ಬಿಪಿಎಲ್ ಕಾರ್ಡ್‌; ಸರಕಾರ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ-ಕುಮಾರಸ್ವಾಮಿ

Spread the love

ಬೆಂಗಳೂರು: ಕೇಂದ್ರದ ಮಾನದಂಡದ ಪ್ರಕಾರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಈಗ ಹೇಳುತ್ತಿದೆ, ಇಷ್ಟು ದಿನ ಅದನ್ನ ಯಾಕೆ ಹೇಳಲಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಇವತ್ತು ಬೆಳಗ್ಗೆ ಮಾಧ್ಯಮಗಳಲ್ಲಿ ಕೇಂದ್ರದ ಮಾನದಂಡ ಎಂದು ವರದಿ ಬಂದ ಮೇಲೆ ಸರಕಾರ ಭಿನ್ನರಾಗ ಎತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಪಿಎಲ್ ಕಾರ್ಡು ವಿಚಾರದಲ್ಲಿ ರಾಜ್ಯ ಸರ್ಕಾರ ಗೊಂದಲ ಉಂಟು ಮಾಡುತ್ತಿದೆ, ಜನತೆಗೆ ಉತ್ತರ ಕೊಡಲು ಸಾಧ್ಯ ಆಗುತ್ತಿಲ್ಲ ಎಂದು ಟೀಕಿಸಿದರು.

ಸಿಎಂ ಒಂದು ಹೇಳಿಕೆ ‌ಕೊಡುತ್ತಾರೆ. ಸಚಿವರೇ ಇನ್ನೊಂದು ಹೇಳಿಕೆ ಕೊಡುತ್ತಾರೆ.
ಅವರುಗಳಲ್ಲೇ ಒಂದು ಕ್ಲ್ಯಾರಿಟಿ ಇಲ್ಲ. ಗ್ಯಾರಂಟಿ ಸ್ಕೀಮ್ ಗಳ ಬಗ್ಗೆ ನಾನು ಲಘುವಾಗಿ ಮಾತನಾಡಿಲ್ಲ. ಗ್ಯಾರಂಟಿ ಕೊಡಲು ಆರ್ಥಿಕವಾಗಿ ಸಮಸ್ಯೆ ಇಲ್ಲ ಎಂದು ಹೇಳಿದ್ದೇನೆ. ನಿರಂತರವಾಗಿ ತೆರಿಗೆ ಹೆಚ್ಚಳ ಮಾಡಿಕೊಂಡು ಖಜಾನೆ ತುಂಬಿಸಿಕೊಂಡಿದ್ದಾರೆ, ಆ ದುಡ್ಡು ಎಲ್ಲಿ ಹೋಗುತ್ತಿದೆ ಎಂದಷ್ಟೇ ಕೇಳಿದ್ದೇನೆ ಹಣಕಾಸು ನಿರ್ವಹಣೆಯಲ್ಲಿ ಸಮಸ್ಯೆಯಿದೆ. ಅದನ್ನು ಸರಿಪಡಿಸಿಕೊಳ್ಳಿ ಎಂದು ಹೇಳಿದ್ದೇನೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ‌್ ಗೆಲ್ಲುತ್ತಾರೆ ಎಂದು ಹೇಳಿದ ಸಚಿವರು; ನಾನೇ ಅಲ್ಲಿ ಪ್ರಚಾರದಲ್ಲಿ ಭಾಗವಹಿಸಿದ್ದೇನೆ, ಜನತೆ ಭಾವನೆ ಎನು ಅಂತ ಗೊತ್ತಿದೆ,ಗೆಲುವಿನಲ್ಲಿ ಯಾವುದೇ ಅನುಮಾನ ಇಲ್ಲ, ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.