ಮೈಸೂರು: ಧರ್ಮಸ್ಥಳದ ವಿಚಾರದಲ್ಲಿ ಎಸ್‌ಐಟಿ ತನಿಖೆಗೆ ಬಿಜೆಪಿ ಆರಂಭದಲ್ಲೂ ಸ್ವಾಗತಿಸಿದ್ದು,ಈಗಲೂ ಅದೇ ನಿಲುವಿಗೆ ಬದ್ಧವಾಗಿದೆ ಎಂದು ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ಸದಸ್ಯರು ತಿಳಿಸಿದ್ದಾರೆ.
ಆದರೆ ತನಿಖೆಯ ಜೊತೆಗೆ ದೇವಸ್ಥಾನದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ರಾಜ್ಯ ಸರ್ಕಾರವೇ ಇದಕ್ಕೆ ಕುಮ್ಮಕ್ಕು ನೀಡುತ್ತಿದೆಯೋ ಎನ್ನುವ ಅನುಮಾನ ಕಾಡುತ್ತಿದೆ ಎಂದು ಹೇಳಿದ್ದಾರೆ.
ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರದ ವಿರುದ್ಧ ಧರ್ಮದ ಉಳಿವಿಗಾಗಿ ಧರ್ಮಯುದ್ಧ ಎಂಬ ಘೋಷವಾಕ್ಯ ದೊಂದಿಗೆ ಶುಕ್ರವಾರ ಚಾಮುಂಡೇಶ್ವರಿ ಕ್ಷೇತ್ರದಿಂದ ಅಧ್ಯಕ್ಷರಾದ ರಾಕೇಶ್ ಭಟ್ ನೇತೃತ್ವದಲ್ಲಿ ರಾಮಕೃಷ್ಣ ಪರಮಹಂಸ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕ್ಷೇತ್ರದ ಬಗ್ಗೆ ಅಪಪ್ರಚಾರ ನಿಲ್ಲಿಸುವಂತೆ ಆಗ್ರಹಿಸಲಾಯಿತು.
ಈ ವೇಳೆ ಮಾತನಾಡಿದ ರಾಕೇಶ್ ಭಟ್, ಸೌಜನ್ಯ ಹತ್ಯೆ ವಿಚಾರವಾಗಿ ಪ್ರಾರಂಭವಾದ ಹೋರಾಟ ಇಂದು ದಾರಿ ತಪ್ಪಿದೆ. ಕಪೋಲ ಕಲ್ಪಿತ ಕಥೆಗಳನ್ನು ಹೆಣೆದು ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಅನಿಯಂತ್ರಿತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಲಾಗುತ್ತಿದೆ, ರಾಜ್ಯ ಕಾಂಗ್ರೆಸ್ ಸರ್ಕಾರ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಾ ಷಡ್ಯಂತ್ರಕೋರರಿಗೆ ಸಹಕರಿಸುತ್ತಿದೆ, ಇದು ನಿಲ್ಲಬೇಕು ಎಂದು ಆಕ್ರೋಷ ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರ ಈ ಹಿಂದೆ ಉಡುಪಿ ಮಠ, ಶ್ರೀರಾಮಚಂದ್ರಾಪುರ ಮಠ, ಸುಬ್ರಹ್ಮಣ್ಯ ಸೇರಿದಂತೆ ಅನೇಕ ಹಿಂದೂ ಶ್ರದ್ದಾ ಕೇಂದ್ರಗಳ ಮೇಲೆ ಪಿತೂರಿ ನಡೆಸುವವರಿಗೆ ಬೆಂಬಲ ನೀಡಿದೆ, ಆಗೆಲ್ಲಾ ಜನ ಬುದ್ಧಿ ಕಲಿಸಿದ್ದಾರೆ. ಈಗಲೂ ಸರಿ ಪಡಿಸಿಕೊಂಡಿಲ್ಲವಾದರೆ ಮುಂದಿನ ದಿನಗಳಲ್ಲಿ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ರಾಕೇಶ್ ಭಟ್ ಎಚ್ಚರಿಸಿದರು.
ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ಮಾತನಾಡಿ ಅನಿಯಂತ್ರಿತ ಯೂಟ್ಯೂಬ್ ರುಗಳು ಬಾಯಿಗೆ ಬಂದ ಹಾಗೆ ಮಾತನಾಡುವುದನ್ನು ನಿಲ್ಲಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಾನೂನಿನ ಭಯವೂ ಇಲ್ಲ, ಹಿಂದೂ ದೇವರ ಭಯವೂ ಇಲ್ಲ, ಆತ್ಮಸಾಕ್ಷಿಯ ಭಯವೂ ಇಲ್ಲದ ಎಂ.ಡಿ ಸಮೀರ್ ನಂತಹ ಜನರ ಬಾಯಿಯನ್ನು ಮುಚ್ಚಿಸಲು ಸಾಧ್ಯವಾಗುವುದಿಲ್ಲ. ಸೂಕ್ತ ಕಾನೂನು ಹಾಗೂ ನಿಯಮ ರಚಿಸಿ ಇಂತಹ ಸಮಾಜಘಾತುಕ ಶಕ್ತಿಗಳನ್ನು ನಿಗ್ರಹಿಸಬೇಕು” ಎಂದು ಆಗ್ರಹಿಸಿದರು.
ಹಿರಿಯ ಮುಖಂಡರುಗಳಾದ ಗೋಪಾಲ್ ರಾವ್, ಎಸ್.ಡಿ. ಮಹೇಂದ್ರ ಹಾಗೂ ಹಿನಕಲ್ ಶ್ರೀನಿವಾಸ್ ಅವರು ಮಾತನಾಡಿದರು.