ಬೆಂಗಳೂರು: ರೈತರ ಜಮೀನು, ದೇವಸ್ಥಾನಗಳ ಆಸ್ತಿಗಳನ್ನು ಕಬಳಿಸುತ್ತಿರುವ ವಕ್ಫ್ ಮಂಡಳಿ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ನವೆಂಬರ್ 4 ರಿಂದ ತೀವ್ರ ಹೋರಾಟ ಆರಂಭಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದ ಬಳಿಕ ಕೋಲಾರದಲ್ಲಿ ದೇವಸ್ಥಾನದ ಆಸ್ತಿಗಳನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಿಸಲಾಗಿದೆ. ನಾಗಮಂಗಲ, ಚನ್ನಪಟ್ಟಣ, ಬೆಳಗಾವಿ ಮೊದಲಾದ ಕಡೆಗಳಲ್ಲಿ ರೈತರ ಜಮೀನುಗಳನ್ನು ಕೊಳ್ಳೆ ಹೊಡೆಯಲು ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಇದರ ವಿರುದ್ಧ ಹೋರಾಟ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.
ಭೂಗಳ್ಳರು ಮಾತ್ರವಲ್ಲದೆ, ಸರ್ಕಾರವೇ ಅಧಿಕೃತವಾಗಿ ಒತ್ತುವರಿ ಆರಂಭ ಮಾಡಿದೆ. ಇದರ ವಿರುದ್ಧ ರೈತ ಸಂಘಟನೆಗಳು ತೀವ್ರವಾಗಿ ಪ್ರತಿಭಟಿಸಬೇಕು. ಹಿಂದೆ ಮುಸ್ಲಿಂ ರಾಜರು ದಾಳಿ ಮಾಡಿ, ಮತಾಂಧತೆ ಮೆರೆದಿದ್ದರು. ಟಿಪ್ಪು ಸುಲ್ತಾನ ಕೊಡಗಿನಲ್ಲಿ ಮತಾಂತರ ಮಾಡಿರುವುದು ಇದಕ್ಕೆ ಸಾಕ್ಷಿ. ಇದೇ ರೀತಿ ಈಗ ಜಮೀನಿನ ಕಬಳಿಕೆ ನಡೆಯುತ್ತಿದೆ. ಇಂತಹವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಓಲೈಸುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಯಾವುದೇ ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಿಲ್ಲವೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ನಾವು ಹೋರಾಟ ಮಾಡಿದ್ದಕ್ಕೇನೆ ಸಿಎಂ ವಿರುದ್ಧ ಪ್ರಕರಣ ದಾಖಲಾಗಿದೆ. ಲೋಕಾಯುಕ್ತ ಹಾಗೂ ಇಡಿ ತನಿಖೆ ಮಾಡುತ್ತಿದೆ ಎಂದು ಟಾಂಗ್ ನೀಡಿದರು.
ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ನಾವು ಹಿಟ್ ಮಾಡಿದ ಕೂಡಲೇ ಕಾಂಗ್ರೆಸ್ ಓಡಿಹೋಗುತ್ತದೆ. ಈ ಸರ್ಕಾರ ತುಘಲಕ್ ಆಡಳಿತ ನೀಡಿ ನಗೆಪಾಟಲಿಗೀಡಾಗಿದೆ. ಗ್ಯಾರಂಟಿ ಯೋಜನೆಗಳ ಪೈಕಿ ಎರಡು ಯೋಜನೆಗಳು ಟುಸ್ ಪಟಾಕಿಯಾಗಲಿದೆ ಎಂದು ಅಶೋಕ್ ವ್ಯಂಗ್ಯವಾಡಿದರು.
ಡಿ.ಕೆ.ಶಿವಕುಮಾರ್ ಅವರಿಗೆ ಮಹಿಳೆಯರು ಫೋನ್ ಕರೆ ಮಾಡಿ ಯೋಜನೆ ಬೇಡವೆಂದು ತಿಳಿಸಿದ್ದಾರಂತೆ. ಕಳ್ಳನಿಗೆ ಪಿಳ್ಳೆ ನೆವ ಎಂಬಂತೆ, ಯೋಜನೆ ರದ್ದುಪಡಿಸಲು ಈ ರೀತಿ ಕಾರಣ ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ನಮ್ಮ ಕುಟುಂಬದಿಂದ 65 ಎಕರೆ ಜಾಗವನ್ನು ಎಚ್ಎಂಟಿಗೆ ನೀಡಿದ್ದೆವು. ಈಗ ಆ ಜಾಗದಲ್ಲಿ ಅರಣ್ಯ ನಾಶವಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಇದು ಅರಣ್ಯ ಭೂಮಿ ಎನ್ನುವುದಾದರೆ, ಇದನ್ನು ನೀಡಿದ್ದೇ ಕಾಂಗ್ರೆಸ್ ಸರ್ಕಾರ ಎಂಬುದನ್ನು ನೆನಪಿಸಿಕೊಳ್ಳಬೇಕು. ಎಚ್ಎಂಟಿ ಕಾರ್ಖಾನೆಯನ್ನು ಅಂದಿನ ಪ್ರಧಾನಿ ಜವಹರಲಾಲ್ ನೆಹರು ಉದ್ಘಾಟಿಸಿದ್ದರು.ಅವರೇ ಜಾಗ ನೀಡಿ, ಈಗ ಅದು ಅರಣ್ಯ ಭೂಮಿ ಎಂದು ಹೇಳುತ್ತಿದ್ದಾರೆ. ನಾನು ಒಂದನೇ ತರಗತಿಯಲ್ಲಿ ಇದ್ದಾಗಲೂ ಅದು ಎಚ್ಎಂಟಿಗೆ ಸೇರಿತ್ತು. ಈಗ ಇವರು ಮಾಜಿ ಪ್ರಧಾನಿ ನೆಹರು ವಿರುದ್ಧ ಪ್ರಕರಣ ದಾಖಲಿಸುತ್ತಾರಾ, ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ವಿರುದ್ಧ ಕೇಸು ದಾಖಲಿಸುತ್ತಾರಾ ಎಂದು ಅಶೋಕ್ ಕಾರವಾಗಿ ಪ್ರಶ್ನಿಸಿದರು.