ಬಿಹಾರಕ್ಕೆ ರಾಜ್ಯದಿಂದ ಕಪ್ಪು ಹಣ: ಇಡಿ ಸ್ವಯಂ ಪ್ರೇರಿತ ತನಿಖೆ ಕೈಗೊಳ್ಳಲಿ-ಎಎಪಿ

Spread the love

ಬೆಂಗಳೂರು: ಬಿಹಾರಕ್ಕೆ ರಾಜ್ಯದಿಂದ ಕಪ್ಪು ಹಣ ಹೋಗುತ್ತಿದ್ದು ಇಡಿ ಸ್ವಯಂ ಪ್ರೇರಿತ ತನಿಖೆ ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಬಿಹಾರ ಚುನಾವಣೆಗೆ 400 ಕೋಟಿ ಹಣ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಟಾರ್ಗೆಟ್ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಔತಣಕೂಟ ಏರ್ಪಡಿಸಿ ಸಚಿವರಿಗೆ ಇಲಾಖಾವಾರು ಕಪ್ಪವನ್ನು ನಿಗದಿಪಡಿಸಿದ್ದಾರೆ ಎಂದು ಹೇಳಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆಯನ್ನು ಆಧರಿಸಿ ಜಾರಿ ನಿರ್ದೇಶನಾಲಯ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿ ತನಿಖೆ ನಡೆಸಬೇಕೆಂದು ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ್ ಮೃತ್ಯುಂಜಯ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಸರ್ಕಾರದ ವಿರೋಧಪಕ್ಷದ ನಾಯಕರ ಬಳಿ ನಿಖರವಾದ ಮಾಹಿತಿ ಇರುವುದಾದರೆ ಅವರನ್ನು ಸಾಕ್ಷಿಯನ್ನಾಗಿ ಮಾಡಿಕೊಂಡು ಈ ಬೃಹತ್ ಮೊತ್ತದ ಕನ್ನಡಿಗರ ತೆರಿಗೆ ಹಣವನ್ನು ಬಿಹಾರ ಚುನಾವಣೆಗಾಗಿ ಅಕ್ರಮವಾಗಿ ಹೇಗೆ ಸಾಗಣೆ ಮಾಡಿದ್ದಾರೆ ಹಾಗೂ ಚುನಾವಣಾ ಅಕ್ರಮಗಳಲ್ಲಿ ಕಾಂಗ್ರೆಸ್ ಪಕ್ಷವು ಬಳಸಿಕೊಳ್ಳುತ್ತಿರುವುದನ್ನು ಕೂಡಲೇ ಜಾರಿ ನಿರ್ದೇಶನಲಯ ಪತ್ತೆ ಹಚ್ಚಬೇಕು ಹಾಗೂ ತಪಿತಸ್ತರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಅಶೋಕ್ ಮೃತ್ಯುಂಜಯ ತಮ್ಮ ಟ್ವೀಟ್ ಮಾಡಿ ಅಗ್ರಹಿಸಿದ್ದಾರೆ.

ಮುಂದಿನ ಮಂತ್ರಿಮಂಡಲ ವಿಸ್ತರಣೆಗಾಗಿ ನೂರಾರು ಕೋಟಿ ರೂಪಾಯಿಗಳ ಕಪ್ಪ ಕಾಣಿಕೆಗಳನ್ನು ಒಪ್ಪಿಸಬೇಕು ಎಂದು ಪದೇ ಪದೇ ಹೇಳುತ್ತಿರುವ ವಿರೋಧ ಪಕ್ಷದ ನಾಯಕನ ಹೇಳಿಕೆಯಲ್ಲಿ ಸಾಚಾತನ ಇಲ್ಲದಿದ್ದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಸ್ವತಹ ತಾವೇ ಮುಂದಾಗಿ ಇಡಿ ತನಿಖೆಗೆ ಒಪ್ಪಿಸಿ ರಾಜ್ಯದ ಜನತೆಗೆ ನೈಜ ಚಿತ್ರಣವನ್ನು ನೀಡಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.