ಮೈಸೂರು: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಹಮ್ಮಿಕೊಂಡಿರುವ ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂಗೆ ತಡವಾಗಿ ಆಹ್ವಾನ ನೀಡಲಾಗಿದೆ ಎಂದು
ಕರ್ನಾಟಕ ಪ್ರದೇಶ ಕುರುಬ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡದೇ ಇರುವುದು ಬಿಜೆಪಿಯ ಅಸೂಯೆ ರಾಜಕಾರಣವನ್ನ ತೋರಿಸಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದರು. ಕೇಂದ್ರ ಸಚಿವರು ಕಾರ್ಯಕ್ರಮ ಮುಂದೂಡಲು ಸಮ್ಮತಿಸಿದ್ದರೂ ಕೂಡಾ ಸ್ಥಳೀಯ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು, ಸಿಎಂ ಗಮನಕ್ಕೆ ತಾರದೇ ಕಾರ್ಯಕ್ರಮ ಇಂದೇ ಆಯೋಜಿಸಿದ್ದಾರೆ ಎಂದು ಸುಬ್ರಮಣ್ಯ ಆರೋಪಿಸಿದ್ದಾರೆ.
ಮೊದಲ ಕೇಬಲ್ ಸೇತುವೆ ನಿರ್ಮಾಣಕ್ಕೆ ಕೇಂದ್ರ, ರಾಜ್ಯ ಸರ್ಕಾರದ ಕೊಡುಗೆ ಇದೆ, ಆದರೆ, ರಾಜ್ಯ ಬಿಜೆಪಿ ನಾಯಕರು ಕ್ರೆಡಿಟ್ ಉದ್ದೇಶದಿಂದ ಸಿದ್ದರಾಮಯ್ಯ ಅವರನ್ನ ತಡವಾಗಿ ಆಹ್ವಾನಿಸಲಾಗಿದೆ. ಓರ್ವ ರಾಜ್ಯದ ಮುಖ್ಯಮಂತ್ರಿ ಇಲ್ಲದೇ ಸರ್ಕಾರಿ ಕಾರ್ಯಕ್ರಮ ಮಾಡುವುದು ಅಕ್ಷಮ್ಯ ಎಂದು ಅವರು ಕಿಡಿ ಕಾರಿದ್ದಾರೆ.
ಕೇಂದ್ರದ ಯಾವುದೇ ಯೋಜನೆ ಅನುಷ್ಠಾನ ಆಗಬೇಕಂದರೆ ಅದಕ್ಕೆ ರಾಜ್ಯ ಸರ್ಕಾರದ ಸಹಕಾರ ಬಹಳ ಮುಖ್ಯ.
ಸಿದ್ದರಾಮಯ್ಯ ಅವರೂ ಸಹ ಕೇಂದ್ರದ ಎಲ್ಲ ಯೋಜನೆಗಳಿಗೆ ಸಹಕಾರ ನೀಡುತ್ತಲೇ ಬಂದಿ ದ್ದಾರೆ,ಆದರೆ ಕೇಂದ್ರ ತಿಕ್ಕಾಟ ಸಾಧಿಸುವಂತ ಕೆಲಸ ಮಾಡುತ್ತಿದೆ, ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಸಬ್ರಮಣ್ಯ ಎಚ್ಚರಿಸಿದ್ದಾರೆ.