ಬೆಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ,ಹಾಗಾಗಿ ಇದನ್ನು ಎನ್‌ಐಎ ಗೆ ವಹಿಸಲು ರಾಜ್ಯಪಾಲರನ್ನು ಕೋರಿದ್ದೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ತಿಳಿಸಿದರು.
ಬಿಜೆಪಿಯ ಪ್ರಮುಖರೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅಶೋಕ್ ಮಾತನಾಡಿದರು.
ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಕೊಲೆಯ ಬಗ್ಗೆ ವಿವರಿಸಿದ್ದೇವೆ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಪಾರಿ ನೀಡಿರುವ ಪ್ರಕರಣ. ಮುಸ್ಲಿಂ ಹುಡುಗನ ಕೊಲೆಯಾಗಿದ್ದಕ್ಕೆ ಆ ಕುಟುಂಬಕ್ಕೆ ಕಾಂಗ್ರೆಸ್ 25 ಲಕ್ಷ ರೂ ಪರಿಹಾರ ನೀಡಿದೆ, ಆ ಹಣವನ್ನು ಬಳಸಿಯೇ ಸುಪಾರಿ ನೀಡಲಾಗಿದೆ. ಸ್ಪೀಕರ್ ಯು.ಟಿ.ಖಾದರ್ ಅವರು ಆ ಕುಟುಂಬದವರು ಒಳ್ಳೆಯವರು ಎಂದು ಹೇಳಿದ್ದಾರೆ. ಆ ಮನೆಯವರೇ ಸುಪಾರಿ ನೀಡಿದ್ದಾರೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ. ಸ್ಪೀಕರ್ ಆಗಿ ಕೊಲೆ ಪ್ರಕರಣದ ಬಗ್ಗೆ ಮಾತನಾಡುವ ಅಗತ್ಯವೇನಿದೆ ಯಾವುದೇ ಸ್ಪೀಕರ್ ಕೊಲೆ ಬಗ್ಗೆ ಮಾತನಾಡಿದ ಇತಿಹಾಸವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಇಂತವರ ವಿಚಾರದಲ್ಲಿ ಮೃದು ಧೋರಣೆ ತಾಳಿದೆ. ಈ ಪ್ರಕರಣದ ತನಿಖೆಯಲ್ಲಿ ನಮಗೆ ವಿಶ್ವಾಸವಿಲ್ಲ. ಪಾಕಿಸ್ತಾನ ಜಿಂದಾಬಾದ್ ಘೋಷಣೆಗೆ, ಭಯೋತ್ಪಾದನೆ ಚಟುವಟಿಕೆಗೆ ಪ್ರೇರಣೆ ಕೊಡುವವರ ಸಂಪರ್ಕ ಇವರಿಗಿದೆ. ಕರಾವಳಿ ಭಾಗಕ್ಕೆ ಪಾಕಿಸ್ತಾನದ ಸಂಪರ್ಕವಿದೆ. ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವವರಿಗೆ ಆಪರೇಶನ್ ಸಿಂಧೂರದಂತೆಯೇ ಶಾಸ್ತಿ ಆಗಬೇಕು, ಅದಕ್ಕಾಗಿ ಪ್ರಕರಣವನ್ನು ಎನ್‌ಐಎ ಗೆ ವಹಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದು ಅಶೋಕ್ ತಿಳಿಸಿದರು.