ಮಂಡ್ಯ: ಕೆ.ಆರ್.ಎಸ್ ಬೃಂದಾವನದಲ್ಲಿ
ಸೆಪ್ಟೆಂಬರ್ 26 ರಿಂದ ಸಾಂಕೇತಿಕ ಕಾವೇರಿ ಆರತಿ ನಡೆಯಲಿದ್ದು ಸಿದ್ದತೆ ಪೂರ್ಣ
ಗೊಂಡಿದೆ.ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈ ಬಗ್ಗೆ ಪರಿಶೀಲನೆ ನಡೆಸಿದರು.
ವೇದಿಕೆ, ಕಾವೇರಿ ಆರತಿ ನಡೆಯುವ ಸ್ಥಳ ಮತ್ತು ವೀಕ್ಷಕರಿಗೆ ಆಸನ ವ್ಯವಸ್ಥೆ ಪರಿಶೀಲನೆ ನಡೆಸಿದ ಡಿಕೆಶಿ, ಕಾರ್ಯಕ್ರಮ ಯಾವುದೇ ಲೋಪವಿಲ್ಲದೆ ನಡೆಯಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾವೇರಿ ಆರತಿ ಸಮಿತಿ ಅಧ್ಯಕ್ಷರೂ ಆದ ಬೆಂಗಳೂರು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಆಯುಕ್ತರಾದ ರಾಮ್ ಪ್ರಸಾತ್ ಮನೋಹರ್ ಅವರು ಕಾವೇರಿ ಆರತಿಯ ರೂಪುರೇಷೆ ಕುರಿತು ಡಿಸಿಎಂ ಅವರಿಗೆ ವಿವರಿಸಿದರು.
ಉಪಮುಖ್ಯಮಂತ್ರಿಗಳು ಕಾವೇರಿ ಆರತಿ ಪೂರ್ವ ತಾಲೀಮು ವೀಕ್ಷಣೆ ಮಾಡಿದರು.
ಪರಿಶೀಲನೆ ವೇಳೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಚೆಸ್ಕಾಂ ಅಧ್ಯಕ್ಷರಾದ ರಮೇಶ ಬಂಡಿಸಿದ್ದೇಗೌಡ, ಮಂಡ್ಯ ಶಾಸಕ ಪಿ. ರವಿಕುಮಾರ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ. ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್ ನಂದಿನಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸಾಥ್ ನೀಡಿದರು.