ಅರಸೀಕೆರೆ: ನಾವು ಜಾರಿಗೆ ತಂದ ಐದು ಗ್ಯಾರಂಟಿಗಳ ಕಾರಣದಿಂದ ಕರ್ನಾಟಕ ರಾಜ್ಯ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ ಆಗಿದೆ, ಬಿಜೆಪಿಯವರಿಗೆ ಆರ್ಥಿಕತೆ ಅರ್ಥವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಛೇಡಿಸಿದರು.
ಅರಸೀಕೆರೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಸಿಎಂ ಮಾತನಾಡಿದರು.

ಕ್ಷೇತ್ರದ ಜನಪರ ಅಭಿವೃದ್ಧಿ ಕೆಲಸ ಮಾಡುವುದರಲ್ಲೇ ಇರಲಿ, ವಿಧಾನಸಭೆಯಲ್ಲಿ ಪಕ್ಷ ಮತ್ತು ಸರ್ಕಾರದ ಜನಪರ ಕಾರ್ಯಗಳನ್ನು ಸಮರ್ಥವಾಗಿ ಮಂಡಿಸುವುದರಲ್ಲೂ ಶಿವಲಿಂಗೇಗೌಡರು ಮುಂದಿದ್ದಾರೆ. ನಾಲ್ಕು ಬಾರಿ ಶಾಸಕರಾಗಿರುವ ಶಿವಲಿಂಗೇಗೌಡರು ಮುಂದಿನ ಚುನಾವಣೆಯಲ್ಲೂ ಗೆಲ್ಲುವುದು ಶತಸಿದ್ಧ ಎಂದು ಭವಿಷ್ಯ ನುಡಿದರು.
148 ಕೋಟಿ ವೆಚ್ಚದಲ್ಲಿ 10 ಕೆರೆಗಳನ್ನು ತುಂಬಿಸುವ, ಕುಡಿಯುವ ನೀರು ಕೊಡುವ ಪುಣ್ಯದ ಕೆಲಸವನ್ನು ಶಿವಲಿಂಗೇಗೌಡರು ಮಾಡಿದ್ದಾರೆ ಎಂದು ಸಿದ್ದು ಬಣ್ಣಿಸಿದರು.
ಕರ್ನಾಟಕ ರಾಜ್ಯ ತಲಾ ಆದಾಯದಲ್ಲಿ ಇಡಿ ದೇಶದಲ್ಲಿ ನಂಬರ್ ಒನ್ ಆಗಿದೆ. ಇದಕ್ಕೆ ಪ್ರಮುಖ ಕಾರಣ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿರುವುದು. ಕೊಳ್ಳುವ ಶಕ್ತಿ ಹೆಚ್ಚಾಗಲು ನಮ್ಮ ಗ್ಯಾರಂಟಿ ಯೋಜನೆಗಳು ಪ್ರಮುಖ ಕಾರಣ. ಬಿಜೆಪಿಯವರಿಗೆ ಆರ್ಥಿಕತೆ ಅರ್ಥ ಆಗೋದಿಲ್ಲ. ಅದಕ್ಕೇ ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಸುಳ್ಳು, ಅಪಪ್ರಚಾರ ಮಾಡುತ್ತಿದ್ದಾರೆ,ಇಂತದ್ದನ್ನೆಲ್ಲಾ ರಾಜ್ಯದ ಜನತೆ ನಂಬುವುದಿಲ್ಲ ಎಂದು ಹೇಳಿದರು.
ಸರ್ಕಾರದ ಸಾಧನಾ ಸಮಾವೇಶದಲ್ಲಿ ಲಕ್ಷ ಲಕ್ಷ ಜನ ಫಲಾನುಭವಿಗಳು ಸೇರಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇದು ನುಡಿದಂತೆ ನಡೆದ ನಮ್ಮ ಸರ್ಕಾರದ ಸಾಧನೆ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
ನಾವು ಅಭಿವೃದ್ಧಿ ಯೋಜನೆಗಳಿಗೆ 1.20 ಲಕ್ಷ ಕೋಟಿ ಖರ್ಚು ಮಾಡುವುದರ ಜೊತೆಗೆ ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ಖರ್ಚು ಮಾಡಿ ಜನರ ಮನೆ ಬಾಗಿಲಿಗೆ ಅಭಿವೃದ್ಧಿ ಕಾರ್ಯಗಳನ್ನು ತಲುಪಿಸಿದ್ದೇವೆ ಎಂದು ವಿವರಿಸಿದರು.
ಶಿವಲಿಂಗೇಗೌಡರಿಗೆ ರಾಜಕೀಯ ಭವಿಷ್ಯವಿದೆ. ಮಂತ್ರಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ. ಜೊತೆಗೆ ಕ್ಷೇತ್ರದ ಜನರ ಆಶೀರ್ವಾದವೂ ಗಟ್ಟಿಯಾಗಿದೆ. ಈ ಕಾರಣಕ್ಕೇ ನಾಲ್ಕು ಬಾರಿ ಗೆದ್ದಿರುವ ಶಿವಲಿಂಗೇಗೌಡರು ಮುಂದಿನ ಬಾರಿಯೂ ಗೆದ್ದು ಬರುತ್ತಾರೆ. ಆದರೆ ಕೆಲವೊಂದು ರಾಜಕೀಯ ಸಂಗತಿಗಳನ್ನು ಬಹಿರಂಗವಾಗಿ ಚರ್ಚಿಸಲು ಆಗುವುದಿಲ್ಲ ಎಂದು ಸಿಎಂ ತಿಳಿಸಿದರು.
ದೆಹಲಿಯಲ್ಲಿ ನಡೆದ ಹಿಂದುಳಿದ ಸಮುದಾಯಗಳ ಸಮ್ಮೇಳನದಲ್ಲಿ ರಾಹುಲ್ ಗಾಂಧಿಯವರು ಹಿಂದುಳಿದ ಸಮುದಾಯಗಳ ಬಗ್ಗೆ ತಮ್ಮ ಗ್ರಹಿಕೆಯನ್ನು ಸ್ಪಷ್ಟಪಡಿಸಿದ್ದಾರೆ, ಹಿಂದುಳಿದ ವರ್ಗಗಳು, ಮಹಿಳೆಯರು, ದಲಿತರು, ಶೋಷಿತರು, ಎಲ್ಲಾ ಜಾತಿಯ ಬಡವರ ಬದುಕಿಗೆ ಬೇಕಾದ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ರೂಪಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.