುವನ್ನು ಮೆರವಣಿಗೆಯಲ್ಲಿ ತರಲಾಯಿತು.

ನಂತರ ಬೌದ್ಧ ಬಿಕ್ಖುಗಳಿಗೆ ಸಂಘದಾನ ಮಾಡಲಾಯಿತು.

ಪೂಜೆ ಮತ್ತು ಧ್ಯಾನ ದೊಂದಿಗೆ ಪವಿತ್ರ ಧಾತುವಿನ ಪ್ರತಿಷ್ಟಾಪನೆ ನೆರವೇರಿಸಲಾಯಿತು, ತದನಂತರ ಪೂಜ್ಯರು ಮಹಾ ಬೋಧಿ ಉಪೇಖ್ಖ ಸ್ತೂಪದ ಉದ್ಘಾಟನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬುದ್ಧ ವಂದನೆ,ಧ್ಯನ ದೊಂದಿಗೆ ಧಾತು ಪ್ರತಿಷ್ಟಾಪನಾ ಪೂಜೆ ಹಾಗೂ ಸ್ತೂಪ ಉದ್ಘಾಟನಾ ಪೂಜೆ ಮಾಡಲಾಯಿತು. ನಂತರ ಧಮ್ಮ ಪ್ರವಚನ ನಡೆಯಿತು.

ಎಲ್ಲಾ ಕಾರ್ಯಕ್ರಮ ದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

ಇತಿಹಾಸ:
ಬುದ್ಧನ ಮರಣದ ನಂತರ, ಅವನ ದೇಹವನ್ನು ದಹಿಸಲಾಯಿತು,ಆಗ ದೇಹದಿಂದ, ಬುದ್ಧನ ಪವಿತ್ರ ಅವಶೇಷಗಳು ರೂಪುಗೊಂಡವು.ಬುದ್ಧನ ಆಧ್ಯಾತ್ಮಿಕ ಪ್ರಯಾಣದ ಸಂಕೇತವಾಗಿ ಪೂಜಿಸಲ್ಪಟ್ಟ ಈ ಅವಶೇಷಗಳನ್ನು ಎಂಟು ರಾಜ್ಯಗಳಿಗೆ ವಿತರಿಸಲಾಯಿತು.

ನಂತರ, ಬುದ್ಧನ ಹಿರಿಯ ಶಿಷ್ಯರಲ್ಲಿ ಒಬ್ಬರಾದ ಪೂಜ್ಯ ಕಸ್ಸಪ ಮಹಾಥೇರರು ಈ ಅವಶೇಷಗಳನ್ನು ಸಂಗ್ರಹಿಸಿ, ರಾಜ ಅಜಾತಶತ್ರುವಿನ ಸಹಾಯದಿಂದ ರಾಜಗೀರ್ (ರಾಜಗ್ರಹ) ನಲ್ಲಿರುವ ಭೂಗತ ಸ್ತೂಪದಲ್ಲಿ ಪ್ರತಿಷ್ಠಾಪಿಸಿದರು.

ಎರಡು ಶತಮಾನಗಳ ನಂತರ ಭರತ ನಾಡಿನ ಚಕ್ರವರ್ತಿ ಅಶೋಕ ಚಕ್ರವರ್ತಿ ಬುದ್ಧನ ಅವಶೇಷಗಳನ್ನು ಅಗೆದು ತೆಗೆದುಕೊಂಡನು. ಭಕ್ತಿಯ ಸ್ಮಾರಕವಾಗಿ,ಅವುಗಳನ್ನು ಭಾರತದಾದ್ಯಂತ ವಿತರಿಸಿದನು.

ಅವುಗಳನ್ನು 84,000 ಸ್ತೂಪಗಳಲ್ಲಿ ಪ್ರತಿಷ್ಠಾಪಿಸಿದರು, ಇದು ಬೌದ್ಧಧರ್ಮವನ್ನು ಹರಡುವ ಅಶೋಕ ಚಕ್ರವರ್ತಿಯ ಬದ್ಧತೆಗೆ ಸಾಕ್ಷಿಯಾಗಿದೆ. ಅಂದಿನಿಂದ, ಬುದ್ಧನ ಪವಿತ್ರ ಅವಶೇಷಗಳನ್ನು ಸಂರಕ್ಷಿಸುತ್ತಾ ಬರಲಾಗಿದೆ ಮತ್ತು ಪ್ರಪಂಚದಾದ್ಯಂತ ಸ್ತೂಪಗಳಲ್ಲಿ ಪ್ರತಿಷ್ಠಾಪಿಸಲಾಗಿದೆ,

ಈ ಸ್ತೂಪಗಳು ಬೌದ್ಧ ಸಂಪ್ರದಾಯದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿವೆ. ಪ್ರತಿಯೊಂದು ಸ್ತೂಪವು ಕೇವಲ ವಾಸ್ತುಶಿಲ್ಪದ ಅದ್ಭುತವಲ್ಲ, ನಾಲ್ಕು ಉದಾತ್ತ ಸತ್ಯಗಳು, ಉದಾತ್ತ ಎಂಟು ಮಾರ್ಗ ಮತ್ತು ಜ್ಞಾನೋದಯದ ಹಂತಗಳ ಪ್ರಾತಿನಿಧ್ಯವಾಗಿದೆ.

ಕಳೆದ 2,600 ವರ್ಷಗಳಲ್ಲಿ, ಸ್ತೂಪಗಳು ಸಾಂಸ್ಕೃತಿಕ ಕೇಂದ್ರಗಳಾಗಿ ಮಾರ್ಪಟ್ಟಿವೆ-ಧ್ಯಾನ, ಕಲೆ, ವಾಸ್ತುಶಿಲ್ಪ ಮತ್ತು ಬೌದ್ಧ ಬೋಧನೆಗಳ ಪ್ರತಿಬಿಂಬದ ತಾಣಗಳಾಗಿವೆ.

ಇದೀಗ ಮಹಾಬೋಧಿ ಸೊಸೈಟಿಯು ಥಾಯ್ ಧ್ಯಾನ ಶಿಕ್ಷಕ ಅಚಾನ್ ತಿರಸಿಟ್ಟೊ ಅವರಿಂದ ಬುದ್ಧನ ಪವಿತ್ರ ಅವಶೇಷಗಳ ಪೂಜ್ಯ ಸಂಗ್ರಹವನ್ನು ಸ್ವೀಕರಿಸಿದೆ. ಈ ಅವಶೇಷಗಳನ್ನು ಮೈಸೂರು ಜಿಲ್ಲೆ ಟಿ.ನರಸೀಪುರದ ನೆರಗ್ಯಾತನಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಲಾದ ಸ್ತೂಪದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಈ ಸ್ತೂಪವು ಬುದ್ಧನ ಅವಶೇಷಗಳ ಭಂಡಾರ ಮಾತ್ರವಲ್ಲ, ಬೌದ್ಧಧರ್ಮದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗುರುತಿಸುವ ಐತಿಹಾಸಿಕ ಲಿಪಿಯಾದ ತಾಮ್ರಲಿಪಿಯಲ್ಲಿ ನೂರಾರು ಪ್ರತಿಮೆಗಳು ಮತ್ತು ಪುರಾತನ ಶಾಸನಗಳೊಂದಿಗೆ ಧಮ್ಮಪದ ಮತ್ತು ತ್ರಿಪಿಟಕದಂತಹ ಪವಿತ್ರ ಗ್ರಂಥಗಳನ್ನು ಸಹ ಹೊಂದಿದೆ.

ಈ ಸ್ತೂಪವು ಬುದ್ಧನ ಬೋಧನೆಗಳ ಜ್ಞಾಪನೆಯಾಗಿ ಮತ್ತು ಮುಂದಿನ ಪೀಳಿಗೆಗೆ ಶಾಂತಿ, ಧ್ಯಾನ ಮತ್ತು ಆಧ್ಯಾತ್ಮಿಕ ಜಾಗೃತಿಯ ದಾರಿದೀಪವಾಗಿ ಕಾರ್ಯನಿರ್ವಹಿಸಲಿದೆ.