ಬೆಳಗಾವಿ: ರಾಜ್ಯ ಸರಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಬೆಳಗಾವಿಯಲ್ಲಿ ಬಿಜೆಪಿಗರು ಬೃಹತ್ ಪ್ರತಿಭಟನೆ ನಡೆಸಿದರು.
ಮೊದಲಿಗೆ ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಬೃಹತ್ ಸಮಾವೇಶ ನಡೆಸಿದ ಬಿಜೆಪಿ ನಾಯಕರು ನಂತರ ಬೃಹತ್ ರ್ಯಾಲಿ ಮೂಲಕ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಬಿಗಿ ಪೊಲೀಸ್ ಬಂದೊಬಸ್ತ್ ಮಾಡಿರುವುದರಿಂದ ಮುತ್ತಿಗೆ ಯತ್ನ ವಿಫಲವಾಯಿತು.
ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ,ಅಶೋಕ ಸೇರಿದಂತೆ ನೂರಾರು ಪ್ರಮುಖ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೈತ ವಿರೋಧಿ ಸರಕಾರ ಎಂದು ದಿಕ್ಕಾರ ಕೂಗುತ್ತಿದ್ದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ವೇಳೆ ಹೈಡ್ರಾಮಾನೆ ಸೃಷ್ಟಿಯಾಯಿತು.
ಈ ಸಂದರ್ಭದಲ್ಲಿ ಪೊಲೀಸರು ಮತ್ತು ಬಿಜೆಪಿ ನಾಯಕರ ನಡುವೆ ತೀವ್ರ ವಾಗ್ವಾದ ನಡೆಯಿತು.
ಶಾಸಕರಾದ ಚಲವಾದಿ ರವಿಕುಮಾರ್, ಬಾಲಚಂದ್ರ ಜಾರಕಿಹೊಳಿ, ನಿಖಿಲ್ ಕತ್ತಿ ಸೇರಿ 50ಕ್ಕೂ ಹೆಚ್ಚು ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
ಸುವರ್ಣಸೌಧ ಮುತ್ತಿಗೆ ಹಾಕುವ ಮುನ್ನ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅತೀವೃಷ್ಟಿ, ಬೆಳೆ ಹಾನಿಗೆ ರಾಜ್ಯ ಸರಕಾರ ಸೂಕ್ತವಾಗಿ ಸ್ಪಂದಿಸಿಲ್ಲ. ಬೆಳೆ ಪರಿಹಾರವನ್ನು ತಕ್ಷಣ ರೈತರಿಗೆ ಕೊಡಬೇಕು ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರಿಗೆ ಹೆಚ್ಚು ದರ ಕೊಡಿ ಕಬ್ಬು ಬೆಳೆಗೆ ಎಫ್ಆರ್ಪಿ ನಿಗದಿ ಮಾಡಿದ್ದರೂ, ಆ ದರಕ್ಕಿಂತ ಹೆಚ್ಚಿನ ದರ ನೀಡುವ ಅವಕಾಶ ರಾಜ್ಯ ಸರ್ಕಾರಕ್ಕೆ ಇದೆ. ಕಬ್ಬು ಬೆಳೆಗಾರರಿಗೆ ಹೆಚ್ಚು ದರ ಕೊಡಲು ನಿಮಗೆ ಏನು ಕಷ್ಟ ಎಂದು ಆಕ್ರೋಶದಿಂದ ವಿಜಯೇಂದ್ರ ಪ್ರಶ್ನಿಸಿದರು.
ಈ ಹಿಂದೆ ಯಡಿಯೂರಪ್ಪ ಅವರು ರೈತರು ಸಂಕಷ್ಟದಲ್ಲಿದ್ದಾಗ ಅವರೊಂದಿಗೆ ಇರುತ್ತಿದ್ದರು. ಅದೇ ರೀತಿ ನಾನು ಹಾಗೂ ನಮ್ಮ ಪಕ್ಷವು ಯಾವಾಗಲೂ ರೈತರ ಜೊತೆ ಇರುತ್ತೇವೆ ಎಂದು ಭರವಸೆ ನೀಡಿದರು.
ಸುವರ್ಣಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಪೊಲೀಸ್ ವಶಕ್ಕೆ