ಮೈಸೂರು: ಸಮಾಜದಲ್ಲಿ ಪ್ರತಿಯೊಬ್ಬರು ನಡೆ ನುಡಿ ಮತ್ತು ಸಂಸ್ಕೃತಿಯುನ್ನು ಉಳಿಸಿ ಬೆಳಸುವ ಮೂಲಕ ಯುವ ಪೀಳಿಗೆ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಕೆ.ಆರ್.ನಗರ ಶಾಖಾ ಮಠದ ಬ್ರಹ್ಮಾನಂದಭಾರತೀ ಸ್ವಾಮಿಜೀ ಅವರು ತಿಳಿಸಿದರು.
ನಗರದ ಶಾರದ ವಿದ್ಯಾ ಸಂಸ್ಥೆಯಲ್ಲಿ ನಡೆದ ವೇದಾಂತ ಭಾರತೀ ಸಂಸ್ಥೆಯ ಮಹಾಸಂರಕ್ಷಕರಾದ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಸನ್ಯಾಸ ಸ್ವೀಕಾರದ 50ನೇ ವರ್ಷದ ಸಂದರ್ಭದಲ್ಲಿ ಸುವರ್ಣಭಾರತೀ ಎಂಬ ಶೀರ್ಷಿಕೆಯಡಿ ಶ್ರೀಶಾಂಕರತತ್ತ್ವ ಪ್ರಸಾರ ಅಭಿಯಾನದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಶೃಂಗೇರಿ ಹಾಗೂ ವೇದಾಂತ ಭಾರತೀ ಸಂಸ್ಥೆಗಳ ಆಶ್ರಯದಲ್ಲಿ ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ರಾಜ್ಯಾಧ್ಯಂತ ಎಲ್ಲ ಶಾಲಾ-ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಕಲ್ಯಾಣ ವೃಷ್ಟಿ ಎಂಬ ಅಭಿಯಾನ ನಡೆಸಲಾಗುತ್ತಿದೆ. ಈ ಅಭಿಯಾನದಲ್ಲಿ ಶ್ರೀ ಶಂಕರಭಗವತ್ಪಾದರು ರಚಿಸಿದ ಕಲ್ಯಾಣ ವೃಷ್ಟಿಸ್ತವ,ಶಿವ ಪಂಚಾಕ್ಷರ ನಕ್ಷತ್ರ ಮಾಲಾಸ್ತೋತ್ರ ಹಾಗೂ ಲಕ್ಷ್ಮೀನೃಸಿಂಹ ಕರುಣಾರಸ ಸ್ತೋತ್ರ ಗಳನ್ನು ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಹೇಳಿಕೊಡಬೇಕೆಂದು ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಪಠ್ಯಕ್ರಮದಲ್ಲಿ ಹೇಳಿದ ವಿಷಯಗಳ ಜೊತೆಗೆ ಈ ಸ್ತೋತ್ರಗಳನ್ನು ಪಠಿಸುವುದರಿಂದ ಅವರ ಓದಿನಲ್ಲಿ ಶ್ರದ್ಧೆ-ಭಕ್ತಿ, ಏಕಾಗ್ರತೆ, ಮನೋಬಲ, ಬುದ್ಧಿ,ಧೈರ್ಯ, ಗುರುಹಿರಿಯರಲ್ಲಿ ಗೌರವ, ಸ್ನೇಹ- ಸಹಬಾಳ್ವೆ, ರಾಷ್ಟ್ರೀಯ ಭಾವೈಕ್ಯ ಮೊದಲಾದ ಗುಣಗಳ ಮೂಲಕ ವ್ಯಕ್ತಿತ್ವವಿಕಾಸಗೊಳ್ಳುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಈ ಸ್ತೋತ್ರಗಳನ್ನು ಪಠಿಸಿ ಶ್ರೇಯೋಭಾಜನ ರಾಗ ಬೇಕೆಂಬುದು ಸಂಸ್ಥೆಯ ಅಪೇಕ್ಷೆಯಾಗಿದೆ ಎಂದು ತಿಳಿಸಿದರು.
ವಿಪ್ರ ಪೋರಂನ ಅಧ್ಯಕ್ಷ ಹಾಗೂ ಜಿ.ಎಸ್. ಎಸ್ ಸಮೂಹ ಸಂಸ್ಥೆ ಅಧ್ಯಕ್ಷ ಶ್ರೀಹರಿದ್ವಾರಕನಾಥ್ ಅವರು ಮಾತನಾಡಿ ಯಾರು ಯಾರನ್ನೂ ಭೇದ ಬಾವ ಮಾಡದೆ ಸಮಾಜದ ಪ್ರತಿಯೊಬ್ಬರು ಒಬ್ಬರೊಬ್ಬರನ್ನು ಪ್ರೀತಿಸಿ ಗೌರವಿಸುವ ಕೆಲಸವಾಗುವ ಮೂಲಕ ಮಾನವೀಯತೆ ಮೆರೆಯುವಂತೆ ಮನವಿ ಮಾಡಿದರು
ವಿಪ್ರ ಬಳಗದ ನಿರ್ದೇಶಕ ಹಾಗೂ ಶಾರದ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಮಂಜುನಾಥ ಶ‍್ರೀ ವತ್ಸ ಮಾತನಾಡಿ ಈ ಕಾರ್ಯಕ್ರಮದಲ್ಲಿ 21 ಶಿಕ್ಷಣ ಸಂಸ್ಥೆಗಳಿಂದ ಸಾವಿರಾರು ಮಕ್ಕಳು ಪಾಲ್ಗೊಂಡಿದ್ದಾರೆ. ಮುಂದಿನ ದಿನದಲ್ಲಿ ಸಾವಿರಾರು ಶಿಕ್ಷಣ ಸಂಸ್ಥೆಗಳು ಮುಂದೆ ಬರುವ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಚಿಂತಕರು ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಪ್ರ ಬಳಗದ ಕಾರ್ಯದರ್ಶಿ ಸುಧೀಂದ್ರ,ನಿರ್ದೇಶಕರಾದ ಚಂದ್ರಶೇಖರ್, ನಾರಾಯಣ್ ಸೇರಿದಂತೆ ಸಮುದಾಯದ ಮುಖಂಡರು ಮತ್ತು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕ ವರ್ಗ ಹಾಗೂ ಸಿಬ್ಬಂದಿಗಳು ಸ್ವಾಮೀಜಿಯವರನ್ನು ಕುಂಭ ಕಳಶದೊಂದಿಗೆ ಸ್ವಾಗತಿಸಿ ಗೌರವಿಸಿದರು.