ಬೆಂಗಳೂರು: ಸಾಮಾಜಿಕ ನ್ಯಾಯವಿಲ್ಲದ ಬಜೆಟ್ ಪೂರ್ವ ಸಭೆಗಳು ನಿರರ್ತಕ ಎಂದು
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ
ಮುಖ್ಯಮಂತ್ರಿಗಳು ನಡೆಸುತ್ತಿರುವ ಬಜೆಟ್ ಪೂರ್ವ ಸಭೆಗಳಿಗೆ ಅಲ್ಪಸಂಖ್ಯಾತರ ಮುಖಂಡರುಗಳೊಂದಿಗೆ ಇದುವರೆಗೂ ಸಭೆ ನಡೆಸದಿರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಸಾಕಾರಕ್ಕೆ ಧಕ್ಕೆ ತರುವಂತಿದೆ ಎಂದು ಡಾ.ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ದಲಿತ ವರ್ಗ ಹಾಗೂ ಹಿಂದುಳಿದ ವರ್ಗಗಳ ಅನೇಕ ಸಂಘ ಸಂಸ್ಥೆಗಳು ಮತ್ತು ನಾಯಕರುಗಳ ಸಭೆಗಳನ್ನು ನಡೆಸಿ ಅವರುಗಳ ಅನೇಕ ಬೇಡಿಕೆಗಳನ್ನು ಆಲಿಸಿ ಬಜೆಟ್ ಪೂರ್ವ ತಯಾರಿಯನ್ನು ಮುಖ್ಯ ಮಂತ್ರಿಗಳು ನಡೆಸಿದ್ದಾರೆ,ಅದು ಶ್ಲಾಘನೀಯ,ಆದರೆ ಇದೇ ರೀತಿಯಲ್ಲಿ ರಾಜ್ಯದ ಅಲ್ಪಸಂಖ್ಯಾತರುಗಳ ಯಾವುದೇ ಸಭೆಯನ್ನು ಇದುವರೆಗೂ ನಡೆಸದೆ ಇರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಧಕ್ಕೆ ತರುವಂತಿದೆ. ಕೇವಲ ತಮ್ಮ ಮಂತ್ರಿಮಂಡಲದ ಪ್ರಮುಖ ಸಚಿವರೊಬ್ಬರೇ ಎಲ್ಲಾ ಅಲ್ಪಸಂಖ್ಯಾತರ ಧ್ವನಿ ಎಂಬಂತೆ ಭಾಸವಾಗುತ್ತಿರುವುದು ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಅಲ್ಪಸಂಖ್ಯಾತರುಗಳಲ್ಲಿ ಮುಸ್ಲಿಂ ಜನಾಂಗದೊಂದಿಗೆ ಕ್ರಿಶ್ಚಿಯನ್ ,ಜೈನ್, ಬೌದ್ಧ ,ಪಾರ್ಸಿ, ಸಿಖ್ ಸಮುದಾಯಗಳು ಸಹ ಸೇರಿರುವುದು ಇತ್ತೀಚಿನ ದಿನಗಳಲ್ಲಿ ಆಳುವವರು ಮರೆಯುತ್ತಿರುವಂತಿದೆ. ಆದುದರಿಂದ ಕೂಡಲೇ ಅಲ್ಪಸಂಖ್ಯಾತರ ಎಲ್ಲ ವರ್ಗಗಳ ಮುಖಂಡರುಗಳನ್ನು ಸಂಘ ಸಂಸ್ಥೆಗಳನ್ನು ತಮ್ಮ ಬಜೆಟ್ ಪೂರ್ವ ಸಭೆಗೆ ಕರೆದು ಅವರ ಅನೇಕ ವರ್ಷಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಹಾಗೂ ನೈಜ ಸಾಮಾಜಿಕ ಪರಿಕಲ್ಪನೆಯನ್ನು ಎತ್ತಿ ಹಿಡಿಯಬೇಕೆಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
