ಬಿಎಂಟಿಸಿ ಬಸ್ ಡಿಕ್ಕಿ ಆಟೋ ಅಪ್ಪಚ್ಚಿ:ಚಾಲಕ,ವೈದ್ಯ ಸಾವು

Spread the love

ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳು ಬಲಿ ಪಡೆಯುವುದನ್ನು ಮುಂದುವರಿಸಿವೆ.ಈ ಮೂಲಕ ಕಿಲ್ಲರ್ ಹಣೆಪಟ್ಟಿ ಯನ್ನು‌ ಉಳಿಸಿಕೊಂಡಿದೆ.

ಇಂದು ಮಧ್ಯಾಹ್ನ ಬಿಎಂಟಿಸಿ ಬಸ್ ಹಿಂದಿನಿಂದ ಬಂದು ಆಟೋಗೆ ಡಿಕ್ಕಿ ಹೊಡೆದ‌ ರಭಸಕ್ಕೆ‌ ಚಾಲಕ ಮತ್ತು ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟ ಘಟನೆ‌ ಬನಶಂಕರಿ‌ ಸಂಚಾರಿ ಪೊಲೀಸ್ ಠಾಣೆ‌ವ್ಯಾಪ್ತಿಯಲ್ಲಿ ನಡೆದಿದೆ.

ಕೆಪಿ ಅಗ್ರಹಾರದ ವಾಸಿ ಆಟೋಚಾಲಕ ಅನಿಲ್ ಕುಮಾರ್ ಹಾಗೂ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಬನಶಂಕರಿ ವಾಸಿ ಖ್ಯಾತ ಆಯುರ್ವೇದ ವೈದ್ಯ ಡಾ.ವಿಷ್ಣು ಬಾಪಟ್ ಮೃತಪಟ್ಟ ದುರ್ದೈವಿಗಳು.

ಮಧ್ಯಾಹ್ನ ಸೀತಾ‌ಸರ್ಕಲ್ ಬಳಿ ಸಿಗ್ನಲ್ ಇದ್ದುದರಿಂದ‌ ಮುಂದೆ ಒಂದು ಬಿಎಂಟಿಸಿ ಬಸ್ ನಿಧಾನವಾಗಿ ಚಲಿಸುತ್ತಿತ್ತು.ಈ‌ ಬಸ್‌ ಹಿಂದೆ ಅನಿಲ್ ಕುಮಾರ್‌ ತಮ್ಮ‌ಆಟೋ ತಂದು ನಿಲ್ಲಿಸಿಕೊಂಡಿದ್ದರು.

ಇದೇ‌ ವೇಳೆ ಹಿಂದಿನಿಂದ ಅತಿ‌ವೇಗವಾಗಿ ನುಗ್ಗಿ‌ಬಂದ ಮತ್ತೊಂದು‌ ಬಿಎಂಟಿಸಿ ಬಸ್ ಆಟೋಗೆ ಗುದ್ದಿದೆ.

ಡಿಕ್ಕಿಯಾದ ರಭಸಕ್ಕೆ‌ ಆಟೋ ನಜ್ಜುಗುಜ್ಜಾಗಿದ್ದು ಚಾಲಕ ಅನಿಲ್ ಕುಮಾರ್ ಹಾಗೂ ಆಯುರ್ವೇದ ವೈದ್ಯ ಡಾ.ವಿಷ್ಣು ಬಾಪಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿದ ತಕ್ಷಣ ‌ಬನಶಂಕರಿ‌ ಸಂಚಾರಿ ಪೊಲೀಸರು‌ ದಾವಿಸಿ ಅಪಘಾತದಿಂದ ಉಂಟಾಗಿದ್ದ ಟ್ರಾಫಿಕ್ ಜಾಮ್ ಸರಿಪಡಿಸಿ ಮೃತ ದೇಹಗಳನ್ನು ಆಸ್ಪತ್ರೆಗೆ ರವಾನಿಸಿದರು.