ಬಿಹಾರದಲ್ಲಿ ಬೀಭತ್ಸ ಘಟನೆ: ಕುಟುಂಬದ 5 ಮಂದಿಯನ್ನು ಕೊಂದ ಗುಂಪು

Spread the love

ಬಿಹಾರ: ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ
ಒಂದೇ ಕುಟುಂಬದ ಐವರನ್ನು ಬೀಭತ್ಸವಾಗಿ ಕೊಂದು ಸುಟ್ಟುಹಾಕಿರುವ ಪೈಶಾಚಿಕ ಘಟನೆ ನಡೆದಿದ್ದು ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಮೂವರು ಮಹಿಳೆಯರು ಸೇರಿದಂತೆ ಬುಡಕಟ್ಟು ಕುಟುಂಬದ ಐದು ಸದಸ್ಯರನ್ನು ಮಾಟಮಂತ್ರದ ಶಂಕೆಯ ಮೇಲೆ ಕಡಿದು ಕೊಂದು ಅವರ ದೇಹಗಳನ್ನು ಸುಟ್ಟು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಬಾಬು ಲಾಲ್ ಒರಾನ್ (50), ಅವರ ತಾಯಿ ಕಾಂಟೋ ದೇವಿ (70), ಪತ್ನಿ ಸೀತಾ ದೇವಿ (45), ಮಗ ಮಂಜಿತ್ ಕುಮಾರ್ (25) ಮತ್ತು ಸೊಸೆ ರಾಣಿ ದೇವಿ (22) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಟೆಟ್ಮಾ ಗ್ರಾಮದಲ್ಲಿ ಸೋಮವಾರ ಮಂಜಾನೆ ಈ ಘಟನೆ ನಡೆದಿದ್ದು, ಪೊಲೀಸರು ಸುಟ್ಟ ಶವಗಳನ್ನು ಸೋಮವಾರ‌ ಸಂಜೆ
ವಶಪಡಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸೀತಾ ದೇವಿಯ ಏಕೈಕ ಬದುಕುಳಿದ ಮಗ ಸೋನು ಪೊಲೀಸರಿಗೆ ಮಾಹಿತಿ ನೀಡಿದ್ದು,ಏಕಾಏಕಿ ಒಂದು ಗುಂಪು ತಮ್ಮ ಮನೆಗೆ ನುಗ್ಗಿ ತನ್ನ ತಾಯಿಯ ಮೇಲೆ ಹಲ್ಲೆ ಮಾಡಿತು,ಆಕೆಯನ್ನು ಮಾಟಗಾತಿ ಎಂದು ಜರಿದು ದೊಣ್ಣೆಯಿಂದ ಥಳಿಸಿತು ನಂತರ ತಾಯಿಯ ರಕ್ಷಣೆಗೆ ಬಂದವರ ಮೇಲೂ ಭೀಕರವಾಗಿ ಹಲ್ಲೆ ಮಾಡಿ ಕೊಚ್ಚಿಹಾಕಿದರು ಆಮೇಲೆ ಏನಾಯಿತು ಎಂದು ಗೊತ್ತಾಗಲಿಲ್ಲ ಎಂದು ಅಳುತ್ತಾ ಪೊಲೀಸರಿಗೆ ತಿಳಿಸಿದ್ದಾನೆ.

ಈ ಘಟನೆಯು ಸಮುದಾಯದಲ್ಲಿ ಇನ್ನೂ ವ್ಯಾಪಕವಾಗಿ ಹರಡಿರುವ ಮಾಟಮಂತ್ರದ ವಿವಾದದಲ್ಲಿ ನಡೆದಿರುವಂತೆ ತೋರುತ್ತದೆ ಎಂದು ಪುರ್ನಿಯಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

ಹಲ್ಲೆಕೋರರು ಬಲಿಪಶುಗಳ ಶವಗಳನ್ನು ಅವರ ಮನೆಯಿಂದ ಸುಮಾರು 100-150 ಮೀಟರ್ ದೂರಕ್ಕೆ ಸಾಗಿಸಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ಸೋಮವಾರ ಸಂಜೆ ಬಲಿಪಶುಗಳ ಭಾಗಶಃ ಸುಟ್ಟ ಅವಶೇಷಗಳನ್ನು ಅವರು ವಶಪಡಿಸಿಕೊಂಡಿದ್ದಾರೆ.