ಬೆಂಗಳೂರು: ಹಲವು ವರ್ಷಗಳಿಂದ ರಾಜ್ಯದ ಶಾಲೆಗಳಲ್ಲಿ ನೆನೆಗುದಿಗೆ ಬಿದ್ದಿರುವ ದ್ವಿಭಾಷಾ ಸೂತ್ರವನ್ನು ಕರ್ನಾಟಕ ರಾಜ್ಯದಲ್ಲೂ ಶೀಘ್ರ ಜಾರಿಗೊಳಿಸ ಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ಪತ್ರ ಬರೆದಿರುವ ಮುಖ್ಯಮಂತ್ರಿ ಚಂದ್ರು, ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಪ್ರಾದೇಶಿಕ ಅಸಮತೋಲನವನ್ನು ಸರಿಪಡಿಸಲು, ಕನ್ನಡ ಭಾಷೆಯ ಹಿರಿಮೆಯನ್ನು ಎತ್ತಿ ಹಿಡಿಯಲು, ದೇಶದಲ್ಲಿ ಸ್ಥಳೀಯ ಭಾಷೆಗಳ ಉಳಿವಿಗಾಗಿ, ವಿದ್ಯಾರ್ಥಿಗಳ ಮೇಲಿನ ಅನಗತ್ಯ ಹೊರೆಯನ್ನು ತಪ್ಪಿಸಲು, ಮಕ್ಕಳ ಜ್ಞಾನಾರ್ಜನೆಯ ವೃದ್ಧಿಗಾಗಿ, ಹಿಂದಿ ಭಾಷೆಯ ಹೇರಿಕೆಯಿಂದ ವಿದ್ಯಾರ್ಥಿಗಳ ಶಿಕ್ಷಣ ಮೊಟಕು ಗೊಳ್ಳುವಿಕೆ ತಡೆಗಟ್ಟಲು ಹಾಗೂ ಎಲ್ಲ ಕನ್ನಡಪರ ಮನಸ್ಸುಗಳ ಹಲವು ದಶಕಗಳ ಬೇಡಿಕೆಯನ್ನು ಈಡೇರಿಸಲು ಕೂಡಲೇ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ಪ್ರತಿ ವರ್ಷವೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ರಾಗುವ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಿರುವ ತ್ರಿಭಾಷಾ ಸೂತ್ರದ ಅನುಸಾರ ಹಿಂದಿ ಭಾಷೆಯಲ್ಲಿ ನಪಾಸಾಗುವ ಮೂಲಕ ತಮ್ಮ ಶಿಕ್ಷಣ ಭವಿಷ್ಯವನ್ನೇ ತ್ಯಜಿಸುವಂತಹ ಅನಿವಾರ್ಯ ಪರಿಸ್ಥಿತಿ ಇದೆ ಎಂದು ಚಂದ್ರು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಆಮ್ ಆದ್ಮಿ ಪಕ್ಷದ ಸರ್ಕಾರ ಆಡಳಿತದಲ್ಲಿರುವ ಪಂಜಾಬ್ ರಾಜ್ಯದಲ್ಲಿ ಹಾಗೂ ದೆಹಲಿ ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಯಲ್ಲಿದೆ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ಸಹ ಹೋರಾಟಗಾರರ ಒತ್ತಡಕ್ಕೆ ಮಣಿದು ತ್ರಿಭಾಷಾ ಸೂತ್ರವನ್ನು ಕೈಬಿಟ್ಟಿದೆ.
ನಮ್ಮ ರಾಜ್ಯದ ಲಕ್ಷಾಂತರ ಮಕ್ಕಳ ಶಿಕ್ಷಣ ಭವಿಷ್ಯವನ್ನು ಕಾಪಾಡುವ ದಿಶೆಯಲ್ಲಿ ಈ ಕೂಡಲೇ ಮುಂಬರುವ ಕರ್ನಾಟಕ ರಾಜ್ಯದ ವಿಧಾನಸಭಾ ಅಧಿವೇಶನದಲ್ಲಿ ದ್ವಿಭಾಷಾ ನೀತಿಯ ಮಸೂದೆ ಮಂಡಿಸುವ ಮೂಲಕ ಅಂಗೀಕಾರ ಮಾಡಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಅಂಧಕಾರದಲ್ಲಿ ದುಡುವ ದ್ವಂದ್ವ ನೀತಿಯನ್ನು ಕೂಡಲೇ ರದ್ದುಗೊಳಿಸಿ, ಕನ್ನಡ ಭಾಷೆಯ ಅಳಿವು ಉಳಿವಿನ ಸಂದರ್ಭದಲ್ಲಿ ಕೂಡಲೇ ಮುಂಬರುವ ಅಧಿವೇಶನದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.